Tuesday, June 21, 2022

೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ : ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ

ಭದ್ರಾವತಿ ನಗರಸಭೆ ವಾರ್ಡ್ ನಂ.೫ರ ಸದಸ್ಯೆ ಶಶಿಕಲಾ ಬಿ.ಎಸ್ ನಾರಾಯಣಪ್ಪ ಅವರು ನಗರಸಭಾ ಸದಸ್ಯರಾಗಿ ೧ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ೮ ವರ್ಷದ ಸಾಧನೆ ಮನೆ ಮನೆಗೆ ಮುಟ್ಟಿಸುವ ಹಾಗು ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  
    ಭದ್ರಾವತಿ, ಜೂ. ೨೧: ನಗರಸಭೆ ವಾರ್ಡ್ ನಂ.೫ರ ಸದಸ್ಯೆ ಶಶಿಕಲಾ ಬಿ.ಎಸ್ ನಾರಾಯಣಪ್ಪ ಅವರು ನಗರಸಭಾ ಸದಸ್ಯರಾಗಿ ೧ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ೮ ವರ್ಷದ ಸಾಧನೆ ಮನೆ ಮನೆಗೆ ಮುಟ್ಟಿಸುವ ಹಾಗು ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಉದ್ಘಾಟಿಸಿದರು.
    ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.೮೫ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
    ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತ, ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್, ಖೋ ಖೋ ತರಬೇತಿದಾರ ಕೆ.ಟಿ ಶ್ರೀನಿವಾಸ್ ಮತ್ತು ರಾಷ್ಟ್ರೀಯ ಕುಸ್ತಿ ಕ್ರೀಡಾಪಟು ಕಿರಣ್ ನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ನಗರಸಭಾ ಸದಸ್ಯೆ ಅನುಪಮಾ, ಮಾಜಿ ಉಪಾಧ್ಯಕ್ಷ ವೆಂಕಟೇಶ್, ಪ್ರಮುಖರಾದ ನರಸಿಂಹಚಾರ್, ಚನ್ನೇಶ್, ಸುದರ್ಶನ್, ರೇವಣಕರ್, ಪರಶುರಾಮ್ ಭೋವಿ, ಕಾರನಾಗರಾಜ್, ಮಂಜುನಾಥ್, ಶೋಭಾ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ಬಿ.ಎಸ್ ನಾರಾಯಣಪ್ಪ ಪ್ರಾಸ್ತಾವಿಕ ನುಡಿಗಳಾಡಿದರು. ಕಾಂತರಾಜ್ ಸ್ವಾಗತಿಸಿ, ರಾಜು ರೇವಣಕರ್ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ಹಂಚಲಾಯಿತು.

ಯೋಗ ಬದುಕಿನ ದಿನನಿತ್ಯದ ಚಟುವಟಿಕೆಯಾಗಲಿ : ಎಂ.ಎಲ್ ವೈಶಾಲಿ

ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ರಾಷ್ಟ್ರೀಯ ಮತ್ತು ರಾಜ್ಯ ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆ ಸಹಯೋಗದೊಂದಿಗೆ ತಾಲೂಕು ಆಡಳಿತ ಹಾಗು ನಗರಸಭೆ ವತಿಯಿಂದ ಭದ್ರಾವತಿ ಹಳೇನಗರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ ಉದ್ಘಾಟಿಸಿದರು. 
    ಭದ್ರಾವತಿ, ಜೂ. ೨೧; ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗ ಸಹಕಾರಿಯಾಗಿದ್ದು, ಪ್ರತಿಯೊಬ್ಬರು ಯೋಗ ಕಲಿಕೆಯೊಂದಿಗೆ ಅದನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ರೂಢಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ ಕರೆ ನೀಡಿದರು.
     ಅವರು ಮಂಗಳವಾರ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ರಾಷ್ಟ್ರೀಯ ಮತ್ತು ರಾಜ್ಯ ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆ ಸಹಯೋಗದೊಂದಿಗೆ ತಾಲೂಕು ಆಡಳಿತ ಹಾಗು ನಗರಸಭೆ ವತಿಯಿಂದ ಹಳೇನಗರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.  
    ಯೋಗ ಒಂದು ದಿನಕ್ಕೆ ಸೀಮಿತವಾಗಬಾರದು ದಿನನಿತ್ಯದ ಚಟುವಟಿಕೆಯ ಭಾಗವಾಗಬೇಕು. ಈ ಮೂಲಕ ಆರೋಗ್ಯವಂತೆ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದರು.
     ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಂತರಾಷ್ಟ್ರೀಯ ಯೋಗಪಟು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಡಿ. ನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


    ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್,  ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್,  ಆಯುಷ್ ವೈದ್ಯರುಗಳಾದ ಡಾ. ಅನಿಲ್‌ಕುಮಾರ್, ಡಾ,ಪುಷ್ಪಾ, ಕೆಎಸ್‌ಆರ್‌ಪಿ ೮ನೇ ಪಡೆಯ ಇನ್ಸ್‌ಪೆಕ್ಟರ್ ಮಂಜುನಾಥ್, ಡಾ. ವೀಣಾಭಟ್, ಉದ್ಯಮಿ ಬಿ.ಕೆ ಜಗನ್ನಾಥ್, ಎಂ.ಪ್ರಭಾಕರ್, ನಗರಸಭಾ ಸದಸ್ಯರುಗಳಾದ ಅನುಪಮಾ ಚನ್ನೇಶ್, ಅನುಪಮಾ, ಮೋಹನ್, ಮಹಲಿಂಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕೆಎಸ್‌ಆರ್‌ಪಿ ೮ನೇ ಪಡೆ, ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಡಾ. ಬಿ.ಆರ್ ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಎಜ್ಯುಕೇಷನ್ ಸೊಸೈಟಿ ವಿದ್ಯಾರ್ಥಿಗಳು, ನಯನ ಆಸ್ಪತ್ರೆ, ಪತಾಂಜಲಿ ಯೋಗ ಕೇಂದ್ರ, ಸ್ವಾಮಿ ವಿವೇಕಾನಂದ, ಸಂಚಿ ಹೊನ್ನಮ್ಮ ಯೋಗ ಕೇಂದ್ರ ಸೇರಿದಂತೆ ಹಾಗೂ ವಿವಿಧ ಯೋಗ ಕೇಂದ್ರಗಳ ಯೋಗಪಟುಗಳು ಪಾಲ್ಗೊಂಡು ಯೋಗದ ವಿವಿಧ ಭಂಗಿಗಳ ಮೂಲಕ ಅವುಗಳ ಮಹತ್ವ ತಿಳಿಸಿದರು.

Monday, June 20, 2022

ನಗರದೆಲ್ಲೆಡೆ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಹುಟ್ಟುಹಬ್ಬ ಅದ್ದೂರಿ ಆಚರಣೆ

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
    ಭದ್ರಾವತಿ, ಜೂ. ೨೦ : ಕ್ಷೇತ್ರದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರ ಹುಟ್ಟುಹಬ್ಬವನ್ನು ಸೋಮವಾರ ನಗರದೆಲ್ಲೆಡೆ ಅದ್ದೂರಿಯಾಗಿ ಆಚರಿಸಲಾಯಿತು. ಎಲ್ಲೆಡೆ ಹಬ್ಬದ ವಾತಾವರಣ ಕಂಡು ಬಂದಿತು.
    ಕ್ಷೇತ್ರದಲ್ಲಿ ೩ ಬಾರಿ ಶಾಸಕರಾಗಿ ಅಭಿವೃದ್ಧಿ ಕಾರ್ಯಗಳ ಜೊತೆಗೆ ಜನಸಾಮಾನ್ಯರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದಂತೆ ಉಳಿದುಕೊಂಡು ಕಣ್ಮರೆಯಾಗಿರುವ ಎಂ.ಜೆ ಅಪ್ಪಾಜಿಯವರು ತಮ್ಮದೇ ಆದ ವರ್ಚಸ್ಸನ್ನು, ಅಭಿಮಾನಿ ಹಾಗು ಕಾರ್ಯಕರ್ತರ ಬಳಗವನ್ನು ಹೊಂದಿದ್ದಾರೆ. ಇವರ  ಹುಟ್ಟುಹಬ್ಬವನ್ನು ಕುಟುಂಬ ವರ್ಗದವರು, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಜನಪ್ರತಿನಿಧಿಗಳು, ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುವ ಮೂಲಕ ಬೆರಗುಗೊಳಿಸಿದರು.
    ಬೆಳಿಗ್ಗೆ ತಾಲೂಕಿನ ಗೋಣಿಬೀಡಿನಲ್ಲಿರುವ ಅಪ್ಪಾಜಿಯವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮಾಂತರ ಹಾಗು ನಗರ ಪ್ರದೇಶದ ವಿವಿಧೆಡೆ ಅಪ್ಪಾಜಿಯವರ ಹಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಸಂಜೆ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
    ಶಾರದ ಅಪ್ಪಾಜಿ ಹಾಗು ಪ್ರಮುಖರು ಅಪ್ಪಾಜಿ ಅವರ ಭಾವಚಿತ್ರಕ್ಕೆ ಪೂಜೆಯೊಂದಿಗೆ ಪುಷ್ಪನಮನ ಸಲ್ಲಿಸಿ ಕೇಕ್ ಕತ್ತರಿಸಿ, ಸಿಹಿ ವಿತರಿಸಲಾಯಿತು. ಅಲ್ಲದೆ ಅನ್ನಸಂತರ್ಪಣೆ ಸಹ ನೆರವೇರಿತು. ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಜನಪ್ರತಿನಿಧಿಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು.

ಬಿಜೆಪಿ ಸರ್ಕಾರದ ದೌರ್ಜನ್ಯ ಮಿತಿಮೀರಿದೆ : ಬಿ.ಕೆ ಸಂಗಮೇಶ್ವರ್

ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಯ(ಇ.ಡಿ ಇಲಾಖೆ)ವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಭದ್ರಾವತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜೂ. ೨೦: ಕೇಂದ್ರ ಹಾಗು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದೌರ್ಜನ್ಯ ಮಿತಿಮೀರಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಸೋಮವಾರ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಯ(ಇ.ಡಿ ಇಲಾಖೆ)ವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಇದೀಗ ೫-೧೦ ವರ್ಷ ಅಲ್ಪಾವಧಿ ಅಧಿಕಾರದಲ್ಲಿ ಬಿಜೆಪಿ ಪಕ್ಷಕ್ಕೆ ದೇಶ ಹಾಗು ರಾಜ್ಯದಲ್ಲಿ ಮರಳು ಭೂಮಿಯಲ್ಲಿ ನೀರು ಸಿಕ್ಕಿದಂತಾಗಿದೆ. ಇದರಿಂದಾಗಿ ಆಡಳಿತವನ್ನು ಮನದಂತೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರ ಕಳೆದುಕೊಳ್ಳುವ ಭಯದಲಿ ಸರ್ಕಾರಿ ಇಲಾಖೆಗಳನ್ನು ದುರುಪಯೋಗಪಡಿಸಿಕೊಂಡು ದೌರ್ಜನ್ಯ ವೆಸಗುತ್ತಿದ್ದಾರೆಂದು ಆರೋಪಿಸಿದರು.
    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಜನಸಾಮಾನ್ಯರಿಗೆ ಹಲವಾರು ಭರವಸೆಗಳನ್ನು ನೀಡಿದ್ದು, ಆದರೆ ಭರವಸೆಗಳು ಇದುವರೆಗೂ ಈಡೇರಿಲ್ಲ. ಅದರ ಬದಲು ಜನಸಾಮಾನ್ಯರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಇಂತಹ ಸರ್ಕಾರ ಎಂದಿಗೂ ಬೇಡ ಎಂಬ ಮನಸ್ಥಿತಿಗೆ ಜನಸಾಮಾನ್ಯರು ಬಂದು ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದರು.
    ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ, ಎಚ್.ಎಲ್ ಷಡಾಕ್ಷರಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪ್ರಮುಖರಾದ ಅಲ್ಪ ಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷೆ ಬಲ್ಕೀಶ್‌ಬಾನು, ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಮಾಜಿ ಅಧ್ಯಕ್ಷರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್,  ಸದಸ್ಯರಾದ ಜಾರ್ಜ್, ಬಿ.ಎಂ ಮಂಜುನಾಥ್, ಸೈಯದ್ ರಿಯಾಜ್, ಕಾಂತರಾಜ್, ಅನುಸುಧಾ ಮೋಹನ್, ಸರ್ವಮಂಗಳ ಭೈರಪ್ಪ ಮುಖಂಡರಾದ ಉದ್ಯಮಿ ಬಿ.ಕೆ ಜಗನ್ನಾಥ್, ಟಿ.ವಿ ಗೋವಿಂದಸ್ವಾಮಿ, ಎಸ್.ಎನ್ ಶಿವಪ್ಪ, ರಾಘವೇಂದ್ರ ಸರಾಟೆ, ಅಭಿಲಾಷ್, ಶಿವರಾಮ್, ಅಮಿರ್‌ಜಾನ್, ಚಂದ್ರಪ್ಪ, ಎಂ. ಶಿವಕುಮಾರ್, ಬಿ. ಗಂಗಾಧರ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಜಳಾ ರಾಮಚಂದ್ರ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.
    ರಂಗಪ್ಪ ವೃತ್ತದಿಂದ ತಾಲೂಕು ತಾಲೂಕು ಕಚೇರಿ ಮಿನಿವಿಧಾನಸೌಧದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಮನವಿ ಸಲ್ಲಿಸಲಾಯಿತು.

ಅಂತರಾಷ್ಟ್ರೀಯ ಯೋಗ ದಿನಾಚರಣೆ : ಜಾಗೃತಿ ಜಾಥಾ

ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸೋಮವಾರ ಭದ್ರಾವತಿ ಯೋಗ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜೂ. ೨೦ : ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸೋಮವಾರ ಯೋಗ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಚಾಲನೆ ನೀಡಿದರು. ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು.
     ನಗರಸಭೆ ಪೌರಾಯುಕ್ತ ಮನುಕುಮಾರ್, ಆಯುಷ್ ಇಲಾಖೆ ವೈದ್ಯರಾದ ಡಾ. ರವಿಶಂಕರ್, ಡಾ. ದಿವ್ಯಜ್ಯೋತಿ, ಡಾ. ಸುರೇಂದ್ರ, ಡಾ.ನರಸಿಂಹಮೂರ್ತಿ, ಡಾ. ವಿಜಯವಾಣಿ, ಡಾ. ವಿಜಯಲಕ್ಷ್ಮಿ, ಡಾ. ನಿರುಪಮಾ, ಯೋಗ ಸಂಯೋಜಕ ಮಹೇಂದ್ರ, ಗ್ರೇಡ್- ೨ ತಹಶೀಲ್ದಾರ್ ಪದ್ಮನಾಭ ಭಟ್, ದೈಹಿಕ ಶಿಕ್ಷಕರ ಮೇಲ್ವಿಚಾರಣಾಧಿಕಾರಿ ಪ್ರಭು, ಪತಂಜಲಿ ಯೋಗ ಸಮಿತಿಯ ಅನ್ನಪೂರ್ಣ ಸತೀಶ್, ಡಾ.ವೀಣಾ ಭಟ್, ಹಾ. ರಾಮಪ್ಪ, ಚನ್ನಪ್ಪ, ಜಂಗಮಪ್ಪ, ಎ.ಜಿನನಾಗರಾಜ್, ಮಲ್ಲಿಕಾರ್ಜುನ. ಸತ್ಯಣ್ಣ, ಸುಭಾಷ್, ಕೃಷ್ಣಮೂರ್ತಿ, ಗೌರಮ್ಮ, ಜಾನಕಮ್ಮ, ವಾಣಿಶ್ರೀ, ಕವಿತಾ, ಶ್ಯಾಮಲಾ ಹಾಗು ನಗರಸಭೆ, ಆಯುಷ್ ಇಲಾಖೆ, ತಾಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ :
    ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಜೂ.೨೧ರಂದು ಬೆಳಿಗ್ಗೆ ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
    ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ರಾಷ್ಟ್ರೀಯ ಮತ್ತು ರಾಜ್ಯ ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆ ಸಹಯೋಗದೊಂದಿಗೆ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಯಶಸ್ವಿಗೊಳಿಸುವಂತೆ ತಹಸೀಲ್ದಾರ್ ಆರ್. ಪ್ರದೀಪ್ ಕೋರಿದ್ದಾರೆ.

ಅಪ್ಪಾಜಿಯವರ ದಾರಿಯಲ್ಲಿ ಸಾಗಲು ನನಗೂ ಅವಕಾಶ ಸಹಕಾರ ನೀಡಿ : ಶಾರದ ಅಪ್ಪಾಜಿ

ಅಪ್ಪಾಜಿಯವರ ಜನ್ಮದಿನ ಅಂಗವಾಗಿ ಸೋಮವಾರ ಭದ್ರಾವತಿ ಜನ್ನಾಪುರ ರಾಜಪ್ಪ ಲೇಔಟ್‌ನಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ರಾಧಾ ಪ್ರಭಾಕರ್ ನೇತೃತ್ವದಲ್ಲಿ ಅಪ್ಪಾಜಿ ಅಭಿಮಾನಿಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಬಡ ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮವನ್ನು ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಉದ್ಘಾಟಿಸಿದರು.
    ಭದ್ರಾವತಿ, ಜೂ. ೨೦: ಕ್ಷೇತ್ರದ ಜನರ ಮೇಲೆ ದಿವಂಗತ ಎಂ.ಜೆ ಅಪ್ಪಾಜಿ ಅವರ ಆಶೀರ್ವಾದವಿದ್ದು, ಅವರ ದಾರಿಯಲ್ಲಿ ನಾನು ಸಹ ಸಾಗಲು ನಿಮ್ಮೆಲ್ಲರ ಸಹಕಾರವಿದೆ ಎಂದು ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಹೇಳಿದರು.
    ಅವರು ಸೋಮವಾರ ಅಪ್ಪಾಜಿಯವರ ಜನ್ಮದಿನ ಅಂಗವಾಗಿ ಜನ್ನಾಪುರ ರಾಜಪ್ಪ ಲೇಔಟ್‌ನಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ರಾಧಾ ಪ್ರಭಾಕರ್ ನೇತೃತ್ವದಲ್ಲಿ ಅಪ್ಪಾಜಿ ಅಭಿಮಾನಿಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಬಡ ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪ್ಪಾಜಿಯವರ ಜನ್ಮದಿನದಂದು ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ನೋಟ್ ಪುಸ್ತಕ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
    ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಧುಕುಮಾರ್, ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ನಗರಸಭಾ ಸದಸ್ಯರಾದ ನಾಗರತ್ನ, ರೂಪಾವತಿ, ಮುಖಂಡರಾದ ಗುಣಶೇಖರ್, ಡಿ.ಟಿ ಶ್ರೀಧರ್, ವಿಶಾಲಾಕ್ಷಿ, ಭಾಗ್ಯಮ್ಮ, ಡಿಎಸ್‌ಎಸ್ ಮುಖಂಡ ಜಿಂಕ್‌ಲೈನ್ ಮಣಿ ಹಾಗು ಅಪ್ಪಾಜಿ ಅಭಿಮಾನಿಗಳಾದ  ಆಟೋ ಅಪಲ, ಆಟೋ ಮೋಹನ್, ಕೃಷ್ಣಮೂರ್ತಿ, ಶಿವಕುಮಾರ್, ಪ್ರದೀಪ್(ಪುಟಾಣಿ), ಶಂಕರೇಗೌಡ, ಹಾಲಪ್ಪ, ಪುಟ್ಟ, ಕಿರಣ್, ಆಶಾರಾಜು, ಹೋಟೆಲ್ ವಿನೋದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಹ್ಯಾದ್ರಿ ಕನ್ನಡ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಮಾರು ೩೦೦ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಹಾಗು ೧೦೦ಕ್ಕೂ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು.
    ಇದಕ್ಕೂ ಮೊದಲು ಶಾಲಾ ಮಕ್ಕಳು ಜನ್ನಾಪುರ ಮುಖ್ಯ ರಸ್ತೆಯಲ್ಲಿ ಕ್ಯಾಂಡಲ್ ಹಿಡಿದು ಮೆರವಣಿಗೆ ನಡೆಸಿದರು. ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು.
    ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ, ರಾಜಪ್ಪ ಬಡಾವಣೆ, ಹಾಲಪ್ಪ ಶೆಡ್, ವೇಲೂರು ಶೆಡ್ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು, ಅಪ್ಪಾಜಿ ಅಭಿಮಾನಿಗಳು, ಶಾಲೆಯ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.


ಅಪ್ಪಾಜಿಯವರ ಜನ್ಮದಿನ ಅಂಗವಾಗಿ ಸೋಮವಾರ ಜನ್ನಾಪುರ ರಾಜಪ್ಪ ಲೇಔಟ್‌ನಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ರಾಧಾ ಪ್ರಭಾಕರ್ ನೇತೃತ್ವದಲ್ಲಿ ಅಪ್ಪಾಜಿ ಅಭಿಮಾನಿಗಳ ವತಿಯಿಂದ  ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಬಡ ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Sunday, June 19, 2022

ಕಾಯ್ದೆ ಜಾರಿ ಬಳಿಕವೂ ಹೆಚ್ಚುತ್ತಿದೆ ಗೋ ಹತ್ಯೆ

ವಿವಿಧೆಡೆ ಕಾರ್ಯಾಚರಣೆ ಗೋ ಮಾಂಸ ವಶ, ಗೋವುಗಳ ರಕ್ಷಣೆ


ಭದ್ರಾವತಿ ಹಳೇನಗರ ಪೊಲೀಸರು ನಗರಸಭೆ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ಗೋ ಮಾಂಸ ಮರಾಟ ಮಾಡುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿ ಹತ್ಯೆ ಮಾಡುವ ಉದ್ದೇಶಕ್ಕಾಗಿ ಅಕ್ರಮವಾಗಿ ಕೂಡಿ ಹಾಕಲಾಗಿದ್ದ ಗೋವುಗಳನ್ನು ರಕ್ಷಣೆ ಮಾಡಿರುವುದು.
    ಭದ್ರಾವತಿ, ಜೂ. ೧೯: ರಾಜ್ಯದಲ್ಲಿ ಗೋ ಹತ್ಯೆ ನಿಷೇಧಿಸಲಾಗಿದ್ದರೂ ಸಹ ಅಕ್ರಮವಾಗಿ ಗೋ ಹತ್ಯೆ ನಡೆಯುತ್ತಿದ್ದು, ಕಾಯ್ದೆ ಜಾರಿಗೊಂಡ ನಂತರವೂ ಸಹ ಅದರಲ್ಲೂ ಕ್ಷೇತ್ರದಲ್ಲಿ ಗೋ ಹತ್ಯೆ ವ್ಯಾಪಕವಾಗಿ ನಡೆಯುತ್ತಿರುವುದು ಇತ್ತೀಚಿನ ಕೆಲವು ಪ್ರಕರಣಗಳಿಂದ ಬಯಲಾಗುತ್ತಿದೆ.
    ಕೆಲವು ದಿನಗಳ ಹಿಂದೆ ಕೊಪ್ಪ ಪೊಲೀಸರು ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಸುಮಾರು ೪೫ ಕೆ.ಜಿ ಗೋ ಮಾಂಸ ವಶಪಡಿಸಿಕೊಂಡಿದ್ದಾರೆ. ಬಂಧಿತರು ಕ್ಷೇತ್ರದ ನಿವಾಸಿಗಳಾಗಿದ್ದು, ಕಳೆದ ಸುಮಾರು ೨ ವರ್ಷಗಳಿಂದ ನಿರಂತರವಾಗಿ ಗೋ ಮಾಂಸ ಮಾರಾಟದಲ್ಲಿ ತೊಡಗಿರುವುದು ತಿಳಿದು ಬಂದಿದೆ. ಅಲ್ಲದೆ ಗೋ ಮಾಂಸ ಸಾಗಟಕ್ಕೆ ದ್ವಿಚಕ್ರ ವಾಹನ ಬಳಕೆ ಮಾಡುತ್ತಿರುವುದು ಈ ಪ್ರಕರಣದಿಂದ ಬಯಲಾಗಿದೆ.
    ಶನಿವಾರ ತಾಲೂಕಿನ ಲಕ್ಷ್ಮೀಪುರದ ಬಳಿ ರೈಲ್ವೆ ಟ್ರಾಕ್ ಹತ್ತಿರ ಇಬ್ಬರು ವ್ಯಕ್ತಿಗಳು ಬಕ್ರೀದ್ ಹಬ್ಬಕ್ಕಾಗಿ ಬಲಿ ಕೊಡಲು ಹೋರಿ ಎತ್ತನ್ನು ಎಳೆದುಕೊಂಡು ಹೋಗುತ್ತಿದ್ದಾಗ ನ್ಯೂಟೌನ್ ಪೊಲೀಸರ ಕೈಗೆ ಸಿಕ್ಕಿ ಓರ್ವ ಬಿದ್ದಿದ್ದಾನೆ.
ಪೊಲೀಸರ ವಿಚಾರಣೆ ವೇಳೆ ಸತ್ಯಾಂಶ ಹೊರಬಿದ್ದಿದ್ದು, ಈ ಪ್ರಕರಣದ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಭಾನುವಾರ ಬೆಳಿಗ್ಗೆ ನಗರಸಭೆ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ಪೊಲೀಸರು ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡಲಾಗುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಸುಮಾರು ೫೦ ಕೆ.ಜಿ ಗೋ ಮಾಂಸ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಹತ್ಯೆ  ಮಾಡುವ ಉದ್ದೇಶಕ್ಕಾಗಿ ಕೂಡಿ ಹಾಕಲಾಗಿದ್ದ ಸುಮಾರು ೨೯ ಗೋವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಭದ್ರಾವತಿ ಹಳೇನಗರ ಪೊಲೀಸರು ನಗರಸಭೆ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ಗೋ ಮಾಂಸ ಮರಾಟ ಮಾಡುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕಂಡು ಬಂದ ದೃಶ್ಯ.