![](https://blogger.googleusercontent.com/img/a/AVvXsEiap1zX72IWODDXAUNbPL6qY89LaNpTAo5d_au82Suvu_9v-rxGRIRAxQhaRMyzaBCDcEHSbOiULbafBlfC2INPHfCh0vIjMIv_fzHgZzYIJ1dJ3xSL90gDK82aO2aCGhQ0qn2DDZ3Lul8d0VPWg66n9T16BBSUNk6ztFNCqzZso3Hm0l_zL3S8bVC85w=w400-h300-rw)
ಭದ್ರಾವತಿ ರಂಗಪ್ಪ ವೃತ್ತ ಸಮೀಪದ ಜೈಭೀಮಾ ನಗರದಲ್ಲಿರುವ ಡಿಎಸ್‌ಎಸ್ ಕಛೇರಿಯಲ್ಲಿ ಗುರುವಾರ ಪ್ರೊ. ಬಿ. ಕೃಷ್ಣಪ್ಪನವರ ೮೪ನೇ ಜನ್ಮದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಜೂ. ೯: ಪ್ರೊ. ಬಿ. ಕೃಷ್ಣಪ್ಪನವರು ಹಲವಾರು ಚಳುವಳಿಗಳನ್ನು ನಡೆಸಿ ಶೋಷಿತರು, ದಲಿತರಿಗೆ ನ್ಯಾಯ ಒದಗಿಸಿಕೊಡುವ ಮೂಲಕ ಆಶಾಕಿರಣವಾಗಿದ್ದರು. ಇವರ ಹೋರಾಟ ಇಂದಿಗೂ ನಮ್ಮೆಲ್ಲರೂ ಸ್ಪೂರ್ತಿದಾಯಕವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಹೇಳಿದರು.
ಅವರು ಗುರುವಾರ ನಗರದ ರಂಗಪ್ಪ ವೃತ್ತ ಸಮೀಪದ ಜೈಭೀಮಾ ನಗರದಲ್ಲಿರುವ ಡಿಎಸ್‌ಎಸ್ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರ ೮೪ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ಹರಿಹರದಲ್ಲಿ ಶೋಷಿತ ಕುಟುಂಬದಲ್ಲಿ ೯ ಜೂನ್ ೧೯೩೮ರಲ್ಲಿ ಜನಿಸಿದ ಪ್ರೊ. ಬಿ. ಕೃಷ್ಣಪ್ಪನವರು ಶ್ರಮದ ಬದುಕಿನೊಂದಿಗೆ ಶಿಕ್ಷಣ ಪಡೆದವರು. ಸಮಾಜದಲ್ಲಿನ ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದು ಶೋಷಿತರು, ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಚಳುವಳಿಗಳನ್ನು ರೂಪಿಸಿದರು. ಅವರು ನಗರದಲ್ಲಿ ೧೯೭೪ರಲ್ಲಿ ಚಳುವಳಿ ಕಟ್ಟುವ ಮೂಲಕ ಅದನ್ನು ೧೯೭೫ರಲ್ಲಿ ನೋಂದಾಯಿಸಿದರು. ಮೊದಲ ಬಾರಿಗೆ ತಾಲೂಕಿನ ಅರಕೆರೆ ಗ್ರಾಮದಲ್ಲಿ ಪತ್ರೆ ಸಂಗಪ್ಪ ಎಂಬುವರ ಕಗ್ಗೊಲೆ ಖಂಡಿಸಿ ನಡೆಸಿದ ಹೋರಾಟ ಯಶಸ್ವಿಯಾಗುವ ಜೊತೆಗೆ ನ್ಯಾಯ ಲಭಿಸುವಂತಾಯಿತು. ಈ ಹೋರಾಟ ಮುಂದಿನ ಹೋರಾಟಗಳಿಗೆ ಮತ್ತಷ್ಟು ಸ್ಪೂರ್ತಿಯನ್ನು ತಂದು ಕೊಟ್ಟಿತು ಎಂದರು.
ಕೃಷ್ಣಪ್ಪನವರು ೧೯೭೮ರಲ್ಲಿ ತಾಲೂಕು ಕಛೇರಿ ಮುಂಭಾಗ ಸುಮಾರು ಒಂದೂವರೆ ವರ್ಷ ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮ ಎಸ್.ಸಿ/ಎಸ್.ಟಿ ಭೂ ಪರಭಾರೆ ನಿಷೇಧ ಕಾಯ್ದೆ(ಪಿಟಿಸಿಎಲ್ ಕಾಯ್ದೆ) ಜಾರಿಗೆ ಬರುವ ಮೂಲಕ ಈ ಕಾಯ್ದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನುಷ್ಠಾನ ಗೊಳ್ಳುವಂತಾಯಿತು. ಇದು ಕೃಷ್ಣಪ್ಪನವರ ಹೋರಾಟಕ್ಕೆ ಲಭಿಸಿದ ಬಹುದೊಡ್ಡ ಗೆಲುವು. ನಂತರದ ದಿನಗಳಲ್ಲಿ ಅವರು ರಾಜ್ಯಾದಾದ್ಯಂತ ಹಲವಾರು ಹೋರಾಟಗಳನ್ನು ನಡೆಸಿದ್ದು, ಈ ಪೈಕಿ ಭೂಸ ಚಳುವಳಿ, ಬೆಂಡಿಗೇರಿ ಮಲ ತಿನ್ನಿಸಿದ ಪ್ರಕರಣದ ವಿರುದ್ಧ ನಡೆಸಿದ ಹೋರಾಟ, ಶೋಷಿತ ಸಮುದಾಯದ ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸುವ ಚಂದ್ರಗುತ್ತಿಯ ಬೆತ್ತಲೆ ಸೇವೆಯ ವಿರುದ್ಧ ನಡೆಸಿದ ಹೋರಾಟ ಪ್ರಮುಖವಾಗಿವೆ ಎಂದರು.
ಕೃಷ್ಣಪ್ಪನವರು ಕೇವಲ ಹೋರಾಟಕ್ಕೆ ಸೀಮಿತವಾಗಿರದೆ ರಾಜಕೀಯವಾಗಿ ಸಹ ಅಸ್ತಿತ್ವ ಕಂಡು ಕೊಳ್ಳುವ ನಿಟ್ಟಿನಲ್ಲಿ ಮುಂದಾಗಿದ್ದರು. ಈ ನಿಟ್ಟಿನಲ್ಲೂ ಅವರು ನಡೆಸಿದ ಪ್ರಯತ್ನ ಸ್ವಲ್ಪಮಟ್ಟಿಗೆ ಯಶಸ್ವಿಯಾಯಿತು. ೧೯೯೨-೯೩ರ ಅವಧಿಯಲ್ಲಿ ರಾಜ್ಯದಲ್ಲಿ ಬಿಎಸ್‌ಪಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೋರಾಟದಲ್ಲಿಯೇ ತಮ್ಮ ಬದುಕನ್ನು ಕೊನೆಕೊಳಿಸಿದರು. ಕೃಷ್ಣಪ್ಪನವರು ಚಳುವಳಿಯನ್ನು ಆರಂಭಿಸಿದ ಸ್ಥಳದಲ್ಲಿಯೇ ಅವರ ಜನ್ಮದಿನ ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಅವರ ಹೋರಾಟಗಳು, ಆದರ್ಶತನಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿವೆ ಎಂದರು.
ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ಪ್ರೊ. ಬಿ. ಕೃಷ್ಣಪ್ಪನವರು ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆಶಯದಂತೆ ಶಿಕ್ಷಣ, ಹೋರಾಟ ಮತ್ತು ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಶೋಷಿತರು, ದಲಿತರರ ಪರವಾದ ಧ್ವನಿಯಾಗಿದ್ದರು. ಇವರ ದಾರಿಯಲ್ಲಿ ನಾವೆಲ್ಲರೂ ಸಾಗುವಂತಾಗಬೇಕಾಗಿದೆ ಎಂದರು.
ತಾಲೂಕು ಸಂಚಾಲಕ ಕೆ. ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನಾ ಸಂಚಾಲಕ ಈಶ್ವರಪ್ಪ, ಜಿಲ್ಲಾ ಸಮಿತಿ ಸದಸ್ಯ ವಿ. ವಿನೋದ್, ರಾಜ್ಯ ಸಂಘಟನಾ ಸಂಚಾಲಕಿ ಶಾಂತಿ, ಏಳುಮಲೈ, ಶ್ರೀಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.