Friday, November 25, 2022

ಮೊದಲ ಸಾಮಾನ್ಯಸಭೆ ಆರಂಭದಲ್ಲಿಯೇ ಪ್ರತಿಭಟನೆ ಬಿಸಿ

ವಾರ್ಡ್ ನಂ.೨೧ರ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ :  ಆಕ್ರೋಶ

ಭದ್ರಾವತಿ ನಗರಸಭೆ ಆವರಣದಲ್ಲಿ ವಾರ್ಡ್ ನಂ.೨೧ರ ಜೆಡಿಎಸ್ ನಗರಸಭಾ ಸದಸ್ಯೆ ವಿಜಯರವರ ನೇತೃತ್ವದಲ್ಲಿ ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿದರು.
    ಭದ್ರಾವತಿ, ನ. ೨೫: ನಗರಸಭೆ ಅಧ್ಯಕ್ಷೆಯಾಗಿ ಅನುಸುಧಾ ಮೋಹನ್ ಪಳನಿ ಅಧಿಕಾರ ಸ್ವೀಕರಿಸಿದ ನಂತರ ನಡೆದ ಮೊದಲ ಸಾಮಾನ್ಯ ಸಭೆ ಆರಂಭದಲ್ಲಿಯೇ ಪ್ರತಿಭಟನೆ ಬಿಸಿ ಎದುರಿಸುವಂತಾಯಿತು.
    ಶುಕ್ರವಾರ ಮಧ್ಯಾಹ್ನ ೨.೩೦ಕ್ಕೆ ಆರಂಭಗೊಳ್ಳಬೇಕಿದ್ದ ಸಭೆ ಸಂಜೆ ೪ ಗಂಟೆಗೆ ಆರಂಭಗೊಂಡಿತು. ಸಭೆ ಆರಂಭಗೊಳ್ಳುವ ಮೊದಲು ನಗರಸಭೆ ಆವರಣದಲ್ಲಿ ವಾರ್ಡ್ ನಂ.೨೧ರ ಜೆಡಿಎಸ್ ನಗರಸಭಾ ಸದಸ್ಯೆ ವಿಜಯರವರ ನೇತೃತ್ವದಲ್ಲಿ ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿದರು.
    ಕಾಗದನಗರ, ಜೆಪಿಎಸ್ ಕಾಲೋನಿ, ಉಜ್ಜನಿಪುರ ವ್ಯಾಪ್ತಿಯನ್ನು ಹೊಂದಿರುವ ವಾರ್ಡ್‌ನಲ್ಲಿ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಈ ವಾರ್ಡ್‌ಗೆ ಇದುವರೆಗೂ ಯಾವುದೇ ಅನುದಾನ ಸಹ ಬಿಡುಗಡೆಗೊಳಿಸಿಲ್ಲ. ಸಾರ್ವಜನಿಕ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದಂತಾಗಿದ್ದು, ನೀರಿನ ವ್ಯವಸ್ಥೆ ಸಹ ಇಲ್ಲವಾಗಿದೆ. ಇದರಿಂದಾಗಿ ನಿವಾಸಿಗಳು ಪರದಾಡುವಂತಾಗಿದೆ.
    ರಸ್ತೆ, ಚರಂಡಿಗಳು ಸಹ ಹಾಳಾಗಿದ್ದು, ಇವುಗಳನ್ನು ದುರಸ್ತಿಪಡಿಸಿಲ್ಲ. ಕೆಲವು ಕಾಮಗಾರಿಗಳನ್ನು ಸ್ವಂತ ಹಣದಲ್ಲಿ ಕೈಗೊಳ್ಳಲಾಗಿದೆ. ಮಲತಾಯಿ ಧೋರಣೆ ಅನುಸರಿಸುವ ಮೂಲಕ ವಾರ್ಡ್ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಲಾಯಿತು.
    ತಕ್ಷಣ ವಾರ್ಡ್ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.
ಪೌರಾಯುಕ್ತ ಮನುಕುಮಾರ್ ಸಮಸ್ಯೆಗಳನ್ನು ಆಲಿಸಿ ಮುಂದಿನ ೧೦ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  
    ಜೆಡಿಎಸ್ ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಸದಸ್ಯರಾದ ಬಸವರಾಜ ಬಿ ಆನೇಕೊಪ್ಪ, ಉದಯಕುಮಾರ್, ಸವಿತಾ ಉಮೇಶ್, ಪಲ್ಲವಿ ದಿಲೀಪ್, ಕೋಟೇಶ್ವರರಾವ್, ಮಂಜುಳ ಸುಬ್ಬಣ್ಣ, ರೂಪಾವತಿ, ನಾಗರತ್ನ ಅನಿಲ್‌ಕುಮಾರ್ ಮುಖಂಡರಾದ ಬಿ.ಎಸ್ ನಾರಾಯಣಪ್ಪ, ಅಶೋಕ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನ.೨೬ರಂದು ಶಾಂತವೇರಿ ಗೋಪಾಲಗೌಡರ ಸ್ಮರಣೆ ಕಾರ್ಯಕ್ರಮ

    ಭದ್ರಾವತಿ, ನ. ೨೫ : ನಗರದ ಚುಂಚಾದ್ರಿ ಮಹಿಳಾ ವೇದಿಕೆ ಹಾಗು ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ವತಿಯಿಂದ ರಾಜ್ಯ ಕಂಡ ಧೀಮಂತ ರಾಜಕಾರಣಿ ದಿವಂಗತ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಅವರ ಸಾಧನೆಯ ಸ್ಮರಣೆ ಕಾರ್ಯಕ್ರಮ ನ.೨೬ರಂದು ಬೆಳಿಗ್ಗೆ ೧೦.೩೦ಕ್ಕೆ ಅಪ್ಪರ್ ಹುತ್ತಾ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ವಿಧಾನಸಭೆ ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದು, ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಆರ್. ಅನುರಾಧ ಪಟೇಲ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
    ಶಾಸಕ ಬಿ.ಕೆ ಸಂಗಮೇಶ್ವರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಶಾಂತವೇರಿ ಗೋಪಾಲಗೌಡರ ಪುತ್ರಿ ಇಳಾಗೀತಾ ಮತ್ತು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಲಿದ್ದಾರೆ.

ನ.೨೭ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ, ನ. ೨೫: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮತ್ತು ೩೩ ಕೆ.ವಿ ಮಾರ್ಗ/ಅಂತರಗಂಗೆ ಫೀಡರ್ ನಿರ್ವಹಣೆ ಕಾಮಗಾರಿ ಹಿನ್ನಲೆಯಲ್ಲಿ ನ.೨೭ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫.೩೦ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ೧೧ ಕೆವಿ ಮಾರ್ಗದ ದೊಡ್ಡೇರಿ, ಅಂತರಗಂಗೆ, ಕಾಚಗೊಂಡನಹಳ್ಳಿ, ಯರೇಹಳ್ಳಿ, ದೇವನರಸೀಪುರ, ಕಾರೇಹಳ್ಳಿ, ಕಾಳಿಂಗನಹಳ್ಳಿ, ಬೊಮ್ಮೇನಹಳ್ಳಿ, ಬಾರಂದೂರು, ಮಾವಿನಕೆರೆ, ಕೆಂಚೇನಹಳ್ಳಿ, ಶ್ರೀನಿವಾಸಪುರ, ಶವಪುರ, ಉಕ್ಕುಂದ, ಗಂಗೂರು ಗ್ರಾಮ ಪಂಚಾಯಿತಿ ವ್ಯಾಪಿಯ ಎಲ್ಲಾ ಗ್ರಾಮಗಳು ಮತ್ತು ಭದ್ರಾ ಪೇಪರ್ ಮಿಲ್, ನಗರಸಭೆ ನೀರು ಸರಬರಾಜು ಕೇಂದ್ರ, ಉಜ್ಜನಿಪುರ, ಎಂಪಿಎಂ ಬಡಾವಣೆ, ದೊಡ್ಡಗೊಪ್ಪೇನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

Thursday, November 24, 2022

ಉಮಾದೇವಿ ರಾಯ್ಕರ್ ನಿಧನ


 ಉಮಾದೇವಿ ರಾಯ್ಕರ್
    ಭದ್ರಾವತಿ, ನ. ೨೪: ನಗರದ ಬಿ.ಎಚ್ ರಸ್ತೆ, ಹಾಲಪ್ಪ ವೃತ್ತ ರಾಯ್ಕರ್ ಜ್ಯೂಯಲರ‍್ಸ್ ಮಾಲೀಕ ಅರವಿಂದ ರಾಯ್ಕರ್ ಅವರ ತಾಯಿ ಉಮಾದೇವಿ ರಾಯ್ಕರ್(೮೭)ಗುರುವಾರ ಬೆಳಗಿನ ಜಾವ ಅನಾರೋಗ್ಯದಿಂದ ನಿಧನರಾದರು.
    ಓರ್ವ ಪುತ್ರ ಹಾಗು ಮೂವರು ಪುತ್ರಿಯರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಸಂಜೆ ಹುತ್ತಾಕಾಲೂನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
    ಉಮಾದೇವಿ ರಾಯ್ಕರ್ ನಿಧನಕ್ಕೆ ವರ್ತಕರು, ವ್ಯಾಪಾರಸ್ಥರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.  

ನಗರಸಭೆ ಮಾಜಿ ಸದಸ್ಯ ಸುಬ್ಬಾರೆಡ್ಡಿ ನಿಧನ

ಸುಬ್ಬಾರೆಡ್ಡಿ

    ಭದ್ರಾವತಿ, ನ. ೨೪ : ನಗರದ ಜನ್ನಾಪುರ ರಾಜಪ್ಪ ಬಡಾವಣೆ ನಿವಾಸಿ, ಗುತ್ತಿಗೆದಾರ, ನಗರಸಭೆ ಮಾಜಿ ಸದಸ್ಯ ಸುಬ್ಬಾರೆಡ್ಡಿ(೮೦) ಬುಧವಾರ ರಾತ್ರಿ ನಿಧನ ಹೊಂದಿದರು.
    ಪುತ್ರಿ ಹಾಗು ಇಬ್ಬರು ಪುತ್ರರನ್ನು ಹೊಂದಿದ್ದರು. ಒಂದು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಹಾಗು ಮತ್ತೊಂದು ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ನಗರಸಭೆಗೆ ಎರಡು ಬಾರಿ ಆಯ್ಕೆಯಾಗಿದ್ದರು.
    ಸುಬ್ಬಾರೆಡ್ಡಿಯವರು ನಗರದ ಪ್ರಮುಖ ಗುತ್ತಿಗೆದಾರರಲ್ಲಿ ಒಬ್ಬರಾಗಿ ಗುರುತಿಸಿ ಕೊಂಡಿದ್ದರು. ನಗರದಲ್ಲಿ ಪ್ರಮುಖ ಕಟ್ಟಡಗಳನ್ನು  ನಿರ್ಮಿಸಿರುವ ಕೀರ್ತಿ ಇವರದ್ದಾಗಿದೆ. ತೆಲುಗು ರೆಡ್ಡಿ ಸಮುದಾಯದ ಮುಖಂಡರಾಗಿ ಸಹ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Wednesday, November 23, 2022

೯ ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಶಿಕ್ಷಕ ಬಂಧನ

    ಭದ್ರಾವತಿ, ನ. ೨೩: ಶಾಲಾ ಶಿಕ್ಷಕನೊಬ್ಬ ಸುಮಾರು ೯ ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
      ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ಕುಟುಂಬಸ್ಥರು ನೀಡಿರುವ ದೂರಿನ ಆನ್ವಯ ಪೊಲೀಸರು ಉರ್ದು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ , ಖಲಂದರ್ ನಗರದ ನಿವಾಸಿ ಅಕ್ಬರ್ ಎಂಬಾತನನ್ನು ಬಂಧಿಸಿ ಶಿವಮೊಗ್ಗ ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಟಿಪ್ಪು ಪ್ರತಿಮೆ, ಮುಖ್ಯದ್ವಾರ ನಿರ್ಮಾಣ ಕುರಿತು ಸಿ.ಎಂ ಖಾದರ್ ಭಾಷಣ

ವ್ಯಾಪಕವಾಗಿ ಹರಿದಾಡುತ್ತಿದೆ ೩ ದಿನಗಳ ಹಿಂದಿನ ವಿಡಿಯೋ


    ಭದ್ರಾವತಿ, ನ. ೨೩ : ನಗರದ ಅನ್ವರ್ ಕಾಲೋನಿ ಹೊಳೆಹೊನ್ನೂರು ವೃತ್ತದಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ಹಾಗು ಮುಖ್ಯದ್ವಾರ ನಿರ್ಮಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸಹೋದರ, ಕಾಂಗ್ರೆಸ್ ಮುಖಂಡ ಸಿ.ಎಂ ಖಾದರ್ ಭಾಷಣದ ವಿಡಿಯೋ ಇದೀಗ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.
    ಕಳೆದ ೩ ದಿನಗಳ ಹಿಂದೆ ನಗರದ ಹೊಳೆಹೊನ್ನೂರು ವೃತ್ತದಲ್ಲಿ ದೇಶಪ್ರೇಮಿ ಟಿಪ್ಪು ಸುಲ್ತಾನ್ ಯುವಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಟಿಪ್ಪು ಜಯಂತಿ ಹಾಗು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಭಾಷಣದ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.
    ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನಾವು ಬಿ.ಕೆ ಸಂಗಮೇಶ್ವರನ್ನು ಪುನಃ ಕ್ಷೇತ್ರದ ಶಾಸಕರನ್ನಾಗಿ ಆಯ್ಕೆಮಾಡುತ್ತೇವೆ. ಸರ್ಕಾರದಲ್ಲಿ  ಮಂತ್ರಿಯನ್ನಾಗಿ ಮಾಡುತ್ತೇವೆ. ಅವರು ಮಂತ್ರಿಯಾದ ನಂತರ  ಸುಮಾರು ೨೨ ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ಹಾಗು ಟಿಪ್ಪು ಹೆಸರಿನ ಮುಖ್ಯದ್ವಾರ ನಿರ್ಮಿಸುವುದು ಖಚಿತ  ಎಂದು ಭಾಷಣದಲ್ಲಿ ಹೇಳಿದ್ದು, ಇದಕ್ಕೂ ಮೊದಲು ವೀರಸಾರ್ವಕರ್ ಕುರಿತು ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ವ್ಯಾಪಕವಾಗಿ ಹರಿದಾಡುತ್ತಿದೆ.