Friday, December 13, 2024

ಓರ್ವನ ಸೆರೆ : ಎರಡು ದ್ವಿಚಕ್ರ ವಾಹನ ಪತ್ತೆ

ಕಳುವಾದ ದ್ವಿಚಕ್ರ ವಾಹನ ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಭದ್ರಾವತಿ ಪೊಲೀಸರಿಗೆ ಎರಡು ದ್ವಿಚಕ್ರ ವಾಹನ ಪತ್ತೆಯಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. 
    ಭದ್ರಾವತಿ: ಕಳುವಾದ ದ್ವಿಚಕ್ರ ವಾಹನ ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಎರಡು ದ್ವಿಚಕ್ರ ವಾಹನ ಪತ್ತೆಯಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. 
    ತರೀಕೆರೆ ನಿವಾಸಿ ನವೀನ್ ಎಂಬುವರು ಜು.೧೬ರಂದು ಹೋಡಾ ಆಕ್ಟಿವ್ ಡಿಎಲ್‌ಎಕ್ಸ್ ದ್ವಿಚಕ್ರ ವಾಹನದಲ್ಲಿ ನಗರಕ್ಕೆ ಆಗಮಿಸಿದ್ದು, ಸಿದ್ಧಾಪುರ ಬೈಪಾಸ್  ತಿಬ್ಬಾದೇವಿ ಇಂಜಿನಿಯರಿಂಗ್ ವರ್ಕ್ ಮುಂದೆ ನಿಲ್ಲಿಸಿ ಕೆಲಸದ ನಿಮಿತ್ತ ತೆರಳಿದ್ದಾರೆ. ಹಿಂದಿರುಗಿ ಬಂದು ನೋಡಿದಾಗ ದ್ವಿಚಕ್ರ ವಾಹನ ಕಳುವಾಗಿದೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 
    ಪ್ರಕರಣ ಸಂಬಂಧ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಪೊಲೀಸರು ಡಿ.೧೧ರಂದು ತಾಲೂಕಿನ ಹೆಬ್ವಂಡಿ ತಾಂಡ ನಿವಾಸಿ ಆರ್. ರಂಗನಾಥ(೩೨) ಎಂಬಾತನನ್ನು ಬಂಧಿಸಿ ಆತನಿಂದ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು ೧,೧೦,೦೦೦ ರು. ಮೌಲ್ಯದ ೨ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.   
    ಪ್ರಕರಣ ಪತ್ತೆಗಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಜಿ ಕೆ ಹೆಚ್ಚುವರಿ ರಕ್ಷಣಾಧಿಕಾರಿ ಅನೀಲ್‌ಕುಮಾರ್ ಭೂಮರಡ್ಡಿ ಮತ್ತು ಎ.ಜಿ ಕಾರಿಯಪ್ಪರವರ ಮಾರ್ಗದರ್ಶನದಲ್ಲಿ  ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜುರವರ ಮೇಲ್ವಿಚಾರಣೆಯಲ್ಲಿ ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್‌ರವರ ನೇತೃತ್ವದಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಟಿ. ರಮೇಶ, ಸಹಾಯಕ ನಿರೀಕ್ಷಕ ಟಿ.ಪಿ ಮಂಜಪ್ಪ  ಹಾಗೂ ಸಿಬ್ಬಂಧಿಗಳಾದ ನವೀನ ಮತ್ತು ಬಿ.ಎಂ ರಘುರವರನ್ನೊಳಗೊಂಡ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ತಂಡದ ಯಶಸ್ವಿ ಕಾರ್ಯಾಚರಣೆಯನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ವಿಜೃಂಭಣೆಯಿಂದ ಜರುಗಿದ ೪೦ನೇ ವರ್ಷದ ಗಿಡದ ಜಾತ್ರಾ ಮಹೋತ್ಸವ

ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಶುಕ್ರವಾರ ೪೦ನೇ ವರ್ಷದ ಗಿಡದ ಜಾತ್ರಾ ಮಹೋತ್ಸವ(ಶ್ರೀ ವೆಂಕಟಚಲ ಯಾತ್ರೆ) ಸಹಸ್ರರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ: ನಗರದ ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಶುಕ್ರವಾರ ೪೦ನೇ ವರ್ಷದ ಗಿಡದ ಜಾತ್ರಾ ಮಹೋತ್ಸವ(ಶ್ರೀ ವೆಂಕಟಚಲ ಯಾತ್ರೆ) ಸಹಸ್ರರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. 
    ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ಆರಾಧಕರು, ದಾಸಪ್ಪರು ಒಂದೆಡೆ ಸೇರಿ ಆಚರಿಸುವ ಜಾತ್ರೆ ಇದಾಗಿದೆ. ಸ್ವಾಮಿಯ ಮೂಲ ನೆಲೆ ತಿರುಪತಿಗೆ ತೆರಳಲು ಸಾಧ್ಯವಾಗದ ದಾಸಪ್ಪ ಸಮೂಹದವರು ಒಂದೆಡೆ ಸೇರಿ ಶ್ರೀ ಸ್ವಾಮಿಯನ್ನು ಆರಾಧಿಸುವ ಪರಿ ಇದಾಗಿದೆ. ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಭಕ್ತರು ದಾಸಪ್ಪರಿಗೆ ತಮ್ಮ ಹರಕೆ ಸಮರ್ಪಿಸುವುದು ವಾಡಿಕೆಯಾಗಿದೆ. ಗಿಡದ ಜಾತ್ರಾ ಮಹೋತ್ಸವ ಮಂಡ್ಯ ನಾಗನಕೆರೆ ಸಮೀಪದ ಕಾಡುಗಳ ಮಧ್ಯೆ  ಹೆಚ್ಚಾಗಿ ನಡೆಯುತ್ತದೆ. ಈ ಜಾತ್ರಾ ಮಹೋತ್ಸವ ೨ನೇ ತಿರುಪತಿ ಎಂದು ಪ್ರಸಿದ್ದಿ ಪಡೆದಿದೆ.  
    ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಆರಂಭಗೊಂಡ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಿಂದ ಬಹುತೇಕ ಕುಟುಂಬಗಳು ಉದ್ಯೋಗಕ್ಕಾಗಿ ಕ್ಷೇತ್ರಕ್ಕೆ ವಲಸೆ ಬಂದಿದ್ದು, ಇಲ್ಲಿಯೇ ನೆಲೆ ನಿಂತಿವೆ. ಈ ಹಿನ್ನಲೆಯಲ್ಲಿ ಈ ಭಾಗದ ದಾಸಪ್ಪರು ಹಾಗು ಶ್ರೀ ವೆಂಕಟೇಶ್ವರ ಸ್ವಾಮಿ ಭಕ್ತರು ಕಳೆದ ೪೦ ವರ್ಷಗಳಿಂದ ಗಿಡದ ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ ಎಂಬುದು ಒಂದು ಮಾಹಿತಿಯಾದರೆ, ಮತ್ತೊಂದೆಡೆ ದೀಪಾವಳಿ ಮಾಸದಲ್ಲಿ ಒಲಗದ್ದೆಗಳಲ್ಲಿ ರೈತರು ಬೆಳೆದ ಬೆಳೆಗಳು ಕಟಾವು ಹಂತಕ್ಕೆ ತಲುಪುವ ಹಿನ್ನಲೆಯಲ್ಲಿ ಸಮೃದ್ಧಿಯ ಸಂಕೇತವಾಗಿ ಯಾವುದೇ ವಿಘ್ನಗಳು ಎದುರಾಗದಿರಲಿ. ಎಲ್ಲರಿಗೂ ಒಳಿತಾಗಲಿ ಎಂಬ ಆಶಯದೊಂದಿಗೆ ದಾಸಪ್ಪ ಸಮೂಹದವರು ಪೂಜಿಸುವ ಮೂಲಕ ಸ್ವಾಮಿಯಲ್ಲಿ ಪ್ರಾರ್ಥಿಸುತ್ತಾರೆ ಎಂಬ ಮಾಹಿತಿಯಾಗಿದೆ. ಒಟ್ಟಾರೆ ಉದ್ದೇಶ ಯಾವುದೇ ಇರಲಿ ಶ್ರದ್ಧಾ ಭಕ್ತಿಯಿಂದ ಒಂದೆಡೆ ಸೇರಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. 
    ಜಾತ್ರಾ ಮಹೋತ್ಸವ ಅಂಗವಾಗಿ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಜಾತ್ರಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಎಂ. ವೆಂಕಟೇಶ್, ಅಧ್ಯಕ್ಷ ಎನ್.ಸಿ ಗಿರೀಶ್, ಉಪಾಧ್ಯಕ್ಷ ನಿಂಗರಾಜು, ಪ್ರಧಾನ ಕಾರ್ಯದರ್ಶಿ ಆರ್. ನಾಗರಾಜ್, ಕಾರ್ಯದರ್ಶಿ ಎಚ್.ಪಿ ಶ್ರೀನಿವಾಸ್, ಸಹ ಕಾರ್ಯದರ್ಶಿ ಎನ್.ಸಿ ಯೋಗೇಶ್, ಖಜಾಂಚಿ ಕಾಂತರಾಜ್, ಸಂಚಾಲಕ ತಿಮ್ಮಯ್ಯ, ಗುರು ನಂಜಯ್ಯ, ಭೀಮಯ್ಯ, ಎಸ್. ನಾಗರಾಜ್, ಡಿ. ಯಾಲಕ್ಕಯ್ಯ, ಸೋಮಶೇಖರ್, ಪ್ರಧಾನ ಅರ್ಚಕರಾದ ಟಿ. ರಾಮದಾಸಯ್ಯ, ಡಿ. ವರದರಾಜು, ಎಸ್. ರಜತ್, ಜಿ. ಪುಷ್ಪರಾಜ್, ಬಿ.ಎಸ್ ಸುನೀಲ್ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾದ ಎಚ್.ಕೆ ಕರಿಯಪ್ಪ, ಜಯಲಕ್ಷ್ಮೀ ಸಿದ್ದರಾಜು, ಶ್ರೀನಿವಾಸ, ಜಾನಕಮ್ಮ, ಎಸ್. ವರದಯ್ಯ, ಹರೀಶ, ಎಂ.ವಿ ಧರ್ಮರಾಜ್, ಸರಳ ಶ್ರೀನಿವಾಸ್, ನೇತ್ರಾವತಿ ಕೃಷ್ಣಮೂರ್ತಿ, ಎಂ.ಎಸ್ ಸುರೇಶ್, ಎನ್. ಹನುಮಂತ, ಪ್ರೇಕ್ಷಿತ್ ಮತ್ತು ವೆಂಕಟೇಶ್ ಹಾಗು ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ರಾಜಕೀಯ ಪಕ್ಷಗಳ ಪ್ರಮುಖರು,  ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು,  ಹಿರಿಯೂರು, ಹುಡ್ಕೋಕಾಲೋನಿ, ಉಜ್ಜನಿಪುರ, ಕಾಗದನಗರ, ಸಿದ್ದಾಪುರ, ಜನ್ನಾಪುರ, ಜಿಂಕ್‌ಲೈನ್, ಭಂಡಾರಹಳ್ಳಿ, ನ್ಯೂಟೌನ್, ಹಳೇನಗರ, ಹೊಸಮನೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ಭಕ್ತರು ಪಾಲ್ಗೊಂಡಿದ್ದರು. 

ವಿಐಎಸ್‌ಎಲ್ ಕಾರ್ಖಾನೆ ೧೦ ರಿಂದ ೧೫ ಸಾವಿರ ಕೋ. ರು. ಬಂಡವಾಳ ಹೂಡಿಕೆ

ಯೋಜನಾ ವರದಿ ಸಿದ್ದಪಡಿಸಲು ನಗರಕ್ಕೆ ಮೆ. ದಸ್ತುರ್ ಕಂಪನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆ

ಭದ್ರಾವತಿ ಯುವ ಮುಖಂಡ ಮಂಗೋಟೆ ರುದ್ರೇಶ್ ಹಾಗು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ನೇತೃತ್ವದಲ್ಲಿ ಕಾರ್ಮಿಕರ ನಿಯೋಗ ಗುರುವಾರ ನವದೆಹಲಿಯಲ್ಲಿ ಸಚಿವ ಎಚ್.ಡಿ ಕುಮಾರಸ್ವಾಮಿ ಮತ್ತು ಸಂಸದ ಬಿ.ವೈ ರಾಘವೇಂದ್ರರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.  
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಬಂಡವಾಳ ತೊಡಗಿಸುವ ಸಂಬಂಧ ಯೋಜನಾ ವರದಿ ತಯಾರಿಸಲು ಪಶ್ಚಿಮ ಬಂಗಾಳ ಕೋಲ್ಕತ್ತಾ ಮೂಲದ ಮೆ. ದಸ್ತುರ್ ಕಂಪನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಜವಾಬ್ದಾರಿ ವಹಿಸಲಾಗಿದ್ದು, ಸದ್ಯದಲ್ಲಿಯೇ ಕಾರ್ಖಾನೆಗೆ ಭೇಟಿ ನೀಡಲಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆಂದು ಕಾರ್ಮಿಕ ಸಂಘ ತಿಳಿಸಿದೆ. 
    ನಗರದ ಯುವ ಮುಖಂಡ ಮಂಗೋಟೆ ರುದ್ರೇಶ್ ಹಾಗು ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ನೇತೃತ್ವದಲ್ಲಿ ಕಾರ್ಮಿಕರ ನಿಯೋಗ ಗುರುವಾರ ನವದೆಹಲಿಯಲ್ಲಿ ಸಚಿವ ಎಚ್.ಡಿ ಕುಮಾರಸ್ವಾಮಿ ಮತ್ತು ಸಂಸದ ಬಿ.ವೈ ರಾಘವೇಂದ್ರರವರನ್ನು ಭೇಟಿ ಮಾಡಿದೆ. 
    ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆಯಿಂದ ಕೈಬಿಟ್ಟು ಸೂಕ್ತ ಬಂಡವಾಳ ತೊಡಗಿಸುವಂತೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಚಿವರು ಮತ್ತು ಸಂಸದರು ವಿಐಎಸ್‌ಎಲ್ ಕಾರ್ಖಾನೆಗೆ ಸುಮಾರು ೧೦ ರಿಂದ ೧೫ ಸಾವಿರ ಕೋ.ರು. ಬಂಡವಾಳ ಹೂಡಿಕೆ ಮಾಡುವ ಚಿಂತನೆ ನಡೆದಿದೆ. ಹೂಡಿಕೆ ಕಾರ್ಯ ಸಾಧ್ಯ ಮಾಡಲು ವರದಿ ತಯಾರಿಸಲು ಪಶ್ಚಿಮ ಬಂಗಾಳ ಕೋಲ್ಕತ್ತಾ ಮೂಲದ ಮೆ. ದಸ್ತುರ್ ಕಂಪನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಕಾರ್ಖಾನೆಗೆ ಕಳುಹಿಸಿ ಕೊಡಲಾಗುವುದು. ಒಂದು ವಾರದೊಳಗೆ ವರದಿ ಪಡೆದು ಯೋಜನೆಯ ಪ್ರಸ್ತಾವನೆ ಸರ್ಕಾರದ ಅನುಮೋದನೆಗೆ ಮಂಡಿಸಲಾಗುವುದು ಎಂದು ಸಚಿವರು ತಿಳಿಸಿದ್ದು,  ಅಲ್ಲದೆ ಸಂಸದರು ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ಹೂಡಿಕೆ ವಿಚಾರ ಸಂಸತ್ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆದು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕೋರುತ್ತೇನೆಂದು ಭರವಸೆ ನೀಡಿದ್ದಾರೆಂದು ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ತಿಳಿಸಿದ್ದಾರೆ.

ವಿಜೃಂಭಣೆಯಿಂದ ಜರುಗಿದ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ನಗರದ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.  
    ಭದ್ರಾವತಿ: ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.  
    ರಥೋತ್ಸವದ ಅಂಗವಾಗಿ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ ಪ್ರಧಾನ ಹೋಮ ಜರುಗಿದವು. ನಂತರ ರಥಶುದ್ಧಿ, ಬಲಿಪೂರ್ವಕ ಶ್ರೀ ಸ್ವಾಮಿಯ ರಥೋತ್ಸವ ಮಧ್ಯಾಹ್ನ ೧೨.೩೦ಕ್ಕೆ ಜರುಗಿತು. ಸುಮಾರು ೩೦ ನಿಮಿಷ ನಾದಸ್ವರ ಸೇರಿದಂತೆ ಕಲಾತಂಡಗಳೊಂದಿಗೆ ಸ್ವಾಮಿಯ ರಥೋತ್ಸವದ ರಾಜಬೀದಿ ಉತ್ಸವ ಮೆರವಣಿಗೆ ನಡೆಯಿತು. ಮೆರವಣಿಗೆ ಆರಂಭಗೊಳ್ಳುತ್ತಿದ್ದು, ಭಕ್ತರು ಸ್ವಾಮಿಗೆ ಜೈಕಾರ ಹಾಕುವ ಮೂಲಕ ಸಂಭ್ರಮಿಸಿದರು. 
    ಸೇವಾಕರ್ತರಿಂದ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ನಡೆಯಿತು. ಅಲ್ಲದೆ ಪ್ರತಿ ವರ್ಷದಂತೆ ಈ ಬಾರಿ ಸಹ ಸೇವಾಕರ್ತರಾದ ಎಚ್.ಸಿ ದಾಸೇಗೌಡ ಅವರಿಂದ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ದೇವಸ್ಥಾನ ಸೇವಾ ಸಮಿತಿ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.

Thursday, December 12, 2024

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕಾರ್ಯಕಾರಣಿ ಸಭೆ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಭದ್ರಾವತಿ ತಾಲೂಕು ಶಾಖೆ ಕಾರ್ಯಕಾರಣಿ ಸಭೆ ಬುಧವಾರ ನಗರದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಕಾರ್ಯಾಲಯದಲ್ಲಿ ನಡೆಯಿತು. 
    ಭದ್ರಾವತಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ತಾಲೂಕು ಶಾಖೆ ಕಾರ್ಯಕಾರಣಿ ಸಭೆ ಬುಧವಾರ ನಗರದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಕಾರ್ಯಾಲಯದಲ್ಲಿ ನಡೆಯಿತು. 
  ತಾಲೂಕು ಶಾಖೆ ಅಧ್ಯಕ್ಷ ಸಿ. ಜಯಪ್ಪ ಹೆಬ್ಬಳಗೆರೆ ಸಭೆಯ ಅಧ್ಯಕ್ಷತೆವಹಿಸಿದ್ದರು. ಸಭೆಯಲ್ಲಿ ಪರಿಷತ್ ವಾರ್ಷಿಕ ವರದಿ ಮಂಡಿಸಲಾಯಿತು. ಜಿಲ್ಲಾಧ್ಯಕ್ಷ ಬಿ.ಡಿ ರವಿಕುಮಾರ್, ತಾಲೂಕು ಶಾಖೆ ಪ್ರಮುಖರಾದ. ಗೌರವಾಧ್ಯಕ್ಷೆ ಡಾ. ವಿಜಯಾದೇವಿ. ಉಪಾಧ್ಯಕ್ಷೆ ಎಸ್. ಉಮಾ, ಪ್ರಧಾನ ಕಾರ್ಯದರ್ಶಿ ವಿನೋದ್, ಖಜಾಂಚಿ ಎಂ.ಈಶ್ವರಪ್ಪ ಮೈದೊಳಲು,  ಪ್ರಕಾಶ್, ಶ್ರೀನಿವಾಸ್ ಜಾಜೂರ್, ಕೃಷ್ಣಪ್ಪ, ನಾಗ(ಕೆಜಿಎಫ್) ಮತ್ತು ದಯಾನಂದ ಮೈದೊಳಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಡಿ.೧೩ರಂದು ಜನ ಸಂಪರ್ಕ ಸಭೆ

ಭದ್ರಾವತಿ: ಮೆಸ್ಕಾಂ ಗ್ರಾಮೀಣ ಉಪವಿಭಾಗದ ಕಛೇರಿಯಲ್ಲಿ ಡಿ.೧೩ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಜನ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ. 
    ಗ್ರಾಹಕರು ಕುಂದುಕೊರತೆ/ಅಹವಾಲುಗಳನ್ನು ಸಲ್ಲಿಸುವ ಮೂಲಕ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದ್ದು,  ಅಧೀಕ್ಷಕ ಇಂಜಿನಿಯರ್ ಅಥವಾ ವಿಭಾಗೀಯ ಅಧಿಕಾರಿ ಸಭೆಯ ಅಧ್ಯಕ್ಷತೆವಹಿಸಲಿದ್ದಾರೆ. 
    ಕಾರೇಹಳ್ಳಿ, ಬಾರಂದೂರು, ಅಂತರಗಂಗೆ, ದೊಡ್ಡೇರಿ, ಬಿಆರ್‌ಪಿ, ದೊಣಬಘಟ್ಟ, ತಡಸ, ಬಿಳಿಕಿ ಅರಳಿಕೊಪ್ಪ, ಕಂಬದಾಳ್ ಹೊಸೂರು, ಅರಳಿಹಳ್ಳಿ, ಕೂಡ್ಲಿಗೆರೆ, ಅತ್ತಿಗುಂದ, ವೀರಾಪುರ, ಕಲ್ಲಹಳ್ಳಿ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರು ಸಭೆಯಲ್ಲಿ ಭಾಗವಹಿಸಬಹುದಾಗಿದ್ದು, ಜನ ಸಂಪರ್ಕ ಸಭೆ ಸದುಪಯೋಗಪಡೆದುಕೊಳ್ಳುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಇಂಜಿನಿಯರ್ ಡಿ. ಪ್ರದೀಪ್ ಕೋರಿದ್ದಾರೆ. 

ಜೆ.ಎಚ್ ಪಟೇಲ್೨೪ನೇ ಪುಣ್ಯಸ್ಮರಣೆ

ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್ ಪಟೇಲ್‌ರವರ ೨೪ನೇ ಪುಣ್ಯಸ್ಮರಣೆ ಗುರುವಾರ ಭದ್ರಾವತಿ ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಜರುಗಿತು. 
    ಭದ್ರಾವತಿ: ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್ ಪಟೇಲ್‌ರವರ ೨೪ನೇ ಪುಣ್ಯಸ್ಮರಣೆ ಗುರುವಾರ ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಜರುಗಿತು. 
    ಜೆ.ಎಚ್ ಪಟೇಲ್ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಟೇಲ್‌ರವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸುವ ಮೂಲಕ ಅವರ ಆದರ್ಶತನ ಹಾಗು ನಾಡಿಗೆ ನೀಡಿರುವ ಕೊಡುಗೆಗಳನ್ನು ಸ್ಮರಿಸಲಾಯಿತು.  
    ವಿದ್ಯಾರ್ಥಿ ಸಂಘಟನೆಯ ಯುವ ಮುಖಂಡ ಶಿವಮೊಗ್ಗ ವಿನಯ್ ರಾಜಾವತ್ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಮಾಜಿ ಸದಸ್ಯ ಆಂಜನಪ್ಪ ಕಾರ್ಯಕ್ರಮ ಉದ್ಘಾಟಿಸಿದರು. 
    ಜೆ.ಎಚ್ ಪಟೇಲ್ ಅಭಿಮಾನಿ, ಮುಖಂಡ ಶಶಿಕುಮಾರ್ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಹಿರಿಯ ಮುಖಂಡರಾದ ನಿಂಗೇಗೌಡ, ಸಿದ್ದಲಿಂಗಯ್ಯ, ಕೆ.ಎಸ್ ವಿಜಯ್ ಕುಮಾರ್ ಸೇರಿದಂತೆ ಅಭಿಮಾನಿಗಳು ಉಪಸ್ಥಿತರಿದ್ದರು.