ಭದ್ರಾವತಿ ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ಅಕ್ಷರ ಮಾತೆ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುಮಾರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ: ಪ್ರಶಸ್ತಿಗಳು ಬರಲಿ ಅಥವಾ ಬರದಿರಲಿ ನಮ್ಮ ಮನಸ್ಥಿತಿ ಬದಲಾಗಬಾರದು. ಪ್ರಶಸ್ತಿಗಳು ಬಂದಾಗ ನಿಜಕ್ಕೂ ಜವಾಬ್ಧಾರಿಗಳು ಹೆಚ್ಚಾಗಿ ಇನ್ನಷ್ಟು ಸಾಧನೆಗೆ ಪ್ರೇರಣೆ ನೀಡುತ್ತವೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
ಅವರು ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ಅಕ್ಷರ ಮಾತೆ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುಮಾರವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಶಸ್ತಿಗಳು ಬಂದಾಗ ಹಿಗ್ಗದೆ, ಬರದಿದ್ದಾಗ ಕುಗ್ಗದೆ ಆತ್ಮಸಾಕ್ಷಿಯಾಗಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಮನ ಮೆಚ್ಚುವಂತೆ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕಿ ಸುಮಾರವರು ಕಳೆದ ಸುಮಾರು ೨೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಮಕ್ಕಳೊಂದಿಗೆ ಮಕ್ಕಳಾಗಿ ಸದಾ ಕಲಿಕೆಯಲ್ಲಿ ತೊಡಗಿಸಿ ಕೊಳ್ಳುತ್ತಿದ್ದು, ಅವರಿಗೆ ಪ್ರಶಸ್ತಿ ಬಂದಿದ್ದು ಶಾಲೆಗೆ ಮತ್ತೊಮ್ಮೆ ಕಿರೀಟ ತೊಡಿಸಿದಂತಾಗಿದೆ. ಶಾಲೆಯ ಎಲ್ಲಾ ಶಿಕ್ಷಕರು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು, ಶಾಲೆ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ.
ಮಕ್ಕಳ ಕಲಿಕೆ ಮತ್ತಷ್ಟು ಉತ್ತಮ ಪಡಿಸಲು ಶ್ರಮಿಸಬೇಕೆಂದು ಕರೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುಮಾರವರು, ಮಕ್ಕಳೇ ನನ್ನ ಆಸ್ತಿ. ಅವರು ಕಲಿತರೆ ಅದೇ ನನಗೆ ಹೆಮ್ಮೆ. ಶಾಲೆಗೆ ಹೆಸರು ತರುವ ನಿಟ್ಟಿನಲ್ಲಿ ಸದಾಕಾಲ ಶ್ರಮಿಸುತ್ತಿರುವ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ಗ್ರಾಮದ ಶಿಕ್ಷಣ ಆಸಕ್ತಿಯುಳ್ಳವರ ಜೊತೆಗೆ ಸೇರಿಕೊಂಡು ಶಾಲೆಯ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ನಿರಂತರವಾಗಿ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಅರಿವು ಕೇಂದ್ರದ ಮೇಲ್ವಿಚಾರಕಿ ಮಾಲಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್, ಸದಸ್ಯ ವರುಣ, ಶಿಕ್ಷಕರಾದ ವಾಣಿಶ್ರೀ, ಜ್ಯೋತಿ, ವೀಣಾ, ಶಂಕರ್, ಬೇಸಿಗೆ ಶಿಬಿರದ ಸಂಪನ್ಮೂಲ ವ್ಯಕ್ತಿ ಮಂಜುನಾಥ್, ಪೋಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment