ಭದ್ರಾವತಿ, ಅ. ೧೩: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆ ವತಿಯಿಂದ ಅ. ೧೪ರಂದು ಬೆಳಿಗ್ಗೆ ೧೧ ಗಂಟೆಗೆ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಪ್ರೊ. ಬಿ.ಕೃಷ್ಣಪ್ಪನವರ ೮೫ನೇ ಜನ್ಮದಿನ ಸಾಮಾಜಿಕ ನ್ಯಾಯದ ದಿನ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತಾಲೂಕಿನಲ್ಲಿ ೭೦ರ ದಶಕದಲ್ಲಿ ದಲಿತ ಚಳುವಳಿ ಹುಟ್ಟು ಹಾಕಿ ಶೋಷಿತರ ಪರವಾಗಿ ಹೋರಾಟದ ಧ್ವನಿಯಾಗುವ ಮೂಲಕ ದಲಿತರನ್ನು ಜಾಗೃತಗೊಳಿಸಿದ ಪ್ರೊ. ಬಿ. ಕೃಷ್ಣಪ್ಪನವರು ಚಳುವಳಿಯನ್ನು ರಾಜ್ಯಾದ್ಯಂತ ವಿಸ್ತರಿಸುವ ಜೊತೆಗೆ ಹಲವು ಹೋರಾಟಗಳಿಗೆ ಶಕ್ತಿ ತುಂಬಿದರು. ದಲಿತರಪರವಾದ ಹೋರಾಟಗಳಿಗೆ ನ್ಯಾಯ ಒದಗಿಸಿಕೊಟ್ಟರು. ದಲಿತರಿಗೆ ಸ್ವಾಭಿಮಾನದ ಬದುಕು ರೂಪಿಸಿಕೊಟ್ಟರು. ಈ ಹಿನ್ನಲೆಯಲ್ಲಿ ಇವರ ಜನ್ಮದಿನ ಆಚರಿಸಲಾಗುತ್ತಿದ್ದು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಮಹಿಳೆಯರು, ಶೋಷಿತ ಸಮುದಾಯದವರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಾಲೂಕು ಸಂಚಾಲಕ ಎಂ. ಪಳನಿರಾಜ್ ಕೋರಿದ್ದಾರೆ.