Friday, January 31, 2025

ಫೆ.೨ರಂದು ಶ್ರೀ ಭಗೀರಥ ಸಮುದಾಯ ಭವನ ಉದ್ಘಾಟನೆ

    ಭದ್ರಾವತಿ : ಉಪ್ಪಾರ ಸಂಘದ ವತಿಯಿಂದ ಹಳೇನಗರ ಬಸವೇಶ್ವರ ವೃತ್ತದ ಸಮೀಪದ ನರೇಂದ್ರ ಪಾರ್ಕ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಭಗೀರಥ ಸಮುದಾಯ ಭವನ ಉದ್ಘಾಟನೆ ಫೆ.೨ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. 
    ಹೊಸದುರ್ಗ ಶ್ರೀ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದು, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 
ಸಂಸದ ಬಿ.ವೈ ರಾಘವೇಂದ್ರ, ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷರಾದ ಶಾಸಕ ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಶಿವಮೊಗ್ಗ ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ್, ನಿವೃತ್ತ ಕೆ.ಎ.ಎಸ್ ಅಧಿಕಾರಿ ಬಿ. ಭೀಮಪ್ಪ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಹೆಚ್ಚುವರಿ ಆಯುಕ್ತ ಜಗನ್ನಾಥ್ ಸಗರ, ಸಮಾಜ ಸೇವಕ ಸಿ. ಮಹೇಶ್ ಕುಮಾರ್, ಗಿರೀಶ್ ಉಪ್ಪಾರ, ಲಕ್ಕಪ್ಪ, ವೆಂಕಟೇಶ್, ಡಾ. ನಾಗರಾಜ್, ಅನುಪಮ ಚನ್ನೇಶ್, ಪರಶುರಾಮ್, ಎಚ್.ಟಿ ಹಾಲಪ್ಪ, ಎನ್. ಮಂಜುನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 
    ನಿವೃತ್ತ ನ್ಯಾಯಾಧೀಶರಾದ ಬಿಲ್ಲಪ್ಪ ಶ್ರೀ ಭಗೀರಥ ಭಾವಚಿತ್ರ ಅನಾವರಣಗೊಳಿಸಿದ್ದು, ಉಪ್ಪಾರ ಸಮಾಜದ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಬಂಧುಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ರಾಜ್ಯಮಟ್ಟದ ಸಿರಿಧಾನ್ಯ ಸಿಹಿ ಖಾದ್ಯ ಸ್ಪರ್ಧೆಯಲ್ಲಿ ಪ್ರೇಮಲತಾಗೆ ೨ನೇ ಸ್ಥಾನ

ಸಾವಯವ ಮತ್ತು ಸಿರಿಧಾನ್ಯ, ರಾಜ್ಯ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯ ಸಿರಿಧಾನ್ಯ ಸಿಹಿ ಖಾದ್ಯ ವಿಭಾಗದಲ್ಲಿ ಭದ್ರಾವತಿ ನಗರದ ವಿದ್ಯಾಮಂದಿರ ನಿವಾಸಿ ಬಿ.ಎಂ ಪ್ರೇಮಲತಾ ೨ನೇ ಸ್ಥಾನ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು. 
    ಭದ್ರಾವತಿ: ಕೃಷಿ ಇಲಾಖೆ ವತಿಯಿಂದ ಸ್ಲರ್ಪ್ ಕಲಿನರಿ ಅಕಾಡೆಮಿ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಅಂತರರಾರಾಷ್ಟ್ರೀಯ ವಾಣಿಜ್ಯ ಮೇಳ-೨೦೨೫, ಸಾವಯವ ಮತ್ತು ಸಿರಿಧಾನ್ಯ, ರಾಜ್ಯ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯ ಸಿರಿಧಾನ್ಯ ಸಿಹಿ ಖಾದ್ಯ ವಿಭಾಗದಲ್ಲಿ ನಗರದ ವಿದ್ಯಾಮಂದಿರ ನಿವಾಸಿ ಬಿ.ಎಂ ಪ್ರೇಮಲತಾ ೨ನೇ ಸ್ಥಾನ ಪಡೆದುಕೊಂಡಿದ್ದಾರೆ. 
    ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ, ಸಚಿವರಾದ ಕೃಷ್ಣ ಬೈರೇಗೌಡ, ಬಿ.ಎಸ್ ಸುರೇಶ್, ಶಾಸಕ ಗೋವಿಂದಪ್ಪ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪ್ರೇಮಲತಾ ಅವರನ್ನು ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ. 

Thursday, January 30, 2025

ನೌಕರರ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಎಲ್.ಕೆ ಲತಾ, ಉಪಾಧ್ಯಕ್ಷರಾಗಿ ಎಸ್. ಪ್ರಕಾಶ್

ಭದ್ರಾವತಿ ಹಳೇನಗರದ ಸರ್ಕಾರಿ ನೌಕರರ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಶಾಲಾ ಶಿಕ್ಷಣ ಇಲಾಖೆಯ ಎಲ್.ಕೆ ಲತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿಯನ್ನು ತಾಲೂಕು ಸರ್ಕಾರಿ ನೌಕರರ ಸಂಘದ  ಅಧ್ಯಕ್ಷರು, ಪದಾಧಿಕಾರಿಗಳು ಅಭಿನಂದಿಸಿದ್ದಾರೆ. 
    ಭದ್ರಾವತಿ : ಹಳೇನಗರದ ಸರ್ಕಾರಿ ನೌಕರರ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಶಾಲಾ ಶಿಕ್ಷಣ ಇಲಾಖೆಯ ಎಲ್.ಕೆ ಲತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ೧೩ ನಿರ್ದೇಶಕರನ್ನು ಒಳಗೊಂಡಿರುವ ಸಹಕಾರ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಎಲ್.ಕೆ ಲತಾ, ಉಪಾಧ್ಯಕ್ಷರಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್. ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ಇಮ್ತಿಯಾಜ್ ಅಹಮದ್ ತಿಳಿಸಿದ್ದಾರೆ. 
    ನಿರ್ದೇಶಕರಾದ ಡಿ. ಮುರಳೀಧರ, ಎಂ. ಪುಟ್ಟುಲಿಂಗಮೂರ್ತಿ, ಎಸ್.ಟಿ ಸುಧೀಂದ್ರ ರೆಡ್ಡಿ, ಶಹತಾಜ್ ಪರ್ವೀನ್, ಎಂ. ಹನುಮಂತಪ್ಪ, ಆರ್. ಜಯಸ್ವಾಮಿ, ಜಿ.ಎಸ್ ರುದ್ರೇಶ್, ಎಸ್. ಆನಂದ್, ಎಚ್. ರುದ್ರೇಶ್, ವಿ. ಗದ್ದಿಗೆ ಸ್ವಾಮಿ ಮತ್ತು ಎಲ್.ಓ ಲೋಕೇಶ್ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. 
    ನೂತನ ಆಡಳಿತ ಮಂಡಳಿಯನ್ನು ತಾಲೂಕು ಸರ್ಕಾರಿ ನೌಕರರ ಸಂಘದ  ಅಧ್ಯಕ್ಷ ಬಿ. ಸಿದ್ದಬಸಪ್ಪ, ಪದಾಧಿಕಾರಿಗಳಾದ ಎಸ್.ಕೆ ಮೋಹನ್, ಕೆ.ಆರ್ ಪ್ರಶಾಂತ್, ಎಂ. ವೆಂಕಟೇಶ್, ವೈ.ಎನ್ ಶ್ರೀಧರಗೌಡ, ಎ. ರಂಗನಾಥ್ ಮತ್ತು ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ಕಾರ್ಯದರ್ಶಿ ಎಂ.ಎಸ್ ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ. 

ಮಹಾತ್ಮಗಾಂಧಿ ಕೊಂದವರ ವೈಭವೀಕರಣ ವಿಷಾದನೀಯ : ಶಶಿಕುಮಾರ್ ಗೌಡ

ಭದ್ರಾವತಿ ನಗರದ ಜನ್ನಾಪುರ ಫಿಲ್ಟರ್‌ಶೆಡ್ ಅಂತರಘಟ್ಟಮ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ಸಮುದಾಯ ಭವನ ಮುಂಭಾಗ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಗುರುವಾರ ಮಹಾತ್ಮಗಾಂಧಿಯವರ ಹುತಾತ್ಮ ದಿನ, ಸರ್ವೋದಯ ದಿನ ಆಚರಿಸಲಾಯಿತು. 
    ಭದ್ರಾವತಿ: ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಮನುವಾದಿಗಳ ಸಂಸ್ಕೃತಿ ಹೆಚ್ಚಾಗಿದ್ದು, ಮಹಾತ್ಮಗಾಂಧಿ ಕೊಂದವರನ್ನು ಮಹಾನ್ ವ್ಯಕ್ತಿಗಳಂತೆ ಬಿಂಬಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ವಿಷಾದ ವ್ಯಕ್ತಪಡಿಸಿದರು.  
    ಅವರು ಗುರುವಾರ ನಗರದ ಜನ್ನಾಪುರ ಫಿಲ್ಟರ್‌ಶೆಡ್ ಅಂತರಘಟ್ಟಮ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ಸಮುದಾಯ ಭವನ ಮುಂಭಾಗ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಾತ್ಮಗಾಂಧಿಯವರ ಹುತಾತ್ಮ ದಿನ, ಸರ್ವೋದಯ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ರಾಷ್ಟ್ರಪಿತ ಮಹಾತ್ಮಗಾಂಧಿಯವರು ಜಾತಿ, ಧರ್ಮ, ಮತಪಂಥಗಳನ್ನು ಮೀರಿ ಎಲ್ಲರನ್ನು ಒಗ್ಗೂಟಿಸಿಕೊಂಡು ಅಹಿಂಸಾ ಮಾರ್ಗದಲ್ಲಿ ತ್ಯಾಗ, ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು, ಸರ್ವಕಾಲಕ್ಕೂ ಮಹಾತ್ಮಗಾಂಧಿಯವರು ಆದರ್ಶಪ್ರಾಯರಾಗಿದ್ದಾರೆ. ಆದರೆ ಇಂದು ದೇಶದಲ್ಲಿ ಅವರ ತತ್ವ, ಸಿದ್ಧಾಂತಗಳನ್ನು ವಿರೋಧ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ಸಂಗತಿಯಾಗಿದ್ದು, ಇದನ್ನು ಖಂಡಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಮಹಾತ್ಮಾ ಗಾಂಧಿಯವರ ವಿಷಯದಲ್ಲಿ ಬಾಯಿಗೆ ಬಂದಂತೆ ಮಾತನಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. 
    ಮಾದೇವಿ, ಪಾರ್ವತಿಬಾಯಿ, ದಿವ್ಯಶ್ರೀ, ಇಂದ್ರಮ್ಮ, ಶಾಂತಮ್ಮ ಸೇರಿದಂತೆ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಪ್ರಮುಖರು, ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು. 

Wednesday, January 29, 2025

ವಂಶವೃಕ್ಷ ನೀಡದೆ ತೊಂದರೆ ನೀಡುತ್ತಿರುವ ಕ್ರಮ ಖಂಡಿಸಿ ಪ್ರತಿಭಟನಾ ಧರಣಿ ಸತ್ಯಾಗ್ರಹ

ಸುಳ್ಳು ವರದಿ ನೀಡಿರುವ ರಾಜಸ್ವ ನಿರೀಕ್ಷಕ ಸೇವೆಯಿಂದ ವಜಾಗೊಳಿಸಲು ಆಗ್ರಹ 

ಭದ್ರಾವತಿ ತಾಲೂಕಿನ ಡಿ.ಬಿ ಹಳ್ಳಿ ಗ್ರಾಮದ ಸಂಗಪ್ಪ ಎಂಬುವವರಿಗೆ ವಂಶವೃಕ್ಷ ನೀಡದೆ ತೊಂದರೆ ನೀಡುತ್ತಿರುವ ಕ್ರಮ ಖಂಡಿಸಿ ಹಾಗು ಸುಳ್ಳು ದಾಖಲೆಗಳ ಆಧಾರದ ಮೇರೆಗೆ ವಂಶವೃಕ್ಷ ನೀಡಿರುವ ರಾಜಸ್ವ ನಿರೀಕ್ಷಕನನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಬುಧವಾರ ತಾಲೂಕು ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು. 
    ಭದ್ರಾವತಿ : ತಾಲೂಕಿನ ಡಿ.ಬಿ ಹಳ್ಳಿ ಗ್ರಾಮದ ಸಂಗಪ್ಪ ಎಂಬುವವರಿಗೆ ವಂಶವೃಕ್ಷ ನೀಡದೆ ತೊಂದರೆ ನೀಡುತ್ತಿರುವ ಕ್ರಮ ಖಂಡಿಸಿ ಹಾಗು ಸುಳ್ಳು ದಾಖಲೆಗಳ ಆಧಾರದ ಮೇರೆಗೆ ವಂಶವೃಕ್ಷ ನೀಡಿರುವ ರಾಜಸ್ವ ನಿರೀಕ್ಷಕನನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಬುಧವಾರ ತಾಲೂಕು ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು. 
    ಗ್ರಾಮದ ಸರ್ವೆ ನಂ. ೭೭/೪ರಲ್ಲಿ ೩ ಎಕರೆ ೬ ಗುಂಟೆ ಜಮೀನಿನಲ್ಲಿ ೧ ಎಕರೆ ಜಮೀನು ಸಂಗಪ್ಪ ಬಿನ್ ಸಣ್ಣಪ್ಪರವರ ಹೆಸರಿನಲ್ಲಿ ಮುತ್ತಜ್ಜಿ ನಾಗಮ್ಮರವರು ಅವರ ಮಗಳಾದ ನೀಲಮ್ಮರವರಿಗೆ ಕ್ರಯಕ್ಕೆ ನೀಡಿರುತ್ತಾರೆ. ಉಳಿದ ೧ ಎಕರೆ ೧೮ ಗುಂಟೆ ಜಮೀನು ಈಗಲೂ ಸಹ ನಾಗಮ್ಮರವರ ಹೆಸರಿನಲ್ಲಿಯೇ ಇರುತ್ತದೆ. ಇದರ ವಾರಸುದಾರರು ಸಂಗಪ್ಪ ಬಿನ್ ಸಣ್ಣಪ್ಪರವರೇ ಆಗಿದ್ದು, ವಂಶವೃಕ್ಷಕ್ಕಾಗಿ ಎ.ಸಿ/ಡಿ.ಸಿ ನ್ಯಾಯಾಲಯಗಳಲ್ಲಿ ಪ್ರಕರಣ ನಡೆದು ಸ್ಥಳ ಪರಿಶೀಲನೆ ಮಾಡಿದಾಗ ಅಂದಿನ ರಾಜಸ್ವ ನಿರೀಕ್ಷಕ ಮಾನೋಜಿರಾವ್‌ರವರು ಗ್ರಾಮಸ್ಥರೆಲ್ಲರೂ ನೀಲಕ್ಕನ ತಾಯಿ ನಾಗಮ್ಮ ಇವರ ಕುಟುಂಬದ ವಾರಸುದಾರ ಸಂಗಪ್ಪ ಬಿನ್ ಸಣ್ಣಪ್ಪ ಎಂದು ತಿಳಿಸಿದ್ದು, ಅಲ್ಲದೆ ಅನೇಕ ದಾಖಲೆಗಳು ಇದ್ದರೂ ಸಹ  ಸುಳ್ಳು ವರದಿಗಳನ್ನು ಮಾಡಿರುತ್ತಾರೆಂದು ಪ್ರತಿಭಟನಾನಿರತರು ದೂರಿದರು. 
    ಈ ಸಂಬಂಧ ನಾಡಕಛೇರಿ, ತಾಲೂಕು ಕಛೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು.  ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ್ದ ಉಪ ವಿಭಾಗಾಧಿಕಾರಿ ಜಿ.ಎಸ್ ಸತ್ಯನಾರಾಯಣರವರು ಶಾಲಾ ದಾಖಲೆಗಳನ್ನು ರಾಜರುಪಡಿಸಿದ್ದಲ್ಲಿ ಸಂಗಪ್ಪ ಬಿನ್ ಸಣ್ಣಪ್ಪರವರ ಕುಟುಂಬದ ವಂಶವೃಕ್ಷ ಮಾಡಿಕೊಡಿ ಎಂದು ತಹಸೀಲ್ದಾರ್/ರಾಜಸ್ವ ನಿರೀಕ್ಷಕ/ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಹಿಂದಿನ ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಅಕ್ರಮ ಕಾರ್ಯ ಮುಚ್ಚಿ ಹಾಕುವ ಉದ್ದೇಶದಿಂದ ಸುಳ್ಳು ವರದಿಗಳನ್ನು ಸೃಷ್ಟಿಸಿರುತ್ತಾರೆಂದು ಆರೋಪಿಸಿದರು. 
    ಗ್ರಾಮಸ್ಥರು ಹಿಂದಿನ ತಹಸೀಲ್ದಾರ್ ನಾಗರಾಜು ಮತ್ತು ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಮತ್ತು ಉಪ ತಹಸೀಲ್ದಾರ್ ಮಂಜಾನಾಯ್ಕರವರ ಎದುರು ತಿಮ್ಮಕ್ಕ ಎಂಬ ಮಹಿಳೆ ಗ್ರಾಮದಲ್ಲಿ ವಾಸವಾಗಿರುವುದಿಲ್ಲ ಎಂದು ಸಾಕ್ಷಿ ನೀಡಿದ್ದಾರೆ. ಈ ಕುರಿತು ವಿಡಿಯೋ ಸಹ ಸಾಕ್ಷಿ ಇದೆ. ಆದರೂ ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಬಡವರಿಗೆ ಮೋಸ, ವಂಚನೆ ಮಾಡಿದ್ದು, ಈತನನ್ನು ರಕ್ಷಿಸಲು ಉಳಿದ ಅಧಿಕಾರಿಗಳು ತಪ್ಪು ತಪ್ಪು ಮಾಹಿತಿಯನ್ನು ಸೇರಿಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ನೀಡಲು ತಡಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. 
    ತಕ್ಷಣ ಮೇಲಾಧಿಕಾರಿಗಳು ತಕ್ಷಣ ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಸೇವೆಯಿಂದ ವಜಾಗೊಳಿಸಿ ಈತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಕ್ಷಣ ನ್ಯಾಯ ದೊರಕಿಸಿ ಕೊಡಬೇಕೆಂದು ಕೋರಿದರು. 
    ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರತಿಭಟನಾ ಧರಣಿ ಸತ್ಯಾಗ್ರಹ ನೇತೃತ್ವವಹಿಸಿದ್ದರು. 

ಸಂವಿಧಾನ ಸಮಾನತೆಯ ಕೊಡುಗೆ, ಮನೆ ಮನೆಗಳಲ್ಲೂ ಜಾಗೃತಿ ಮೂಡಲಿ : ಸತೀಶ್ ಜಾರಕಿಹೊಳಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಬುಧವಾರ ಭದ್ರಾವತಿ ಹಳೇನಗರದ ಶ್ರೀ ವೀರಶೈವ ಸಭಾಭವನದಲ್ಲಿ ಕ.ದ.ಸಂ.ಸ-೫೦ ನೆನಪಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಜಾಗೃತಿ ಸಮಾವೇಶ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮೈಸೂರು ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ  ಸ್ವಾಮೀಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಈ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನದಿಂದಾಗಿ ನಾವೆಲ್ಲರೂ ಸಮಾನತೆ ಕಾಣಲು ಸಾಧ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. 
    ಅವರು ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಹಳೇನಗರದ ಶ್ರೀ ವೀರಶೈವ ಸಭಾಭವನದಲ್ಲಿ ಕ.ದ.ಸಂ.ಸ-೫೦ ನೆನಪಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 
    ಈ ದೇಶದಲ್ಲಿ ಪ್ರತಿಯೊಂದನ್ನು ಹೋರಾಟ, ಸಂಘರ್ಷದ ಮೂಲಕ ಪಡೆದುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಈ ದೇಶದ ಸಂವಿಧಾನದಿಂದಾಗಿ ನಾವೆಲ್ಲರೂ ಒಗ್ಗಟ್ಟಿನಿಂದ, ಸಮಾನತೆ ಹಾಗು ನೆಮ್ಮದಿಯಿಂದ ಬದುಕುವಂತಾಗಿದೆ. ಒಂದು ವೇಳೆ ಸಂವಿಧಾನ ರಚನೆಯಾಗದಿದ್ದಲ್ಲಿ ಈ ದೇಶದ ಜನರ ಸ್ಥಿತಿ ಕಲ್ಪಿಸಿಕೊಳ್ಳುವುದು ಅಸಾಧ್ಯವಾಗುತ್ತಿತ್ತು ಎಂದರು. 
    ಪ್ರಸ್ತುತ ನಾವುಗಳು ಸಂವಿಧಾನ ತಿಳಿದುಕೊಳ್ಳಬೇಕಾಗಿದೆ. ಇಂತಹ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ. ಮನೆ ಮನೆಗಳಲ್ಲಿ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು. 
      ಸಮಾವೇಶದ ದಿವ್ಯ ಸಾನಿಧ್ಯವಹಿಸಿದ್ದ ಮೈಸೂರು ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ  ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಸಂವಿಧಾನ ಯಾಕೆ ಓದಬೇಕು ಎಂಬುದನ್ನು ಅರ್ಥಮಾಡಿಕೊಂಡಾಗ ಮಾತ್ರ ಸಂವಿಧಾನ ವಿರೋಧಿಸುವವರಿಗೆ ಉತ್ತರ ನೀಡಲು ಸಾಧ್ಯ. ಪ್ರಸ್ತುತ ಅಂಬೇಡ್ಕರ್‌ರವರ ಸಂವಿಧಾನ ಬದಲಿಸಿ ಮತ್ತೊಂದು ಸಂವಿಧಾನ ರಚಿಸುತ್ತೇವೆ ಎಂಬುವವರ ಮನಸ್ಥಿತಿಗಳನ್ನು ನಾವುಗಳು ಅರ್ಥಕೊಳ್ಳಬೇಕಾಗಿದೆ. ಮೇಲ್ವರ್ಗದವರು ಪುನಃ ಈ ದೇಶದಲ್ಲಿ ಅಸ್ಪೃಶ್ಯತೆ, ಅಸಮಾನತೆ ಹಾಗೂ ಶೋಷಣೆಯ ಬದುಕು ಎದುರು ನೋಡುತ್ತಿದ್ದಾರೆ. ಇದಕ್ಕೆ ನಾವುಗಳು ಅವಕಾಶ ನೀಡಬಾರದು. ಇನ್ನೂ ಹೆಚ್ಚು ಜಾಗೃತರಾಗಬೇಕಾಗಿದ್ದು, ಈ ಹಿನ್ನಲೆಯಲ್ಲಿ ಸಂವಿಧಾನ ಜಾಗೃತಿ ಸಮಾವೇಶಗಳು ಸಹಕಾರಿಯಾಗಿವೆ ಎಂದರು. 
    ವಿಧಾನ ಪರಿಷತ್ ಸದಸ್ಯ ಎಚ್.ಪಿ ಸುಧಾಮದಾಸ್, ಮಾಜಿ ಸಂಸದ ಚಂದ್ರಪ್ಪ, ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್, ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಕೃಷ್ಣಪ್ಪ, ಪ.ಜಾ ಮತ್ತು ಪಂ. ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಮುಖಂಡರಾದ ಬಿ.ಕೆ ಜಗನ್ನಾಥ್, ಎಸ್. ಕುಮಾರ್, ಬಿ.ಎಸ್ ಗಣೇಶ್, ಸಿ. ಜಯಪ್ಪ, ಕೆ.ಎ ರಾಜಕುಮಾರ್, ಈಶ್ವರಪ್ಪ, ಜಿಂಕ್‌ಲೈನ್ ಮಣಿ, ಕಾಣಿಕ್‌ರಾಜ್, ಪರಮೇಶಿ, ಎನ್ ಗೋವಿಂದ, ಎಸ್. ಉಮಾ, ಶಾಂತ, ರೇಖಾ, ಶ್ರೀಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಸಮಿತಿ ತಾಲೂಕು ಸಂಚಾಲಕ ಆರ್. ಸಂದೀಪ್ ಅಧ್ಯಕ್ಷತೆ ವಹಿಸಿದ್ದು, ಪುಷ್ಪರಾಜ್ ತಂಡದವರಿಂದ ಕ್ರಾಂತಿ ಗೀತೆ ನಡೆಯಿತು. ತಾಲೂಕು ಸಂಘಟನಾ ಸಂಚಾಲಕ ಕೆ. ಸುರೇಶ್ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಚಿನ್ನಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ ಕೆ. ರಂಗನಾಥ್ ನಿರೂಪಿಸಿದರು. 
    ಸಮಾವೇಶಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆಗೆ ಸಚಿವ ಸತೀಶ್ ಜಾರಕಿಹೊಳಿ ಹಾಗು ಇನ್ನಿತರರು ಮಾಲಾರ್ಪಣೆ ಮಾಡುವ ಮೂಲಕ ಸಮಿತಿವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಜಾಗೃತಿ ಮೆರವಣಿಗೆಗೆ ಚಾಲನೆ ನೀಡಲಾಯಿತು. 

Tuesday, January 28, 2025

ಡಿಎಸ್‌ಎಸ್ ೫೦ನೇ ವರ್ಷದ ನೆನಪು : ಜ.೨೯ರಂದು ಸಂವಿಧಾನ ಜಾಗೃತಿ ಸಮಾವೇಶ

ಇಂದು ನಗರಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ


    ಭದ್ರಾವತಿ:  ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ತಾಲೂಕು ಶಾಖೆ ವತಿಯಿಂದ ಜ.೨೮ರ ಬುಧವಾರ ವೀರಶೈವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಸಂವಿಧಾನ ಜಾಗೃತಿ ಸಮಾವೇಶ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು ಎಂದು ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ಹೇಳಿದರು. 
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ೫೦ ವರ್ಷ ತುಂಬಿದೆ.  ಪ್ರೊ.ಬಿ.ಕೃಷ್ಣಪ್ಪ ಅವರು ೧೯೭೪-೭೫ರಲ್ಲಿ ನಗರದಲ್ಲಿ ಈ ಸಂಘಟನೆಯನ್ನು ಸ್ಥಾಪನೆ ಮಾಡಿದರು. ಆ ಮೂಲಕ ಶೋಷಿತರು, ದಲಿತರ ಪರವಾಗಿ ಸಂವಿಧಾನದ ಅಡಿಯಲ್ಲಿಯೇ ಸಂಘಟನೆ ಕೆಲಸ ಮಾಡುತ್ತಾ ಬಂದಿದೆ. ಬೆತ್ತಲೆ ಸೇವೆ, ಬಗರ್‌ಹುಕುಂ ಸಾಗುವಳಿ, ಅಟ್ರಾಸಿಟಿ ಕಾಯ್ದೆ, ಭೂಸುಧಾರಣೆ ಕಾಯ್ದೆ ಮುಂತಾದ ಹಲವು ವಿಷಯಗಳನ್ನಿಟ್ಟುಕೊಂಡು ತನ್ನದೇ ಆದ ಹೋರಾಟಗಳನ್ನು ಮಾಡುತ್ತಾ ಸಂಘಟನೆ ಅತ್ಯಂತ ಪ್ರಬುದ್ಧವಾಗಿ ಬೆಳೆದುಬಂದಿದೆ ಎಂದರು. 
    ಇಲ್ಲಿಂದಲೇ ದಲಿತ ಚಳವಳಿ ಆರಂಭವಾಗಿದ್ದು, ಈಗ ೫೦ ವರ್ಷಗಳ ನಂತರ  ಜಾಗೃತಿ ಸಮಾವೇಶ ನಡೆಸುವ ಮೂಲಕ ಇಡೀ ರಾಜ್ಯದ ಗಮನವನ್ನು ಸೆಳೆಯುತ್ತಿದ್ದೇವೆ. ಸಮಾರಂಭವು ಬೆಳಗ್ಗೆ ೧೧.೩೦ಕ್ಕೆ ಆರಂಭವಾಗುತ್ತದೆ. ಅದಕ್ಕೂ ಮೊದಲು ನಗರದ ಅಂಬೇಡ್ಕರ್ ವೃತ್ತದಿಂದ ವೀರಶೈವ ಸಭಾಭವನ ದವರೆಗೆ ಮೆರವಣಿಗೆ ನಡೆಯಲಿದೆ. ಈ ಸಮಾವೇಶದ ಸಾನ್ನಿಧ್ಯವನ್ನು ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ವಹಿಸುವರು. 
    ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಕೃಷ್ಣಪ್ಪ, ಅಂಬೇಡ್ಕರ್ ಮತ್ತು ಕೃಷ್ಣಪ್ಪರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವರು ಎಂದರು. 
    ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಉಪ ಅರಣ್ಯ ಸಂರಕ್ಷಾಧಿಕಾರಿ ಆಶಿಶ್ ರೆಡ್ಡಿ ಸೇರಿದಂತೆ ಸಂಘಟನೆಯ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಭದ್ರಾವತಿ ನಗರದ ಪದಾಧಿಕಾರಿಗಳು ಭಾಗವಹಿಸುವರು ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಡಿಎಸ್‌ಎಸ್ ಪ್ರಮುಖರಾದ ಕಾಣಿಕ್‌ರಾಜ್, ಜಿಂಕ್‌ಲೈನ್ ಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.