Saturday, November 12, 2022

ಡಿ. ನಾಗರಾಜ್‌ಗೆ ಚಿನ್ನದ ಪದಕ

ಯೋಗಾಸನ ಪ್ರದರ್ಶನದಲ್ಲಿ ತೊಡಗಿರುವ ಭದ್ರಾವತಿ ವಿವೇಕಾನಂದ ಯೋಗ ಕೇಂದ್ರದ ಅಧ್ಯಕ್ಷ ಡಿ. ನಾಗರಾಜ್ 
    ಭದ್ರಾವತಿ, ನ. ೧೨ : ಅವಿನಾಶ್ ಯೋಗ ಮತ್ತು ಏರೋಬಿಕ್ಸ್ ಇನ್‌ಸ್ಟಿಟ್ಯೂಟ್, ಜಮುನಾ ರವಿ ಫೌಂಡೇಷನ್ ವತಿಯಿಂದ ಬೆಂಗಳೂರು ಮಹಾನಗರ ಪಾಲಿಕೆಯ ಡಾ. ರಾಜ್‌ಕುಮಾರ್ ಗ್ಲಾಸ್ ಹೌಸ್‌ನಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಯೋಗಾಸನ ಕಪ್ ಮೊದಲ ಮುಕ್ತ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ನಗರದ ವಿವೇಕಾನಂದ ಯೋಗ ಕೇಂದ್ರದ ಅಧ್ಯಕ್ಷ ಡಿ. ನಾಗರಾಜ್‌ರವರು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ೫೫ ವರ್ಷ ವಯೋಮಾನ ಮೇಲ್ಪಟ್ಟವರ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ ಕೆ. ಪ್ರಭಾಕರ್ ಹಾಗು ಕಾರ್ಯದರ್ಶಿ ಡಿ. ಪುಟ್ಟೇಗೌಡ ಮತ್ತು ಕ್ರೀಡಾಭಿಮಾನಿಗಳು ನಾಗರಾಜ್‌ರವರನ್ನು ಅಭಿನಂದಿಸಿದ್ದಾರೆ.
    ನಾಗರಾಜ್‌ರವರು ಕಳೆದ ಸುಮಾರು ೪ ದಶಕಗಳಿಗೂ ಹೆಚ್ಚು ಕಾಲದಿಂದ ಯೋಗಾಸನದಲ್ಲಿ ತೊಡಗಿಸಿಕೊಂಡಿದ್ದು, ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರ ಸಹ ಕ್ರೀಡಾ ಪ್ರಶಸ್ತಿ ನೀಡಿ ಗೌರವಿಸಿದೆ.

ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ವತಿಯಿಂದ ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಬಲೂನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.
    ಭದ್ರಾವತಿ, ನ. ೧೨: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ವತಿಯಿಂದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಬಿ. ಸಿದ್ದಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಬಲೂನು ಹಾರಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸರ್ಕಾರಿ ನೌಕರರೊಂದಿಗೆ ಕ್ರಿಕೆಟ್ ಆಟ ಆಡುವ ಮೂಲಕ ಸಂಭ್ರಮಿಸಿ ಶುಭ ಕೋರಿದರು.
  ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್,  ತಹಸೀಲ್ದಾರ್ ಆರ್. ಪ್ರದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಸಂಘದ ಉಪಾಧ್ಯಕ್ಷೆ ಡಿ. ನಾಗರತ್ನ, ರಾಜ್ಯ ಪರಿಷತ್ ಸದಸ್ಯ ಎಸ್.ಪ್ರಕಾಶ್, ಕ್ರೀಡಾ ಕಾರ್ಯದರ್ಶಿ ಕೆ. ಶ್ರೀಕಾಂತ್  ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
    ಕಾರ್ಯದರ್ಶಿ ಡಿ.ಎಸ್ ರಾಜಪ್ಪ ಸ್ವಾಗತಿಸಿದರು. ಖಜಾಂಚಿ ಎಸ್.ಕೆ ಮೋಹನ್ ನಿರೂಪಿಸಿದರು. ಜಾನ್ ನಿರ್ಮಲ್ ವಂದಿಸಿದರು.


ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ವತಿಯಿಂದ ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಕ್ರಿಕೆಟ್ ಆಟ ಆಡುವ ಮೂಲಕ ಸಂಭ್ರಮಿಸಿ ಶುಭ ಕೋರಿದರು.

ಭವಿಷ್ಯ ನಿಧಿ ಹಣ, ಸಂಚಿತ ಬಡ್ಡಿ ಜಮಾ ಮಾಡಿ : ಎಂಪಿಎಂ ನಿವೃತ್ತ ಕಾರ್ಮಿಕರಿಂದ ಮನವಿ

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರು ಶಾಸನಬದ್ಧವಾಗಿ ಬರಬೇಕಾದ ಭವಿಷ್ಯ ನಿಧಿ ಹಣ ಹಾಗು ಸಂಚಿತ ಬಡ್ಡಿಯನ್ನು ಭವಿಷ್ಯ ನಿಧಿ ಖಾತೆಗೆ ಜಮಾ ಮಾಡುವಂತೆ ಒತ್ತಾಯಿಸಿ ಶಿವಮೊಗ್ಗ ಭವಿಷ್ಯನಿಧಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
    ಭದ್ರಾವತಿ, ನ. ೧೨: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರು ಶಾಸನಬದ್ಧವಾಗಿ ಬರಬೇಕಾದ ಭವಿಷ್ಯ ನಿಧಿ ಹಣ ಹಾಗು ಸಂಚಿತ ಬಡ್ಡಿಯನ್ನು ಭವಿಷ್ಯ ನಿಧಿ ಖಾತೆಗೆ ಜಮಾ ಮಾಡುವಂತೆ ಒತ್ತಾಯಿಸಿ ಶಿವಮೊಗ್ಗ ಭವಿಷ್ಯನಿಧಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
    ನಿವೃತ್ತ ಕಾರ್ಮಿಕರಿಗೆ ಡಿಎ ಬಾಕಿ ವಿತರಿಸುವಾಗ ಶಾಸನಬದ್ದವಾಗಿ ನೀಡಬೇಕಾಗಿದ್ದ ಉದ್ಯೋಗಿ ಮತ್ತು ಉದ್ಯೋಗದಾತರ ಭಾಗದ ಭವಿಷ್ಯನಿಧಿ ಹಣ ಮತ್ತು ಸಂಚಿತ ಬಡ್ಡಿಯನ್ನು ಕಾರ್ಮಿಕರ ಭವಿಷ್ಯನಿಧಿ ಖಾತೆಗೆ ಜಮಾ ಮಾಡದೆ ಕಾರ್ಖಾನೆ ಆಡಳಿತ ಮಂಡಳಿ ಅನ್ಯಾಯವೆಸಗಿದ್ದು, ಇದರ ವಿರುದ್ಧ ಸುಮಾರು ೫೫೦ ನಿವೃತ್ತ ಕಾರ್ಮಿಕರು ವೈಯುಕ್ತಿಕವಾಗಿ ಭವಿಷ್ಯನಿಧಿ ಆಯುಕ್ತರಿಗೆ ಈ ಹಿಂದೆ ದೂರು ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಶುಕ್ರವಾರ ನಡೆದ ಭವಿಷ್ಯ ನಿಧಿ ಅದಾಲತ್‌ನಲ್ಲಿ ಎಂಪಿಎಂ ನಿವೃತ್ತ ನೊಂದ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ತಕ್ಷಣ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
    ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ, ಪ್ರಮುಖರಾದ ವೆಂಕಟೇಶಮೂರ್ತಿ, ರಘುನಾಥರಾವ್, ಶಿವಲಿಂಗಯ್ಯ, ತಾರಕೇಶ್ವರ, ಗೋವಿಂದಪ್ಪ, ಬಾಪು ಸೇರಿದಂತೆ ನಿವೃತ್ತ ಕಾರ್ಮಿಕರು ಉಪಸ್ಥಿತರಿದ್ದರು.

ಕನಕದಾಸ ಜಯಂತಿ : ಕಿವುಡು, ಅಂಧ ವಿಕಲಚೇತನರಿಗೆ ಸಿಹಿ ಹಂಚಿಕೆ, ಹಣ್ಣು ವಿತರಣೆ

ಭದ್ರಾವತಿ ನ್ಯೂಟೌನ್ ತರಂಗ ಕಿವುಡು ಮಕ್ಕಳ ಪ್ರಾಥಮಿಕ ಹಾಗು ಪ್ರೌಢಶಾಲೆಯ ಆವರಣದಲ್ಲಿ ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತದಿಂದ ಕನಕ ಜಯಂತಿ ಅಂಗವಾಗಿ ಸಸಿ ನೆಡುವ ಮೂಲಕ ಮಕ್ಕಳು ಮತ್ತು ಸಿಬ್ಬಂದಿಗಳಿಗೆ ಸಿಹಿ ಹಂಚಿ, ಹಣ್ಣು ವಿತರಿಸಲಾಯಿತು.
    ಭದ್ರಾವತಿ, ನ. ೧೨: ದಾಸ ಶ್ರೇಷ್ಠ ಕನಕದಾಸರ ಜಯಂತ್ಯೋತ್ಸವದ ಅಂಗವಾಗಿ ಶನಿವಾರ ನಗರದ ಹೊಸಸೇತುವೆ ರಸ್ತೆಯಲ್ಲಿ ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತದಿಂದ ಸಿಹಿ ಮತ್ತು ಹಣ್ಣು ವಿತರಿಸಲಾಯಿತು.
    ನ್ಯೂಟೌನ್ ತರಂಗ ಕಿವುಡು ಮಕ್ಕಳ ಪ್ರಾಥಮಿಕ ಹಾಗು ಪ್ರೌಢಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಮಕ್ಕಳು ಮತ್ತು ಸಿಬ್ಬಂದಿಗಳಿಗೆ ಸಿಹಿ ಹಂಚಿ, ಹಣ್ಣು ವಿತರಿಸಲಾಯಿತು.
    ಸಿದ್ದಾರ್ಥ ಅಂಧರ ಕೇಂದ್ರದ ಅಂಧ ವಿಕಲಚೇತನರಿಗೆ ಹಾಗು ಸಿಬ್ಬಂದಿಗಳಿಗೆ ಸಿಹಿ ಹಂಚಿ, ಹಣ್ಣು ವಿತರಿಸುವ ಮೂಲಕ ಕನಕದಾಸರ ಜಯಂತ್ಯೋತ್ಸವ ಶುಭ ಕೋರಲಾಯಿತು.
    ಶ್ರೀ ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಡಿ. ಪ್ರಭಾಕರ ಬೀರಯ್ಯ, ವೈ. ನಟರಾಜ್, ತಾಲೂಕು ಕುರುಬರ ಸಂಘದ ನಿರ್ದೇಶಕರಾದ ಕೆ. ಕೇಶವ, ಮಂಜುನಾಥ್(ಕೊಯ್ಲಿ), ಪ್ರಮುಖರಾದ ಹನುಮಂತು, ಷಣ್ಮುಖ, ಉಮೇಶ್, ಸತ್ಯನಾರಾಯಣ ಕೋಡಿಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ಸಿದ್ದಾರ್ಥ ಅಂಧರ ಕೇಂದ್ರದ ಅಂಧ ವಿಕಲಚೇತನರಿಗೆ ಹಾಗು ಸಿಬ್ಬಂದಿಗಳಿಗೆ ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತದಿಂದ ಸಿಹಿ ಹಂಚಿ, ಹಣ್ಣು ವಿತರಿಸುವ ಮೂಲಕ ಕನಕದಾಸರ ಜಯಂತ್ಯೋತ್ಸವ ಶುಭ ಕೋರಲಾಯಿತು

Friday, November 11, 2022

ಕನಕದಾಸರ ವಿಚಾರಧಾರೆಗಳು ನಿತ್ಯನಿರಂತವಾಗಲಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ನಡೆದ ಕನಕಜಯಂತಿ ಹಾಗೂ ಒನಕೆ ಓಬವ್ವ ಜಯತ್ಯೋಂತ್ಸವ ಶಾಸಕ ಬಿ.ಕೆ.ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ನ. ೧೧ ; ದಾಸ ಶ್ರೇಷ್ಠ ಕನಕದಾಸರ ವಿಚಾರಧಾರೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಿತ್ಯನಿರಂತರವಾದಾಗ ಮಾತ್ರ ಆವರ ಜನ್ಮದಿನಾಚರಣೆ ಸಾರ್ಥಕಗೊಳ್ಳುತ್ತದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶುಕ್ರವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಕುರುಬರ ಸಮಾಜ ಮತ್ತು ಛಲವಾದಿ ಸಮಾಜದ ವತಿಯಿಂದ ತಾಲೂಕು ಪಂಚಾಯತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಾಸ ಶ್ರೇಷ್ಠ ಕನಕದಾಸ ಜಯಂತಿ ಹಾಗೂ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕನಕದಾಸರು ಕೇವಲ ಒಂದು ಕುಲಕ್ಕೆ ಸೀಮಿತರಾದವರಲ್ಲ ಇಡೀ ಮಾನವಕುಲಕ್ಕೆ ಸೀಮಿತರಾದವರು. ಅವರ ತತ್ವ, ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ದಾರ್ಶನಿಕರ ಜಯಂತಿಗೆ ಅರ್ಥ ಬರುತ್ತದೆ. ಸಮಾಜದಲ್ಲಿ ಜಾತೀಯತೆ, ಅಸೂಯೆ ಭಾವನೆಗಳು ಹೋಗಲಾಡಿಸಿ ಸಹೋದರತ್ವ ಸಹಬಾಳ್ವೆಗಳನ್ನು ಬೆಳಸಿಕೊಳ್ಳಬೇಕೆಂದರು.
  ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ವೀರವನಿತೆ ಒನಕೆ ಓಬವ್ವ ಅವರು ಈ ನಾಡಿಗೆ ಕೊಟ್ಟಂತಹ ಕೊಡುಗೆ ಅಪಾರವಾಗಿದೆ. ಅವರು ನಾಡಿನ ರಕ್ಷಣೆಯಲ್ಲಿ ತೋರಿದ ಹೋರಾಟದ ಗುಣಗಳು, ಆದರ್ಶತನಗಳು ಎಲ್ಲರಿಗೂ ಮಾದರಿಯಾಗಿದೆ ಎಂದರು.  
    ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಮಾತನಾಡಿ, ಕನಕದಾಸರಂತೆ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಸಹ ಈ ನಾಡಿನ ಅಭಿವೃದ್ದಿಗೆ ಶ್ರಮಿಸಿದವರು. ಕನಕದಾಸರ ಜಯಂತಿಯಂದು ಅವರ ಪ್ರತಿಮೆ ಅನಾವರಣಗೊಳ್ಳುತ್ತಿರುವುದು ಈ ನಾಡಿನ ಜನರ ಹೆಮ್ಮೆಯ ಸಂಗತಿಯಾಗಿದೆ.  ಕನಕದಾಸರು ಮತ್ತು ಒನಕೆ ಓಬವ್ವ ಜಯಂತ್ಯೋತ್ಸವ ಈ ಬಾರಿ ಒಟ್ಟಿಗೆ ಆಚರಣೆ ಮಾಡುತ್ತಿರುವುದು ಅರ್ಥ ಪೂರ್ಣವಾಗಿದ್ದು, ಈ ಇಬ್ಬರು ಮಹಾನ್ ವ್ಯಕ್ತಿಗಳ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದರು.
    ಛಲವಾಧಿ ಸಮಾಜದ ಅಧ್ಯಕ್ಷ ಸುರೇಶ್ ಮಾತನಾಡಿ, ಸರ್ಕಾರ ಈ ಬಾರಿ ಒನಕೆ ಓಬವ್ವ ಜಯಂತ್ಯೋತ್ಸವ ಆಚರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಒನಕೆ ಓಬವ್ವ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಹುನ್ನಾರ ಮಾಡಬಾರದು. ರಾಜಪ್ರಭುತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡಿದ ಓಬವ್ವರಂತೆ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ಮಟ್ಟ ಹಾಕಲು ಛಲವಾಧಿ ಸಮಾಜದಿಂದ ಹೋರಾಟ ಮಾಡಲಾಗುವುದು ಎಂದರು.
    ಉಪನ್ಯಾಸ ನೀಡಿದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮಾತನಾಡಿ, ಹಿಂದುಳಿದ ಶೋಷಿತ ಸಮುದಾಯದಲ್ಲಿ ಜನಿಸಿದ ಕನಕದಾಸರು,  ಜಾತಿ ಅಂಧಕಾರ, ಮೌಡ್ಯತೆಯಿಂದ ತುಂಬಿದ ಅಂದಿನ ಸಮಾಜದಲ್ಲಿ ತಮ್ಮದೇ ವಿಚಾರಧಾರೆಗಳ ಮೂಲಕ ದಾಸರಲ್ಲಿಯೇ ಅಗ್ರಗಣ್ಯ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಜೊತೆಗೆ ಸಮಾಜ ಸುಧಾರಣೆಗಾಗಿ ಶ್ರಮಿಸಿದವರು. ಕನ್ನಡ ಭಾಷೆ, ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ. ಕನಕದಾಸರ ವಿಚಾರಧಾರೆಗಳು ಸರ್ವಕಾಲಿಕವಾಗಿದ್ದು, ಇವರ ಕುರಿತ ವಿಚಾರಧಾರೆಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆಂದರು
    ತಹಸೀಲ್ದಾರ್ ಆರ್. ಪ್ರದೀಪ್, ಗ್ರೇಡ್-೨ ತಹಸೀಲ್ದಾರ್ ರಂಗಮ್ಮ, ನಗರಸಭೆ ಪೌರಾಯುಕ್ತ ಮನುಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭಾ ಸದಸ್ಯರಾದ ಶಶಿಕಲಾ, ಕಾಂತರಾಜ್, ಮಂಜುಳಾ, ಆರ್. ಶ್ರೇಯಸ್(ಚಿಟ್ಟೆ), ತಾಲೂಕು ಕುರುಬ ಸಮಾಜದ ನಿರ್ದೇಶಕರಾದ ಬಿ.ಎಸ್ ನಾರಾಯಣಪ್ಪ, ಹೇಮಾವತಿ, ಮಂಜುನಾಥ್(ಕೊಯ್ಲಿ), ಕೆ. ಕೇಶವ, ಪ್ರವೀಣ್, ಜಿ. ವಿನೋದ್ ಕುಮಾರ್, ನಾಗರಾಜ್, ಸಣ್ಣಯ್ಯ, ಬಿ.ಎಚ್ ವಸಂತ, ಬಿ.ಎ ರಾಜೇಶ್, ಜೆ. ಕುಮಾರ್, ಛಲವಾದಿ ಸಮಾಜದ ಹಿರಿಯ ಮುಖಂಡ ಎನ್. ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಂಗೊಳ್ಳಿ ರಾಯಣ್ಣ ಯುವ ಪಡೆ ಅಧ್ಯಕ್ಷ ಅಭಿಲಾಷ್ ನಿರೂಪಿಸಿದರು. ಉಪತಹಸೀಲ್ದಾರ್ ಮಂಜಾನಾಯ್ಕ ಸ್ವಾಗತಿಸಿದರು. ನಗರದ ಗಾಯಕ ಸುಬ್ರಮಣ್ಯ ಅವರ ಕಂಠದಲ್ಲಿ ಕನಕದಾಸರ ಕೀರ್ತನೆಗಳ ಧ್ವನಿ ಸುರಳಿ ಬಿಡುಗಡೆಗೊಳಿಸಲಾಯಿತು. ತಾಲೂಕು ಕುರುಬರ ಸಂಘ ಹಾಗು ಕನಕ ವಿದ್ಯಾಸಂಸ್ಥೆಗೆ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರ ದಾನಿಗಳಿಂದ ಕೊಡುಗೆಯಾಗಿ ನೀಡಲಾಯಿತು.

ಕನಕ ಜಯಂತಿ : ಭವ್ಯ ಮೆರವಣಿಗೆ

ಭದ್ರಾವತಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ  ದಾಸ ಶ್ರೇಷ್ಠ  ಕನಕದಾಸರ ಮತ್ತು ವೀರವನಿತೆ ಓನಕೆ ಓಬವ್ವ ಜಯಂತೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆ ಸಂಗಮೇಶ್ವರ್ ಚಾಲನೆ ನೀಡಿದರು.
  ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಿಂದ ಆರಂಭಗೊಂಡ ಮೆರವಣಿಗೆ ಅಂಬೇಡ್ಕರ್‌ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿ ತಲುಪಿತು. 
     ತಹಸೀಲ್ದಾರ್ ಆರ್ ಪ್ರದೀಪ್,  ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಮೇಶ್,  ನಗರಸಭೆ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಸುದೀಪ್ ಕುಮಾರ್,  ಪೌರಾಯುಕ್ತ ಮನುಕುಮಾರ್ ಹಾಗು ಸದಸ್ಯರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ  ಅಧ್ಯಕ್ಷ  ಬಿ. ಸಿದ್ದಬಸಪ್ಪ, ತಾಲೂಕು ಕುರುಬ ಸಮಾಜ, ಸಂಗೊಳ್ಳಿ ರಾಯಣ್ಣ ಯುವ ಪಡೆ, ಕನಕ ಯುವ ಪಡೆ, ಕನಕ ಪತ್ತಿನ ಸಹಕಾರ ನಿಯಮಿತ, ಛಲವಾದಿ ಮಹಾಸಭಾ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

Thursday, November 10, 2022

ಕನಕದಾಸರ ಜಯಂತಿ : ಹಾಲು, ಹಣ್ಣು, ಬ್ರೆಡ್ ವಿತರಣೆ



ಭದ್ರಾವತಿ, ನ. 10: ದಾಸ ಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ನ.11ರಂದು ಬೆಳಿಗ್ಗೆ 9 ಗಂಟೆಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ನಡೆಯಲಿದೆ. ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕನಕ ಯುವ ಪಡೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಯಶಸ್ವಿಗೊಳಿಸುವಂತೆ ಕೋರಲಾಗಿದೆ.