Friday, December 13, 2024

ವಿಐಎಸ್‌ಎಲ್ ಕಾರ್ಖಾನೆ ೧೦ ರಿಂದ ೧೫ ಸಾವಿರ ಕೋ. ರು. ಬಂಡವಾಳ ಹೂಡಿಕೆ

ಯೋಜನಾ ವರದಿ ಸಿದ್ದಪಡಿಸಲು ನಗರಕ್ಕೆ ಮೆ. ದಸ್ತುರ್ ಕಂಪನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆ

ಭದ್ರಾವತಿ ಯುವ ಮುಖಂಡ ಮಂಗೋಟೆ ರುದ್ರೇಶ್ ಹಾಗು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ನೇತೃತ್ವದಲ್ಲಿ ಕಾರ್ಮಿಕರ ನಿಯೋಗ ಗುರುವಾರ ನವದೆಹಲಿಯಲ್ಲಿ ಸಚಿವ ಎಚ್.ಡಿ ಕುಮಾರಸ್ವಾಮಿ ಮತ್ತು ಸಂಸದ ಬಿ.ವೈ ರಾಘವೇಂದ್ರರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.  
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಬಂಡವಾಳ ತೊಡಗಿಸುವ ಸಂಬಂಧ ಯೋಜನಾ ವರದಿ ತಯಾರಿಸಲು ಪಶ್ಚಿಮ ಬಂಗಾಳ ಕೋಲ್ಕತ್ತಾ ಮೂಲದ ಮೆ. ದಸ್ತುರ್ ಕಂಪನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಜವಾಬ್ದಾರಿ ವಹಿಸಲಾಗಿದ್ದು, ಸದ್ಯದಲ್ಲಿಯೇ ಕಾರ್ಖಾನೆಗೆ ಭೇಟಿ ನೀಡಲಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆಂದು ಕಾರ್ಮಿಕ ಸಂಘ ತಿಳಿಸಿದೆ. 
    ನಗರದ ಯುವ ಮುಖಂಡ ಮಂಗೋಟೆ ರುದ್ರೇಶ್ ಹಾಗು ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ನೇತೃತ್ವದಲ್ಲಿ ಕಾರ್ಮಿಕರ ನಿಯೋಗ ಗುರುವಾರ ನವದೆಹಲಿಯಲ್ಲಿ ಸಚಿವ ಎಚ್.ಡಿ ಕುಮಾರಸ್ವಾಮಿ ಮತ್ತು ಸಂಸದ ಬಿ.ವೈ ರಾಘವೇಂದ್ರರವರನ್ನು ಭೇಟಿ ಮಾಡಿದೆ. 
    ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆಯಿಂದ ಕೈಬಿಟ್ಟು ಸೂಕ್ತ ಬಂಡವಾಳ ತೊಡಗಿಸುವಂತೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಚಿವರು ಮತ್ತು ಸಂಸದರು ವಿಐಎಸ್‌ಎಲ್ ಕಾರ್ಖಾನೆಗೆ ಸುಮಾರು ೧೦ ರಿಂದ ೧೫ ಸಾವಿರ ಕೋ.ರು. ಬಂಡವಾಳ ಹೂಡಿಕೆ ಮಾಡುವ ಚಿಂತನೆ ನಡೆದಿದೆ. ಹೂಡಿಕೆ ಕಾರ್ಯ ಸಾಧ್ಯ ಮಾಡಲು ವರದಿ ತಯಾರಿಸಲು ಪಶ್ಚಿಮ ಬಂಗಾಳ ಕೋಲ್ಕತ್ತಾ ಮೂಲದ ಮೆ. ದಸ್ತುರ್ ಕಂಪನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಕಾರ್ಖಾನೆಗೆ ಕಳುಹಿಸಿ ಕೊಡಲಾಗುವುದು. ಒಂದು ವಾರದೊಳಗೆ ವರದಿ ಪಡೆದು ಯೋಜನೆಯ ಪ್ರಸ್ತಾವನೆ ಸರ್ಕಾರದ ಅನುಮೋದನೆಗೆ ಮಂಡಿಸಲಾಗುವುದು ಎಂದು ಸಚಿವರು ತಿಳಿಸಿದ್ದು,  ಅಲ್ಲದೆ ಸಂಸದರು ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ಹೂಡಿಕೆ ವಿಚಾರ ಸಂಸತ್ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆದು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕೋರುತ್ತೇನೆಂದು ಭರವಸೆ ನೀಡಿದ್ದಾರೆಂದು ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ತಿಳಿಸಿದ್ದಾರೆ.

No comments:

Post a Comment