![](https://blogger.googleusercontent.com/img/b/R29vZ2xl/AVvXsEhN7DGfl3j0ODkToSJJMRFStvg69Ftt1qpppRKMirDYERUSljJV5rwwaldL4xenTB-U0vPCJIq3She5Mc6uvI6KrnfxuC9BMtQo1KQigIGbf_71mBldgqujLIcGNPp5AHkoTU4YxwMWJoZe/s320-rw/D6-BDVT-774081.jpg)
ಭದ್ರಾವತಿ, ಡಿ. ೬: ಈ ದೇಶದ ಪ್ರತಿಯೊಬ್ಬರ ಮನೆಯಲ್ಲಿ ಪ್ರತಿ ದಿನ ಮಹಾ ಮಾನವತಾವಾದಿ ಬಾಬಾ ಸಾಹೇಬ್ ಅಂಬೇಡ್ಕರ್ರವರನ್ನು ನೆನಪು ಮಾಡಿಕೊಳ್ಳಬೇಕು. ಆಗ ಮಾತ್ರ ಅವರು ಈ ದೇಶಕ್ಕೆ ಸಲ್ಲಿಸಿರುವ ಸೇವೆಗೆ ನಾವೆಲ್ಲರೂ ಗೌರವ ನೀಡಿದಂತಾಗುತ್ತದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಅವರು ಭಾನುವಾರ ನಗರಸಭೆ ವ್ಯಾಪ್ತಿಯ ಎನ್ಡಿಬಿ ರಸ್ತೆಯಲ್ಲಿರುವ ಎ.ಕೆ ಕಾಲೋನಿಯಲ್ಲಿ ನೂತನವಾಗಿ ಸುಮಾರು ೯.೨೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ರವರು ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣ ಮಾಡುವ ಮೂಲಕ ಜಾತಿ, ಜನಾಂಗ, ಧರ್ಮಗಳನ್ನು ಮೀರಿ ಎಲ್ಲರನ್ನು ಸಮಾನತೆ ತತ್ವದಡಿ ಬದುಕುವ ವ್ಯವಸ್ಥೆಯನ್ನು ರೂಪಿಸಿಕೊಟ್ಟಿದ್ದಾರೆ. ಈ ದೇಶದಲ್ಲಿ ಅಂಬೇಡ್ಕರ್ರವರ ಹುಟ್ಟು ಈ ದೇಶದ ಜನರ ಸೌಭಾಗ್ಯವಾಗಿದೆ ಎಂದರೆ ತಪ್ಪಾಗಲಾರದು. ಒಂದು ವೇಳೆ ಇಂತಹ ಮಹಾನ್ ವ್ಯಕ್ತಿ ಪ್ರಪಂಚದ ಇತರೆ ಯಾವುದೇ ರಾಷ್ಟ್ರದಲ್ಲಿ ಉದಯಿಸಿದ್ದರೇ ಆ ದೇಶದ ಪ್ರತಿಯೊಂದು ಮನೆಯಲ್ಲಿ ಅಂಬೇಡ್ಕರ್ರವರು ರಾರಾಜಿಸುವ ಜೊತೆಗೆ ಪ್ರತಿದಿನ ಆರಾಧನೆಗೆ ಒಳಗಾಗುತ್ತಿದ್ದರು. ಆದರೆ ನಾವುಗಳು ಈ ದೇಶದಲ್ಲಿ ಅಂಬೇಡ್ಕರ್ರವರನ್ನು ಪ್ರತಿದಿನ ನೆನಪುಮಾಡಿಕೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ. ನಾವುಗಳು ಪ್ರತಿದಿನ ಆರಾಧಿಸುವ ದೇವರ ಸ್ಥಾನದಲ್ಲಿ ಅಂಬೇಡ್ಕರ್ರವರಿಗೂ ಒಂದು ಸ್ಥಾನ ಮೀಸಲಿಡಬೇಕೆಂದರು.
ಅಂಬೇಡ್ಕರ್ ಹಾಗು ಸಂವಿಧಾನದ ಬಗ್ಗೆ ಸರಿಯಾಗಿ ಅರಿತುಕೊಳ್ಳದ ಕೆಲವು ಕಿಡಿಗೇಡಿ ರಾಜಕಾರಣಿಗಳು ಸಂವಿಧಾನ ಬದಲಿಸುವ ಹಾಗು ಈ ದೇಶದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ಎಂದಿಗೂ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರು ಸಹ ಧರ್ಮದ ಹೆಸರಿನಲ್ಲಿ ಎಂದಿಗೂ ರಾಜಕಾರಣ ಮಾಡಬಾರದು. ಈ ದೇಶದಲ್ಲಿ ಅಜ್ಞಾನ, ಅನಕ್ಷರತೆ, ಬಡತನ, ನಿರುದ್ಯೋಗ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆಡಳಿತ ನಡೆಸುವ ಸರ್ಕಾರಗಳು ಇವುಗಳ ಬಗ್ಗೆ ಮೊದಲು ಗಮನ ಹರಿಸಬೇಕೆಂದರು.
ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಜಿಲ್ಲೆಯಲ್ಲಿಯೇ ಅತಿ ಎತ್ತರದ ಹಾಗು ಅಂಬೇಡ್ಕರ್ರವರ ನೈಜತೆಯನ್ನು ಹೊಂದಿರುವ ಸುಂದರವಾದ ಪ್ರತಿಮೆ ನಿರ್ಮಾಣ ಮಾಡಲು ಎಲ್ಲಾ ರೀತಿಯ ಸಹಕಾರ ನೀಡಲು ಬದ್ದನಾಗಿದ್ದು, ಈ ಸಂಬಂಧ ಮುಂದಿನ ದಿನಗಳಲ್ಲಿ ದಲಿತ ಸಂಘಟನೆಗಳ ಮುಖಂಡರ ಸಭೆ ಕರೆಯಲಾಗುವುದು. ಅಲ್ಲದೆ ಅಂಡರ್ ಬ್ರಿಡ್ಜ್ನಲ್ಲಿ ಪ್ರತಿಭಟನೆ, ಹೋರಾಟಗಳನ್ನು ನಡೆಸುವವರಿಗೆ ಅನುಕೂಲವಾಗುವಂತೆ ಶೆಲ್ಟರ್ ಸಹ ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕಲಾವಿದ ಸಾಸ್ವೆಹಳ್ಳಿ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು. ದಲಿತ ನೌಕರರ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಶಿವಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ಕಾರ್ಯಕ್ರಮದ ನೇತೃತ್ವದ ವಹಿಸಿದ್ದರು.
ಭಾರತೀಯ ಸೇನೆಯಲ್ಲಿ ೨೪ ವರ್ಷ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿರುವ ಯೋಧ ಎಂ. ಮುರುಳಿಧರನ್, ಸಮಾಜದ ಹಿರಿಯ ಮುಖಂಡ ರಂಗಪ್ಪ, ಯುವ ಮುಖಂಡ ಬಿ.ಎಸ್ ಗಣೇಶ್, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಸವರಾಜ ಬಿ. ಆನೇಕೊಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಿದ್ದಾರ್ಥ ಅಂಧರ ಕೇಂದ್ರದ ಕಲಾವಿದರು ಪ್ರಾರ್ಥಿಸಿದರು. ರಾಜೀವ್ ಗಾಂಧಿ ಬಿಇಡಿ ಕಾಲೇಜಿನ ಉಪನ್ಯಾಸಕ ಪ್ರಭಾಕರ್ ಸ್ವಾಗತಿಸಿದರು. ಪ್ರಿನ್ಸಿಪಾಲ್ ಹನುಮಂತಪ್ಪ ನಿರೂಪಿಸಿದರು. ಕಲಾವಿದ ತಮಟೆ ಜಗದೀಶ್ ವಂದಿಸಿದರು.
ಚಿತ್ರ: ಡಿ೬-ಬಿಡಿವಿಟಿ
ಭದ್ರಾವತಿ ನಗರಸಭೆ ವ್ಯಾಪ್ತಿಯ ಎನ್ಡಿಬಿ ರಸ್ತೆಯಲ್ಲಿರುವ ಎ.ಕೆ ಕಾಲೋನಿಯಲ್ಲಿ ನೂತನವಾಗಿ ಸುಮಾರು ೯.೨೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನವನ್ನು ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.