Friday, April 25, 2025

ಕಾಂಗ್ರೆಸ್ ಎಂದಿಗೂ ದಲಿತರ ಏಳಿಗೆ ಬಯಸಿಲ್ಲ : ಎನ್. ಮಹೇಶ್

ಭದ್ರಾವತಿ ತಾಲೂಕು ಬಿಜೆಪಿ ಮಂಡಲ ಕಛೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ `ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರ! ಬಾಬಾ ಸಾಹೇಬರು ಹೇಗೇಕೆ ಹೇಳಿದರು?' ಎಂದು ವಿಚಾರ ಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್. ಮಹೇಶ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ : ದೇಶದಲ್ಲಿ ಇಂದಿಗೂ ಪರಿಶಿಷ್ಟ ಜಾತಿ/ಪಂಗಡದವರ ಬದುಕು ಸುಧಾರಣೆಯಾಗಿಲ್ಲ. ದೀರ್ಘಾವಧಿ ಈ ದೇಶದ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ನಿಜಕ್ಕೂ ಈ ಸಮುದಾಯಗಳ ಪಾಲಿಗೆ ಸುಡುವ ಮನೆಯಾಗಿದೆ ಎಂದು ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್. ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು. 
    ಅವರು ಶುಕ್ರವಾರ ತಾಲೂಕು ಬಿಜೆಪಿ ಮಂಡಲ ಕಛೇರಿಯಲ್ಲಿ ಆಯೋಜಿಸಲಾಗಿದ್ದ `ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರ! ಬಾಬಾ ಸಾಹೇಬರು ಹೇಗೇಕೆ ಹೇಳಿದರು?' ಎಂದು ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು. 
    ಕಾಂಗ್ರೆಸ್ ಪಕ್ಷ ಎಂದಿಗೂ ದಲಿತರ ವಿರೋಧಿಯಾಗಿದ್ದು, ದಲಿತರ ಏಳಿಗೆಯನ್ನು ಬಯಸಿಲ್ಲ. ಅಂದು ಅಂಬೇಡ್ಕರ್‌ರವರ ರಾಜಕೀಯ ಏಳಿಗೆಯನ್ನು ಸಹಿಸದೆ ಅವರನ್ನು ಕುತಂತ್ರದಿಂದ ಸೋಲಿಸಲಾಯಿತು. ದೇಶದಲ್ಲಿ ಸಂವಿಧಾನ ಬದ್ಧ ಹಕ್ಕು ಹಾಗು ಕಾನೂನು ಜಾರಿಗೆ ತರಲಾಗಿದ್ದರೂ ಸಹ ಇಂದಿಗೂ ದಲಿತರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗು ರಾಜಕೀಯವಾಗಿ ಬೆಳವಣಿಗೆ ಕಂಡಿಲ್ಲ. ಲೋಕಸಭೆ ಹಾಗು ರಾಜ್ಯಸಭೆಯಲ್ಲಿ ಪರಿಶಿಷ್ಟ ಜಾತಿ/ಪಂಗಡದವರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದಾಗ ದಲಿತರನ್ನು ಅವಮಾನಗೊಳಿಸಲಾಯಿತು. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ದಲಿತರು ಕಾಂಗ್ರೆಸ್ ಪಕ್ಷದ ಮೇಲೆ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಮತಗಳನ್ನು ಹಾಕುವ ಮೂಲಕ ಅಧಿಕಾರಕ್ಕೆ ತರುತ್ತಿದ್ದಾರೆ. ಇದೊಂದು ವಿಪರ್ಯಾಸದ ಸಂಗತಿಯಾಗಿದೆ ಎಂದರು. 
    ಕಾಂಗ್ರೆಸ್ ಪಕ್ಷ ದಲಿತರಿಗೆ ನೀಡಿರುವ ಕೊಡುಗೆಯಾದರೂ ಏನು ಎಂಬುದು ಯಾರಿಗೂ ತಿಳಿದಿಲ್ಲ. ಆದರೂ ಆ ಪಕ್ಷದ ಮೇಲಿನ ಒಲವೂ ಕಡಿಮೆಯಾಗಿಲ್ಲ. ಕಾಂಗ್ರೆಸ್ ಪಕ್ಷದ ಕುತಂತ್ರ ಅರಿತುಕೊಂಡ ಅದೆಷ್ಟೋ ನಾಯಕರು ಆ ಪಕ್ಷದಿಂದ ಹೊರಬಂದು ಅದರ ವಿರುದ್ಧ ಹೋರಾಟ ನಡೆಸಿದರು. ಅಂದು ಬಾಬಾ ಸಾಹೇಬ್ ಅಂಬೇಡ್ಕರ್‌ರವರು `ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರ! ಎಂದು ತಿಳಿಸಿದ್ದರು. ಇದು ದಲಿತರ ಪಾಲಿಗೆ ನಿಜವಾಗಿದೆ ಎಂದರು.  
    ಈ ದೇಶದಲ್ಲಿ ಅಂಬೇಡ್ಕರ್‌ರವರ ಚಿಂತನೆಗಳಿಗೆ, ಸಂವಿಧಾನದ ಆಶಯಗಳಿಗೆ ಗೌರವ ನೀಡಿದವರು, ಅಂಬೇಡ್ಕರ್‌ರವರನ್ನು ವಿಶ್ವಜ್ಞಾನಿಯನ್ನಾಗಿಸಿ ದಲಿತರ ಏಳಿಗೆಗೆ ಶ್ರಮಿಸುತ್ತಿರುವವರು ಯಾರು ಎಂಬುದನ್ನು ಇಂದು ದಲಿತರು ಯೋಚಿಸಿ, ತುಲನೆ ಮಾಡಿ ನೋಡಬೇಕಾಗಿದೆ. ದಲಿತರು ರಾಜಕೀಯವಾಗಿ ಯಾರೊಂದಿಗೆ ಇರಬೇಕೆಂಬುದನ್ನು ಅರಿತುಕೊಳ್ಳಬೇಕಾಗಿದೆ ಎಂದರು. 
ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಪ್ರಮುಖರಾದ ಡಾ. ನವೀನ್ ಮೌರ್ಯ, ಕೂಡ್ಲಿಗೆರೆ ಹಾಲೇಶ್, ಕೆ.ಎಚ್ ತೀರ್ಥಯ್ಯ, ಮಂಗೋಟೆ ರುದ್ರೇಶ್, ರಾಜಶೇಖರ್ ಉಪ್ಪಾರ, ಚನ್ನೇಶ್, ಅಣ್ಣಪ್ಪ, ಧನುಷ್ ಬೋಸ್ಲೆ, ಸಂತೋಷ್, ನಾಗಮಣಿ, ಮಂಜುಳ, ಗೌರಮ್ಮ, ಶಕುಂತಲ, ಆಶಾ, ಸರಸ್ವತಿ, ಲಕ್ಷ್ಮೀ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಅನ್ನಪೂರ್ಣ ಸ್ವಾಗತಿಸಿ, ಹನುಮಂತನಾಯ್ಕ ಕಾರ್ಯಕ್ರಮ ನಿರೂಪಿಸಿ, ರವಿಕುಮಾರ್ ವಂದಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. 

No comments:

Post a Comment