ಮುಖ್ಯಮಂತ್ರಿಗಳಿಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಮನವಿ
ಭದ್ರಾವತಿ ನಗರವನ್ನು ರಾಜ್ಯದಲ್ಲಿಯೇ ಮಾದರಿವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪೌರಾಯುಕ್ತರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಭಾನುವಾರ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಮೇ. ೯: ಮುಂದಿನ ಎರಡು ವರ್ಷಗಳಲ್ಲಿ ಭದ್ರಾವತಿ ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ನಗರಸಭೆ ಪೌರಾಯುಕ್ತ ಮನೋಹರ್ ಅವರ ವರ್ಗಾವಣೆಯನ್ನು ತಕ್ಷಣ ರದ್ದುಗೊಳಿಸಬೇಕೆಂದು ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಕಳೆದ ಸುಮಾರು ೨೫ ವರ್ಷಗಳಿಂದ ಅಭಿವೃದ್ಧಿ ಕಾಣದ ಕೆರೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮನೋಹರ್ ಹೆಚ್ಚಿನ ಶ್ರಮ ವಹಿಸಿದ್ದಾರೆ. ತಾಲೂಕು ಆಡಳಿತದ ಸಹಕಾರದೊಂದಿಗೆ ಸುಮಾರು ೭೦ ಕೆರೆಗಳ ಬೌಂಡರಿ ನಿಗದಿಪಡಿಸಿ ಒತ್ತುವರಿ ತೆರವುಕಾರ್ಯಾಚರಣೆ ಕೈಗೊಳ್ಳುವ ಜೊತೆಗೆ ಸರ್ಕಾರದ ಯಾವುದೇ ಅನುದಾನವಿಲ್ಲದೆ ಸ್ಥಳೀಯ ರೈತರು, ದಾನಿಗಳ ಸಹಕಾರದೊಂದಿಗೆ ಕೆರೆಗಳ ಹೂಳು ತೆಗೆಯುವ ಕಾರ್ಯ ಯಶಸ್ವಿಯಾಗಿ ಕೈಗೊಳ್ಳುತ್ತಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ೩ನೇ ಹಂತದ ಕುಡಿಯುವ ನೀರಿನ ಯೋಜನೆ ಹಾಗು ೩ನೇ ಹಂತದ ಒಳಚರಂಡಿ ಕಾಮಗಾರಿ ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ರಾಜ್ಯದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಜೀವದ ಹಂಗನ್ನು ತೊರೆದು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದೀಗ ೨ನೇ ಅಲೆ ನಿರ್ಮೂಲನೆಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಕೊಳಚೆ ಪ್ರದೇಶದ ನಿವಾಸಿಗಳ ಹಕ್ಕುಪತ್ರಗಳಿಗೆ ಖಾತೆ ಮಾಡಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿರುವ ವಸತಿ ರಹಿತರಿಗೆ ಜಿ+೩ ಮಾದರಿ ೪೦೦೦ ಮನೆಗಳನ್ನು ನಿರ್ಮಿಸಿಕೊಡಲು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಜೊತೆಗೆ ಜನಸ್ಪಂದಕ ಅಧಿಕಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂದಿನ ೨ ವರ್ಷಗಳಲ್ಲಿ ಭದ್ರಾವತಿ ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಿದ್ದಾರೆ.
ಪೌರಾಯುಕ್ತರನ್ನು ಏಕಾಏಕಿ ವರ್ಗಾವಣೆಗೊಳಿಸಿರುವುದು ನಗರದ ಜನತೆಯನ್ನು ದಿಗ್ಭ್ರಮೆಗೊಳಿಸಿದೆ. ವಿವಿಧ ಸಂಘ-ಸಂಸ್ಥೆಗಳು ಹಾಗು ಸ್ಥಳೀಯರ ಮನವಿ ಮೇರೆಗೆ ಮುಖ್ಯಮಂತ್ರಿಗಳು ಪೌರಾಯುಕ್ತರ ವರ್ಗಾವಣೆಯನ್ನು ರದ್ದುಗೊಳಿಸಬೇಕು. ಅಲ್ಲದೆ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ ಮತ್ತು ಆಯನೂರು ಮಂಜುನಾಥ್‌ರವರು ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಲಾಗಿದೆ.
ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್, ಮುಖಂಡರಾದ ವಿಶ್ವೇಶ್ವರರಾವ್ ಗಾಯಕ್‌ವಾಡ್, ಜಗದೀಶ್ ಪಟೇಲ್, ಗಿರಿ ನಾಯ್ಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment