Thursday, September 28, 2023

ಪ್ರವಾದಿ ಮಹಮದ್ ಫೈಗಂಬರ್ ಹುಟ್ಟುಹಬ್ಬ : ರಕ್ತದಾನ ಶಿಬಿರ

ಪ್ರವಾದಿ ಮಹಮದ್ ಫೈಗಂಬರ್ ಅವರ ಹುಟ್ಟುಹಬ್ಬ ಈದ್ ಮಿಲಾದ್ ಅಂಗವಾಗಿ ಗುರುವಾರ ಭದ್ರಾವತಿ ತಾಲೂಕಿನ ಹೊಳೆನೇರಲಕೆರೆ ಅಲ್ ಖಸ್ವ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

    ಭದ್ರಾವತಿ : ಪ್ರವಾದಿ ಮಹಮದ್ ಫೈಗಂಬರ್ ಅವರ ಹುಟ್ಟುಹಬ್ಬ ಈದ್ ಮಿಲಾದ್ ಅಂಗವಾಗಿ ಗುರುವಾರ ತಾಲೂಕಿನ ಹೊಳೆನೇರಲಕೆರೆ ಅಲ್ ಖಸ್ವ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

    ಶಿವಮೊಗ್ಗ ಮಿಡ್ ಟೌನ್, ರೋಟರಿ ಚಾರಿಟಿ ಫೌಂಡೇಷನ್, ರೋಟರಿ ರಕ್ತ ಕೇಂದ್ರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶಿಬಿರದಲ್ಲಿ 36 ಮಂದಿ ರಕ್ತದಾನ ಮಾಡಿದರು.

    ಇತ್ತೀಚೆಗೆ ಟ್ರಸ್ಟ್ ಉದ್ಘಾಟನೆಗೊಂಡಿದ್ದು, ಸಮಾಜ ಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ನ.4, 5ರಂದು ವಿಐಎಸ್ಎಲ್ ಶತಮಾನೋತ್ಸವ ಸಂಭ್ರಮ : ದೊಡ್ಡಣ್ಣ

ಭದ್ರಾವತಿಯಲ್ಲಿ ನ.4, 5ರಂದು ಆಯೋಜಿಸಲಾಗಿರುವ ವಿಐಎಸ್ಎಲ್ ಶತಮಾನೋತ್ಸವ ಸಂಭ್ರಮ ಸಮಾರಂಭದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

    ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಭವಿಷ್ಯದ ಪೀಳಿಗೆಗೆ ಉಳಿಸಿಕೊಂಡಬೇಕೆಂಬ ಏಕೈಕ ಉದ್ದೇಶದೊಂದಿಗೆ ಶತಮಾನೋತ್ಸವ ಸಂಭ್ರಮ ನ.4 ಮತ್ತು 5 ಎರಡು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಕಾರ್ಖಾನೆಯ ನಿವೃತ್ತ ಉದ್ಯೋಗಿ, ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ಹೇಳಿದರು.

    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿನ ಮಹಾರಾಜರಾಗಿದ್ದ ಯದುವಂಶದ ರಾಜಋಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್ ಅವರ ಸುವರ್ಣ ಆಡಳಿತ ಕಾಲದಲ್ಲಿ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಾಯ ಅವರ ಮಾರ್ಗದರ್ಶನದಂತೆ ಈ ಬೃಹತ್ ಉದ್ಯಮವನ್ನು 1923 ರಲ್ಲಿ ಸ್ಥಾಪಿಸಲಾಯಿತು. ಬಾಬಬುಡನ್‌ಗಿರಿ ಹಾಗೂ ಕೆಮ್ಮಣ್ಣು ಗುಂಡಿಗಳಲ್ಲಿ ಇದ್ದ ಅಪಾರ ಖನಿಜ ನಿಕ್ಷೇಪಗಳನ್ನು ಬಳಸಿಕೊಳ್ಳುವುದು ಮತ್ತು ಕಬ್ಬಿಣ, ಉಕ್ಕು ಹಾಗೂ ಇತರ ಉತ್ಪನ್ನಗಳನ್ನು ತಯಾರಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಎರಕಹೊಯ್ದ ಕಬ್ಬಿಣ, ಕಬ್ಬಿಣದ ಕೊಳವೆ ಹಾಗೂ ರೋಲಿಂಗ್ ಮಿಕ್ಸ್ ಮತ್ತು ಸಿಮೆಂಟ್ ಪ್ಲಾಂಟ್ ಅನ್ನು ನಂತರ ಆರಂಭಿಸಲಾಯಿತು. ಪ್ರಾರಂಭದಲ್ಲಿ ಕಾರ್ಖಾನೆಗೆ ಮೈಸೂರು ಐರನ್ ಅಂಡ್ ಸ್ಟೀಲ್ ವರ್ಕ್ಸ್ ಎಂದು ನಾಮಕರಣ ಮಾಡಲಾಯಿತು ಎಂದರು.

    1975 ರಲ್ಲಿ ವಿಶ್ವೇಶ್ವರಾಯ ಐರನ್ ಅಂಡ್ ಸ್ಟೀಲ್ ಅಮಿಟೆಡ್ (VISL) ಎಂಬುದಾಗಿ ಮರುನಾಮಕರಣವಾಯಿತು. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯು 1989ರಲ್ಲಿ ಕಾರ್ಖಾನೆಯನ್ನು ಅಂಗಸಂಸ್ಥೆಯಾಗಿ ಸೇರಿಸಿ ನಂತರ 1998 ರಲ್ಲಿ ವಿಲೀನಗೊಳಿಸಿಕೊಂಡಿತು. ಸರ್ ಎಂ ವಿಶ್ವೇಶ್ವರಯ್ಯನವರ ನಿಸ್ವಾರ್ಥ ಸೇವೆ ಮತ್ತು ಮುಂದಾಲೋಚನೆಯಿಂದ ಕ್ಷೇತ್ರದ ಜೀವನಾಡಿಯಾಗಿ ಉಳಿದು ಲಕ್ಷಾಂತರ

ಜನರಿಗೆ ಬದುಕು ನಿರ್ಮಿಸಿಕೊಟ್ಟ ನಾಡಿನ ಹೆಮ್ಮೆಯ ಈ ಕಾರ್ಖಾನೆ ಇದೀಗ 100 ವರ್ಷಗಳನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ ಶತಮಾನೋತ್ಸವದ ಸಂಭ್ರಮಾಚರಣೆ ನಡೆಸಲಾಗುತ್ತಿದೆ ಎಂದರು.

    ಈ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿ ವರ್ಗ, ಕಾರ್ಮಿಕ ವರ್ಗ - ಗುತ್ತಿಗೆದಾರರು ಮತ್ತು ಇವರೆಲ್ಲರ ಕುಟುಂಬಗಳು ಒಂದೆಡೆ ಸೇರಿ ನ. 4 ಮತ್ತು 5 ರಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಅಧಿಕಾರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸಚಿವರು ಸೇರಿದಂತೆ ಪ್ರತಿಯೊಬ್ಬರು ಸಂತೋಷದಿಂದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ನಾಡಿನ ಸಂತ ಶ್ರೇಷ್ಠರ ಸಾನ್ನಿಧ್ಯದಲ್ಲಿ ಮೈಸೂರು ಸಂಸ್ಥಾನದ ಇಂದಿನ ಮಹಾರಾಜರನ್ನು ಗೌರವದಿಂದ ಆಹ್ವಾನಿಸಿ ಅವರ ವಂಶಸ್ಥರ ಕೊಡುಗೆಯನ್ನು ಸ್ಮರಿಸೋಣ ಎಂದರು.

    ದೇಶದ ಮತ್ತು ರಾಜ್ಯದ ಹಲವಾರು ಪ್ರತಿಷ್ಠಿತರು ಮತ್ತು ಜಿಲ್ಲೆಯ ಪುರಜನರು ಒಂದೆಡೆ ಆಚರಿಸುವ ಕಾರ್ಯಕ್ರಮದಲ್ಲಿ ನಾಡಿನ ಶ್ರೇಷ್ಠ ಕಲಾವಿದರಿಂದ ವೈಭವದ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ಮಾದರಿಯ ಮೆರವಣಿಗೆ ಹಾಗೂ ಕಾರ್ಖಾನೆಯ ಗತವೈಭವ ಸಾರುವ ವಸ್ತು ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಇದು ಬಹುವೆಚ್ಚದ ಸಮಾರಂಭವಾಗಿದ್ದು, ಪ್ರತಿಯೊಬ್ಬರು ಈ ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ರೀತಿಯ ಸಹಕಾರ ನೀಡಬೆಕೆಂದರು.

    ಪತ್ರಿಕಾಗೋಷ್ಠಿಯಲ್ಲಿ ವಿಐಎಸ್ಎಲ್ ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ವಿ ರೇವಣ್ಣ ಸಿದ್ದಯ್ಯ, ಕಾರ್ಯದರ್ಶಿ ಜಿ. ಅಮೃತ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್. ರಘುರಾಂ, ಎನ್.ಟಿ ಸತ್ಯನಾರಾಯಣ, ಎಸ್‌. ಅಡವೀಶಯ್ಯ, ಬಿ.ಜಿ ರಾಮಲಿಂಗಯ್ಯ, ಬಿ. ಮಂಜುನಾಥ್, ಎಸ್. ನರಸಿಂಹಚಾರ್, ಜೆ. ಜಗದೀಶ್, ಯು.ಎ ಬಸಂತ್ ಕುಮಾರ್, ಬಿ.ಸಿ ಶೈಲಶ್ರೀ, ಡಿ. ಕುಮಾರ್, ಎಚ್.ಜಿ. ಸುರೇಶ್, ಕುಮಾರಸ್ವಾಮಿ, ಪಿ. ರಾಕೇಶ್, ಡಿ. ತ್ರಿವೇಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, September 27, 2023

ಜ್ಞಾನದೀಪಿಕಾ ಶಾಲೆ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಭದ್ರಾವತಿ ತಾಲೂಕಿನ ಯರೇಹಳ್ಳಿ ಜ್ಞಾನದೀಪಿಕಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಭದ್ರಾವತಿ : ತಾಲೂಕಿನ ಯರೇಹಳ್ಳಿ ಜ್ಞಾನದೀಪಿಕಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಬಾಲಕಿಯರ ವಿಭಾಗದಲ್ಲಿ ಖೋ ಖೋ ಪ್ರಥಮ, ಸಿ. ಅರ್ಪಿತ 800 ಮೀಟರ್ ಓಟ, 1500 ಮೀಟರ್ ಓಟದಲ್ಲಿ ಪ್ರಥಮ ಹಾಗು ಸಿ. ಕಾವ್ಯಶ್ರೀ, ಟಿ.ಡಿ ದಿಶಾ, ಸಿ. ದುರ್ಗಾಶ್ರೀ ಮತ್ತು ಸಿ. ಅರ್ಪಿತ ಪ್ರಥಮ ಸ್ಥಾನ ಮತ್ತು 100 ಮೀಟರ್ ಓಟದಲ್ಲಿ ಸಿ. ಕಾವ್ಯಶ್ರೀ ದ್ವಿತೀಯ ಹಾಗು 800 ಮೀಟರ್ ಓಟದಲ್ಲಿ ಟಿ.ಡಿ ದಿಶಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

    ವಿಜೇತ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಕಾರ್ಯದರ್ಶಿಗಳು ಹಾಗು ಮುಖ್ಯೋಪಾಧ್ಯಾಯರು, ಶಿಕ್ಷಕರು, ತರಬೇತಿದಾರರು ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘ 13,52,378 ರು. ನಿವ್ವಳ ಲಾಭ

ಭದ್ರಾವತಿ ಅಪ್ಪರ್ ಹುತ್ತಾ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಸಂಘದ ಅಧ್ಯಕ್ಷ ಬಿ.ಎಸ್ ಮಲ್ಲೇಶ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.

    ಭದ್ರಾವತಿ : ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘ ಈ ಬಾರಿ 13,52,378 ರು. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್ ಮಲ್ಲೇಶ್ ಹೇಳಿದರು.

    ಅವರು ನಗರದ ಅಪ್ಪರ್ ಹುತ್ತಾ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಮರು ಪಾವತಿ ಮಾಡುವಂತೆ ವಿನಂತಿಸುವ ಮೂಲಕ ಸದಸ್ಯರ ಸಹಕಾರವೇ ಸಂಘದ ಅಭಿವೃದ್ಧಿಗೆ ಶ್ರೀ ರಕ್ಷೆ ಎಂದರು.

    ಸಭೆಯಲ್ಲಿ ಷೇರುದಾರರಿಗೆ ಶೇ.10ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಲಾಯಿತು. ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

    ಸಭೆಯಲ್ಲಿ ಉಪಾಧ್ಯಕ್ಷ ಜಿ. ಶಂಕರ್, ನಿರ್ದೇಶಕರಾದ ತಮ್ಮೇಗೌಡ, ದೇವರಾಜ್, ಪರಮಶಿವ, ಬಿ.ಜೆ ವೀಣಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    ಅನನ್ಯ ಪ್ರಾರ್ಥಿಸಿ, ನಿರ್ದೇಶಕರಾದ ಗೊಂದಿ ಜಯರಾಮ್ ಸ್ವಾಗತಿಸಿದರು. ಸಂಪತ್ ಕುಮಾರ್ ನಿರೂಪಿಸಿ, ಕೆಂಪಯ್ಯ ವಂದಿಸಿದರು.

ಸೆ.29ರಿಂದ 2 ದಿನ ತಾಲೂಕು ಮಟ್ಟದ ಕ್ರೀಡಾಕೂಟ

    ಭದ್ರಾವತಿ, ಸೆ. 27: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಗಾಂಧಿನಗರ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸಹಯೋಗದೊಂದಿಗೆ ಸೆ.29 ಮತ್ತು 30 ಎರಡು ದಿನ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟ ನಡೆಯಲಿದೆ.

    ವಿಐಎಸ್ಎಲ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಹಿರಿಯ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. .

Tuesday, September 26, 2023

ವಿಐಎಸ್ಎಲ್ ಕಾರ್ಖಾನೆಯಲ್ಲಿ ಬೋನಿಗೆ ಬಿದ್ದ ಚಿರತೆ ಮರಿ






ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಚಿರತೆ ಮರಿಯೊಂದು ಸಿಕ್ಕಿಬಿದ್ದಿರುವ ಘಟನೆ  ಬುಧವಾರ ನಡೆದಿದೆ.

ಕಾರ್ಖಾನೆಯಲ್ಲಿ ಕಳೆದ ಎರಡು ಮೂರು ತಿಂಗಳುಗಳಿಂದ ಚಿರತೆ ಕಾಣಿಸಿಕೊಂಡಿರುವುದಾಗಿ  ಆಡಳಿತ ಮಂಡಳಿ ಅಧಿಕಾರಿಗಳು ಮತ್ತು ಕಾರ್ಮಿಕರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿತ್ತು. ಅಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಖಾನೆಗೆ  ಭೇಟಿ ನೀಡಿ ಚಿರತೆ ಕಾಣಿಸಿಕೊಂಡಿರುವ ಸ್ಥಳ  ಪರಿಶೀಲನೆ ನಡೆಸಿದ್ದರು ದಲ್ಲಿ ಚಿರತೆ  ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಬೋನ್ ಇಡಲಾಗಿತ್ತು. 

ಆದರೆ ಚಿರತೆ ಮಾತ್ರ ಪತ್ತೆಯಾಗಿರಲಿಲ್ಲ. ಇದೀಗ ಬುಧವಾರ ಬೆಳಗ್ಗೆ ಬೋನಿನಲ್ಲಿ ಚಿರತೆ ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿದೆ. ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್ ನಾಗರಾಜ್ ಹಾಗೂ ಕಾರ್ಖಾನೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗಳು ಆಗಮಿಸಿ ಚಿರತೆಗೆ ಮದ್ದು ಬರುವ ಚುಚ್ಚುಮದ್ದು ನೀಡಿದ್ದು, ಕೆ ಚಿರತೆಯನ್ನು ಅರಣ್ಯಕ್ಕೆ ಬಿಟ್ಟುಬಿಡಲು ಸಿದ್ಧತೆಗಳು ನಡೆದಿವೆ.  

ಕಳೆದ ಸುಮಾರು ಒಂದು ವರ್ಷದ ಹಿಂದೆ ಚಿರತೆಯೊಂದು ಕಾರ್ಖಾನೆಗಯ  ವಸತಿ ಗೃಹದಲ್ಲಿ  ಪತ್ತೆಯಾಗಿತ್ತು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು 8 ಗಂಟೆಗಳ ಕಾಲ ಕಾರ್ಯಾಚರಣೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ಕೃತಜ್ಞತೆ

ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಮಂಗಳವಾರ ಶಾಂತಿಯುತವಾಗಿ ನಡೆಯಿತು. ಈ ಸಂಬಂಧ ನಡೆದ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಸಂಜೆ ನಿರೀಕ್ಷಿಗೂ ಮೀರಿದ ಜನಸ್ತೋಮ ಕಂಡು ಬಂದಿತು.

    ಭದ್ರಾವತಿ : ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಮಂಗಳವಾರ ಶಾಂತಿಯುತವಾಗಿ ನಡೆಯಿತು.

    ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆ ಮುಂಭಾಗದ ಭದ್ರಾ ನದಿಯಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ವಿಸರ್ಜಿಸಲಾಯಿತು. ಈ ಬಾರಿ ರಾಜಬೀದಿ ಉತ್ಸವ ಮೆರವಣಿಗೆ ತಡವಾಗಿ ಮುಕ್ತಾಯಗೊಂಡಿದ್ದು, ಸಂಜೆ ವೇಳೆಗೆ ಉತ್ಸವ ಮೆರವಣಿಗೆಯಲ್ಲಿ ನಿರೀಕ್ಷೆಗೂ ಮೀರಿದ ಜನಸ್ತೋಮ ಕಂಡು ಬಂದಿತು. ಈ ನಡುವೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು, ಆದರೂ ಸಹ ಮಳೆಯಲ್ಲೂ ಮೆರವಣಿಗೆ ವಿಜೃಂಭಣೆಯಿಂದ ಸಾಗಿತು.

    

ಉತ್ಸವ ಮೆರವಣಿಗೆ ಕೆಎಸ್ ಆರ್ ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗ ಸಾಗುತ್ತಿದ್ದಂತೆ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅಭಿಮಾನಿಗಳು, ಬೆಂಬಲಿಗರು ಅಪ್ಪಾಜಿ ಅವರ ಭಾವಚಿತ್ರ ಪ್ರದರ್ಶಿಸಿ ಸಂಭ್ರಮಿಸಿದರು.
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಭಾವಚಿತ್ರ:

    ಉತ್ಸವ ಮೆರವಣಿಗೆ ಕೆಎಸ್ ಆರ್ ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗ ಸಾಗುತ್ತಿದ್ದಂತೆ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅಭಿಮಾನಿಗಳು, ಬೆಂಬಲಿಗರು ಅಪ್ಪಾಜಿ ಅವರ ಭಾವಚಿತ್ರ ಪ್ರದರ್ಶಿಸಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಅಪ್ಪಾಜಿ ಕುಟುಂಬಸ್ಥರು ಸಹ ಪಾಲ್ಗೊಂಡಿದ್ದರು.

    ಕ್ಷೇತ್ರದ ಜನತೆಗೆ ಕೃತಜ್ಞತೆ:

    ವಿನಾಯಕ ಮೂರ್ತಿ ವಿಸರ್ಜನೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡ ಹಾಗು ಶಾಂತಿಯುತವಾಗಿ ನಡೆಯಲು ಸಹಕರಿಸಿದ ಪ್ರತಿಯೊಬ್ಬರಿಗೂ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್ ಕೃತಜ್ಞತೆ ಸಲ್ಲಿಸಿದ್ದಾರೆ.