Monday, September 25, 2023

ಅ.15ರಂದು ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘಕ್ಕೆ ಚುನಾವಣೆ


    ಭದ್ರಾವತಿ : ನಗರದ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಚುನಾವಣೆ ಅ.15ರಂದು ನಡೆಯಲಿದ್ದು, ಅ.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

    ಸಂಘದ ಕಾರ್ಯಕಾರಿ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ಚುನಾವಣೆ ನಡೆಯುತ್ತಿದ್ದು, ಎಂ.ಸಿ ಮಂಜುನಾಥ್ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ. ಈಗಾಗಲೇ ಈ ಕುರಿತು ಸಂಘದ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಅ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 6ರಂದು ನಾಮಪತ್ರ ಹಿಂಪಡೆಯ ಬಹುದಾಗಿದೆ.ಅ.15ರಂದು ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ತಿಳಿಸಿದ್ದಾರೆ.

Sunday, September 24, 2023

34ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ



ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 34ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ ಸೆ.25ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಕಾಗದನಗರದ ಚಂದ್ರಾಲಯದಲ್ಲಿ ನಡೆಯಲಿದೆ. ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ ಹಾಗೂ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಮತ್ತು ಆಯವ್ಯಯ ಮಂಡನೆ ಮತ್ತು ಅನುಮೋದನೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
 ಎಲ್ಲಾ ಸದಸ್ಯರುಗಳೂ ತಪ್ಪದೆ ಸಭೆಯಲ್ಲಿ ಭಾಗವಹಿಸಬೇಕಾಗಿ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಕೋರಿದ್ದಾರೆ.

ವಿವಿಧೆಡೆ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದ ಬಿ.ವೈ ರಾಘವೇಂದ್ರ

ಭದ್ರಾವತಿ ನಗರಸಭೆ ವಾರ್ಡ್ ನಂ.27ರ ಆಂಜನೇಯ ಆಗ್ರಹಾರದ 2ನೇ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದ ಬಿ.ವೈ ರಾಘವೇಂದ್ರ ಅವರು ದೀಪ ಬೆಳಗಿಸುವ ಮೂಲಕ ವಿನಾಯಕ ಸೇವಾ ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.

    ಭದ್ರಾವತಿ : ಸಂಸದ ಬಿ.ವೈ ರಾಘವೇಂದ್ರ ಅವರು ಭಾನುವಾರ ಹೊಸಮನೆಯಲ್ಲಿ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 51ನೇ ವರ್ಷದ ಶ್ರೀ ವಿನಾಯಕ ಮೂರ್ತಿ ಸೇರಿದಂತೆ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದರು.

    ನಗರಸಭೆ ವಾರ್ಡ್ ನಂ.27ರ ಆಂಜನೇಯ ಆಗ್ರಹಾರದ 2ನೇ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದರು ದೀಪ ಬೆಳಗಿಸುವ ಮೂಲಕ ವಿನಾಯಕ ಸೇವಾ ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಸಮಿತಿ ಪ್ರಮುಖರು ಹಾಗು ಸ್ಥಳೀಯರು ಸಂಸದರನ್ನು ಸನ್ಮಾನಿಸಿ ಗೌರವಿಸಿದರು.

    ನಂತರ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 51ನೇ ವರ್ಷದ ಶ್ರೀ ವಿನಾಯಕ ಮೂರ್ತಿ ದರ್ಶನ ಪಡೆದರು.

    ಬಿಜೆಪಿ ಪಕ್ಷದ ಯುವ ಮುಖಂಡರಾದ ಮಂಗೋಟೆ ರುದ್ರೇಶ್‌, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಭದ್ರಾವತಿ ನಗರಸಭೆ ವಾರ್ಡ್ ನಂ.27ರ ಆಂಜನೇಯ ಆಗ್ರಹಾರದ 2ನೇ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದ ಬಿ.ವೈ ರಾಘವೇಂದ್ರ ಅವರು ದೀಪ ಬೆಳಗಿಸುವ ಮೂಲಕ ವಿನಾಯಕ ಸೇವಾ ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಸಮಿತಿ ಪ್ರಮುಖರು ಹಾಗು ಸ್ಥಳೀಯರು ಸಂಸದರನ್ನು ಸನ್ಮಾನಿಸಿ ಗೌರವಿಸಿದರು.

ಡಿ. ಜಯಶ್ರೀ ನಿಧನ

ಡಿ. ಜಯಶ್ರೀ

ಭದ್ರಾವತಿ : ಜೇಡಿಕಟ್ಟೆ ಹೊಸೂರು ನಿವಾಸಿ ಡಿ. ಜಯಶ್ರೀ(42) ಅನಾರೋಗ್ಯದಿಂದ ಶನಿವಾರ ನಿಧನ ಹೊಂದಿದರು.

ಶ್ರೀ ಮರುಳ ಸಿದ್ದೇಶ್ವರ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಸದಸ್ಯ, ಪತಿ ಎಲ್. ದೇವರಾಜ್ ಹಾಗು ಇಬ್ಬರು ಗಂಡು ಮಕ್ಕಳು ಇದ್ದರು. ಇವರ ಅಂತ್ಯಕ್ರಿಯೆ ಭಾನುವಾರ ಜೇಡಿಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.

ನಗರಸಭೆ ಸದಸ್ಯೆ ರೇಖಾ ಪ್ರಕಾಶ್, ಶ್ರೀ ಮರುಳ ಸಿದ್ದೇಶ್ವರ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಪ್ರಮುಖರಾದ ಸಿದ್ದಲಿಂಗಯ್ಯ, ಎಸ್. ವಾಗೀಶ್, ಪ್ರಕಾಶ್, ರಾಮಲಿಂಗಣ್ಣ, ಹೋಟೆಲ್ ಶಿವಣ್ಣ, ಜವರೇಲಿಂಗೇಗೌಡ್ರು, ನಂಜಪ್ಪ, ಶಾರದಾಬಾಯಿ ಸೇರಿದಂತೆ ಗ್ರಾಮಸ್ಥರು ಜಯಶ್ರೀ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸುಜಾನಮ್ಮ ನಿಧನ

ಸುಜಾನಮ್ಮ

    ಭದ್ರಾವತಿ: ನಗರದ ಕೂಲಿಬ್ಲಾಕ್ ಶೆಡ್, ಮಾರಿಯಮ್ಮ ದೇವಸ್ಥಾನ ಸಮೀಪದ ನಿವಾಸಿ ಸುಜಾನಮ್ಮ(72) ನಿಧನ ಹೊಂದಿದರು.

    ಕನ್ನಡ ಸಾಹಿತ್ಯ ಪರಿಷತ್ ಸದಸ್ಯ, ಕವಿ ಪೀಟರ್ ಸೇರಿದಂತೆ ಇಬ್ಬರು ಪುತ್ರರು ಹಾಗು ಪುತ್ರಿ ಇದ್ದರು. ಭಾನುವಾರ ಸಂಜೆ ನಗರದ ಮಿಲ್ಟ್ರಿಕ್ಯಾಂಪ್, ಬೈಪಾಸ್ ರಸ್ತೆ, ಕ್ರೈಸ್ತರ ಸಮಾಧಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು.

    ಸುಜಾನಮ್ಮ ದಿವಂಗತ ಸುಂದರ್ ರಾಜ್ ಅವರ ಪತ್ನಿಯಾಗಿದ್ದಾರೆ. ಇವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ, ಜಾನಪದ ವೇದಿಕೆ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಲೈನ್ ಮ್ಯಾನ್ ಸಾವು

ಕರ್ತವ್ಯ ನಿರ್ವಹಿಸುತ್ತಿದ್ದ ಲೈನ್ ಮ್ಯಾನ್ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಸಾವನ್ನಪ್ಪಿರುವ ಘಟನೆ ಭದ್ರಾವತಿ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

    ಭದ್ರಾವತಿ: ಕರ್ತವ್ಯ ನಿರ್ವಹಿಸುತ್ತಿದ್ದ ಲೈನ್ ಮ್ಯಾನ್ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

    ಮಾಚೇನಹಳ್ಳಿ ಮೆಸ್ಕಾಂ ಘಟಕ –5ರ ಕಿರಣ್ (25) ಮೃತಪಟ್ಟ ಲೈನ್ ಮ್ಯಾನ್ ಎಂದು ಗುರುತಿಸಲಾಗಿದೆ. ಇವರು ಮೂಲತಃ ಚನ್ನಗಿರಿ ತಾಲೂಕಿನ ನಿವಾಸಿಯಾಗಿದ್ದು, ರಾಣೆಬೆನ್ನೂರು ಮೂಲದ ಸುನೀಲ್ (26) ಎಂಬುವರು ಗಾಯಗೊಂಡಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇವರಿಬ್ಬರು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಮೊದಲನೇ ಕ್ರಾಸ್ ನಲ್ಲಿ ಭಾನುವಾರ ಬೆಳಗ್ಗೆ ನಿರ್ವಹಣೆ ಸಂಬಂಧ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರು. 10.30ರ ವೇಳೆಗೆ ಕಂಬದಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿದ್ದು ಕಿರಣ್ ಮೃತಪಟ್ಟಿದ್ದು, ಸುನಿಲ್ ಗಾಯಗೊಂಡು ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಮೆಸ್ಕಾಂ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Saturday, September 23, 2023

ಸೆ.24ರಂದು ಕಾಗದನಗರ ಗಣಪತಿ ವಿಸರ್ಜನೆ

ಭದ್ರಾವತಿ ಕಾಗದ ನಗರದ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 51ನೇ ವರ್ಷದ ಗಣಪತಿ ಮೂರ್ತಿ.

    ಭದ್ರಾವತಿ : ಕಾಗದ ನಗರದ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 51ನೇ ವರ್ಷದ ಗಣಪತಿ ಮೂರ್ತಿ ವಿಸರ್ಜನೆ ಸೆ.24ರ ಭಾನುವಾರ ನಡೆಯಲಿದೆ.

    ಕನ್ನಡ ಯುವಕರ ಸಂಘ ತನ್ನದೇ ಆದ ಇತಿಹಾಸ ಹೊಂದಿದ್ದು, ಎಂಪಿಎಂ ಕಾರ್ಖಾನೆಯ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗ ಹಾಗು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳ ನಿವಾಸಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಈ ಹಿಂದೆ ಪ್ರತಿ ವರ್ಷ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಈ ಭಾಗದಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿತ್ತು. ಸಾವಿರಾರು ಮಂದಿ ಗಣಪತಿ ಮೂರ್ತಿ ವೀಕ್ಷಣೆಗೆ ಆಗಮಿಸುತ್ತಿದ್ದರು. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಹಾಗು ಮನರಂಜನೆ ಕಾರ್ಯಕ್ರಮಗಳು ಜರುಗುತ್ತಿದ್ದವು. ಸುಮಾರು 10 ರಿಂದ 15 ಸಾವಿರ ಮಂದಿ ಕಾರ್ಯಕ್ರಮ ವೀಕ್ಷಣೆಗಾಗಿ ಆಗಮಿಸುತ್ತಿದ್ದರು. ಅಲ್ಲದೆ ಲಾಟರಿ ಡ್ರಾ ಸಹ ಏರ್ಪಡಿಸಲಾಗುತ್ತಿತ್ತು. ಆದರೆ ಇದೀಗ ಎಲ್ಲವೂ ಇತಿಹಾಸದ ಪುಟದಲ್ಲಿ ಉಳಿದುಕೊಂಡಿವೆ.

    ಕಳೆದ ಸುಮಾರು 8 ವರ್ಷಗಳಿಂದ ಎಂಪಿಎಂ ಕಾರ್ಖಾನೆ ಮುಚ್ಚಲ್ಪಟ್ಟಿದ್ದು, ಕಾರ್ಮಿಕರು ಕಾರ್ಖಾನೆಯ ವಸತಿ ಗೃಹಗಳನ್ನು ತೊರೆದಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಜನರಿಲ್ಲದೆ ವಸತಿ ಗೃಹಗಳು ಪಾಳು ಬಿದ್ದಿವೆ. ಖಾಲಿ ಜಾಗಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಜನಸಂದಣಿ ಇಲ್ಲವಾಗಿದೆ. ಆದರೂ ಕೆಲವು ಯುವಕರು ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಪುನಃ ಹಿಂದಿನ ವೈಭವ ಮರುಕಳುಹಿಸುವ ಆಶಾಭಾವನೆ ಹೊಂದಿದ್ದಾರೆ.

    ಈ ಬಾರಿ 7 ದಿನಗಳ ಕಾಲ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದ್ದು, ಕಾಗದನಗರದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೆರವಣಿಗೆಯೊಂದಿಗೆ ಮೂರ್ತಿ ವಿಸರ್ಜನೆ ನಡೆಯಲಿದೆ.