Sunday, January 30, 2022

ಧರ್ಮಸ್ಥಳ ಸಂಘದಿಂದ ಗ್ರಾಹಕ ಸೇವಾ ಕೇಂದ್ರ ಆರಂಭ

ಭದ್ರಾವತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿದ್ಯಾಮಂದಿರ ವಲಯ ಲೋಯರ್ ಹುತ್ತಾ ಕಾರ್ಯಕ್ಷೇತ್ರದ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ಗ್ರಾಹಕ ಸೇವಾ ಕೇಂದ್ರ(ಸಿಎಸ್‌ಸಿ)ಕ್ಕೆ ನಗರಸಭಾ ಸದಸ್ಯ ಜಾರ್ಜ್ ಭಾನುವಾರ ಚಾಲನೆ ನೀಡಿದರು.
    ಭದ್ರಾವತಿ, ಜ. ೩೦: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿದ್ಯಾಮಂದಿರ ವಲಯ ಲೋಯರ್ ಹುತ್ತಾ ಕಾರ್ಯಕ್ಷೇತ್ರದ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ಗ್ರಾಹಕ ಸೇವಾ ಕೇಂದ್ರ(ಸಿಎಸ್‌ಸಿ)ಕ್ಕೆ ನಗರಸಭಾ ಸದಸ್ಯ ಜಾರ್ಜ್ ಭಾನುವಾರ ಚಾಲನೆ ನೀಡಿದರು.
    ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಒಟ್ಟು ೪೩ ಗ್ರಾಹಕ ಸೇವಾ ಕೇಂದ್ರಗಳು ಮಂಜೂರಾಗಿದ್ದು, ಗ್ರಾಮಾಂತರ ಹಾಗು ನಗರ ಪ್ರದೇಶ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಆರಂಭಗೊಳ್ಳಲಿವೆ. ಈ ಗ್ರಾಹಕ ಸೇವಾ ಕೇಂದ್ರಗಳು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ವಿವಿಧ ಸೇವೆಗಳನ್ನು ಒದಗಿಸಲಿವೆ.
    ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ಯೋಜನೆಯ ವಲಯ ಮೇಲ್ವಿಚಾರಕ ವೀರೇಶ್, ಕಛೇರಿ ಕಾರ್ಯಕರ್ತರಾದ ಅವಿನಾಶ್, ಪ್ರೀತಮ್, ಸೇವಾ ಪ್ರತಿನಿಧಿಗಳಾದ ರಾಧ, ಕಲ್ಪನಾ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸಂವಿಧಾನ ಶಿಲ್ಪಿಗೆ ಅವಮಾನ : ಮನುವಾದಿ ಮನಸ್ಥಿತಿ ಅನಾವರಣ

ನ್ಯಾಯಾಧೀಶ ಹುದ್ದೆಯಿಂದ ವಜಾಗೊಳಿಸಿ, ಬಂಧಿಸಿ : ಎವೈವಿ ಆಗ್ರಹ


    ಭದ್ರಾವತಿ, ಜ. ೩೦:  ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅವಮಾನಗೊಳಿಸಿರುವ ರಾಯಚೂರು ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್‌ರವರನ್ನು ಹುದ್ದೆಯಿಂದ ತಕ್ಷಣ ವಜಾಗೊಳಿಸಿ ಬಂಧಿಸುವಂತೆ ಡಾ. ಬಿ.ಆರ್ ಅಂಬೇಡ್ಕರ್ ಯುವಜನ ವೇದಿಕೆ(ಎವೈವಿ) ಆಗ್ರಹಿಸಿದೆ.
    ಅಂಬೇಡ್ಕರ್‌ರವರ ಭಾವಚಿತ್ರ ತೆಗೆಸಿ ಗಣರಾಜ್ಯೋತ್ಸವ ಆಚರಿಸುವ ಮೂಲಕ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್ ದರ್ಪ ಮೆರೆದಿರುವುದು ಖಂಡನೀಯ. ಮಲ್ಲಿಕಾರ್ಜುನ ಗೌಡ ಪಾಟೀಲ್, ಪ್ರಸ್ತುತ ಜಾರಿಯಲ್ಲಿರುವ ಸರ್ಕಾರಿ ನಿಯಮಗಳಿಗೆ, ಆದೇಶಗಳಿಗೆ ಮತ್ತು ರಾಷ್ಟ್ರ ಲಾಂಛನಗಳಿಗೆ ಗೌರವ ತೋರಬೇಕೆಂಬ ನಿಯಮಗಳನ್ನು ಗಾಳಿಗೆ ತೂರಿ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಸಂವಿಧಾನ ಶಿಲ್ಪಿ, ಶೋಷಿತರ ಚೇತನ, ಮಹಾನ್ ಜ್ಞಾನಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ ವ್ಯಕ್ತಿ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಕಾನೂನಿಗಿಂತ ತನ್ನ ವೈಯಕ್ತಿಕ ಪೂರ್ವಗ್ರಹಗಳಾದ ಮನುವಾದವನ್ನು ಆಚರಿಸಿದ್ದಾರೆ. ಈ ಹಿನ್ನಲೆಯಲ್ಲಿ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿ ತಕ್ಷಣ ಬಂಧಿಸಬೇಕು.
    ಬೆಂಗಳೂರು ಸಮೀಪದ ಶಾಲೆಯೊಂದರಲ್ಲಿ ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್‌ರವರ ಭಾವಚಿತ್ರ ಇಡದೆ ಆರ್‌ಎಸ್‌ಎಸ್ ರಚಿತ ಹಿಂದೂತ್ವ ಮಾತೆಯ ಭಾವಚಿತ್ರವನ್ನಿಟ್ಟು ಕಾರ್ಯಕ್ರಮ ಆಚರಿಸಲಾಗಿದೆ. ದೆಹಲಿ ಗಣರಾಜ್ಯೋತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರಬೋಸ್ ಹಾಗು ಎಲ್ಲರೂ ಒಂದೇ ಎಂದು ಮನುಕುಲಕ್ಕೆ ಸಂದೇಶ ಸಾರಿದ ಬ್ರಹ್ಮರ್ಷಿ ನಾರಾಯಣ ಗುರುರವರ ಸ್ತಬ್ದ ಚಿತ್ರಗಳಿಗೆ ಅವಕಾಶ ನೀಡದೆ ಸಾವರ್ಕರ್ ಸ್ತಬ್ದ ಚಿತ್ರಕ್ಕೆ ಅವಕಾಶ ಮಾಡಿಕೊಟ್ಟಿರುವುದು. ಈ ರೀತಿಯ ಸಂವಿಧಾನ ವಿರೋಧಿ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇವುಗಳ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವೇದಿಕೆ ಪ್ರಮುಖರಾದ ಗೌರವಾಧ್ಯಕ್ಷ ಶಿವರಾಜ್, ಅಧ್ಯಕ್ಷ ಶಿವಮಲ್ಲು, ಉಪಾಧ್ಯಕ್ಷ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ಕಾರ್ಯದರ್ಶಿ ಹರೀಶ್, ಸಹ ಕಾರ್ಯದರ್ಶಿಗಳಾದ ಸುನೀಲ್ ಮತ್ತು ಜಯರಾಮ ಮತ್ತು ಖಜಾಂಚಿ ಮಂಜುನಾಥ್ ಎಚ್ಚರಿಸಿದ್ದಾರೆ.  


Saturday, January 29, 2022

ಅಂಬೇಡ್ಕರ್‌ಗೆ ಅವಮಾನ : ನ್ಯಾಯಾಧೀಶರ ಬಂಧನಕ್ಕೆ ಆಗ್ರಹ


ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅವಮಾನಗೊಳಿಸಿರುವ ರಾಯಚೂರು ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್‌ರವರನ್ನು ಹುದ್ದೆಯಿಂದ ತಕ್ಷಣ ಅಮಾನತ್ತು ಮಾಡಿ ಬಂಧಿಸುವ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾವತಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜ. ೨೯:  ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅವಮಾನಗೊಳಿಸಿರುವ ರಾಯಚೂರು ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್‌ರವರನ್ನು ಹುದ್ದೆಯಿಂದ ತಕ್ಷಣ ಅಮಾನತ್ತು ಮಾಡಿ ಬಂಧಿಸುವ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ದೇಶದ ಸಂವಿಧಾನ ದಿನದಂದು ಈ ದೇಶಕ್ಕೆ ಸಂವಿಧಾನ ನೀಡಿದ ವಿಶ್ವಜ್ಞಾನಿ, ಮಹಾಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್‌ರವರಿಗೆ ಅಗೌರವ ಉಂಟು ಮಾಡಿರುವುದು ಪ್ರಜಾಪ್ರಭುತ್ವ ಸಮಾಜ ತಲೆ ತಗ್ಗಿಸುವಂತಾಗಿದೆ. ಜಾತಿ ಆಧಾರದ ಮೇಲೆ ಅಂಬೇಡ್ಕರ್‌ರವರನ್ನು ಅವಮಾನಿಸಿರುವ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಲಾಗಿದೆ.
    ಮನವಿಯನ್ನು ಸಂಘದ ಅಧ್ಯಕ್ಷ ಪಿ. ಕೃಷ್ಣನಾಯ್ಕ ನೇತೃತ್ವದಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.
    ಪ್ರಮುಖರಾದ ನಾಗನಾಯ್ಕ, ಚಂದ್ರನಾಯ್ಕ, ಶಂಕರನಾಯ್ಕ ಮತ್ತು ಪ್ರವೀಣ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹುಮ್ನಾಬಾದ್ ತಹಸೀಲ್ದಾರ್ ಮೇಲೆ ಹಲ್ಲೆ ಪ್ರಕರಣ : ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ

ತಾಲೂಕು ಸರ್ಕಾರಿ ನೌಕರರ ಸಂಘದಿಂದ ಮುಖ್ಯಮಂತ್ರಿಗಳಿಗೆ ಮನವಿ


ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ತಹಸೀಲ್ದಾರ್ ಮೇಲೆ ನಡೆದಿರುವ ಹಲ್ಲೆ ಘಟನೆಯನ್ನು ಖಂಡಿಸಿ ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶನಿವಾರ ಭದ್ರಾವತಿಯಲ್ಲಿ ತಾಲೂಕು ಕಚೇರಿ ಮಿನಿ ವಿಧಾನಸೌಧ ಮುಂಭಾಗ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ: ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ನಿರ್ಭಿತಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗಿದ್ದು,  ಸರ್ಕಾರ ತಕ್ಷಣ ನೌಕರರಿಗೆ ರಕ್ಷಣೆ ನೀಡುವ ಮೂಲಕ ಅವರ ಹಿತಕಾಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಪ್ಪ ಎಚ್ಚರಿಸಿದರು.
    ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ತಹಸೀಲ್ದಾರ್ ಮೇಲೆ ನಡೆದಿರುವ ಹಲ್ಲೆ ಘಟನೆಯನ್ನು ಖಂಡಿಸಿ  ಶನಿವಾರ ತಾಲೂಕು ಕಚೇರಿ ಮಿನಿ ವಿಧಾನಸೌಧ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕಂದಾಯ, ಆರೋಗ್ಯ, ಭೂಮಾಪನ, ಪಂಚಾಯತ್ ರಾಜ್ ಸೇರಿದಂತೆ ಸರ್ಕಾರದ ಪ್ರಮುಖ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ಘಟನೆಗಳು ಹೆಚ್ಚಾಗುತ್ತಿವೆ. ನಿರ್ಭಿತಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಂತಹ ವಾತಾವರಣ ಇಂದು ರಾಜ್ಯದೆಲ್ಲೆಡೆ ನಿರ್ಮಾಣವಾಗಿದೆ. ಈ  ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ತಹಸೀಲ್ದಾರ್ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
    ಸರ್ಕಾರ ನೌಕರರಿಗೆ ರಕ್ಷಣೆ ಒದಗಿಸಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ತಹಸೀಲ್ದಾರ್ ಮೇಲಿನ ಹಲ್ಲೆ ಪ್ರಕರಣಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
    ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.  ಸಂಘದ ಗೌರವಾಧ್ಯಕ್ಷ ಎ.ಜೆ ರಂಗನಾಥಪ್ರಸಾದ್, ಉಪಾಧ್ಯಕ್ಷ ಎಂ.ಎಸ್ ಬಸವರಾಜ್, ರಾಜ್ಯ ಪರಿಷತ್ ಸದಸ್ಯ ಎಸ್. ಪ್ರಕಾಶ್, ಖಜಾಂಚಿ ಎಸ್.ಕೆ ಮೋಹನ್, ಕಾರ್ಯದರ್ಶಿ ಡಿ.ಎಸ್ ರಾಜಪ್ಪ, ಬಿ.ಆರ್ ದಿನೇಶ್‌ಕುಮಾರ್, ಬಸವಂತರಾವ್ ದಾಳೆ, ಮಂಜಾನಾಯ್ಕ, ಅರಸು, ಪ್ರಶಾಂತ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಹಣ್ಣು, ತರಕಾರಿ ವ್ಯಾಪಾರಸ್ಥರಿಗೆ ಇ-ಶ್ರಮ್ ಕಾರ್ಡ್ ನೋಂದಾಣಿಗೆ ಚಾಲನೆ

ಭದ್ರಾವತಿ ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ನಗರಸಭೆ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ ಮತ್ತು ಬೀದಿಬದಿ ವ್ಯಾಪಾರಿಗಳಿಗೆ  ಇ-ಶ್ರಮ್ ಕಾರ್ಡ್ ನೋಂದಾಣಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಭದ್ರಾವತಿ, ಜ. ೨೯: ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಹಣ್ಣು, ತರಕಾರಿ ಮತ್ತು ಬೀದಿಬದಿ ವ್ಯಾಪಾರಿಗಳಿಗೆ  ಇ-ಶ್ರಮ್ ಕಾರ್ಡ್ ನೋಂದಾಣಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ನಗರದ ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ನಗರಸಭೆ ಮಾರುಕಟ್ಟೆಯಲ್ಲಿ ನಗರಸಭಾ ಸದಸ್ಯ ಜಾರ್ಜ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ತಾಲೂಕು ಶಾಖೆ ಕಾರ್ಯಾಧ್ಯಕ್ಷ ಅಭಿಲಾಷ್ ಅಧ್ಯಕ್ಷತೆ ವಹಿಸಿದ್ದರು.
    ವ್ಯಾಪಾರಸ್ಥರಿಗೆ ಇ-ಶ್ರಮ್ ಕಾರ್ಡ್ ಯೋಜನೆ ಕುರಿತು ಮಾಹಿತಿ ನೀಡಲಾಯಿತು. ಕಾರ್ಮಿಕ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದು ಪ್ರಯಾಣಿಕ ಸಾವು

    ಭದ್ರಾವತಿ, ಜ. ೨೯: ಆಕಸ್ಮಿಕವಾಗಿ ರೈಲಿಗೆ ಕಾಲು ಸಿಲುಕಿಕೊಂಡು ಪ್ರಯಾಣಿಕನೋರ್ವ ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
    ರಾತ್ರಿ ಬೆಂಗಳೂರಿನಿಂದ ಆಗಮಿಸಿದ ಇಂಟರ್‌ಸಿಟಿ ರೈಲು ನಗರದ ರೈಲ್ವೆ ನಿಲ್ದಾಣದಲ್ಲಿನಿಲುಗಡೆಗೊಂಡಾಗ ಪ್ರಯಾಣಿಕ, ಶಿರಸಿ ಸಿದ್ದಾಪುರದ ನಿವಾಸಿ ಪ್ರಕಾಶ್ ಪುಂಡಲೀಕ ಶಾನುಬೋಗ್(೫೫) ರೈಲಿನಿಂದ ಕೆಳಗೆ ಇಳಿದಿದ್ದು, ರೈಲು ಹೊರಡುವಾಗ ಪುನಃ ಹತ್ತಲು ಹೋಗಿ ಕಾಲು ಜಾರಿ ಬಿದ್ದಿದ್ದಾರೆ.
    ಈ ಸಂದರ್ಭದಲ್ಲಿ ರೈಲಿಗೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Friday, January 28, 2022

ಭಾವಸಾರ್ ಕ್ಷತ್ರಿಯಾ ಸಮಾಜದ ಹಿನ್ನಲೆ ಅರಿತುಕೊಂಡು ಸಂಘಟಿತರಾಗಿ : ಸತೀಶ್ ಎಂ. ಜಾಧವ್

ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ರ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್


ಭದ್ರಾವತಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ  ನೂತನ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್ ಪ್ರಮಾಣ ವಚನ ಸ್ವೀಕರಿಸಿದರು.
    ಭದ್ರಾವತಿ, ಜ. ೨೮: ಭಾವಸಾರ್ ಕ್ಷತ್ರಿಯಾ ಸಮಾಜದವರು ತಮ್ಮ ಸಮಾಜದ ಹಿನ್ನಲೆಯನ್ನು ಅರಿತುಕೊಂಡಾಗ ಮಾತ್ರ ಅದರ ವೈಭವವನ್ನು ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಭಾವಸಾರ್ ವಿಷನ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಎಂ ಜಾಧವ್ ಹೇಳಿದರು.
    ಅವರು ಶುಕ್ರವಾರ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಭಾವಸಾರ್ ಕ್ಷತ್ರಿಯಾ ಸಮಾಜದವರು ಪ್ರಸ್ತುತ ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಹರಿದು ಹಂಚಿಹೋಗಿದ್ದು, ಇದರಿಂದಾಗಿ ಬಹಳಷ್ಟು ಮಂದಿ ಸಮಾಜದ ಸಂಘಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಇದೀಗ ಎಲ್ಲರನ್ನು ಒಗ್ಗೂಡಿಸಿ ಸಮಾಜವನ್ನು ಮುನ್ನಡೆಸಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ. ಎಲ್ಲರೂ ಸೇವಾ ಮನೋಭಾವನೆ ರೂಢಿಸಿಕೊಳ್ಳುವ ಜೊತೆಗೆ ಸಮಾಜಕ್ಕೆ ತಮದೇ ಆದ ಕೊಡುಗೆಗಳನ್ನು ನೀಡುವಂತಾಗಬೇಕೆಂದರು.
    ನೂತನ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್:
    ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ರ ತಾಲೂಕು ನೂತನ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್ ಮತ್ತು ಕಾರ್ಯದರ್ಶಿಯಾಗಿ ಮಮತ ವಿಠಲ್‌ನಾಥ್ ಹಾಗು ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಗೌರ್‍ನರ್ ಕೆ.ಎನ್ ಮಂಜುನಾಥರಾವ್ ಬಂಗ್ರೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು.
    ಉಪಗೌರ್‍ನರ್ ಡಿ.ಬಿ ವಿನಯ್‌ಕುಮಾರ್, ಸ್ಮಾರ್ಟ್ ವಿಷನ್ ಛೇರ್‍ಮನ್ ಗಜೇಂದ್ರನಾಥ್ ಮಾಲೋಡೆ, ಭಾವಸಾರ್ ಕ್ಷತ್ರಿಯಾ ಸಮಾಜ ಅಧ್ಯಕ್ಷ ಡಿ.ಎಚ್ ರಾಘವೇಂದ್ರರಾವ್, ಡಿ.ಟಿ ಶ್ರೀಧರ್, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ದುಗ್ಗೇಶ್ ತೇಲ್ಕರ್, ಲಕ್ಷ್ಮಿಕಾಂತ್ ಗುಜ್ಜರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಿಕಟಪೂರ್ವ ಅಧ್ಯಕ್ಷ ಶಂಕರ್ ಜಿಂಗಾಡೆ ಸ್ವಾಗತಿಸಿದರು. ಸಮಾರಂಭದಲ್ಲಿ ಭಾವಸಾರ್ ವಿಷನ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಎಂ. ಜಾಧವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.



ಭದ್ರಾವತಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ  ಭಾವಸಾರ್ ವಿಷನ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಎಂ ಜಾಧವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.