Monday, June 20, 2022

ಬಿಜೆಪಿ ಸರ್ಕಾರದ ದೌರ್ಜನ್ಯ ಮಿತಿಮೀರಿದೆ : ಬಿ.ಕೆ ಸಂಗಮೇಶ್ವರ್

ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಯ(ಇ.ಡಿ ಇಲಾಖೆ)ವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಭದ್ರಾವತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜೂ. ೨೦: ಕೇಂದ್ರ ಹಾಗು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದೌರ್ಜನ್ಯ ಮಿತಿಮೀರಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಸೋಮವಾರ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಯ(ಇ.ಡಿ ಇಲಾಖೆ)ವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಇದೀಗ ೫-೧೦ ವರ್ಷ ಅಲ್ಪಾವಧಿ ಅಧಿಕಾರದಲ್ಲಿ ಬಿಜೆಪಿ ಪಕ್ಷಕ್ಕೆ ದೇಶ ಹಾಗು ರಾಜ್ಯದಲ್ಲಿ ಮರಳು ಭೂಮಿಯಲ್ಲಿ ನೀರು ಸಿಕ್ಕಿದಂತಾಗಿದೆ. ಇದರಿಂದಾಗಿ ಆಡಳಿತವನ್ನು ಮನದಂತೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರ ಕಳೆದುಕೊಳ್ಳುವ ಭಯದಲಿ ಸರ್ಕಾರಿ ಇಲಾಖೆಗಳನ್ನು ದುರುಪಯೋಗಪಡಿಸಿಕೊಂಡು ದೌರ್ಜನ್ಯ ವೆಸಗುತ್ತಿದ್ದಾರೆಂದು ಆರೋಪಿಸಿದರು.
    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಜನಸಾಮಾನ್ಯರಿಗೆ ಹಲವಾರು ಭರವಸೆಗಳನ್ನು ನೀಡಿದ್ದು, ಆದರೆ ಭರವಸೆಗಳು ಇದುವರೆಗೂ ಈಡೇರಿಲ್ಲ. ಅದರ ಬದಲು ಜನಸಾಮಾನ್ಯರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಇಂತಹ ಸರ್ಕಾರ ಎಂದಿಗೂ ಬೇಡ ಎಂಬ ಮನಸ್ಥಿತಿಗೆ ಜನಸಾಮಾನ್ಯರು ಬಂದು ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದರು.
    ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ, ಎಚ್.ಎಲ್ ಷಡಾಕ್ಷರಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪ್ರಮುಖರಾದ ಅಲ್ಪ ಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷೆ ಬಲ್ಕೀಶ್‌ಬಾನು, ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಮಾಜಿ ಅಧ್ಯಕ್ಷರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್,  ಸದಸ್ಯರಾದ ಜಾರ್ಜ್, ಬಿ.ಎಂ ಮಂಜುನಾಥ್, ಸೈಯದ್ ರಿಯಾಜ್, ಕಾಂತರಾಜ್, ಅನುಸುಧಾ ಮೋಹನ್, ಸರ್ವಮಂಗಳ ಭೈರಪ್ಪ ಮುಖಂಡರಾದ ಉದ್ಯಮಿ ಬಿ.ಕೆ ಜಗನ್ನಾಥ್, ಟಿ.ವಿ ಗೋವಿಂದಸ್ವಾಮಿ, ಎಸ್.ಎನ್ ಶಿವಪ್ಪ, ರಾಘವೇಂದ್ರ ಸರಾಟೆ, ಅಭಿಲಾಷ್, ಶಿವರಾಮ್, ಅಮಿರ್‌ಜಾನ್, ಚಂದ್ರಪ್ಪ, ಎಂ. ಶಿವಕುಮಾರ್, ಬಿ. ಗಂಗಾಧರ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಜಳಾ ರಾಮಚಂದ್ರ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.
    ರಂಗಪ್ಪ ವೃತ್ತದಿಂದ ತಾಲೂಕು ತಾಲೂಕು ಕಚೇರಿ ಮಿನಿವಿಧಾನಸೌಧದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಮನವಿ ಸಲ್ಲಿಸಲಾಯಿತು.

No comments:

Post a Comment