Sunday, October 1, 2023

ಒಂದನೇ ತಾರೀಕು, ಒಂದು ಗಂಟೆ, ಒಟ್ಟಿಗೆ ಅಭಿಯಾನದಲ್ಲಿ 250 ಮಂದಿ

ವಿಐಎಸ್ಎಲ್ ಕಾರ್ಖಾನೆಯಿಂದ "ಸ್ವಚ್ಛತೆಗಾಗಿ ಶ್ರಮದಾನ"

ಭಾರತೀಯ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತೆಗಾಗಿ ಶ್ರಮದಾನ" ಅಪ್ಪರ್ ಹುತ್ತಾ ಗೆಳೆಯರ ಬಳಗ, ಲಯನ್ಸ್ ಕ್ಲಬ್, ಶ್ರೀ ಕುಕ್ಕುವಾಡೇಶ್ವರಿ ಯೂತ್ ಕ್ಲಬ್ ಕಬಡ್ಡಿ ತಂಡದ ಸಹಯೋಗದೊಂದಿಗೆ ಭಾನುವಾರ ಬೆಳಿಗ್ಗೆ ಸ್ವಚ್ಛತಾ ಅಭಿಯಾನ ನಡೆಯಿತು.
    ಭದ್ರಾವತಿ : ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತೆಗಾಗಿ ಶ್ರಮದಾನ" ಅಪ್ಪರ್ ಹುತ್ತಾ ಗೆಳೆಯರ ಬಳಗ, ಲಯನ್ಸ್ ಕ್ಲಬ್, ಶ್ರೀ ಕುಕ್ಕುವಾಡೇಶ್ವರಿ ಯೂತ್ ಕ್ಲಬ್ ಕಬಡ್ಡಿ ತಂಡದ ಸಹಯೋಗದೊಂದಿಗೆ ಭಾನುವಾರ ಬೆಳಿಗ್ಗೆ ಸ್ವಚ್ಛತಾ ಅಭಿಯಾನ ನಡೆಯಿತು.

    ಕಾರ್ಖಾನೆಯ ಪ್ರಭಾರ ಕಾರ್ಯಪಾಲಕ ನಿರ್ದೇಶಕ ಕೆ.ಎಸ್ ಸುರೇಶ್ ಅಭಿಯಾನ ಉದ್ಘಾಟಿಸಿದರು. ತ್ಯಾಜ್ಯ ಮುಕ್ತ ಭಾರತ ಪರಿಕಲ್ಪನೆಯಡಿ "ಒಂದನೇ ತಾರೀಕು, ಒಂದು ಗಂಟೆ, ಒಟ್ಟಿಗೆ ಅಭಿಯಾನ" ತರಂಗ ಕಿವುಡು ಮಕ್ಕಳ ಶಾಲೆ ಮತ್ತು ಸಿದ್ದಾರ್ಥ ಅಂಧರ ವಿಕಾಸ ಕೇಂದ್ರದಲ್ಲಿ ನಡೆಯಿತು. "ಸ್ವಚ್ಛತೆಗಾಗಿ ಶ್ರಮದಾನ"ದಲ್ಲಿ ಸುಮಾರು 250 ಮಂದಿ ಪಾಲ್ಗೊಂಡಿದ್ದರು.

    ಕಾರ್ಖಾನೆಯ ಸಹಾಯಕ ಪ್ರಬಂಧಕರಾದ ಕೆ.ಎಸ್ ಶೋಭ, ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ತರಂಗ ಕಿವುಡು ಮಕ್ಕಳ ಶಾಲೆಯ ಅನಂತ ಕೃಷ್ಣ ನಾಯಕ್, ಎಸ್.ಎನ್ ಸುಭಾಷ್, ಅಪ್ಪರ್ ಹುತ್ತಾ ಗೆಳೆಯರ ಬಳಗ, ಲಯನ್ಸ್ ಕ್ಲಬ್, ಶ್ರೀ ಕುಕ್ಕುವಾಡೇಶ್ವರಿ ಯೂತ್ ಕ್ಲಬ್ ಕಬಡ್ಡಿ ತಂಡದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, September 30, 2023

ಭೀಕರ ಅಪಘಾತ : ಸ್ಥಳದಲ್ಲಿ ಮೂವರ ದುರ್ಮರಣ.

    ಭದ್ರಾವತಿ: ತಾಲೂಕಿನ ಕಲ್ಲಿಹಾಳ್-ಅರಹತೊಳಲು ನಡುವೆ  ಎರಡು ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿರುವಿಸಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಒಂದು ಬೈಕ್‌‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ದೇಹಗಳು ಲಾರಿಯ ಚಕ್ರದ ಕೆಳಗೆ ಸಿಲುಕಿ ಛಿದ್ರವಾಗಿವೆ. ಮರಣ ಹೊಂದಿದ ಯುವಕರು ಯಾವ ಗ್ರಾಮದವರು ಎಂಬುದು ಇನ್ನೂ ತಿಳಿದು ಬಂದಿಲ್ಲ. 

ಅ.1ರಂದು ಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆಗಳು

    ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ತಾಲೂಕಿನ ಹಿರಿಯ ನಾಗರಿಕರಿಗೆ ಅ.1ರಂದು ಬೆಳಿಗ್ಗೆ 10.30ಕ್ಕೆ ನಗರಸಭೆ ವಾರ್ಡ್ ನಂ.4ರ ಹಳೇನಗರ ಕಾಳಮ್ಮ ದೇವಸ್ಥಾನ ರಸ್ತೆಯಲ್ಲಿರುವ ಸಂಘದ ನೂತನ ಕಟ್ಟಡದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

    ದೇಶಭಕ್ತಿ ಗೀತೆ, ಭಾವ ಗೀತೆ, ಜಾನಪದ ಗೀತೆ ಮತ್ತು ನಗೆ ಚಟಾಕಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಪ್ರಧಾನ ಕಾರ್ಯದಶರ್ಶ ಎಚ್.ಎನ್ ಮಹಾರುದ್ರ ಕೋರಿದ್ದಾರೆ.

ಅಪಘಾತ : ಎಮ್ಮೆ ಸಾವು

    ಭದ್ರಾವತಿ: ರಸ್ತೆ ಅಪಘಾತದಲ್ಲಿ ಎಮ್ಮೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಗಂಗೂರು ಗ್ರಾಮದ ಉದ್ದಾಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ನಡೆದಿದೆ.

    ಗಂಗೂರು ಗ್ರಾಮದ ಬಾಬು ಎಂಬುವರಿಗೆ ಸೇರಿದ ಸುಮಾರು 40 ಸಾವಿರ ರು. ಮೌಲ್ಯದ 4 ವರ್ಷದ ಎಮ್ಮೆ ಮೃತಪಟ್ಟಿದ್ದು, ಬಾಬುರವರು ಎಮ್ಮೆಗಳನ್ನು ಮೇಯಿಸಿಕೊಂಡು ಬರುತ್ತಿದ್ದಾಗ ಬುಲೋರೋ ಪಿಕಪ್ ವಾಹನದ ಚಾಲಕ ಎಮ್ಮೆಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಸ್ಥಳದಲ್ಲಿಯೇ ಒಂದು ಎಮ್ಮೆ ಮೃತಪಟ್ಟಿದ್ದು, ಉಳಿದ ಎಮ್ಮೆಗಳಿಗೆ ಗಾಯವಾಗಿರುತ್ತದೆ.

    ಈ ಸಂಬಂಧ ಬಾಬುರವರು ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅ.1ರಂದು "ಒಂದನೇ ತಾರೀಕು, ಒಂದು ಗಂಟೆ, ಒಟ್ಟಿಗೆ ಅಭಿಯಾನ"

    ಭದ್ರಾವತಿ : ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತೆಗಾಗಿ ಶ್ರಮದಾನ" ಅಪ್ಪರ್ ಹುತ್ತಾ ಗೆಳೆಯರ ಬಳಗ, ಲಯನ್ಸ್ ಕ್ಲಬ್, ಶ್ರೀ ಕುಕ್ಕುವಾಡೇಶ್ವರಿ ಯೂತ್ ಕ್ಲಬ್ ಕಬಡ್ಡಿ ತಂಡದ ಸಹಯೋಗದೊಂದಿಗೆ ಅ.1ರಂದು ಬೆಳಿಗ್ಗೆ 9.30ರಿಂದ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

    ತ್ಯಾಜ್ಯ ಮುಕ್ತ ಭಾರತ ಪರಿಕಲ್ಪನೆಯಡಿ "ಒಂದನೇ ತಾರೀಕು, ಒಂದು ಗಂಟೆ, ಒಟ್ಟಿಗೆ ಅಭಿಯಾನ" ತರಂಗ ಕಿವುಡು ಮಕ್ಕಳ ಶಾಲೆ ಮತ್ತು ಸಿದ್ದಾರ್ಥ ಅಂಧರ ವಿಕಾಸ ಕೇಂದ್ರದಲ್ಲಿ ನಡೆಯುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್ ಕೋರಿದ್ದಾರೆ.

ಪೌರಕಾರ್ಮಿಕರು ದೇವರ ಸ್ವರೂಪ : ಬಿ.ಕೆ ಸಂಗಮೇಶ್ವರ

 

ಭದ್ರಾವತಿ ನಗರಸಭೆ ವತಿಯಿಂದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.

ಭದ್ರಾವತಿ: ಪೌರಕಾರ್ಮಿಕರ ಸೇವೆ ಅನನ್ಯವಾಗಿದ್ದು, ಅವರನ್ನು ದೇವರ ಸ್ವರೂಪ ಎಂದು ಭಾವಿಸಿದರೇ ತಪ್ಪಾಗಲಾರದು. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ ಹೇಳಿದರು.
    ಅವರು ಶನಿವಾರ ನಗರಸಭೆ ವತಿಯಿಂದ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
        ಸಮಾಜದಲ್ಲಿ ಪೌರಕಾರ್ಮಿಕರ ಸೇವೆ ಅವಿಸ್ಮರಣೀಯವಾಗಿದೆ. ಅವರ ಬದುಕು ಸಹ ಉತ್ತಮಗೊಳ್ಳಬೇಕು. ಪೌರಕಾರ್ಮಿಕರು ತಮ್ಮ ಆರೋಗ್ಯದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರ ಪೌರಕಾರ್ಮಿಕರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳು ಪ್ರಾಮಾಣಿಕವಾಗಿ ಅವರಿಗೆ ತಲುಪುವಂತಾಗಬೇಕೆಂದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಪೌರಾಯುಕ್ತ ಎಚ್.ಎಂ ಮನುಕುಮಾರ್, ಪೌರಕಾರ್ಮಿಕರು ಸಹ ಸಮಾಜದಲ್ಲಿ ನಮ್ಮೆಲ್ಲರಂತೆ ಬದುಕುತ್ತಿದ್ದಾರೆ. ಅವರಿಗೂ ಸಮಾಜದಲ್ಲಿ ಒಂದು ಸ್ಥಾನಮಾನ, ಗೌರವವಿದೆ ಇದನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ.
    ಪೌರಕಾರ್ಮಿಕರು ಇಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಪೌರಕಾರ್ಮಿಕರ ಕೆಲಸ ಪೌರಕಾರ್ಮಿಕರೇ ನಿರ್ವಹಿಸಬೇಕಾಗಿದೆ. ಇದನ್ನು ಬೇರೆಯವರಿಂದ ಮಾಡಲು ಸಾಧ್ಯವಿಲ್ಲ. ಅವರಿಂದಾಗಿ ಸಮಾಜದಲ್ಲಿ ನಾವೆಲ್ಲರೂ ನೆಮ್ಮದಿಯಿಂದ, ಸ್ವಚ್ಛವಾಗಿ, ಆರೋಗ್ಯದಿಂದ ಬದುಕಲು ಸಾಧ್ಯವಾಗಿದೆ. ಅವರಿಗೂ ಸಮಾಜದಲ್ಲಿ ಎಲ್ಲರೂ ಗೌರವ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.
    ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಹಿರಿಯ ಕಾರ್ಮಿಕರಾದ ಸರೋಜಮ್ಮ ಪೌರ ಸೇವಾ ನೌಕರರ ಸೇವಾ ಸಂಘದ ಉಪಾಧ್ಯಕ್ಷ ಅಬ್ಬಯ್ಯ ಹಾಗೂ ನಗರಸಭೆ ಎಲ್ಲಾ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ರಂಗಕರ್ಮಿ ಕಿರುತೆರೆ ನಟ ಅಪರಂಜಿ ಶಿವರಾಜ್ ನಿರ್ದೇಶನದಲ್ಲಿ ಪೌರಕಾರ್ಮಿಕರ ಕುರಿತ ನಾಟಕ ಪ್ರದರ್ಶನ ನಡೆಯಿತು.
20 ಪೌರಕಾರ್ಮಿಕರನ್ನು ಸರ್ಕಾರ ಕಾಯಂಗೊಳಿಸಿದ್ದು, ಶಾಸಕ ಬಿ.ಕೆ ಸಂಗಮೇಶ್ವರ ಆದೇಶ ಪ್ರತಿಗಳನ್ನು ವಿತರಿಸಿದರು.
    ಪರಿಸರ ಅಭಿಯಂತರ ಪ್ರಭಾಕರ್ ಸ್ವಾಗತಿಸಿದರು ಕಂದಾಯ ಅಧಿಕಾರಿ ರಾಜಕುಮಾರ್ ನಿರೂಪಿಸಿದರು. ಇದಕ್ಕೂ ಮೊದಲು ನಗರದ ರಂಗಪ್ಪ ವೃತ್ತದಿಂದ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದವರಿಗೂ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ವಿಶೇಷವಾಗಿ ಶಾಸಕ ಬಿ.ಕೆ ಸಂಗಮೇಶ್ವರ ಪುಷ್ಪಾವೃಷ್ಟಿಯೊಂದಿಗೆ ಪೌರಕಾರ್ಮಿಕರನ್ನು ಗೌರವಿಸಿದರು.
    ಭದ್ರಾವತಿ ನಗರಸಭೆ ವತಿಯಿಂದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಕಾಯಂ ನೇಮಕಾತಿಗೊಂಡ ಪೌರಕಾರ್ಮಿಕರಿಗೆ ಆದೇಶ ಪ್ರತಿಗಳನ್ನು ಶಾಸಕ ಬಿ.ಕೆ ಸಂಗಮೇಶ್ವರ್ ವಿತರಿಸಿದರು.

Friday, September 29, 2023

ಕೂಡ್ಲಿಗೆರೆಯಲ್ಲಿ "ನನ್ನ ಮಣ್ಣು ನನ್ನ ದೇಶ" ಅಭಿಯಾನಕ್ಕೆ ಚಾಲನೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ "ನನ್ನ ಮಣ್ಣು ನನ್ನ ದೇಶ" ಅಭಿಯಾನ ಕಾರ್ಯಕ್ರಮ ಭದ್ರಾವತಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಕೂಡ್ಲಿಗೆರೆ ಮಹಾಶಕ್ತಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

    ಭದ್ರಾವತಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ "ನನ್ನ ಮಣ್ಣು ನನ್ನ ದೇಶ" ಅಭಿಯಾನ ಕಾರ್ಯಕ್ರಮ ತಾಲೂಕು ಬಿಜೆಪಿ ಮಂಡಲ ವತಿಯಿಂದ ಕೂಡ್ಲಿಗೆರೆ ಮಹಾಶಕ್ತಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

    ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ದೇಶಾದ್ಯಂತ ಸಂಚಲನ ಮೂಡಿಸಿರುವ ಅಭಿಯಾನಕ್ಕೆ ಕ್ಷೇತ್ರದಲ್ಲೂ ಹೆಚ್ಚಿನ ಉತ್ಸಾಹ ಕಂಡು ಬರುತ್ತಿದ್ದು, ಪ್ರಧಾನಿಯವರ ಈ ಮಹತ್ವಕಾಂಕ್ಷೆಯ ವಿಶೇಷ ಅಭಿಯಾನ ಹುತಾತ್ಮ ವೀರಯೋಧರು ಹಾಗೂ ವೀರಾಂಗನೆಯರಿಗೆ ಗೌರವಿಸಿ ಸನ್ಮಾನ ಸಲ್ಲಿಸಲಿರುವ "ಏಕ್ ಭಾರತ್ ಶ್ರೇಷ್ಠ ಭಾರತ್" ಪ್ರತೀಕವಾಗಿದೆ ಎಂದರು.

    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಮುಖಂಡರಾದ ಮಂಗೋಟೆ ರುದ್ರೇಶ್, ತೀರ್ಥಯ್ಯ, ಮಂಡಲ ಪ್ರಧಾನ ಕಾರ್ಯದರ್ಶಿ ಚೆನ್ನೇಶ್, ಕೂಡ್ಲಿಗೆರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಮೂರ್ತಿ ಹಾಗು ಪಕ್ಷದ ಮುಖಂಡರು, ಕಾರ್ಯಕರ್ತೆಯರು ಉಪಸ್ಥಿತರಿದ್ದರು.