ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಜ.೨ ಮತ್ತು ೩ರಂದು ವೈಕುಂಠ ಏಕಾದಶಿ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಮುಜರಾಯಿ ಅಧಿಕಾರಿ, ತಹಸೀಲ್ದಾರ್ ಆರ್. ಪ್ರದೀಪ್ ತಿಳಿಸಿದರು.
ಭದ್ರಾವತಿ, ಡಿ. ೩೧: ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಜ.೨ ಮತ್ತು ೩ರಂದು ವೈಕುಂಠ ಏಕಾದಶಿ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಮುಜರಾಯಿ ಅಧಿಕಾರಿ, ತಹಸೀಲ್ದಾರ್ ಆರ್. ಪ್ರದೀಪ್ ತಿಳಿಸಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತಾಲೂಕು ಆಡಳಿತ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸಹಯೋಗದೊಂದಿಗೆ ಕೈಗೊಂಡಿದೆ. ಈ ಬಾರಿ ದೇವರ ದರ್ಶನಕ್ಕೆ ಯಾವುದೇ ಪಾಸ್ ವ್ಯವಸ್ಥೆ ಕಲ್ಪಿಸಿಲ್ಲ. ಬದಲಾಗಿ ಮುಜರಾಯಿ ಇಲಾಖೆ ವತಿಯಿಂದ ರು. ೫೦೦ ಮೌಲ್ಯದ ರಶೀದಿ ಪಡೆದು ನೇರ ದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸರದಿ ಸಾಲಿನಲ್ಲಿ ಭಕ್ತರು ದೇವರ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹಳೇನಗರದ ಶ್ರೀ ಹಳದಮ್ಮ ದೇವಸ್ಥಾನದ ಬಳಿ ಹಾಗು ಬಸವೇಶ್ವರ ವೃತ್ತದಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಈ ಬಾರಿ ದೇವಸ್ಥಾನ ಆವರಣದಲ್ಲಿ ಸಿ.ಸಿ ಕ್ಯಾಮೇರಾ ಅಳವಡಿಸಲಾಗುವುದು. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಅಳವಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ.ಜಿ ಮಾರುತಿ ಹಾಗು ಸಹಾಯಕ ಅರ್ಚಕ ಎಸ್. ಶ್ರೀನಿವಾಸನ್‌ರವರು ಮಾತನಾಡಿ, ಜ.೨ರಂದು ಬೆಳಿಗ್ಗೆ ೪.೩೦ಕ್ಕೆ ಪ್ರಾಕಾರ ಉತ್ಸವ, ಪರಮಪದ ಮಹಾದ್ವಾರದ ಪೂಜೆ, ಶ್ರೀ ವೈಕುಂಠನಾಥನ ದರ್ಶನ ನಂತರ ಶ್ರೀ ಗೋದಾದೇವಿ ಅಮ್ಮನವರ ಉತ್ಸವದೊಂದಿಗೆ ನಗರದ ಎಲ್ಲಾ ಭಜನಾ ಮಂಡಳಿಯವರಿಂದ ನಗರ ಸಂಕೀರ್ತನೆ. ಶ್ರೀ ಕೃಷ್ಣ ಗೆಳೆಯರ ಬಳಗದಿಂದ ಚಂಡೇವಾದ್ಯ ನಡೆಯಲಿದೆ. ಜ.೩ರಂದು ಬೆಳಿಗ್ಗೆ ೪.೩೦ಕ್ಕೆ ನಿತ್ಯಪೂಜೆ, ಮಹಾಮಂಗಳಾರತಿ. ಸಂಜೆ ೬ಕ್ಕೆ ಮುಕ್ಕೋಟಿ ದ್ವಾದಶಿ ಪ್ರಯುಕ್ತ ರಥಬೀದಿಯಲ್ಲಿ ಶ್ರೀ ಸ್ವಾಮಿಯವರ ಉತ್ಸವ ವೈಕುಂಠನಾಥನ ದರ್ಶನ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಆರ್. ರವಿ, ವಿಶ್ವೇಶ್ವರರಾವ್ ಗಾಯ್ಕವಾಡ್, ಕೆ. ಗಜೇಂದ್ರ, ಎಸ್. ಸತೀಶ, ಆಶಾ ಪುಟ್ಟಸ್ವಾಮಿ, ಕೆ. ಲತಾ ಮತ್ತು ಬಿ.ಎಚ್ ರೇಣುಕಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.