Friday, April 25, 2025

ಮಲೇರಿಯಾ ಕುರಿತು ಹೆಚ್ಚಿನ ತಿಳುವಳಿಕೆ ಹೊಂದಿ ಮುನ್ನಚ್ಚರಿಕೆವಹಿಸಿ : ಕಮಲೇಶ್ ಕುಮಾರ್



ಭದ್ರಾವತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ಹಾಗು ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯಾಚರಣೆ ಪಡೆ(ಆರ್‌ಎಎಫ್) ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ವಿಶ್ವ ಮಲೇರಿಯಾ ದಿನ ಕಾರ್ಯಕ್ರಮಕ್ಕೆ ಕಮಾಂಡೆಂಟ್ ಕಮಲೇಶ್ ಕುಮಾರ್ ಚಾಲನೆ ನೀಡಿದರು. 
    ಭದ್ರಾವತಿ: ಕರ್ತವ್ಯದ ನಡುವೆಯೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಮಲೇರಿಯಾ ಕುರಿತು ಹೆಚ್ಚಿನ ತಿಳುವಳಿಕೆ ಹೊಂದುವ ಮೂಲಕ ಮುನ್ನಚ್ಚರಿಕೆವಹಿಸುವಂತೆ ನಗರದ ಮಿಲ್ಟ್ರಿಕ್ಯಾಂಪ್ ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯಾಚರಣೆ ಪಡೆ(ಆರ್‌ಎಎಫ್) ಕಮಾಂಡೆಂಟ್ ಕಮಲೇಶ್ ಕುಮಾರ್ ಹೇಳಿದರು. 
    ಅವರು ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ಹಾಗು ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯಾಚರಣೆ ಪಡೆ(ಆರ್‌ಎಎಫ್) ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ವಿಶ್ವ ಮಲೇರಿಯಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 
    ಪ್ರತಿ ದಿನ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗಿರುವ ಅಧಿಕಾರಿಗಳು, ಸಿಬ್ಬಂದಿಗಳು ಮಲೇರಿಯಾ ಸೇರಿದಂತೆ ಇನ್ನಿತರ ರೋಗಗಳು ಬಾರದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮ ಹೆಚ್ಚಿನ ಸಹಕಾರಿಯಾಗಿದೆ ಎಂದರು. 


    ಪ್ರಾಸ್ತಾವಿಕವಾವಗಿ ಮಾತನಾಡಿದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ, ಮಲೇರಿಯಾ ದೇಶದ ಬಹುದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ.  ಅಧಿಕ ಜನರು ಮಲೇರಿಯಾ ಅಪಾಯದಲ್ಲಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ ೨೬ ಪ್ರಕರಣಗಳು ಪತ್ತೆಯಾಗಿದ್ದು, ಪ್ರಸ್ತುತ ೫ ಪ್ರಕರಣಗಳು ದಾಖಲಾಗಿವೆ ಎಂದರು. 
    ವಿಶ್ವದಾದ್ಯಂತ ಮಲೇರಿಯಾ ನಿರ್ಮೂಲನೆ ಮಾಡಬೇಕೆಂಬ ಉದ್ದೇಶದೊಂದಿಗೆ ಪ್ರತಿವರ್ಷ ವಿಶ್ವ ಮಲೇರಿಯಾ ದಿನ ಆಚರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಬಾರಿ `ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ ಮರು ಹೂಡಿಕೆ ಮಾಡಿ, ಮರು ಕಲ್ಪನೆ ಮಾಡಿ, ಮರು ಉತ್ತೇಜನ ನೀಡೋಣ' ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಮಲೇರಿಯಾ ಕುರಿತು ಪ್ರತಿಯೊಬ್ಬರು ತಿಳುವಳಿಕೆ ಹೊಂದುವ ಮೂಲಕ ಬಾರದಂತೆ ಎಚ್ಚರವಹಿಸಬೇಕೆಂದರು. 
    ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯಾಚರಣೆ ಪಡೆ(ಆರ್‌ಎಎಫ್) ಕಮಾಂಡೆಂಟ್-೨ ಸಚಿನ್ ಗಾಯಕ್‌ವಾಡ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಪ್ರಭಾರ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


    ಹಿರಿಯ ಆರೋಗ್ಯ ನಿರೀಕ್ಷಕರಾದ ಆನಂದ ಮೂರ್ತಿ, ನೀಲೇಶ್ ರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ಹಾಗು ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಮತ್ತು ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯಾಚರಣೆ ಪಡೆ(ಆರ್‌ಎಎಫ್) ಅಧಿಕಾರಿಗಳು ಹಾಗು ಸಿಬ್ಬಂದಿಗಳು ಪಾಲ್ಗೊಂಡಿದ್ದರು. 
    ಆರ್‌ಎಎಫ್ ಸಬ್ ಇನ್ಸ್‌ಪೆಕ್ಟರ್ ರಾಜೀವ್ ಕುಮಾರ್ ನಿರೂಪಿಸಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಬಾಯಿ ವಂದಿಸಿದರು. ಇದಕ್ಕೂ ಮೊದಲು ಎಂಪಿಎಂ ಕಾರ್ಖಾನೆ ಮುಖ್ಯದ್ವಾರದಿಂದ ಬೈಕ್ ರ್‍ಯಾಲಿ ಆರಂಭಿಸಿ ಎಂಪಿಎಂ-ವಿಐಎಸ್‌ಎಲ್ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತ, ಹೊಸಸೇತುವೆ ರಸ್ತೆ, ತಾಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ಹಾಲಪ್ಪ ವೃತ್ತ ಮೂಲಕ ಪುನಃ ಎಂಪಿಎಂ ಮುಖ್ಯದ್ವಾರಕ್ಕೆ ಬಂದು ತಲುಪಿತು. 

ಕಾಂಗ್ರೆಸ್ ಎಂದಿಗೂ ದಲಿತರ ಏಳಿಗೆ ಬಯಸಿಲ್ಲ : ಎನ್. ಮಹೇಶ್

ಭದ್ರಾವತಿ ತಾಲೂಕು ಬಿಜೆಪಿ ಮಂಡಲ ಕಛೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ `ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರ! ಬಾಬಾ ಸಾಹೇಬರು ಹೇಗೇಕೆ ಹೇಳಿದರು?' ಎಂದು ವಿಚಾರ ಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್. ಮಹೇಶ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ : ದೇಶದಲ್ಲಿ ಇಂದಿಗೂ ಪರಿಶಿಷ್ಟ ಜಾತಿ/ಪಂಗಡದವರ ಬದುಕು ಸುಧಾರಣೆಯಾಗಿಲ್ಲ. ದೀರ್ಘಾವಧಿ ಈ ದೇಶದ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ನಿಜಕ್ಕೂ ಈ ಸಮುದಾಯಗಳ ಪಾಲಿಗೆ ಸುಡುವ ಮನೆಯಾಗಿದೆ ಎಂದು ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್. ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು. 
    ಅವರು ಶುಕ್ರವಾರ ತಾಲೂಕು ಬಿಜೆಪಿ ಮಂಡಲ ಕಛೇರಿಯಲ್ಲಿ ಆಯೋಜಿಸಲಾಗಿದ್ದ `ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರ! ಬಾಬಾ ಸಾಹೇಬರು ಹೇಗೇಕೆ ಹೇಳಿದರು?' ಎಂದು ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು. 
    ಕಾಂಗ್ರೆಸ್ ಪಕ್ಷ ಎಂದಿಗೂ ದಲಿತರ ವಿರೋಧಿಯಾಗಿದ್ದು, ದಲಿತರ ಏಳಿಗೆಯನ್ನು ಬಯಸಿಲ್ಲ. ಅಂದು ಅಂಬೇಡ್ಕರ್‌ರವರ ರಾಜಕೀಯ ಏಳಿಗೆಯನ್ನು ಸಹಿಸದೆ ಅವರನ್ನು ಕುತಂತ್ರದಿಂದ ಸೋಲಿಸಲಾಯಿತು. ದೇಶದಲ್ಲಿ ಸಂವಿಧಾನ ಬದ್ಧ ಹಕ್ಕು ಹಾಗು ಕಾನೂನು ಜಾರಿಗೆ ತರಲಾಗಿದ್ದರೂ ಸಹ ಇಂದಿಗೂ ದಲಿತರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗು ರಾಜಕೀಯವಾಗಿ ಬೆಳವಣಿಗೆ ಕಂಡಿಲ್ಲ. ಲೋಕಸಭೆ ಹಾಗು ರಾಜ್ಯಸಭೆಯಲ್ಲಿ ಪರಿಶಿಷ್ಟ ಜಾತಿ/ಪಂಗಡದವರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದಾಗ ದಲಿತರನ್ನು ಅವಮಾನಗೊಳಿಸಲಾಯಿತು. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ದಲಿತರು ಕಾಂಗ್ರೆಸ್ ಪಕ್ಷದ ಮೇಲೆ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಮತಗಳನ್ನು ಹಾಕುವ ಮೂಲಕ ಅಧಿಕಾರಕ್ಕೆ ತರುತ್ತಿದ್ದಾರೆ. ಇದೊಂದು ವಿಪರ್ಯಾಸದ ಸಂಗತಿಯಾಗಿದೆ ಎಂದರು. 
    ಕಾಂಗ್ರೆಸ್ ಪಕ್ಷ ದಲಿತರಿಗೆ ನೀಡಿರುವ ಕೊಡುಗೆಯಾದರೂ ಏನು ಎಂಬುದು ಯಾರಿಗೂ ತಿಳಿದಿಲ್ಲ. ಆದರೂ ಆ ಪಕ್ಷದ ಮೇಲಿನ ಒಲವೂ ಕಡಿಮೆಯಾಗಿಲ್ಲ. ಕಾಂಗ್ರೆಸ್ ಪಕ್ಷದ ಕುತಂತ್ರ ಅರಿತುಕೊಂಡ ಅದೆಷ್ಟೋ ನಾಯಕರು ಆ ಪಕ್ಷದಿಂದ ಹೊರಬಂದು ಅದರ ವಿರುದ್ಧ ಹೋರಾಟ ನಡೆಸಿದರು. ಅಂದು ಬಾಬಾ ಸಾಹೇಬ್ ಅಂಬೇಡ್ಕರ್‌ರವರು `ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರ! ಎಂದು ತಿಳಿಸಿದ್ದರು. ಇದು ದಲಿತರ ಪಾಲಿಗೆ ನಿಜವಾಗಿದೆ ಎಂದರು.  
    ಈ ದೇಶದಲ್ಲಿ ಅಂಬೇಡ್ಕರ್‌ರವರ ಚಿಂತನೆಗಳಿಗೆ, ಸಂವಿಧಾನದ ಆಶಯಗಳಿಗೆ ಗೌರವ ನೀಡಿದವರು, ಅಂಬೇಡ್ಕರ್‌ರವರನ್ನು ವಿಶ್ವಜ್ಞಾನಿಯನ್ನಾಗಿಸಿ ದಲಿತರ ಏಳಿಗೆಗೆ ಶ್ರಮಿಸುತ್ತಿರುವವರು ಯಾರು ಎಂಬುದನ್ನು ಇಂದು ದಲಿತರು ಯೋಚಿಸಿ, ತುಲನೆ ಮಾಡಿ ನೋಡಬೇಕಾಗಿದೆ. ದಲಿತರು ರಾಜಕೀಯವಾಗಿ ಯಾರೊಂದಿಗೆ ಇರಬೇಕೆಂಬುದನ್ನು ಅರಿತುಕೊಳ್ಳಬೇಕಾಗಿದೆ ಎಂದರು. 
ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಪ್ರಮುಖರಾದ ಡಾ. ನವೀನ್ ಮೌರ್ಯ, ಕೂಡ್ಲಿಗೆರೆ ಹಾಲೇಶ್, ಕೆ.ಎಚ್ ತೀರ್ಥಯ್ಯ, ಮಂಗೋಟೆ ರುದ್ರೇಶ್, ರಾಜಶೇಖರ್ ಉಪ್ಪಾರ, ಚನ್ನೇಶ್, ಅಣ್ಣಪ್ಪ, ಧನುಷ್ ಬೋಸ್ಲೆ, ಸಂತೋಷ್, ನಾಗಮಣಿ, ಮಂಜುಳ, ಗೌರಮ್ಮ, ಶಕುಂತಲ, ಆಶಾ, ಸರಸ್ವತಿ, ಲಕ್ಷ್ಮೀ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಅನ್ನಪೂರ್ಣ ಸ್ವಾಗತಿಸಿ, ಹನುಮಂತನಾಯ್ಕ ಕಾರ್ಯಕ್ರಮ ನಿರೂಪಿಸಿ, ರವಿಕುಮಾರ್ ವಂದಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. 

Thursday, April 24, 2025

ಉಗ್ರ ಕೃತ್ಯ ನಡೆಯಲು ಕಾರಣವೇನು ಎಂಬುದನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಲಿ :

ಪ್ರವಾಸಿಗರ ಮೇಲಿನ ಹತ್ಯೆಗೆ ಮುಸ್ಲಿಂ ಸಮುದಾಯದವರಿಂದ ದೇಶಾದ್ಯಂತ ಖಂಡನೆ 

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮಿನ್ ಮುಷಿರಾನೆ ಸಮಿತಿ ಹಿರಿಯ ಸದಸ್ಯ ಸಿ.ಎಂ.ಖಾದರ್ ಮಾತನಾಡಿದರು. 
    ಭದ್ರಾವತಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಲು ಕಾರಣವೇನು ಎಂಬುದನ್ನು ಹಾಗು ಕೃತ್ಯದ ಸಂಪೂರ್ಣ ಹಿನ್ನಲೆಯನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕೆಂದು ನಗರದ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮಿನ್ ಮುಷಿರಾನೆ ಸಮಿತಿ ಹಿರಿಯ ಸದಸ್ಯ ಸಿ.ಎಂ.ಖಾದರ್ ಒತ್ತಾಯಿಸಿದರು.
  ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮಾಯಕ ೨೮ ಪ್ರವಾಸಿಗರ ಹತ್ಯೆಯನ್ನು ಖಂಡಿಸಿದರು. ಇದು ಮಾನವೀಯ ಕೆಲಸವಲ್ಲ. ಇದನ್ನು ಯಾರೂ ಸಹಿಸುವುದಿಲ್ಲ. ಇದಕ್ಕೆ ಕೇವಲ ಕರ್ನಾಟಕ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಸಹಾನುಭೂತಿ ವ್ಯಕ್ತಪಡಿಸಲಾಗುತ್ತಿದೆ ಎಂದರು. 
    ಈ ದುರ್ಘಟನೆಗೆ ಕೇಂದ್ರ ಸರ್ಕಾರ ಸರಿಯಾದ ಉತ್ತರ ನೀಡಬೇಕು. ಕಾಶ್ಮೀರದಲ್ಲಿ ಇತ್ತೀಚೆಗೆ ಸುಮಾರು ೫೦-೬೦ ಇಂತಹ ಘಟನೆಗಳು ನಡೆದಿವೆ. ಇದಕ್ಕೆ ಸಂಬಂಧಿಸಿದ ಸಚಿವರುಗಳು ಉತ್ತರ ನೀಡಬೇಕು. ಭಯೋತ್ಪಾದಕರು ಎಲ್ಲೇ ಇದ್ದರೂ, ಹೇಗೆ ಇದ್ದರೂ ಅವರನ್ನು ಹುಡುಕಿ ಸಾರ್ವಜನಿಕವಾಗಿ ನೇಣು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.  . ಪ್ರವಾಸಿ ತಾಣದಲ್ಲಿದ್ದ ಎರಡು ಚೆಕ್ ಪೋಸ್ಟ್‌ಗಳನ್ನು ತೆರವುಗೊಳಿಸಲು ಕಾರಣವೇನು ಹಾಗು ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಸ್ಥಳದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸದಿರಲು ಕಾರಣವೇನು ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕಾಗಿದೆ. ಇವೆಲ್ಲವನ್ನು ಗಮನಿಸಿದರೆ ಈ ದುರ್ಘಟನೆಯಲ್ಲಿ ಏನೋ ಒಳಸಂಚು ಇದೆ ಎಂಬ ಗುಮಾನಿ ಬರುತ್ತದೆ. ಸಿಬಿಐ ಸಹ ಇದನ್ನೇ ಹೇಳಿದೆ. ಈ ಹಿನ್ನಲೆಯಲ್ಲಿ ಈ ಘಟನೆ ಸಂಬಂಧ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.
    ಸಮಸ್ತ ಮುಸ್ಲಿಂ ಸಮಾಜ ಈ ದುರ್ಘಟನೆಯನ್ನು ಖಂಡಿಸಿ ದೇಶದ ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಕಾಶ್ಮೀರ ಸೇರಿದಂತೆ ವಿವಿಧೆಡೆ ಪ್ರತಿಭಟನೆ ಮಾಡಿ, ಬಂದ್ ಮಾಡಿ ಭಯೋತ್ಪಾದಕತೆಯ ವಿರುದ್ದ ಹೋರಾಟ ಮಾಡಿ ಉಗ್ರವಾದ ಬುಡ ಸಮೇತ ಕಿತ್ತು ಹಾಕಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ ಎಂದರು. 
    ಈ ನಡುವೆ ರಾಜ್ಯದಲ್ಲಿ ಸಿ.ಟಿ.ರವಿ ಹಾಗು ಪ್ರತಾಪಸಿಂಹರವರು ಎಂದಿನಂತೆ ಜಾತಿ, ಧರ್ಮದ ವಿರುಧ್ಧ ಕಿಡಿ ಕಾರುತ್ತಿದ್ದಾರೆ. ಮಾಧ್ಯಮಗಳಲ್ಲಿ ಅವರ ಹೇಳಿಕೆಗಳೆ ಪ್ರಸಾರ ಆಗುತ್ತಿವೆ. ಮುಲ್ಲಾ, ಮೌಲ್ವಿಗಳನ್ನು ತೇಜೋವಧೆ ಮಾಡುತ್ತಿದ್ದಾರೆ. ಇದೆ ಇವರ ಕೆಲಸವಾಗಿದೆ. ಇದನ್ನು ನೋಡಿಕೊಂಡು ಸಮುದಾಯದವರು ಸುಮ್ಮನಿರಲು ಸಾಧ್ಯವಿಲ್ಲ. ಇದಕ್ಕೆ ತಕ್ಕ ಉತ್ತರವನ್ನು ನೀಡಲೇಬೇಕು ಎಂದರು. 
    ಜಿಹಾದಿ ಎಂದರೆ ತಂದೆ-ತಾಯಿಯವರ ಮಾತನ್ನು ಕೇಳದವ. ಇಂತಹವರನ್ನು ಸಮುದಾಯದಿಂದ ಬಹಿಷ್ಕಾರ ಹಾಕಲಾಗಿದೆ. ಇಂಹವರ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕು. ಇವರು ಎಂದಿಗೂ ಮುಸ್ಲಿಂ ಆಗಿರಲು ಸಾಧ್ಯವಿಲ್ಲ. ಕುರಾನ್‌ನಲ್ಲಿ ಯಾವುದೇ ಪ್ರಾಣಿಗೆ ಹಿಂಸೆ ಮಾಡಬಾರದು, ನೋವು ಕೊಡಬಾರದು, ಹತ್ಯೆ ಮಾಡಬಾರದು ಎಂದು ಹೇಳಿದೆ. ಅದನ್ನು ನಾವು ಪಾಲಿಸುತ್ತಿದ್ದೇವೆ ಎಂದರು.
  ಪುಲ್ವಾಮ ದಾಳಿಯ ನಂತರ ಇಂತಹ ದಾಳಿ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ ಪುನಃ ಇಂತಹ ಘಟನೆ ಮರುಕಳುಹಿಸಿರುವುದು ಭದ್ರತಾ ವೈಫಲ್ಯವಲ್ಲದೆ ಮತ್ತೇನು ಅಲ್ಲ. ಈ ದುರ್ಘಟನೆ ಮಾನವೀಯತೆಯ ಮೇಲೆ ನಡೆದ ದಾಳಿಯಾಗಿದೆ. ಮೃತಪಟ್ಟವರಲ್ಲಿ ಸೈಯದ್ ಹುಸೇನ್ ಕುದುರೆ ಸವಾರಿ ಮಾಡಿಸುವ ಅದರಿಂದಲೇ ಜೀವಿಸುವ ಮುಸ್ಲಿಂ ವ್ಯಕ್ತಿ ಸೇರಿರುವುದು ನೋವಿನ ಘಟನೆಯಾಗಿದೆ. ಈ ಘಟನೆಯಲ್ಲಿ ಮೃತರ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು. ಹತ್ಯೆಗೊಳಗಾದ ಎಲ್ಲಾ ಕುಟುಂಬದವರಿಗೆ ನಗರದ ವಿವಿಧ ೬೪ ಮಸೀದಿಗಳಲ್ಲಿ ಸಂತಾಪ ವ್ಯಕ್ತ್ತಪಡಿಸಿ ಶ್ರದ್ಧಾಂಜಲಿ ಸಲ್ಲಿಸಿ ಮೌನ ಆಚರಿಸಲಾಗುತ್ತಿದೆ ಎಂದರು.
    ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರಾದ ಬಾಬಾಜಾನ್, ಅಮೀರ್‌ಜಾನ್, ನ್ಯಾಯವಾದಿ ಮುರ್ತುಜಾಲಿ, ದಿಲ್ದಾರ್, ಅಬ್ದುಲ್ ಖಾದರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮಜ್ಜಿ ಕಟ್ಟೆ ಕೆರೆ ಪುನಶ್ಚೇತನಕ್ಕೆ ಬಿಳಿಕಿ ಶ್ರೀ ಸಂತಸ : ಕೆರೆ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭದ್ರಾವತಿ ತಾಲೂಕಿನ ಮಜ್ಜಿಗೇನಹಳ್ಳಿ ಗ್ರಾಮದಲ್ಲಿ `ನಮ್ಮೂರು ನಮ್ಮ ಕೆರೆ' ಯೋಜನೆಯಡಿ ಪುನಶ್ಚೇತನಗೊಳಿಸಿದ ಮಜ್ಜಿ ಕಟ್ಟೆ ಕೆರೆ ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು.  
    ಭದ್ರಾವತಿ: ಕಳೆದ ಸುಮಾರು ಎರಡು ತಿಂಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಮಜ್ಜಿಗೇನಹಳ್ಳಿ ಗ್ರಾಮದಲ್ಲಿ `ನಮ್ಮೂರು ನಮ್ಮ ಕೆರೆ' ಯೋಜನೆಯಡಿ ಮಜ್ಜಿ ಕಟ್ಟೆ ಕೆರೆ ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಇದೀಗ ಕೆರೆ ಪುನಶ್ಚೇತನಗೊಂಡು ಗ್ರಾಮಸ್ಥರಿಗೆ ಹಸ್ತಾಂತರಗೊಂಡಿದೆ. ಯೋಜನೆಗೆ ಚಾಲನೆ ನೀಡಿದ್ದ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಸಂತಸ ವ್ಯಕ್ತಪಡಿಸಿದ್ದಾರೆ. 
    ಶ್ರೀಗಳು ಕೆರೆ ಹಸ್ತಾಂತರ ಮತ್ತು ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವಹಿಸಿ ಕೆರೆ ಪುನಶ್ವೇತನಗೊಂಡಿರುವ ಸಂಭ್ರಮ ಹಂಚಿಕೊಳ್ಳುವ ಜೊತೆಗೆ ಈ ನಿಟ್ಟಿನಲ್ಲಿ ಕೈಗೊಂಡ ಕಾರ್ಯಗಳನ್ನು ಸ್ಮರಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಳ್ಳುತ್ತಿರುವ ಸೇವಾ ಯೋಜನೆಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ  ಮೋಹನ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೈಗೊಳ್ಳುತ್ತಿರುವ ಸಮಾಜಮುಖಿ ಕಾರ್ಯಗಳು ಅದರಲ್ಲೂ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗುತ್ತಿವೆ. ಮಹಿಳೆ ಸಬಲೀಕರಣಗೊಂಡಲ್ಲಿ ಇಡೀ ಕುಟುಂಬ ಅಭಿವೃದ್ಧಿ ಹೊಂದುತ್ತದೆ ಎಂಬ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪರಿಕಲ್ಪನೆ ನಿಜಕ್ಕೂ ಅದ್ಭುತವಾಗಿದೆ. ಈ ಹಿನ್ನಲೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.  
  ಯೋಜನೆಯ ಜಿಲ್ಲಾ ನಿರ್ದೇಶಕ ಮುರಳಿಧರ ಶೆಟ್ಟಿ ಮಾತನಾಡಿ, ಕೆರೆ ಪುನಶ್ಚೇತನ ಕಾರ್ಯದಲ್ಲಿ ಗ್ರಾಮಸ್ಥರು ಹಾಗು ಕೆರೆ ಅಭಿವೃದ್ಧಿ ಸಮಿತಿ ಸಹಕಾರ ಸ್ಮರಿಸಿದರು. ತಾಲೂಕು ಯೋಜನಾಧಿಕಾರಿ ಪ್ರಕಾಶ್.ವೈ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಕೆರೆಯ ಸಂಪೂರ್ಣ ರೂಪರೇಷೆಯ ಬಗ್ಗೆ ಕಾಮಗಾರಿ ನಡೆದು ಬಂದ ಹಾದಿಯ ಬಗ್ಗೆ ರಚನೆಗೊಂಡ ಉತ್ತಮ ಕೆರೆಯ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. 
  ತಹಸೀಲ್ದಾರ್ ಪರುಸಪ್ಪ ಕುರುಬರ, ಕೆರೆ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಬಿ.ಎಚ್. ವಸಂತ ಹಾಗು ಅಧ್ಯಕ್ಷ ದೇವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು.  ಕಾರ್ಯಕ್ರಮದಲ್ಲಿ ಬಿಳಿಕಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗಮ್ಮ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಖರ್ ನಾಯಕ್, ಮಜ್ಜಿಗೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಹೇಮಂತ್, ಕೈಗಾರಿಕಾ ಪ್ರದೇಶದ ಕಂಪನಿಗಳ ಮಾಲೀಕರುಗಳು., ಸೇವಾ ಪ್ರತಿನಿಧಿಗಳು. ಒಕ್ಕೂಟ ಪದಾಧಿಕಾರಿಗಳು, ಸದಸ್ಯರು. ಗ್ರಾಮಸ್ಥರಾದ ಓಂಕಾರಪ್ಪ, ಕೃಷ್ಣ ಮೂರ್ತಿ. ಆನಂದ ನಾಯ್ಕ್., ಮುರುಗೇಶ್, ಗಿರಿಯಪ್ಪ. ಗವಿಯಪ್ಪ. ಮೇಲ್ವಿಚಾರಕರಾದ ನಾಗಪ್ಪ ನಿರೂಪಿಸಿ, ಕೃಷಿ ಅಧಿಕಾರಿ ಧನಂಜಯ ಮೂರ್ತಿ ವಂದಿಸಿದರು. 

ಪಹಲ್ಗಾಮ್‌ನಲ್ಲಿ ಉಗ್ರರಿಂದ ಹತ್ಯೆಯಾದ ಪ್ರವಾಸಿಗರಿಗೆ ಸಂತಾಪ : ಉಗ್ರರನ್ನು ಸೆರೆ ಹಿಡಿದು ಕಠಿಣ ಶಿಕ್ಷೆ ವಿಧಿಸಿ

ಬ್ಲಾಕ್ ಕಾಂಗ್ರೆಸ್‌ನಿಂದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಪ್ರತಿಭಟನೆ : ತಹಸೀಲ್ದಾರ್ ಮೂಲಕ ಮನವಿ  

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳು ಅಮಾನುಷ್ಯವಾಗಿ ದೇಶದ ಒಟ್ಟು ೨೮ ಪ್ರವಾಸಿಗರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಗುರುವಾರ ಭದ್ರಾವತಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮಾಂತರ ಘಟಕದ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ತಹಸೀಲ್ದಾರ್ ಪರುಸಪ್ಪ ಕುರುಬರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳು ಅಮಾನುಷ್ಯವಾಗಿ ದೇಶದ ಒಟ್ಟು ೨೮ ಪ್ರವಾಸಿಗರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಗುರುವಾರ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮಾಂತರ ಘಟಕದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 
    ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಹಾಗು ಕಾರ್ಯಕರ್ತರೊಂದಿಗೆ ರಂಗಪ್ಪವೃತ್ತದಿಂದ ಪಾದಯಾತ್ರೆ ಮೂಲಕ ತಾಲೂಕು ಕಛೇರಿವರೆಗೂ ಆಗಮಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
    ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ಇದೊಂದು ಹೇಯ ಕೃತ್ಯವಾಗಿದೆ. ಇಡೀ ದೇಶದ ಜನರು ಈ ಕೃತ್ಯವನ್ನು ಖಂಡಿಸುತ್ತಾರೆ. ಹತ್ಯೆ ನಡೆಸಿರುವ ಉಗ್ರರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದರು. 
    ಇಂತಹ ದುರ್ಘಟನೆಗಳನ್ನು ಬಿಜೆಪಿ ಪಕ್ಷ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಕೆಲವರು ಮುಸಲ್ಮಾನರ ಒಳಸಂಚಿನಿಂದ ಈ ಕೃತ್ಯ ನಡೆದಿದೆ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ. ಈ ದೇಶದಲ್ಲಿ ಮುಸಲ್ಮಾನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಈ ದುರ್ಘಟನೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದಿಂದ ನಡೆದಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣವಾಗಿದೆ ಎಂದು ಆರೋಪಿಸಿದರು. 
    ಉಗ್ರರಿಗೆ ಯಾವುದೇ ಜಾತಿ, ಧರ್ಮವಿಲ್ಲ. ಉಗ್ರ ಕೃತ್ಯಗಳನ್ನು ನಡೆಸುವುದೇ ಅವರ ಧ್ಯೇಯವಾಗಿರುತ್ತದೆ. ಇಂತಹ ಉಗ್ರರು ಯಾರೇ ಆಗಿರಲಿ, ಯಾವುದೇ ದೇಶಕ್ಕೆ ಸೇರಿದವರಾಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೇಶದ ೨೮ ಮಂದಿ ಪ್ರವಾಸಿಗರು ಹತ್ಯೆಯಾದ ರೀತಿಯಲ್ಲೇ ಉಗ್ರರನ್ನು ಸಹ ನಡು ರಸ್ತೆಯಲ್ಲಿ ಹತ್ಯೆ ಮಾಡಬೇಕೆಂದು ಆಗ್ರಹಿಸಿದರು.  
    ಪ್ರಮುಖರಾದ ಬ್ಲಾಕ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ್, ತಾಲೂಕು ಅಧ್ಯಕ್ಷೆ ಸುಕನ್ಯ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಬಿ. ಗಂಗಾಧರ್, ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಎಂ. ರಮೇಶ್‌ಶೆಟ್ಟಿ ಶಂಕರಘಟ್ಟ, ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಮುಸ್ವೀರ್ ಬಾಷಾ,  ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸದಸ್ಯರಾದ ಬಿ.ಕೆ ಮೋಹನ್, ವಿ. ಕದಿರೇಶ್, ಬಿ.ಟಿ ನಾಗರಾಜ್, ಕಾಂತರಾಜ್, ಲತಾ ಚಂದ್ರಶೇಖರ್, ಅನುಸುಧಾ ಮೋಹನ್ ಪಳನಿ, ಐ.ವಿ ಸಂತೋಷ್ ಕುಮಾರ್,  ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಸೂಡಾ ಸದಸ್ಯ ಎಚ್ ರವಿಕುಮಾರ್, ಮೆಸ್ಕಾಂ ಗ್ರಾಹಕರ ಸಲಹಾ ಸಮಿತಿ ಅಧ್ಯಕ್ಷ ಬಸವಂತಪ್ಪ, ನಾಮನಿರ್ದೇಶಿತ ಸದಸ್ಯೆ ವಿಜಯಲಕ್ಷ್ಮೀ, ಪ್ರಮುಖರಾದ ಸಿ.ಎಂ ಖಾದರ್, ಎಂ. ಶಿವಕುಮಾರ್, ದಿಲ್‌ದಾರ್, ಅಮೀರ್ ಜಾನ್, ವೈ. ರೇಣುಕಮ್ಮ, ಎಂ.ಎಸ್ ಸುಧಾಮಣಿ, ಸಿ. ಜಯಪ್ಪ, ಜುಂಜ್ಯಾನಾಯ್ಕ, ಶೋಭಾ ರವಿಕುಮಾರ್, ಅಭಿಲಾಷ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.   

Wednesday, April 23, 2025

ಪಹಲ್ಗಾಮ್‌ನಲ್ಲಿ ಹಿಂದೂ ಪ್ರವಾಸಿಗರ ಹತ್ಯೆಗೆ ಖಂಡನೆ : ವಕೀಲರಿಂದ ಮಾನವ ಸರಪಳಿ ನಿರ್ಮಿಸಿ ಆಕ್ರೋಶ

ಭದ್ರಾವತಿಯಲ್ಲಿ ಕಾಶ್ಮೀರದಲ್ಲಿ ನಡೆದ ಉಗ್ರರ ಅಟ್ಟಹಾಸ ಖಂಡಿಸಿ ವಕೀಲರ ಸಂಘದಿಂದ ಮಾಧವಾಚಾರ್ ವೃತ್ತದಲ್ಲಿ ಮಾನವ ಸರಪಳಿ ಸಹಿತ ರಸ್ತೆ ತಡೆ ಮಾಡಿ ಘಟನೆಯನ್ನು ಖಂಡಿಸಲಾಯಿತು.  
    ಭದ್ರಾವತಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳು ಹಿಂದೂ ಪ್ರವಾಸಿಗರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಬುಧವಾರ ತಾಲೂಕು ವಕೀಲರ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆಯೊಂದಿಗೆ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. 
    ಇದಕ್ಕೂ ಮೊದಲು ಸಂಘದ ಕಛೇರಿಯಲ್ಲಿ ಅಧ್ಯಕ್ಷ ಉಮೇಶ್ ನೇತೃತ್ವದಲ್ಲಿ ಸಂತಾಪ ಸೂಚಕ ಸಭೆ ನಡೆಸಿ ಹತ್ಯೆಯಾದ ಹಿಂದೂ ಪ್ರವಾಸಿಗರಿಗೆ ಸಂತಾಪ ಸೂಚಿಸುವ ಮೂಲಕ ಮೌನಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ, ಹಿರಿಯ ವಕೀಲರಾದ ನಾರಾಯಣರಾವ್, ಮಂಜಪ್ಪ, ಹನುಮಂತರಾವ್, ಮಹಮದ್ ಇಲಿಯಾಸ್, ಉದಯಕುಮಾರ್, ವಿ. ವೆಂಕಟೇಶ್, ತಿರುಮಲೇಶ್, ಕೆ.ಎನ್ ಶ್ರೀಹರ್ಷ, ಕೆ.ಎಸ್ ಸುದೀಂದ್ರ ಸೇರಿದಂತೆ ಇನ್ನಿತರರು, ಉಗ್ರಗಾಮಿಗಳು ಪ್ರವಾಸಕ್ಕೆ ತೆರಳಿದ್ದ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಹತ್ಯೆ ನಡೆಸಿರುವುದು ನಿಜಕ್ಕೂ ಹೇಯಕೃತ್ಯ. ಈ ಘಟನೆಯಲ್ಲಿ ಶಿವಮೊಗ್ಗ ನಿವಾಸಿ, ಉದ್ಯಮಿ ಮಂಜುನಾಥ್ ಸಹ ಹತ್ಯೆಯಾಗಿರುವುದು ದುಃಖಕರ ಸಂಗತಿಯಾಗಿದೆ. ಅವರ ಕುಟುಂಬಕ್ಕೆ ವಕೀಲರ ಸಂಘ ಸಾಂತ್ವಾನ ಹೇಳುತ್ತದೆ. ಈ ಘಟನೆಗೆ ಕಾರಣರಾದ ಉಗ್ರರನ್ನು ಸರ್ಕಾರ ತಕ್ಷಣ ಮಟ್ಟ ಹಾಕದೆ ಹೋದರೆ ಅಲ್ಲಿ ನಡೆದ ಘಟನೆ ವಿಕೋಪಕ್ಕೆ ನಾಂದಿಯಾಗಬಲ್ಲದು ಎಂದರು.
    ಭಾರತ ದೇಶದ ಪ್ರತಿಯೊಬ್ಬ ನಾಗರಿಕರು ಜಾತಿ, ಮತ, ಧರ್ಮ, ವರ್ಗ, ಭಾಷೆ, ಎಲ್ಲವನ್ನೂ ಬದಿಗಿಟ್ಟು ದೇಶಾಭಿಮಾನದಿಂದ ಈ ಘಟನೆಯನ್ನು ಖಂಡಿಸಿ ಉಗ್ರರ ನಿಗ್ರಹಕ್ಕೆ ಒತ್ತಾಯಿಸಬೇಕು. ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಬೆಂಬಲವಾಗಿ ಎಲ್ಲರೂ ನಿಲ್ಲಬೇಕಿದೆ. ಭಾರತ ದೇಶ ಹಿಂದೂಗಳ ದೇಶವಾದರೂ ಸಹ ಇಲ್ಲಿ ಎಲ್ಲಾ ಧರ್ಮದವರೂ ಶಾಂತಿಯುತವಾಗಿ ಬಾಳುತ್ತಿದ್ದಾರೆ.  ಆದರೆ ಈ ನಮ್ಮ ಐಕ್ಯತೆಯನ್ನು ಇಂತಹ ಘಟನೆಗಳಿಂದ ಮುರಿಯಲು ಉಗ್ರರು ತ್ಯೆಗಳನ್ನು ನಡೆಸುತ್ತಿದ್ದಾರೆ ಇದನ್ನು ಪ್ರತಿಯೊಬ್ಬರೂ ಖಂಡಿಸಲೇ ಬೇಕೆಂದರು.
     ಪ್ರತಿಭಟನಾ ಮೆರವಣಿಗೆ-ರಸ್ತೆತಡೆ-ಮಾನವ ಸರಪಳಿ:
    ನ್ಯಾಯಾಲಯದ ಆವರಣದಿಂದ ವಕೀಲರು ತ್ರಿವರ್ಣ ಧ್ವಜ ಹಿಡಿದು ಉಗ್ರರ ವಿರುದ್ಧ ಘೋಷಣೆಗಳನ್ನು ಹಾಕುವ ಮೂಲಕ ಭಾರತ ಮಾತೆಗೆ ಜೈಕಾರ ಹಾಕಿದರು. ಭಾರತ ಮಾತೆಯ ಸಿಂಧೂರ ಕಾಶ್ಮೀರ ಎನ್ನುತ್ತಾ, ನೂರಾರು ವಕೀಲರು ಪ್ರತಿಭಟನಾ ಮೆರವಣಿಗೆ ಆರಂಭಿಸಿ, ರಂಗಪ್ಪವೃತ್ತ, ಡಾ.ರಾಜ್‌ಕುಮಾರ್ ರಸ್ತೆ ಮೂಲಕ ಮಾಧವಾಚಾರ್ ವೃತ್ತದವರೆಗೂ ತೆರಳಿದರು. ನಂತರ ಮಾನವಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು. 
    ಮಾಧವಾಚಾರ್ ವೃತ್ತದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ವಕೀಲರಾದ ಟಿ. ಚಂದ್ರೇಗೌಡ, ವಿಶ್ವನಾಥ್, ಜಯರಾಂ ಸೇರಿದಂತೆ ಇನ್ನಿತರರು ಮಾತನಾಡಿ, ಉಗ್ರರ ಕೃತ್ಯ ಹೇಯವಾಗಿದ್ದು, ಭಾರತೀಯ ಸೈನ್ಯದ ವಿರುದ್ಧ ನೇರವಾಗಿ ಹೋರಾಟ ಮಾಡಲು ಸಾಧ್ಯವಾಗದೆ ಉಗ್ರರು ಈ ರೀತಿ ಹೇಡಿತನದಿಂದ ಹೇಯಕೃತ್ಯ ಎಸಗಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಲೇಬೇಕೆಂಬುದು ಈ ದೇಶದ ಪ್ರತಿಯೊಬ್ಬರ ಆಗ್ರಹವಾಗಿದೆ ಎಂದರು. 
    ಕೊನೆಯಲ್ಲಿ ತಾಲೂಕು ಕಚೇರಿ ಆವರಣದಲ್ಲಿ ವಕೀಲರಾದ ಪುಟ್ಟಸ್ವಾಮಿ, ರೂಪಾ ರಾವ್, ಶೋಭಾ, ಶಿವಕುಮಾರ್, ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರು ಉಗ್ರರ ಕೃತ್ಯವನ್ನು ಖಂಡಿಸಿ ಮಾತನಾಡಿ ಕಂದಾಯಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯ ಮುಖ್ಯ: ಗೀತಾ ರಾಜಕುಮಾರ್

ಭದ್ರಾವತಿ ನಗರಸಭೆ ವತಿಯಿಂದ ಪೌರ ಕಾರ್ಮಿಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಉದ್ಘಾಟಿಸಿದರು.
    ಭದ್ರಾವತಿ: ನಗರದ ನೈರ್ಮಲ್ಯ ಕಾಪಾಡುವ ಪೌರ ಕಾರ್ಮಿಕರು ಮತ್ತು ಸಿಬ್ಬಂದಿಗಳ ಆರೋಗ್ಯ ಬಹಳ ಮುಖ್ಯವಾಗಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕೆಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಮನವಿ ಮಾಡಿದರು. 
  ಅವರು ಬುಧವಾರ ನಗರಸಭೆ ವತಿಯಿಂದ ಪೌರ ಕಾರ್ಮಿಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. 
    ಪೌರ ಕಾರ್ಮಿಕರು ಮತ್ತು ಸಿಬ್ಬಂದಿಗಳು ಆರೋಗ್ಯವಂತರಾಗಿ ಚೆನ್ನಾಗಿದ್ದರೆ ನಮ್ಮ ಸುತ್ತಮುತ್ತಲಿನ ಪರಿಸರ ಸಹ ಸ್ವಚ್ಛವಾಗಿರುತ್ತದೆ. ಈ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಿದಂತಾಗುತ್ತದೆ. ಈ ಹಿನ್ನಲೆಯಲ್ಲಿ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. 
  ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಪೌರ ಕಾರ್ಮಿಕರು ನಗರವನ್ನು ಸ್ವಚ್ಚಗೊಳಿಸುವ ವೈದ್ಯರಾಗಿದ್ದೀರಿ. ನಮ್ಮೆಲ್ಲರನ್ನು ಕಾಪಾಡುತ್ತಿರುವ ನೀವು ಆರೋಗ್ಯವಂತರಾಗಿ ಇರಬೇಕು. ಮುಂದಿನ ತಿಂಗಳು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದರು. 
    ನಗರಸಭೆ ಸದಸ್ಯರಾದ ಚನ್ನಪ್ಪ, ಬಸವರಾಜ್, ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್, ಪರಿಸರ ಅಭಿಯಂತರ ಪ್ರಭಾಕರ್, ವ್ಯವಸ್ಥಾಪಕಿ ಸುನೀತಾಕುಮಾರಿ, ಸಮುದಾಯ ಸಂಘಟನಾಧಿಕಾರಿ ಸುಹಾಸಿನಿ, ಎಚ್.ಎಲ್.ಷಡಾಕ್ಷರಿ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.