Tuesday, April 22, 2025

ಜಗದ್ಗುರುಗಳಾದ ಪೋಪ್ ಫ್ರಾನ್ಸಿಸ್‌ರವರ ನಿಧನಕ್ಕೆ ಶಾಸಕರಿಂದ ಸಂತಾಪ

ಶಾಸಕ ಬಿ.ಕೆ ಸಂಗಮೇಶ್ವರ್ 
ಭದ್ರಾವತಿ: ರೋಮನ್ ಕ್ಯಾಥೋಲಿಕ್ ಧರ್ಮಸಭೆಯ ಜಗದ್ಗುರುಗಳಾದ ಪೋಪ್ ಫ್ರಾನ್ಸಿಸ್‌ರವರ ನಿಧನಕ್ಕೆ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ. 
ಜಗದ್ಗುರುಗಳು ಸೋಮವಾರ ಬೆಳಗ್ಗೆ ಈ ಲೋಕದ ಯಾತ್ರೆ ಮುಗಿಸಿ ದೇವರ ಪಾದಗಳಿಗೆ ಸೇರಿರುವ ವಿಷಯ ಕೇಳಿ ಮನಸ್ಸಿಗೆ ತುಂಬಾ ದುಃಖ ಮತ್ತು ನೋವು ಉಂಟು ಮಾಡಿದೆ.
ಜಗದ್ಗುರುಗಳ ಸಿನೋಡಿಯಲ್ ಅಂದರೆ ಎಲ್ಲರೂ ಜೊತೆಯಾಗಿ ನಡೆಯೋಣ ಮತ್ತು ಒಬ್ಬರನ್ನು ಒಬ್ಬರು ಗೌರವದಿಂದ ಆಲಿಸೋಣ ಎಂಬ ಕರೆ ನಿಜವಾಗಲೂ ವಿಶ್ವಕ್ಕೆ ಪ್ರೀತಿಯಿಂದ ಶಾಂತಿಯ ಪ್ರಯಾಸಕ್ಕೆ ಮುನ್ನುಡಿ ಬರೆದಂತಿತ್ತು. ಇವರ ಅಗಲಿಕೆಯಿಂದ ಇಡೀ ಮಾನವ ಕುಲಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಸಮಸ್ತ ಕ್ರೈಸ್ತ ಬಾಂಧವರಿಗೆ ಆಧಾರಣೆ ಮತ್ತು ಧೈರ್ಯ ಕೊಡಲಿ ಎಂದು ಪ್ರಾರ್ಥಿಸುತ್ತಾ ಸಂತಾಪ ಸೂಚಿಸುತ್ತೇನೆ ಎಂದು ಶಾಸಕರು ತಿಳಿಸಿದ್ದಾರೆ. 

ಅಕ್ರಮ ಕಸಾಯಿಖಾನೆ ಪಕ್ಕದಲ್ಲಿ ಬಂಧಿಸಿಟ್ಟಿದ್ದ ೧೭ ಗೋವುಗಳ ರಕ್ಷಣೆ

ಭದ್ರಾವತಿ ತಾಲೂಕಿನ ವೀರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡರಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದ ಸುಮಾರು ೧೭ ಗೋವುಗಳನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರ ನೆರವಿನೊಂದಿಗೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. 
    ಭದ್ರಾವತಿ: ತಾಲೂಕಿನ ವೀರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡರಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದ ಸುಮಾರು ೧೭ ಗೋವುಗಳನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರ ನೆರವಿನೊಂದಿಗೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. 
    ಗ್ರಾಮದಲ್ಲಿ ಅಕ್ರಮ ಕಸಾಯಿಖಾನೆಯ ಪಕ್ಕದಲ್ಲಿ ಯಾವುದೇ ಪರವಾನಗಿ ಇಲ್ಲದೆ ಸೋಮವಾರ ರಾತ್ರಿ ೧೨ ಕರುಗಳು ಮತ್ತು ೬ ಹೋರಿಗಳನ್ನ ಬಂಧಿಸಿಡಲಾಗಿದೆ ಎಂಬ ಮಾಹಿತಿಯೊಂದಿಗೆ ಕ್ರಮ ಕೈಗೊಳ್ಳುವಂತೆ ಗ್ರಾಮಾಂತರ ಪೊಲೀಸರಿಗೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿ ಗೋವುಗಳನ್ನು ರಕ್ಷಿಸಿದ್ದಾರೆ. 
    ರಕ್ಷಣೆ ಮಾಡಿರುವ ಗೋವುಗಳನ್ನು ಕೂಡ್ಲಿ ಶೃಂಗೇರಿ ಮಠದ ಗೋ ಶಾಲೆಗೆ ಬಿಡಲಾಗಿದೆ. ಯಶಸ್ವಿ ಕಾರ್ಯಾಚರಣೆ ಕೈಗೊಂಡಿರುವ ಪೊಲೀಸರಿಗೆ ಹಿಂದೂ ಜಾಗರಣ ವೇದಿಕೆ ಪ್ರಶಂಸಿಸಿದೆ. 
      ತಾಲೂಕಿನಲ್ಲಿ ಅಕ್ರಮವಾಗಿ ಕಸಾಯಿಖಾನೆಗಳು ಕಾರ್ಯನಿರ್ವಹಿತ್ತಿರುವ ಬಗ್ಗೆ ಅನುಮಾನವಿದ್ದು, ಈ ಹಿಂದೆ ದಾಳಿ ನಡೆಸಿದಾಗ ಇದೆ ಸ್ಥಳದಲ್ಲಿ ಗೋ ಮಾಂಸ ಪತ್ತೆಯಾಗಿತ್ತು. ಇದೀಗ ಗೋವುಗಳು ಪತ್ತೆಯಾಗಿವೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಸ್ಥಳಗಳನ್ನು ತಹಸೀಲ್ದಾರ್ ನೇತೃತ್ವದಲ್ಲಿ ವಶಕ್ಕೆ ಪಡೆದು ಕಟ್ಟೆಚ್ಚರ ವಹಿಸುವಂತೆ ಹಿಂದೂ ಜಾಗರಣ ವೇದಿಕೆ ಆಗ್ರಹಿದೆ. 

ಪ್ರಶಸ್ತಿಗಳು ಮತ್ತಷ್ಟು ಸಾಧನೆಗೆ ಪ್ರೇರಣೆ : ಕೋಗಲೂರು ತಿಪ್ಪೇಸ್ವಾಮಿ

ಭದ್ರಾವತಿ ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ಅಕ್ಷರ ಮಾತೆ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುಮಾರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ: ಪ್ರಶಸ್ತಿಗಳು ಬರಲಿ ಅಥವಾ ಬರದಿರಲಿ ನಮ್ಮ ಮನಸ್ಥಿತಿ ಬದಲಾಗಬಾರದು. ಪ್ರಶಸ್ತಿಗಳು ಬಂದಾಗ ನಿಜಕ್ಕೂ ಜವಾಬ್ಧಾರಿಗಳು ಹೆಚ್ಚಾಗಿ ಇನ್ನಷ್ಟು ಸಾಧನೆಗೆ ಪ್ರೇರಣೆ ನೀಡುತ್ತವೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು. 
    ಅವರು ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ಅಕ್ಷರ ಮಾತೆ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುಮಾರವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರಶಸ್ತಿಗಳು ಬಂದಾಗ ಹಿಗ್ಗದೆ, ಬರದಿದ್ದಾಗ ಕುಗ್ಗದೆ ಆತ್ಮಸಾಕ್ಷಿಯಾಗಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಮನ ಮೆಚ್ಚುವಂತೆ ಕೆಲಸ ಮಾಡಬೇಕು.  ಈ ನಿಟ್ಟಿನಲ್ಲಿ ಶಿಕ್ಷಕಿ ಸುಮಾರವರು ಕಳೆದ ಸುಮಾರು ೨೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಮಕ್ಕಳೊಂದಿಗೆ ಮಕ್ಕಳಾಗಿ ಸದಾ ಕಲಿಕೆಯಲ್ಲಿ ತೊಡಗಿಸಿ ಕೊಳ್ಳುತ್ತಿದ್ದು, ಅವರಿಗೆ ಪ್ರಶಸ್ತಿ ಬಂದಿದ್ದು ಶಾಲೆಗೆ ಮತ್ತೊಮ್ಮೆ ಕಿರೀಟ ತೊಡಿಸಿದಂತಾಗಿದೆ. ಶಾಲೆಯ ಎಲ್ಲಾ ಶಿಕ್ಷಕರು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು, ಶಾಲೆ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ.
ಮಕ್ಕಳ ಕಲಿಕೆ ಮತ್ತಷ್ಟು ಉತ್ತಮ ಪಡಿಸಲು ಶ್ರಮಿಸಬೇಕೆಂದು ಕರೆ ನೀಡಿದರು.     
    ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುಮಾರವರು, ಮಕ್ಕಳೇ ನನ್ನ ಆಸ್ತಿ. ಅವರು ಕಲಿತರೆ ಅದೇ ನನಗೆ ಹೆಮ್ಮೆ. ಶಾಲೆಗೆ ಹೆಸರು ತರುವ ನಿಟ್ಟಿನಲ್ಲಿ ಸದಾಕಾಲ ಶ್ರಮಿಸುತ್ತಿರುವ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ಗ್ರಾಮದ ಶಿಕ್ಷಣ ಆಸಕ್ತಿಯುಳ್ಳವರ ಜೊತೆಗೆ ಸೇರಿಕೊಂಡು ಶಾಲೆಯ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ನಿರಂತರವಾಗಿ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು. 
    ಅರಿವು ಕೇಂದ್ರದ ಮೇಲ್ವಿಚಾರಕಿ ಮಾಲಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್, ಸದಸ್ಯ ವರುಣ, ಶಿಕ್ಷಕರಾದ ವಾಣಿಶ್ರೀ, ಜ್ಯೋತಿ, ವೀಣಾ, ಶಂಕರ್, ಬೇಸಿಗೆ ಶಿಬಿರದ ಸಂಪನ್ಮೂಲ ವ್ಯಕ್ತಿ ಮಂಜುನಾಥ್, ಪೋಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Monday, April 21, 2025

ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ, ಹಿಂದೂಗಳ ಮೇಲೆ ಹಲ್ಲೆ, ಕೊಲೆ ಘಟನೆಗೆ ವಿಪ್ರ ಬಳಗ ಖಂಡನೆ

ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ ಭವಿಷ್ಯಕ್ಕೆ ದಾರಿ ಮಾಡಿಕೊಡಿ, ಹಿಂದೂಗಳಿಗೆ ರಕ್ಷಣೆ ನೀಡಿ

ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಹಾಗೂ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ವಿಪ್ರಸಂಘಟನೆಯ ಬಳಗದಿಂದ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ: ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಹಾಗೂ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ವಿಪ್ರಸಂಘಟನೆಯ ಬಳಗದಿಂದ ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.  
    ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತುಂಡರಿಸಿ ದೌರ್ಜನ್ಯ ಎಸಗಿರುವುದನ್ನು ಬಳಗ ಖಂಡಿಸುತ್ತದೆ. ಸಿಇಟಿ ಪರೀಕ್ಷೆ ನಿಬಂಧನೆಯಲ್ಲಿ ಜನಿವಾರ, ಶಿವದಾರ, ಕಾಶಿದಾರ, ತಾಳಿ ಮತ್ತು ಕಾಲುಂಗುರ ಸೇರಿದಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಬರುವಂತಹ ಯಾವುದನ್ನೂ ಸಹ ತೆಗೆಯಬೇಕೆಂದು ಎಲ್ಲೂ ನಮೂದಿಸಿರುವುದಿಲ್ಲ. ಆದರೆ ಶಿವಮೊಗ್ಗ ಮತ್ತು ಬೀದರ್ ಇನ್ನಿತರ ಕಡೆಗಳಲ್ಲಿ ಜನಿವಾರ, ಕಾಶಿದಾರರವನ್ನು ಬಲವಂತವಾಗಿ ಕತ್ತರಿಸಿರುತ್ತಾರೆ. ಇದು ಧಾರ್ಮಿಕ ಭಾವನೆಗಳಿಗೆ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವಾಗಿರುತ್ತದೆ ಎಂದು ಆರೋಪಿಸಲಾಯಿತು. 
    ವಿದ್ಯಾರ್ಥಿಗಳ ಭವಿಷ್ಯದಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿದೆ. ನಾವು ಸ್ವಾಭಿಮಾನದಿಂದ ಬದುಕುತ್ತಿದ್ದೇವೆ. ಇದಕ್ಕೆ ಅಡ್ಡಿಪಡಿಸುವಂತಹ ಕಾರ್ಯ ಸರ್ಕಾರದಿಂದ ನಡೆಸುತ್ತಿರುವಂತೆ ಕಾಣುತ್ತಿದೆ ಎಂಬ ಅನುಮಾನ ವ್ಯಕ್ತವಾಗಿರುತ್ತದೆ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡರೆ ಸಾಲದು ಅಮಾಯಕ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವುದರ ಜೊತೆಗೆ ಅವರ ಮುಂದಿನ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕೆಂದು ಆಗ್ರಹಿಸಲಾಯಿತು. 
    ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ಅಮಾನುಷವಾಗಿ ನಡೆಸುತ್ತಿರುವ ಕೊಲೆ ಹಾಗು ದೌರ್ಜನ್ಯ ಘಟನೆಗಳನ್ನು ಬಳಗ ಖಂಡಿಸುತ್ತದೆ. ಕೇಂದ್ರ ಸರ್ಕಾರ ತಕ್ಷಣ ಇದರ ಬಗ್ಗೆ ಗಮನ ಹರಿಸಿ ಹಿಂದೂಗಳಿಗೆ ರಕ್ಷಣೆ ನೀಡಬೇಕೆಂದು ಬಳಗ ಆಗ್ರಹಿಸಿದೆ. 
           ಶ್ರೀ ರಾಮೇಶ್ವರ ದೇವಸ್ಥಾನದ ಆಡಳಿತ ಮಂಡಳಿ,  ಶಂಕರ ಸೇವಾ ಸಮಿತಿ, ತಾಲೂಕು ಮಧ್ವ ಮಂಡಳಿ, ಶ್ರೀ ವೈಷ್ಣವ ಸಮಾಜ, ಕರಾವಳಿ ವಿಪ್ರ ಬಳಗ, ಬಬ್ಬೂರು ಸೇವಾ ಸಂಘ, ಹೊಯ್ಸಳ ಕರ್ನಾಟಕ ಸಂಘ ಲಲಿತಾ ಮಹಿಳಾ ಮಂಡಳಿ, ಹರಿದಾಸ ಮಹಿಳಾ ಮಂಡಳಿ ಮತ್ತು ಮಧ್ವ ಮಹಿಳಾ ಮಂಡಳಿಯ ಪದಾಧಿಕಾರಿಗಳು, ಪ್ರಮುಖರು, ವಿಪ್ರ ಬಾಂಧವರು ಉಪಸ್ಥಿತರಿದ್ದರು.  

Sunday, April 20, 2025

ಮೇ.೨೫ರಂದು ಉಚಿತ ಸಾಮೂಹಿಕ ವಿವಾಹ : ಸದುಪಯೋಗಕ್ಕೆ ಕರೆ


    ಭದ್ರಾವತಿ: ನಗರದ ವಿಶ್ವ ಹಿಂದೂ ಪರಿಷದ್, ವಿಶ್ವ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಈ ಬಾರಿ ಸಹ ೪೧ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. 
    ಮೇ.೨೫ರ ಭಾನುವಾರ ಮಧ್ಯಾಹ್ನ ೧೨ ರಿಂದ ೧ ಗಂಟೆವರೆಗೆ ಸಿದ್ಧಾರೂಢನಗರದ ಕಾಳಿದಾಸ ಬಡಾವಣೆಯಲ್ಲಿರುವ ಶ್ರೀ ಧರ್ಮಶ್ರೀ ಸಭಾಭವನದಲ್ಲಿ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಗಿದೆ. 
    ವಿಶ್ವ ಹಿಂದೂ ಪರಿಷದ್, ವಿಶ್ವ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಇದುವರೆಗೂ ಒಟ್ಟು ೭೭೬ ಜೊತೆ ಉಚಿತ ವಿವಾಹ ನಡೆಸಲಾಗಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ವರನಿಗೆ ಕಡ್ಡಾಯವಾಗಿ ೨೧ ವರ್ಷ ಮೇಲ್ಪಟ್ಟು, ವಧುವಿಗೆ ೧೮ ವರ್ಷ ಮೇಲ್ಪಟ್ಟು ವಯಸ್ಸಾಗಿರಬೇಕು. ಮೊದನೇ ಮದುವೆ ಮಾತ್ರ ಅವಕಾಶವಿದ್ದು, ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ವಿಧವಾ ವಿವಾಹಕ್ಕೆ ಅವಕಾಶವಿದೆ. ವಿವಾಹಕ್ಕೆ ಅಪೆಕ್ಷೆಯುಳ್ಳವರು ಮೇ.೧ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ವಿವಾಹ ಕೋರಿಕೆಯ ಮನವಿ ಪತ್ರ ಸಲ್ಲಿಸಬಹುದಾಗಿದೆ. 
    ಹೆಚ್ಚಿನ ಮಾಹಿತಿಗೆ ಹಾ. ರಾಮಪ್ಪ, ಮೊ: ೯೮೮೦೭೭೯೨೯೩ ಅಥವಾ ಡಿ.ಆರ್ ಶಿವಕುಮಾರ್, ಮೊ: ೯೯೬೪೨೩೭೦೭೮ ಸಂಖ್ಯೆಗೆ ಕರೆಮಾಡಬಹುದಾಗಿದೆ. ಅಥವಾ ಕೆ. ನಿರಂಜನ, ವ್ಯವಸ್ಥಾಪಕರು, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ, ಬಿ.ಎಚ್ ರಸ್ತೆ, ಭದ್ರಾವತಿ ಈ ವಿಳಾಸ ಸಂಪರ್ಕಿಸಬಹುದಾಗಿದೆ. 

ವಿಜೃಂಭಣೆಯಿಂದ ಜರುಗಿದ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ

ಭದ್ರಾವತಿ ನಗರದ ಹೊಸಬುಳ್ಳಾಪುರ, ಬೈಪಾಸ್ ರಸ್ತೆ ಸಮೀಪದಲ್ಲಿರುವ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ : ನಗರದ ಹೊಸಬುಳ್ಳಾಪುರ, ಬೈಪಾಸ್ ರಸ್ತೆ ಸಮೀಪದಲ್ಲಿರುವ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. 
    ಬೆಳಿಗ್ಗೆ ಗಂಗಾ ಪೂಜೆ, ವಿಘ್ನೇಶ್ವರ ಪೂಜೆ, ಮಹಾಸಂಕಲ್ಪ, ಅನುಜ್ಞ ವಾಚನ, ಪುಣ್ಯಾಃ ವಾಚನ, ಕಳಸ ಪೂಜೆ, ಶ್ರೀ ಮುನೇಶ್ವರ ಸ್ವಾಮಿಗೆ ಮೂಲ ಮಂತ್ರ ಹೋಮ ಮತ್ತು ಮಹಾ ಪೂರ್ಣಾಹುತಿ, ಮಹಾ ಅಭಿಷೇಕ, ಕುಂಭಾಭಿಷೇಕ, ಅಲಂಕಾರದೊಂದಿಗೆ ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ ಹಾಗು ತೀರ್ಥಪ್ರಸಾದ ವಿನಿಯೋಗ ನಡೆಯಿತು. 
    ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.  ದೇವಸ್ಥಾನ ಟ್ರಸ್ಟ್ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು, ಹಳೇ ಮತ್ತ ಹೊಸ ಬುಳ್ಳಾಪುರ, ಹುಡ್ಕೋಕಾಲೋನಿ, ಜನ್ನಾಪುರ, ಸಿದ್ದಾಪುರ, ಆಂಜನೇಯ ಅಗ್ರಹಾರ, ವಿದ್ಯಾಮಂದಿರ, ನ್ಯೂಟೌನ್ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು.

Saturday, April 19, 2025

ಗೃಹಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟ ಪ್ರಕರಣ : ಮೃತದೇಹದೊಂದಿಗೆ ಪ್ರತಿಭಟನೆ

    ಭದ್ರಾವತಿ: ತಾಲೂಕಿನ ಹುಣಸೆಕಟ್ಟೆ ಜಂಕ್ಷನ್(ಎಚ್.ಕೆ ಜಂಕ್ಷನ್)ನಲ್ಲಿ ಗೃಹಿಣಿಯೋರ್ವಳು ಮೃತಪಟ್ಟು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿರುವ ಘಟನೆ ಶನಿವಾರ ನಡೆದಿದೆ.
    ಅಶ್ವಿನಿ ಅಲಿಯಾಸ್ ತೇಜಸ್ವಿನಿ(೨೮) ಎಂಬ ಗೃಹಿಣಿಯ ಮೃತದೇಹ ಅವರ ಮನೆಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಅಶ್ವಿನಿ ತವರು ಮನೆಯವರು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ಪತಿ, ಮಾವ ಹಾಗು ಅತ್ತೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. 
    ಈ ನಡುವೆ ಹುಣಸೆಕಟ್ಟೆ ಜಂಕ್ಷನ್ ರಸ್ತೆಯಲ್ಲಿ ಅಶ್ವಿನಿ ಮೃತದೇಹವಿಟ್ಟು ಪ್ರತಿಭಟನೆ ನಡೆಸುವ ಮೂಲಕ ಪತಿ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ನೀಡಬೇಕು. ಅಲ್ಲದೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಲಾಗಿದೆ. 
 

ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್(ಎಚ್.ಕೆ ಜಂಕ್ಷನ್)ನಲ್ಲಿ ಗೃಹಿಣಿಯೋರ್ವಳು ಮೃತಪಟ್ಟು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿರುವ ಘಟನೆ ಶನಿವಾರ ನಡೆದಿದೆ.