ಶಿವಮೊಗ್ಗ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ತಾಲೂಕು ಘಟಕ ಕೃತಜ್ಞತೆ
ಭದ್ರಾವತಿ, ಮೇ. ೬: ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಂಡು ಸುಮಾರು ೭ ವರ್ಷಗಳು ಕಳೆದಿವೆ. ಈ ನಡುವೆ ೧೨ ವರ್ಷಗಳ ನಿರಂತರ ಹೋರಾಟದ ಪರಿಣಾಮ ಕಾರ್ಖಾನೆಗೆ ಕಬ್ಬು ಪೂರೈಸಿರುವ ರೈತರಿಗೆ ಬಾಕಿ ಹಣ ನೀಡುವುದಾಗಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಭರವಸೆ ನೀಡಿರುತ್ತಾರೆಂದು ಶಿವಮೊಗ್ಗ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ತಾಲೂಕು ಘಟಕ ತಿಳಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಕೆ. ಈರಣ್ಣ, ಪ್ರಧಾನ ಕಾರ್ಯದರ್ಶಿ ಸಣ್ಣಯ್ಯ ಮತ್ತು ರಾಜ್ಯ ಜಿಲ್ಲಾ ಸಂಚಾಲಕ ಎನ್.ಎಚ್ ದೇವಕುಮಾರ್‌ರವರು, ೨೦೧೦-೧೧ನೇ ಸಾಲಿನಲ್ಲಿ ಎಂಪಿಎಂ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬು ಸರಬರಾಜು ಮಾಡಿದ್ದು, ಪ್ರತಿ ಟನ್‌ಗೆ ೧,೮೦೦ ರು. ಬೆಲೆ ನಿಗದಿ ಮಾಡಿ ಹಣ ಪಾವತಿಸಲಾಗಿತ್ತು. ಅಂದಿನ ಮುಖ್ಯಮಂತ್ರಿಯಾಗಿದ್ದ ಡಿ.ವಿ ಸದಾನಂದಗೌಡರವರು ಹೆಚ್ಚುವರಿಯಾಗಿ ಪ್ರತಿ ಟನ್ ಕಬ್ಬಿಗೆ ೧೦೦ ರು. ನೀಡುವುದಾಗಿ ಆದೇಶಿಸಿದ್ದರು. ಆದರೆ ಕಾರ್ಖಾನೆ ವತಿಯಿಂದ ೧೦೦ ರು. ಪಾವತಿಸದ ಹಿನ್ನಲೆಯಲ್ಲಿ ಸಂಘದ ವತಿಯಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿತ್ತು. ಬಾಕಿ ಹಣ ೨.೯೪ ಕೋ. ರು. ನೀಡುವಂತೆ ಹಲವಾರು ಮುಖ್ಯಮಂತ್ರಿಗಳಿಗೆ, ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.
ಡಾ. ಸೆಲ್ವಮಣಿಯವರು ಜಿಲ್ಲಾಧಿಕಾರಿಯಾಗಿ ಹಾಗು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಸಂಘದ ವತಿಯಿಂದ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕಬ್ಬು ಬೆಳೆಗಾರರ ಹಿತ ಕಾಪಾಡುವುದಾಗಿ ತಿಳಿಸಿ ಕಡಿಮೆ ಬಾಕಿ ಇರುವ ರೈತರಿಗೆ ಹೆಚ್ಚುವರಿ ೧೦೦ ರು. ಮೊದಲು ಪಾವತಿಸಿ ನಂತರ ಹೆಚ್ಚು ಹಣ ಬಾಕಿ ಇರುವವರಿಗೆ ನೀಡಲಾಗುವುದು ಎಂದು ಭರವಸೆ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ ಕಬ್ಬು ಬೆಳೆಗಾರರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.