Thursday, November 17, 2022

ನ.೧೯ರಂದು ವಿದ್ಯುತ್ ಅದಾಲತ್

    ಭದ್ರಾವತಿ, ನ. ೧೭: ತಾಲೂಕಿನ ಮೆಸ್ಕಾಂ ಗ್ರಾಮಾಂತರ ಉಪವಿಭಾಗದ ಘಟಕ-೧ ಮತ್ತು ಘಟಕ-೨ ಬಿಆರ್‌ಪಿ ಶಾಖೆಯಲ್ಲಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 'ಕಂಬದಾಳ್ ಹೊಸೂರು' ಗ್ರಾಮದಲ್ಲಿ ನ.೧೯ರಂದು ಬೆಳಿಗ್ಗೆ ೧೦.೩೦ಕ್ಕೆ ವಿದ್ಯುತ್ ಅದಾಲತ್ ಹಮ್ಮಿಕೊಳ್ಳಲಾಗಿದೆ.
    ಕಂಬದಾಳ್ ಹೊಸೂರು ಗ್ರಾಮ ಪಂಚಾಯತಿ ಕಛೇರಿ ಸಭಾಂಗಣದಲ್ಲಿ ನಡೆಯಲಿರುವ ವಿದ್ಯುತ್ ಅದಾಲತ್‌ನಲ್ಲಿ ಈ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ನ.೧೮ರಂದು ಧರಣಿ ಸತ್ಯಾಗ್ರಹ


    ಭದ್ರಾವತಿ, ನ. ೧೭ : ನಾಡಹಬ್ಬ ಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಸರಿಯಾದ ರೀತಿಯಲ್ಲಿ ಆಹ್ವಾನಿಸದಿರುವುದನ್ನು ಖಂಡಿಸಿ ನ.೧೮ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕು ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
    ಬೆಂಗಳೂರಿನಲ್ಲಿ ಪ್ರತಿಷ್ಠಾಪಿಸಲಾಗಿರುವ ನಾಡಹಬ್ಬ ಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಆಹ್ವಾನಿಸದೆ ನಿರ್ಲಕ್ಷ್ಯತನದಿಂದ ವರ್ತಿಸಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.  ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಯುವ ಮುಖಂಡ ಶಶಿಕುಮಾರ್ ಗೌಡ ಮನವಿ ಮಾಡಿದ್ದಾರೆ.  

ವರ್ತಕರ ಸಂಘದ ಅಧ್ಯಕ್ಷರಾಗಿ ಸಿ.ಎನ್ ಗಿರೀಶ್

ಸಿ.ಎನ್ ಗಿರೀಶ್

ಭದ್ರಾವತಿ ನ. ೧೭ : ನಗರದ ವರ್ತಕರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದ ವಾಣಿ ಸ್ಟೋರ‍್ಸ್‌ನ ಸಿ.ಎನ್ ಗಿರೀಶ್ ಆಯ್ಕೆಯಾಗಿದ್ದಾರೆ.
ನಗರದಲ್ಲಿ ವರ್ತಕರ ಹಿತರಕ್ಷಣೆಗೆ ಬದ್ಧವಾಗಿ ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಇದೀಗ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಗುರುರಾಜಾಚಾರ್, ಉಪಾಧ್ಯಕ್ಷರಾಗಿ ಭವರ್ ಲಾಲ್ ಜೈನ್, ಕಾರ್ಯದರ್ಶಿಯಾಗಿ ಡಿ.ಎನ್ ಅಶೋಕ್, ಸಹಕಾರ್ಯದರ್ಶಿಗಳಾಗಿ ತಿಪ್ಪೇಶ್ ಮತ್ತು ಶ್ರೀವತ್ಸ, ಖಜಾಂಚಿಯಾಗಿ ಭರತ್ ಜೈನ್ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಾದಿರಾಜ್ ಅಡಿಗ, ನಾರಾಯಣ ಮೂರ್ತಿ, ಮಿಥೇಶ್ ಜೈನ್, ಕೆ.ವಿ ಹರೀಶ್ ಬಾಬು, ಎಸ್.ಎನ್ ಶ್ರೀನಿವಾಸ್, ಮಹಮದ್ ಶಿರಾಜ್, ಪ್ರಕಾಶ್, ಬಿ.ಅರ್ ವೆಂಕಟೇಶ ಮೂರ್ತಿ ಮತ್ತು ವಿಶ್ವನಾಥ್ ಅಯ್ಕೆಯಾದರು.


ಡಿ.ಎನ್ ಅಶೋಕ್

ಗ್ರಾಮ ಪಂಚಾಯಿತಿ ವಿರುದ್ಧ ಅಪಪ್ರಚಾರ, ಸುಳ್ಳು ಆರೋಪ

ಭದ್ರಾವತಿ, ನ. 17: ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ ಮಾಡದೆ ಅವಮಾನ ಮಾಡಲಾಗಿದೆ ಎಂದು  ತಾಲೂಕಿನ ಯರೇಹಳ್ಳಿ ಗ್ರಾಮ ಪಂಚಾಯಿತಿ ವಿರುದ್ಧ ಕೆಲವರು ಅಪಪ್ರಚಾರ ನಡೆಸಿ ಸುಳ್ಳು ಆರೋಪ ಮಾಡಿದ್ದಾರೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತ ತಿಳಿಸಿದ್ದಾರೆ.
       ದಾಸ ಶ್ರೇಷ್ಠರಾದ ಕನಕದಾಸರ ಬಗ್ಗೆ ನಮಗೂ ಗೌರವ, ಭಕ್ತಿ ಹಾಗು ಶ್ರದ್ಧೆ ಇದ್ದು, ನ.11ರಂದು ಅನ್ಯ ಕಾರ್ಯ ನಿಮಿತ್ತ ಪಂಚಾಯಿತಿ ಕಚೇರಿಯಲ್ಲಿ ಸದಸ್ಯರು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಬೆಳಿಗ್ಗೆಯೇ ಕನಕ ಜಯಂತಿ ಆಚರಣೆ ಮಾಡಿದ್ದು, ಈ ವಿಚಾರ ಗ್ರಾಮಸ್ಥರ ಗಮನಕ್ಕೆ ಬಂದಿರುವುದಿಲ್ಲ. ಇದನ್ನು ದುರ್ಬಳಕೆ ಮಾಡಿಕೊಂಡು ಕೆಲವರು ಪಂಚಾಯತಿ ವಿರುದ್ಧ ಅಪಪ್ರಚಾರ ನಡೆಸುವ ಮೂಲಕ ಸುಳ್ಳು ಆರೋಪ ಮಾಡಿದ್ದಾರೆಂದು ಅಧ್ಯಕ್ಷೆ ಶ್ವೇತ ಜೊತೆಗೆ ಸದಸ್ಯರಾದ ಸರೋಜಮ್ಮ, ಸಂಗಮ್ಮ, ಸುಮಿತ್ರ, ಚಂದ್ರಶೇಖರ್, ಚೇತನ್  ಮತ್ತು  ಸರೋಜ  ಸ್ಪಷ್ಟಪಡಿಸಿದ್ದಾರೆ. 

Wednesday, November 16, 2022

ಮಾರಾಮಾರಿ ಪ್ರಕರಣ : ೬ ಮಂದಿ ಸೆರೆ

ಜಹೀರ್


ಅಸ್ಲಾಂ ಅಲಿಯಾಸ್ ಅಸ್ಲಿ


ಅಶೋಕ್



ಮಂಜುನಾಥ್


ಗೌತಮ್ ಅಲಿಯಾಸ್ ಅಪ್ಪು


ಹರೀಶ್

    ಭದ್ರಾವತಿ, ನ. ೧೬: ಇತ್ತೀಚೆಗೆ ನಗರದ ತರೀಕೆರೆ ರಸ್ತೆ ಮಹಾತ್ಮಗಾಂಧಿ ವೃತ್ತದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮೀಪ ನಡೆದಿರುವ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ೩ ದೂರುಗಳು ದಾಖಲಾಗಿದ್ದು, ಒಟ್ಟು ೬ ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
    ಜಹೀರ್, ಅಸ್ಲಂ ಹಾಗೂ ಹರೀಶ್, ಗೌತಮ್ ಅಲಿಯಾಸ್ ಅಪ್ಪುರವರ ನಡುವೆ ನಡೆದಿರುವ ಮಾರಾಮಾರಿ ಪ್ರಕರಣದಲ್ಲಿ ಜಹೀರ್ ಮತ್ತು ಹರೀಶ್ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ದಾಖಲಿಸಿದ್ದಾರೆ.
    ಆಸ್ಪತ್ರೆಗೆ ದಾಖಲಾಗಿದ್ದ ಜಹೀರ್‌ನನ್ನು ನೋಡಲು ಹೋದಾಗ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಲಾಗಿದೆ ಎಂದು ರಿಜ್ವಾನ್ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  
    ಜಹೀರ್ ನೀಡಿದ ದೂರಿನ ಆಧಾರದ ಮೇಲೆ ನೆಹರೂ ನಗರದ ನಿವಾಸಿಗಳಾದ  ಹರೀಶ್(೨೨) ಮತ್ತು  ಗೌತಮ್ ಅಲಿಯಾಸ್ ಅಪ್ಪು(೨೨)ರನ್ನು ಹಾಗು  ಹರೀಶ್ ನೀಡಿದ ದೂರಿನ ಆಧಾರದ ಮೇಲೆ ಸಿದ್ದಾಪುರ ಹೊಸೂರು ಗ್ರಾಮದ ಜಹೀರ್ (೨೭) ಮತ್ತು ಎಕಿನ್ಸಾ ಕಾಲೋನಿಯ ಅಸ್ಲಾಂ ಅಲಿಯಾಸ್ ಅಸ್ಲಿ(೨೯)ರನ್ನು ಮತ್ತು ರಿಜ್ವಾನ್ ನೀಡಿದ ದೂರಿನ ಆಧಾರದ ಮೇಲೆ ಹೊಸಮನೆ ಮಂಜುನಾಥ್(೨೪) ಮತ್ತು ಅಶೋಕ್(೨೨)ರನ್ನು ಬಂಧಿಸಲಾಗಿದೆ.  ಒಟ್ಟು ೬ ಮಂದಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
    ಈ ಮಾರಾಮಾರಿ ಪ್ರಕರಣ ಆರಂಭದಲ್ಲಿ ಕೋಮು ಗಲಭೆಯಾಗಿ ಬಿಂಬಿಸುವ ಯತ್ನ ನಡೆದಿದ್ದು, ಈ ಹಿನ್ನಲೆಯಲ್ಲಿ ವ್ಯಾಪಕ ಪ್ರಚಾರ ಪಡೆದುಕೊಂಡಿತ್ತು. ಆದರೆ ಪೊಲೀಸರ ಸಮಯ ಪ್ರಜ್ಞೆ ಹಾಗು ಕಾರ್ಯಾಚರಣೆಯಿಂದಾಗಿ ಪ್ರಕರಣದ ಸತ್ಯಾಸತ್ಯತೆ ತಕ್ಷಣ ಬಯಲಾಯಿತು.

ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಜೃಂಭಣೆಯಿಂದ ಜರುಗಿದ ಆಶ್ಲೇಷ ಬಲಿ

ಭದ್ರಾವತಿ ಹಳೇನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಆಶ್ಲೇಷ ಬಲಿ ಬುಧವಾರ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ,ನ.೧೬ : ಹಳೇನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಆಶ್ಲೇಷ ಬಲಿ ಬುಧವಾರ ವಿಜೃಂಭಣೆಯಿಂದ ಜರುಗಿತು.
      ಗುರುರಾಜ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆಶ್ಲೇಷ ಬಲಿ ಧಾರ್ಮಿಕ ಆಚರಣೆಗಳು ಪ್ರಮೋದ್ ಕುಮಾರ್, ಪವನ್ ಕುಮಾರ್ ಮತ್ತು ಅಮೃತ್ ಸಂಗಡಿಗರಿಂದ ಜರುಗಿದವು.
      ಶಾಸಕ ಬಿ.ಕೆ ಸಂಗಮೇಶ್ವರ್, ಲೆಕ್ಕ ಪರಿಶೋಧಕಿ ಚಂದ್ರಿಕಾ ಶ್ರೀಪಾದ್, ಹೇಮಂತ್ ಕುಮಾರ್, ಸತೀಶ್ ಅಯ್ಯರ್, ಚೇತನ್, ಮಂಜುನಾಥ್ ಹಾಗೂ ಸತ್ಯನಾರಾಯಣ್ ರಾವ್, ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷೆ ಸುಮಾರ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ರಮಾಕಾಂತ್, ಖಜಾಂಚಿ ನಿರಂಜನಾಚಾರ್ಯ, ಗೋಪಾಲಾಚಾರ್, ಸತ್ಯನಾರಾಯಣಚಾರ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಗಂಗಮ್ಮ ನಿಧನ

ಗಂಗಮ್ಮ
    ಭದ್ರಾವತಿ, ನ. ೧೬: ನಗರದ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿ.ಈ ಚನ್ನಪ್ಪ ಅತ್ತಿಗುಂದರವರ ತಾಯಿ ಗಂಗಮ್ಮ(೯೨) ನಿಧನ ಹೊಂದಿದರು.  
    ಗಂಗಮ್ಮ ದಿವಂಗತ ಪಟೇಲ್ ಈಶ್ವರಪ್ಪನವರ ಧರ್ಮಪತ್ನಿಯಾಗಿದ್ದು, ಪುತ್ರಿ ಹಾಗು ೬ ಪುತ್ರರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ನ.೧೭ರ ಗುರುವಾರ ಮಧ್ಯಾಹ್ನ ತಾಲೂಕಿನ ಅತ್ತಿಗುಂದ ಗ್ರಾಮದಲ್ಲಿ ನಡೆಯಲಿದೆ.
    ಗಂಗಮ್ಮನವರ ನಿಧನಕ್ಕೆ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘದ ಅಧ್ಯಕ್ಷರು, ಪದಧಿಕಾರಿಗಳು, ನಿರ್ದೇಶಕರು, ಸದಸ್ಯರು, ಸಿಬ್ಬಂದಿ ವರ್ಗದವರು ಹಾಗು ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.