Sunday, October 2, 2022

ಅರಳಿಹಳ್ಳಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ೧೧ನೇ ವರ್ಷದ ಶರನ್ನವರಾತ್ರಿ ಪೂಜಾ ಮಹೋತ್ಸವ

ಭಕ್ತರ ಮನಸೆಳೆದ ಅಮ್ಮನವರ ಲಕ್ಷ್ಮಿ ಅಲಂಕಾರ  

ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ೧೧ನೇ ವರ್ಷದ ಶರನ್ನವರಾತ್ರಿ  ಪೂಜಾ ಮಹೋತ್ಸವ ಅಂಗವಾಗಿ ಗೊಂಬೆ ಪ್ರದರ್ಶನ ಏರ್ಪಡಿಸಲಾಗಿತ್ತು. 
    ಭದ್ರಾವತಿ, ಅ. ೨: ತಾಲೂಕಿನ ಅರಳಿಹಳ್ಳಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ೧೧ನೇ ವರ್ಷದ ಶರನ್ನವರಾತ್ರಿ  ಪೂಜಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ಕೈಗೊಳ್ಳಲಾಗಿದ್ದ ಲಕ್ಷ್ಮೀ ಅಲಂಕಾರ ಭಕ್ತರ ಮನಸೂರೆಗೊಂಡಿತು.
    ಶರನ್ನವರಾತ್ರಿ ಪೂಜಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ಕಾಮಾಕ್ಷಿ, ವಿಶಾಲಾಕ್ಷಿ, ಮೀನಾಕ್ಷಿ, ಬನಶಂಕರಿ, ಲಕ್ಷ್ಮಿ, ಅನ್ನಪೂರ್ಣೇಶ್ವರಿ ಹಾಗು ಸರಸ್ವತಿ ಅಲಂಕಾರ ಕೈಗೊಳ್ಳಲಾಗಿತ್ತು.
    ಪ್ರತಿದಿನ ಬೆಳಿಗ್ಗೆ ವಿಶೇಷ ಪೂಜೆ, ಅಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ಸಂಜೆ ೬.೩೦ಕ್ಕೆ ಲಲಿತಾ ಸಹಸ್ರನಾಮ ಪಾರಾಯಣ ನಂತರ ಭಜನೆ, ರಾತ್ರಿ ೮.೩೦ಕ್ಕೆ ಮಹಾಮಂಗಳಾರತಿ ನಂತರ ವಿತರಣೆ ನಡೆಯಿತು. ಅಲ್ಲದೆ ಗೊಂಬೆ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು. ಗೊಂಬೆ ಪ್ರದರ್ಶನ ಭಕ್ತರ ಗಮನ ಸೆಳೆಯಿತು. ದೇವಸ್ಥಾನ ಅರ್ಚಕ ಪ್ರದೀಪ್‌ರವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.


ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ೧೧ನೇ ವರ್ಷದ ಶರನ್ನವರಾತ್ರಿ  ಪೂಜಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ಕೈಗೊಳ್ಳಲಾಗಿದ್ದ ಲಕ್ಷ್ಮೀ ಅಲಂಕಾರ ಭಕ್ತರ ಮನಸೂರೆಗೊಂಡಿತು.

ಅಮಲೋದ್ಭವಿ ಮಾತೆ ದೇವಾಲಯದಲ್ಲಿ ರಕ್ತದಾನ, ಮಾಹಿತಿ ಕಾರ್ಯಾಗಾರ

ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಭಾನುವಾರ ಸಂತ ವಿನ್ಸೆಂಟ್ ದ ಪೌಲ್ ಸೊಸೈಟಿ ಹಾಗು ರೋಟರಿ ರಕ್ತನಿಧಿ, ಶಿವಮೊಗ್ಗ ವತಿಯಿಂದ ರಕ್ತದಾನ ಶಿಬಿರ ಹಾಗು ಸರ್ಕಾರದ ವಿವಿಧ ಇಲಾಖೆಗಳ ಯೋಜನೆ ಕುರಿತ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಅ. ೨: ನಗರದ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಭಾನುವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಅಂಗವಾಗಿ ಸಂತ ವಿನ್ಸೆಂಟ್ ದ ಪೌಲ್ ಸೊಸೈಟಿ ಹಾಗು ರೋಟರಿ ರಕ್ತನಿಧಿ, ಶಿವಮೊಗ್ಗ ವತಿಯಿಂದ ರಕ್ತದಾನ ಶಿಬಿರ ಹಾಗು ಸರ್ಕಾರದ ವಿವಿಧ ಇಲಾಖೆಗಳ ಯೋಜನೆ ಕುರಿತ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
    ದೇವಾಲಯದ ಧರ್ಮಗುರು ಫಾದರ್ ಲಾನ್ಸಿ ಡಿಸೋಜ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ನಿರೀಕ್ಷಕಿ ಮುಮ್ತಾಜ್ ಬೇಗಂ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಂದ ಅಸಂಘಟಿತ ಕಾರ್ಮಿಕರಿಗೆ ಲಭ್ಯವಿರುವ ಯೋಜನೆಗಳು ಹಾಗು ಸದ್ಬಳಕೆ ಮಾಡಿಕೊಳ್ಳುವ ಬಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿನೋದ್ ಇಲಾಖೆಯಲ್ಲಿನ ಯೋಜನೆಗಳು ಹಾಗು ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
    ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ. ಅಶ್ವಿತಾ ಕ್ರಾಸ್ಟ, ಆರೋಗ್ಯ ಇಲಾಖೆಯಲ್ಲಿನ ಯೋಜನೆಗಳ ಕುರಿತು ಹಾಗು ರಕ್ತದಾನ ಶಿಬಿರದ ಮೇಲ್ವಿಚಾರಕ ಡಾ. ಅರುಣ್ ರಕ್ತದ ಮಹತ್ವ ಮತ್ತು ರಕ್ತದಾನ ಮಾಡುವವರು ಹೊಂದಿರಬೇಕಾದ ಸಾಮಾನ್ಯ ತಿಳುವಳಿಕೆಗಳ ಕುರಿತು ಮಾಹಿತಿ ನೀಡಿದರು.
    ದೇವಾಲಯದ ಪಾಲನ ಸಮಿತಿ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಆಲ್ವಿನ್ ಕಾಸ್ಟ ಸ್ವಾಗತಿಸಿದರು. ಸೆಂಟ್ ಚಾರ್ಲ್ಸ್ ಸುಪಿರೀಯರ್ ಸಿಸ್ಟರ್ ಜೆನಿಟಾ ವಂದಿಸಿದರು.

ಭದ್ರಾವತಿ ದಸರಾ ಕುಸ್ತಿ ಪಂದ್ಯಾವಳಿ


ಭದ್ರಾವತಿ ನಗರಸಭೆ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ದಸರಾ ಕುಸ್ತಿ ಪಂದ್ಯಾವಳಿಗೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಚಾಲನೆ ನೀಡಿದರು.
    ಭದ್ರಾವತಿ, ಅ. ೨ : ನಗರಸಭೆ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ದಸರಾ ಕುಸ್ತಿ ಪಂದ್ಯಾವಳಿಗೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಚಾಲನೆ ನೀಡಿದರು.
    ಈ ಬಾರಿ ದಸರಾ ಹಬ್ಬದ ವಿಶೇಷತೆಗಳಲ್ಲಿ ಕುಸ್ತಿ ಪಂದ್ಯಾವಳಿ ಸಹ ಒಂದಾಗಿದ್ದು, ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುಸ್ತಿ ಪಂದ್ಯಾವಳಿ ಫೈಲ್ವಾನ್‌ಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು.
    ದಸರಾ ಆಚgಣಾ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ನಗರಸಭೆ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

ಮೆಚ್ಚುಗೆಗೆ ಪಾತ್ರವಾದ ಮೂಕ, ಕಿವುಡ ಮಕ್ಕಳ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ನಾಟಕ

ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಭಾನುವಾರ ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಶಾರದ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನ್ಯೂಟೌನ್ ತರಂಗ ಮೂಕ ಮತ್ತು ಕಿವುಡ ಮಕ್ಕಳ ಶಾಲೆ ವಿದ್ಯಾರ್ಥಿಗಳು ತಮ್ಮ ಅಭಿನಯದ ಮೂಲಕ ಅಚ್ಚರಿಗೊಳಿಸಿದರು.
    ಭದ್ರಾವತಿ, ಅ. ೨ : ಮೂಕ ಮತ್ತು ಕಿವುಡ ಮಕ್ಕಳಿಂದ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ನಾಟಕ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
    ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಭಾನುವಾರ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಶಾರದ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನ್ಯೂಟೌನ್ ತರಂಗ ಮೂಕ ಮತ್ತು ಕಿವುಡ ಮಕ್ಕಳ ಶಾಲೆ ವಿದ್ಯಾರ್ಥಿಗಳು ತಮ್ಮ ಅಭಿನಯದ ಮೂಲಕ ಅಚ್ಚರಿಗೊಳಿಸಿದರು.
    ಕೆಲವರು ಉದ್ಯಾನವನದಲ್ಲಿ ಎಲ್ಲಿಬೇಕೆಂದರಲ್ಲಿ ಕಸ ಎಸೆಯುವುದು. ಮತ್ತೊಬ್ಬರು ರಾಷ್ಟ್ರಪಿತ ಮಹಾತ್ಮಗಾಂಧಿ ಪ್ರತಿಮೆಯಲ್ಲಿನ ಒಂದೊಂದು ವಸ್ತುಗಳನ್ನು ಕದಿಯುವುದು. ಇನ್ನೊಬ್ಬರು ಉದ್ಯಾನವನದಲ್ಲಿ ರಕ್ಷಣೆಯಲ್ಲಿ ತೊಡಗಿರುವವರು. ಮತ್ತಿಬ್ಬರು ವ್ಯಾಪಾರ ವಹಿವಾಟು ನಡೆಸುವವರು. ಈ ನಡುವೆ ಉದ್ಯಾನವನದ ಮಹತ್ವ ಹಾಗು ಸ್ವಚ್ಛತೆ ಕುರಿತು ಅರಿವು ಮೂಡಿಸುವ ಪರಿ ವೀಕ್ಷಕರ ಮನಸೂರೆಗೊಂಡಿತು.


    ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಕಾರ್ಖಾನೆಯ ಮುಖ್ಯ ಪ್ರಬಂಧಕ ಕೆ.ಎಸ್. ಸುರೇಶ್ ಚಾಲನೆ ನೀಡಿದರು. ಡಾ. ಕವಿತಾ ಸದಾಶಿವ ಭಗವದ್ಗೀತೆ, ನೋರಾ ಮಂಜಿಸ್ ಬೈಬಲ್ ಹಾಗೂ ಹಫಿಜ್ ಉರ್ ರಹಮಾನ್ ಕುರಾನ್ ಪಠಿಸಿದರು.
    ಅಧಿಕಾರಿಗಳ ಸಂಘದ ಅಧ್ಯಕ್ಷ ಸುಗಾದಿ ಲೋಕನಾಥ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್ ಹಾಗು ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.


Saturday, October 1, 2022

ನಗರದ ವಿವಿಧೆಡೆ ಮಹಾತ್ಮಗಾಂಧಿ ಜಯಂತಿ

    ಭದ್ರಾವತಿ, ಅ. ೧ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸೇರಿದಂತೆ ವಿವಿಧೆಡೆ ಅ.೨ರಂದು ಮಹಾತ್ಮಗಾಂಧಿ ಜಯಂತಿ ಹಮ್ಮಿಕೊಳ್ಳಲಾಗಿದೆ.
    ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ನ್ಯೂಟೌನ್ ಶಾರದ ಮಂದಿರದಲ್ಲಿ ಬೆಳಿಗ್ಗೆ ೯ ಗಂಟೆಗೆ ಮಹಾತ್ಮಗಾಂಧಿ ಜಯಂತಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಗಾಂಧಿ ನಮನ ಹಾಗು ಸರ್ವ ಧರ್ಮ ಗ್ರಂಥಗಳ ಸಂದೇಶ ಪಠಣ ಹಾಗು ದೇಶ ಭಕ್ತಿ ಗೀತೆ ಗಾಯನ ನಡೆಯಲಿದೆ.
    ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಹಾಗು ಕಾರ್ಮಿಕ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಖಾನೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ತರಂಗ ಕಿವುಡು ಮಕ್ಕಳ ಶಾಲೆ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಎಲ್. ಪ್ರವೀಣ್‌ಕುಮಾರ್ ಕೋರಿದ್ದಾರೆ.
    ಜೆಡಿಎಸ್ ಪಕ್ಷದಿಂದ ಗಾಂಧಿ ಜಯಂತಿ:
    ಜಾತ್ಯತೀತ ಜನತಾದಳ ವತಿಯಿಂದ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ನೇತೃತ್ವದಲ್ಲಿ ಅ.೨ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಗಾಂಧಿ ಜಯಂತಿ ಹಮ್ಮಿಕೊಳ್ಳಲಾಗಿದೆ.
    ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಗಾಂಧಿ ಜಯಂತಿ ಆಚರಣೆ ನಡೆಯಲಿದ್ದು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಲಾಗಿದೆ.

ಲಂಬಾಣಿ ಜನಾಂಗಕ್ಕೆ ರುದ್ರಭೂಮಿಗಾಗಿ ಖಾತೆ ಪಹಣಿ ಮಾಡಿಕೊಡಲು ಆಗ್ರಹಿಸಿ ಪ್ರತಿಭಟನೆ

ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ಮನವಿ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ, ನಾಗತಿಬೆಳಗಲು ತಾಂಡದ ಲಂಬಾಣಿ ಜನಾಂಗಕ್ಕೆ ರುದ್ರಭೂಮಿಗಾಗಿ ಖಾತೆ ಪಹಣಿ ಮಾಡಿಕೊಡಬೇಕೆಂದು ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಡಳಿತ ಹಾಗು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಅ. ೧: ತಾಲೂಕಿನ ಕೂಡ್ಲಿಗೆರೆ ಹೋಬಳಿ, ನಾಗತಿಬೆಳಗಲು ತಾಂಡದ ಲಂಬಾಣಿ ಜನಾಂಗಕ್ಕೆ ರುದ್ರಭೂಮಿಗಾಗಿ ಖಾತೆ ಪಹಣಿ ಮಾಡಿಕೊಡಬೇಕೆಂದು ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಡಳಿತ ಹಾಗು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ರುದ್ರಭೂಮಿಗೆ ಮೀಸಲಿಟ್ಟಿರುವ ಹೊಸಹಳ್ಳಿ ಗ್ರಾಮದ ಸರ್ವೆ ನಂ.೧೬ರಲ್ಲಿ ೩ ಎಕರೆ ೨೦ ಗುಂಟೆ ಜಮೀನು ಪೈಕಿ ೧ ಎಕರೆ ಜಮೀನು ಇದ್ದು, ಈಗಾಗಲೇ ಈ ಜಮೀನಿನಲ್ಲಿ ಕಳೆದ ಸುಮಾರು ೩೦ ವರ್ಷಗಳಿಂದ ಅಂತ್ಯಸಂಸ್ಕಾರ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಈ ಜಮೀನು ಪಹಣಿಯಲ್ಲಿ ಮುಫತ್ತು ಎಂದು ದಾಖಲಾಗಿದೆ. ಉಳಿದ ೨ ಎಕರೆ ೨೦ ಗುಂಟೆ ಜಮೀನಿನ ಸಂಬಂಧ ಹೊಸಹಳ್ಳಿ ಗ್ರಾಮದವರು ಕೈ ಪಹಣಿಯನ್ನು ಮಾಡಿಸಿಕೊಂಡು ಜಾಗವನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ೨ ಎಕರೆ ೨೦ ಗುಂಟೆ ಜಮೀನನ್ನು ಶ್ರೀ ಸೇವಾಲಾಲ್ ರುದ್ರಭೂಮಿ ಸೇವಾ ಸಮಿತಿಗೆ ತಕ್ಷಣ ಖಾತೆ ಪಹಣಿ ಮಾಡಿಕೊಡಬೇಕೆಂದು ಆಗ್ರಹಿಸಲಾಯಿತು.  
    ಚಿತ್ರದುರ್ಗ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ನೇತೃತ್ವದಲ್ಲಿ ತಹಸೀಲ್ದಾರ್ ಗ್ರೇಡ್-೨ ಮಂಜಾನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು. ಶ್ರೀ ಸೇವಾಲಾಲ್ ರುದ್ರಭೂಮಿ ಸೇವಾ ಸಮಿತಿ ಅಧ್ಯಕ್ಷ ರೂಪ್ಲಾನಾಯ್ಕ, ಕಾರ್ಯದರ್ಶಿ ಕುಮಾರನಾಯ್ಕ, ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಜಾತ್ಯತೀತ(ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ಜಾತ್ಯತೀತ ಜನತಾದಳ ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್ ಹಾಗು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ತಾಂಡ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಯೊಬ್ಬರಿಗೂ ತಮ್ಮ ವೃತ್ತಿ ಬಗ್ಗೆ ಅಭಿಮಾನವಿರಲಿ : ಬಿ.ಕೆ ಶ್ರೀನಾಥ್

ನವರಾತ್ರಿ ಪ್ರಯುಕ್ತ ದಾಂಡಿಯಾ ಸ್ನೇಹ-ಮಿಲನ ಕಾರ್ಯಕ್ರಮ

ಭದ್ರಾವತಿಯಲ್ಲಿ ಸ್ತ್ರೀ ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ಬ್ಯೂಟಿಷಿಯನ್ ಮತ್ತು ಟೈಲರಿಂಗ್‌ರವರಿಂದ ನವರಾತ್ರಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ದಾಂಡಿಯಾ ಸ್ನೇಹ-ಮಿಲನ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಅ. ೧: ಸ್ತ್ರೀ ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ಬ್ಯೂಟಿಷಿಯನ್ ಮತ್ತು ಟೈಲರಿಂಗ್‌ರವರಿಂದ ನವರಾತ್ರಿ ಪ್ರಯುಕ್ತ ದಾಂಡಿಯಾ ಸ್ನೇಹ-ಮಿಲನ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
    ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾ ಸಲಹೆಗಾರ ಬಿ.ಕೆ ಶ್ರೀನಾಥ್ ಮಾತನಾಡಿ, ದಾಂಡಿಯಾ ಕಾರ್ಯಕ್ರಮ ತನ್ನದೇ ಆದ ಪರಂಪರೆ, ವಿಶೇಷತೆಯನ್ನು ಹೊಂದಿದೆ. ದಾಂಡಿಯಾ ಪ್ರಮುಖ ಉದ್ದೇಶ ಎಲ್ಲರನ್ನು ಒಗ್ಗೂಡಿಸುವುದಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ಯಾವುದೇ ಶುಭ ಕಾರ್ಯ ಕೈಗೊಳ್ಳುವ ಮೊದಲು ದಾಂಡಿಯಾ ನಡೆಸುವುದು ಆಚರಣೆಯಾಗಿ ಬಂದಿದೆ. ದಾಂಡಿಯಾ ಸ್ನೇಹ-ಮಿಲನ ಕಾರ್ಯಕ್ರಮದ ಮೂಲಕ ಎಲ್ಲಾ ಧರ್ಮದ, ಎಲ್ಲಾ ಜಾತಿ-ಜನಾಂಗದವರು ಒಗ್ಗೂಡಿ ನವರಾತ್ರಿ ಆಚರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
    ಬ್ಯೂಟಿಷಿಯನ್ ಮತ್ತು ಟೈಲರಿಂಗ್ ಒಂದು ವಿಶಿಷ್ಟವಾದ ವೃತ್ತಿಯಾಗಿದ್ದು, ಈ ವೃತ್ತಿ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
    ಒಕ್ಕೂಟದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಮಾತನಾಡಿ, ಅಸಂಘಟಿತ ಮಹಿಳಾ ಕಾರ್ಮಿಕರನ್ನು ಒಗ್ಗೂಡಿಸಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ಸಂಸದ ಬಿ.ವೈ ರಾಘವೇಂದ್ರ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಮಾರ್ಗದರ್ಶನದಲ್ಲಿ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲಾಗಿದೆ. ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವ ಜೊತೆಗೆ ಮಹಿಳೆಯರನ್ನು ಸಹ ಆರ್ಥಿಕವಾಗಿ ಸದೃಢಗೊಳಿಸುವ ಅಗತ್ಯವಿದೆ ಎಂದರು.  
    ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಮಾಜಿ ಸದಸ್ಯ ಗಂಗಾಧರ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಪದ್ಮಾವತಿ, ಗಾಯತ್ರಿ, ಕಲಾ, ಸರಿತ, ನೇತ್ರಾ, ರೂಪಾ, ತೃಪ್ತಿ, ಶಶಿ, ಶಿಲ್ಪ, ಮಾಲಾ ಹಾಗು ಶಿಕಾರಿಪುರ, ಹೊನ್ನಾಳ್ಳಿ, ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಸಾಗರ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರೇಣುಕಾ ಪ್ರಾರ್ಥಿಸಿದರು. ಸುಮಿತ್ರಾ ಸ್ವಾಗತಿಸಿ, ಕವಿತಾ ನವೀನ್ ಮತ್ತು ವಿಜಯ್ ಸಿದ್ದಾರ್ಥ ನಿರೂಪಿಸಿದರು. ಮಕ್ಕಳು ಮತ್ತು ಮಹಿಳೆಯರಿಂದ ನೃತ್ಯ ವೇಷಭೂಷಣ ಸ್ಪರ್ಧೆ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


ಭದ್ರಾವತಿಯಲ್ಲಿ ಸ್ತ್ರೀ ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ಬ್ಯೂಟಿಷಿಯನ್ ಮತ್ತು ಟೈಲರಿಂಗ್‌ರವರಿಂದ ನವರಾತ್ರಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ದಾಂಡಿಯಾ ಸ್ನೇಹ-ಮಿಲನ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಮಹಿಳೆಯರಿಂದ ನೃತ್ಯ ವೇಷಭೂಷಣ ಸ್ಪರ್ಧೆ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.