Saturday, May 24, 2025

ಅಪಘಾತ : ವ್ಯಕ್ತಿ ಸಾವು

ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ವ್ಯಕ್ತಿ 
    ಭದ್ರಾವತಿ : ನಗರದ ಜೇಡಿಕಟ್ಟೆ ಬಳಿ ಶುಕ್ರವಾರ ಮಧ್ಯ ರಾತ್ರಿ ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಸಂಬಂಧ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
    ಸುಮಾರು ೫೦ ರಿಂದ ೬೦ ವರ್ಷ ವಯಸ್ಸಿನ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಅಪಘಾತ ಮಾಡಿ ಹೋಗಿರುವ ವಾಹನದ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಮೃತಪಟ್ಟಿರುವ ವ್ಯಕ್ತಿ ತರೀಕೆರೆ ತಾಲೂಕಿನ ಬೆಟ್ಟದಹಳ್ಳಿ ವಾಸಿ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗೆ ಸಂಚಾರಿ ಪೊಲೀಸ್ ಠಾಣೆ ಸಂಪರ್ಕಿಸಬಹುದಾಗಿದೆ. 

ಮೇ.೨೫ರಂದು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಚುನಾವಣೆ

ಭದ್ರಾವತಿ:  ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಸಂಘ(ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್)ದ ೩ ವರ್ಷಗಳ ಅವಧಿಗೆ ಮೇ.೨೫ರ ಭಾನುವಾರ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೂ ನ್ಯೂಟೌನ್ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ (ಜೆಟಿಎಸ್)ಯಲ್ಲಿ ಮತದಾನ ನಡೆಯಲಿದೆ. 
ಸುಮಾರು ೩೦ ತಿಂಗಳಿನಿಂದ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಹಿಂಪಡೆಯುವಂತೆ, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ, ಗುತ್ತಿಗೆ ಕಾರ್ಮಿಕರಿಗೆ ಪೂರ್ಣಾವಧಿ ಉದ್ಯೋಗ ಕಲ್ಪಿಸಿಕೊಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಖಾನೆ ಮುಂಭಾಗದಲ್ಲಿ ನಿರಂತರವಾಗಿ ಹೋರಾಟದಲ್ಲಿ ತೊಡಗಿರುವ ಗುತ್ತಿಗೆ ಕಾರ್ಮಿಕರು ಇದೀಗ ತಮ್ಮ ಹೊಸ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. 
    ಒಟ್ಟು ಕಾರ್ಖಾನೆಯಲ್ಲಿ ೧೩೦೦ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರಿದ್ದು, ಈ ಪೈಕಿ ಸಂಘದಲ್ಲಿ ೧೦೪೪ ಮಂದಿ ಸದಸ್ಯರಿದ್ದಾರೆ. ಉಳಿದಂತೆ ಗುತ್ತಿಗೆ ಕಾರ್ಮಿಕರು ಎಐಟಿಯುಸಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ತಮ್ಮ ೩ ವರ್ಷಗಳ ಅಧಿಕಾರಾವಧಿಯಲ್ಲಿ ಬಹುತೇಕ ಅವಧಿ ಹೋರಾಟದಲ್ಲಿಯೇ ಕಳೆದಿದ್ದಾರೆ. ಆದರೆ ಕಾರ್ಖಾನೆ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಆಡಳಿತ ನಡೆಸುತ್ತಿರುವ ಸರ್ಕಾರಗಳಿಂದ ಕೇವಲ ಭರವಸೆಗಳ ಮಹಾಪೂರವೇ ಹರಿದು ಬಂದಿದೆ ಹೊರತು ಯಾವುದೇ ಭರವಸೆ ಇದುವರೆಗೂ ಈಡೇರಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಪುನಃ ಹೊಸ ನಾಯಕರ ಆಯ್ಕೆಯಲ್ಲಿ ಗುತ್ತಿಗೆ ಕಾರ್ಮಿಕರು ತೊಡಗಿಸಿಕೊಂಡಿರುವುದು ಕ್ಷೇತ್ರದಲ್ಲಿ ಇದೀಗ ಗಮನ ಸೆಳೆಯುತ್ತಿದೆ. 
ಈ ನಡುವೆ ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿಯವರು ಶುಕ್ರವಾರ ಕಾರ್ಖಾನೆಯನ್ನು ಮರುನಿರ್ಮಾಣಗೊಳಿಸುವ ಕುರಿತು ಹೇಳಿಕೆ ನೀಡಿರುವುದು ಗುತ್ತಿಗೆ ಕಾರ್ಮಿಕರಲ್ಲೂ ಹೊಸ ಸಂಚಲನ ಮೂಡಿಸಿದೆ. ನೂತನ ನಾಯಕರ ಆಯ್ಕೆ ನಂತರ ಹೋರಾಟ ಮುಂದುವರೆಯುವುದೇ ಅಥವಾ ಸ್ಥಗಿತಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. 
     ಮೇ.೨೫ರಂದು ಮತದಾನ ನಂತರ  ಮತ ಎಣಿಕೆ ನಡೆಯಲಿದೆ. ಸಹಪ್ರಾಧ್ಯಾಪಕ ಡಾ. ಎಸ್. ಸುಮಂತ್ ಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಕಾಮಗಾರಿ ವೇಳೆ ನಿರ್ಲಕ್ಷ್ಯತನ : ಕುಸಿದು ಬಿದ್ದ ಗೋಡೆ

ಜೆಸಿಬಿಯಿಂದ ಪಾಯ ತೆಗೆಯುವಾಗ ದುರ್ಘಟನೆ : ಲಕ್ಷಾಂತರ ರು. ನಷ್ಟ


    ಭದ್ರಾವತಿ: ಪಕ್ಕದ ಮನೆಯವರು ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಯಾವುದೇ ಮುನ್ಸೂಚನೆ ನೀಡದೆ ಜೆಸಿಬಿಯಿಂದ ಪಾಯ ತೆಗೆದ ಕಾರಣ ನಮ್ಮ ಮನೆಯ ಗೋಡೆ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ನಾವುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಅಲ್ಲದೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎಂದು ಹಳೇನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. 
    ಭೂತನಗುಡಿ ೨ನೇ ತಿರುವಿನ ನಿವಾಸಿ ಜಿ.ಎನ್ ನಾಗರಾಜರಾವ್ ಎಂಬುವರು ನೀಡಿದ್ದು, ಮಳೆಯಿಂದಾಗಿ ಗೋಡೆ ಕುಸಿದಿಲ್ಲ ಬದಲಾಗಿ ನಮ್ಮ ಮನೆಯ ಪಕ್ಕದ ರಂಗನಾಥ ಎಂಬುವರು ತಮ್ಮ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ನಮ್ಮಿಬ್ಬರ ಮನೆಗಳ ನಡುವೆ ಜಾಯಿಂಟ್ ಗೋಡೆ ಇದ್ದು,  ರಂಗನಾಥರವರು ತಮ್ಮ ಮನೆಯನ್ನು ನೆಲಸಮ ಮಾಡಿ ಜೆಸಿಬಿ ಮೂಲಕ ಪಾಯ ತೆಗೆಸಿದಾಗ ನಮ್ಮ ಮನೆಯ ಗೋಡೆ ಬಿರುಕು ಬಿಟ್ಟಿದೆ. ಈ ಸಂಬಂಧ ದೂರು ಕೊಡಲು ಮುಂದಾದ ಸಂದರ್ಭದಲ್ಲಿ ಕೆಲವರು ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿ ಉಂಟಾಗಿರುವ ನಷ್ಟ ತುಂಬಿ ಕೊಡುವ ಭರವಸೆ ನೀಡಿದ್ದರು.
    ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆ ಶೀತಗೊಂಡು ಕಳೆದ ತಿಂಗಳು ಏ. ೨೭ ರಂದು ರಾತ್ರಿ ಕುಟುಂಬ ಸದಸ್ಯರು ಊಟ ಮಾಡುವಾಗ ಗೋಡೆ ಕುಸಿದು ಬಿದ್ದಿದೆ.  ನಾವೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದೇವೆ.  ಗೋಡೆ ಕುಸಿದು ಬಿದ್ದ ಕಾರಣ ಮನೆಯಲ್ಲಿದ್ದ ಅನೇಕ ವಸ್ತುಗಳು ಹಾಳಾಗಿ ಲಕ್ಷಾಂತರ ರು. ನಷ್ಟ ಉಂಟಾಗಿದೆ. ದುರ್ಘಟನೆ ನಡೆದರೂ ಸಹ ಪಕ್ಕದ ಮನೆಯ ರಂಗನಾಥ ಆಗಲಿ ಅಥವಾ ಈ ಹಿಂದೆ ಪರಿಹಾರ ಕೊಡಿಸುವುದಾಗಿ ಹೇಳಿದವರಾಗಲಿ ಯಾರು ಸಹ ಏನಾಗಿದೆ ಎಂದು ಬಂದು ನೋಡಿಲ್ಲ. ಮಾನವೀಯತೆ ತೋರದೆ ದುರ್ವರ್ತನೆಯಿಂದ ನಡೆದುಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮನನೊಂದು ಪೊಲೀಸ್ ಠಾಣೆಗೆ ಪರಿಹಾರಕ್ಕಾಗಿ ದೂರು ನೀಡಲಾಗಿ ಪ್ರಕರಣ ದಾಖಲಾಗಿದೆ. 

Friday, May 23, 2025

ಮೇ. ೨೫ರಂದು ಶ್ರೀ ಕರುಮಾರಿಯಮ್ಮ ದೇವಿಯ ೪೫ನೇ ವರ್ಷದ ಕರಗ ಉತ್ಸವ

ಭದ್ರಾವತಿ ನ್ಯೂಟೌನ್, ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನ
    ಭದ್ರಾವತಿ : ನಗರದ ನ್ಯೂಟೌನ್, ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ೪೫ನೇ ವರ್ಷದ ಕರಗ ಮಹೋತ್ಸವ ಶುಕ್ರವಾರದಿಂದ ಆರಂಭಗೊಂಡಿದ್ದು, ಮೇ.೨೫ರ ಭಾನುವಾರ ಕರಗ ಉತ್ಸವ ನಡೆಯಲಿದೆ. 
    ಮೇ.೨೪ರ ಬೆಳಿಗ್ಗೆ ೧೦ ಗಂಟೆಗೆ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ ೬ ಗಂಟೆಗೆ ಉಮಾ ಮಹಿಳಾ ಭಜನಾ ಮಂಡಳಿಯಿಂದ ಭಕ್ತಿಗೀತೆಗಳು ನಡೆಯಲಿವೆ. ಮೇ.೨೫ರ ಭಾನುವಾರ ೯ ಗಂಟೆಗೆ ಅಮ್ಮನವರಿಗೆ ಎಳನೀರು ಮತ್ತು ಪಂಚಾಮೃತ ಅಭಿಷೇಕ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ ೧೨ ಗಂಟೆಗೆ ಶ್ರೀ ದೇವಿಗೆ ಬುಳ್ಳಾಪುರ ಚಾನೆಲ್ ಬಳಿ ಶಕ್ತಿ ಕರಗ ಸ್ಥಾಪನೆ ಮಾಡಿ ಮೆರವಣಿಗೆಯ ಮೂಲಕ ದೇವಸ್ಥಾನ ತಂದು ಮಹಾಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿನಿಯೋಗ ಜರುಗಲಿದೆ. 
    ನಂತರ ದೇವಿಗೆ ಅಂಬಲಿ ಮತ್ತು ಅನ್ನದಾನ ಸಮರ್ಪಣೆ ನಡೆಯಲಿದ್ದು, ಸಂಜೆ ದೇವಿಗೆ ಅರಿಶಿನ ಅಭಿಷೇಕ ಮತ್ತು ಮಹಾ ಮಂಗಳಾರತಿಯೊಂದಿಗೆ ಕರಗ ಭದ್ರಾ ನದಿಯಲ್ಲಿ ವಿಸರ್ಜನೆ ನಡೆಯಲಿದೆ. 
    ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸದಸ್ಯರಾದ ಬಿ.ಕೆ ಮೋಹನ್, ಸರ್ವಮಂಗಳ ಭೈರಪ್ಪ, ಕಾಂತರಾಜ್, ನಾಗರತ್ನ ಅನಿಲ್‌ಕುಮಾರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ನಗರಸಭೆ ಮಾಜಿ ಸದಸ್ಯರಾದ ಎಂ.ಎ ಅಜಿತ್, ಎಂ. ರಾಜು, ಆಂಜನಪ್ಪ, ಲಲಿತಮ್ಮ ಕೃಷ್ಣಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ ಉದ್ಯಮಿ ಎ. ಮಾಧು, ಎಂ. ಮಂಜುನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 
    ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕರಗ ಮಹೋತ್ಸವ ಯಶಸ್ವಿಗೊಳಿಸುವಂತೆ ದೇವಸ್ಥಾನ ಸೇವಾ ಸಮಿತಿ ಕೋರಿದೆ. 

ನಗರಸಭೆ ವ್ಯಾಪ್ತಿಯ ಬೀದಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಚಾಲನೆ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಪ್ರತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಬೀದಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದ್ದು, ಶುಕ್ರವಾರ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಚಾಲನೆ ನೀಡಿದರು.
    ಭದ್ರಾವತಿ : ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಪ್ರತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಬೀದಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದ್ದು, ಶುಕ್ರವಾರ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಚಾಲನೆ ನೀಡಿದರು.
    ನಗರಸಭೆ ಮೈದಾನದಲ್ಲಿ ಚಿಕ್ಕಮಗಳೂರು ಗ್ರೀನ್ ಫೂಟ್‌ಪ್ರಿಂಟ್ ಟ್ರಸ್ಟ್ ಸಹಯೋಗದೊಂದಿಗೆ ನಗರಸಭೆ ವತಿಯಿಂದ ಹೊಸಮನೆ ಮುಖ್ಯರಸ್ತೆ, ಸಂತೆ ಮೈದಾನದಲ್ಲಿರುವ ಮಳಿಗೆಗಳ ಕಟ್ಟಡದಲ್ಲಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ. ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಡಿ.ಬಿ ಶಿವರಾಜ್ ಮಾರ್ಗದರ್ಶನದಲ್ಲಿ ಎನ್‌ಜಿಓ ಡಾ. ವಿಜಯಶಂಕರ್ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದು,  ಗ್ರೀನ್ ಫೂಟ್‌ಪ್ರಿಂಟ್ ಟ್ರಸ್ಟ್ ಕಾರ್ಯಕರ್ತರು ನಗರಸಭೆ ಪೌರಕಾರ್ಮಿಕರ ಸಹಕಾರದೊಂದಿಗೆ ನಗರಸಭೆ ವ್ಯಾಪ್ತಿಯ ವಿವಿಧೆಡೆ ಬೀದಿ ನಾಯಿಗಳನ್ನು ಪ್ರತಿದಿನ ಹಿಡಿದು ಶಸ್ತ್ರ ಚಿಕಿತ್ಸಾ ಸ್ಥಳಕ್ಕೆ ತರಲಾಗುತ್ತಿದೆ. 
    ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೬ ಸಾವಿರ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ ಈ ಬಾರಿ ಸುಮಾರು ೧೬೦೦ ಬೀದಿ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಗುರಿ ಹೊಂದಲಾಗಿದೆ. ಒಂದು ನಾಯಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಸುಮಾರು ೧,೬೦೦ ರು. ವೆಚ್ಚವಾಗಲಿದ್ದು, ಕಳೆದ ಬಾರಿ ೧ ಸಾವಿರ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. 


    ಗೂಗಲ್ ಮ್ಯಾಪ್ ವಿಳಾಸ ಆಧರಿಸಿ ಬೀದಿನಾಯಿಗಳನ್ನು ಹಿಡಿದು ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದ್ದು, ನಂತರ ೩ ದಿನ ಅವುಗಳನ್ನು ಆರೈಕೆ ಮಾಡಿ ಪುನಃ ಅವುಗಳ ನಿಗದಿತ ಸ್ಥಳಕ್ಕೆ ಬಿಡಲಾಗುವುದು. ಶಸ್ತ್ರ ಚಿಕಿತ್ಸೆ ಸಮಯದಲ್ಲಿ ನಾಯಿಗಳಿಗೆ ಸೋಂಕು ಹರಡದಂತೆ ನಿವಾರಕ ಬಳಸಲಾಗುತ್ತಿದ್ದು, ಅಲ್ಲದೆ ರೇಬಿಸ್ ನಿರೋಧಕ ಚುಚ್ಚು ಮದ್ದು ನೀಡಲಾಗುತ್ತಿದೆ. ಇದರಿಂದ ಬೀದಿ ನಾಯಿಗಳು ಒಂದು ವೇಳೆ ಮನುಷ್ಯರ ಮೇಲೆ ದಾಳಿ ಮಾಡಿದಾಗ ರೇಬಿಸ್ ರೋಗಾಣುಗಳು ಹರಡುವುದಿಲ್ಲ. ಶಸ್ತ್ರ ಚಿಕಿತ್ಸೆ ನಡೆಸಿದ ನಾಯಿಗಳನ್ನು ಸುಲಭವಾಗಿ ಗುರುತಿಸಲು ಅವುಗಳ ಒಂದು ಭಾಗದ ಕಿವಿಯನ್ನು ಸುಮಾರು ಅರ್ಧ ಇಂಚು ಪಂಚ್ ಮಾಡಿ ಕತ್ತರಿಸಲಾಗುತ್ತಿದೆ. ಪ್ರತಿ ದಿನ ಸುಮಾರು ೨೦ ರಿಂದ ೨೫ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. 
    ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಪರಿಸರ ಅಭಿಯಂತರ ಪ್ರಭಾಕರ್, ಸದಸ್ಯರಾದ ಲತಾ ಚಂದ್ರಶೇಖರ್, ಮುಖಂಡ ಬಿ. ಗಂಗಾಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Thursday, May 22, 2025

ಮದ್ಯಸೇವಿಸಿ ವಾಹನ ಚಾಲನೆ : ೨ನೇ ಬಾರಿ ಕಾನೂನು ಉಲ್ಲಂಘಿಸಿದ ವ್ಯಕ್ತಿಗೆ ೧೫ ಸಾವಿರ ರು. ದಂಡ

ಭದ್ರಾವತಿ ಪಿಆರ್‌ಎಲ್ ಸಿವಿಲ್ ಜಡ್ಜ್ ಅಂಡ್ ಜೆಎಂಎಫ್‌ಸಿ ನ್ಯಾಯಾಲಯ ಮಧ್ಯ ಸೇವಿಸಿ ವಾಹನ ಚಲಾಯಿಸಿ ೨ನೇ ಬಾರಿ ಕಾನೂನು ಉಲ್ಲಂಘಿಸಿದ ಚಾಲಕರೊಬ್ಬರಿಗೆ ೧೫ ಸಾವಿರ ರು. ದಂಡ ವಿಧಿಸಿದೆ. 
    ಭದ್ರಾವತಿ : ಇತ್ತೀಚೆಗೆ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಮುಖವಾಗಿ ವಾಹನ ಚಾಲನೆ ಸಂದರ್ಭದಲ್ಲಿ ಮದ್ಯ ಸೇವನೆ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಈ ಹಿಂದೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದವರಿಗೆ ಸಾಮಾನ್ಯವಾಗಿ ಕಡಿಮೆ ದಂಡ ವಿಧಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಕೆಲವು ವರ್ಷಗಳಿಂದ ದಂಡ ಏರಿಕೆ ಮಾಡಲಾಗಿದ್ದು, ಪ್ರಸ್ತುತ ಪ್ರಕರಣವೊಂದರಲ್ಲಿ ಇಲ್ಲಿನ ಪಿಆರ್‌ಎಲ್ ಸಿವಿಲ್ ಜಡ್ಜ್ ಅಂಡ್ ಜೆಎಂಎಫ್‌ಸಿ ನ್ಯಾಯಾಲಯ ೨ನೇ ಬಾರಿ ಕಾನೂನು ಉಲ್ಲಂಘಿಸಿದ ಚಾಲಕರೊಬ್ಬರಿಗೆ ೧೫ ಸಾವಿರ ರು. ದಂಡ ವಿಧಿಸಿದೆ. 
    ಕೆಲವು ತಿಂಗಳ ಹಿಂದೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಮೊದಲ ಬಾರಿಗೆ ಸಿಕ್ಕಿ ಬಿದ್ದವರಿಗೆ ನ್ಯಾಯಾಲಯ ೧೦ ಸಾವಿರ ರು. ದಂಡ ವಿಧಿಸಿ ಎಚ್ಚರಿಕೆ ನೀಡಿತ್ತು. ಇದೀಗ ೨ನೇ ಬಾರಿ ಕಾನೂನು ಉಲ್ಲಂಘಿಸಿರುವ ವಾಹನ ಚಾಲಕರೊಬ್ಬರಿಗೆ ೧೫ ಸಾವಿರ ರು. ದಂಡ ವಿಧಿಸಿ ಪುನಃ ನ್ಯಾಯಾಲಯ ಎಚ್ಚರಿಕೆ ನೀಡಿದೆ. 
    ಮದ್ಯ ಸೇವಿಸಿ ವಾಹನ ಚಲಾಯಿಸುವವರು ಈಗಲಾದರೂ ಅರ್ಥಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಅಥವಾ ಕಠಿಣ ಕ್ರಮ ಕೈಗೊಳ್ಳುವ  ಮುನ್ನಚ್ಚರಿಕೆ ನ್ಯಾಯಾಲಯ ನೀಡಿದೆ. ವಾಹನ ಚಾಲಕರು ರಸ್ತೆ ನಿಯಮಗಳನ್ನು ಪಾಲಿಸಿ ಗೌರವಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. 

ಸಹ ಪ್ರಾಧ್ಯಾಪಕ ಡಾ. ಎಸ್. ವರದರಾಜರಿಗೆ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ

ಡಾ. ಎಸ್. ವರದರಾಜ 
    ಭದ್ರಾವತಿ: ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಎಸ್ ವರದರಾಜರವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ೩ ದಿನಗಳ ರಾಜ್ಯಮಟ್ಟದ ಕ್ರೀಡಾದ ಪುರುಷರ ಭಾರ ಎತ್ತುವ ಸ್ಪರ್ಧೆಯ ೮೩ ಕೆ.ಜಿ ದೇಹ ತೂಕ ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. 
    ವರದರಾಜರವರು ಕಳೆದ ೨ ವರ್ಷಗಳಿಂದ ರಾಷ್ಟ್ರಮಟ್ಟ ಹಾಗು ೧೦ ವರ್ಷಗಳಿಂದ ರಾಜ್ಯಮಟ್ಟದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕರಾಗಿದ್ದು, ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.