Friday, February 4, 2022

ನಗರಸಭೆ ಆದಾಯ ಹೆಚ್ಚಿಸಿಕೊಳ್ಳುವ ಯೋಜನೆಗಳನ್ನು ರೂಪಿಸಿಕೊಳ್ಳಿ

ಪೂರ್ವಭಾವಿ ಬಜೆಟ್ ಮಂಡನೆ ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಸಲಹೆ


    ಭದ್ರಾವತಿ, ಫೆ. ೪: ನಗರಸಭೆ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಿರುವ ಯೋಜನೆಗಳನ್ನು ರೂಪಿಸಿಕೊಳ್ಳುವಂತೆ ಶುಕ್ರವಾರ ನಡೆದ ನಗರಸಭೆ ಬಜೆಟ್(ಆಯವ್ಯಯ) ಮಂಡನೆ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಸಲಹೆಗಳು ವ್ಯಕ್ತವಾದವು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಗರದ ಏಳಿಗೆಗೆ ಹಾಗು ನಾಗರೀಕ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಅಂದಾಜು ೫೩೨೩ ಲಕ್ಷ ರು. ವೆಚ್ಚದ ಬಜೆಟ್ ಮಂಡನೆಗೆ ಅಗತ್ಯವಿರುವ ಸಲಹೆ ಮತ್ತು ಮಾರ್ಗದರ್ಶನ ನಗರದ ವಿವಿದ ಸಂಘ-ಸಂಸ್ಥೆಗಳ ಮುಖಂಡರಿಂದ ವ್ಯಕ್ತವಾದವು.
    ಸಭೆ ಆರಂಭಗೊಳ್ಳುತ್ತಿದ್ದಂತೆ ನಗರಸಭೆ ಮಾಜಿ ಉಪಾಧ್ಯಕ್ಷ ಟಿ. ವೆಂಕಟೇಶ್ ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲು ಪೂರಕವಾದ ಮಾಹಿತಿಗಳನ್ನು ಇದುವರೆಗೂ ನೀಡಿಲ್ಲ. ಇದರಿಂದಾಗಿ ಯಾವ ರೀತಿ ಚರ್ಚೆ ನಡೆಸಬೇಕೆಂಬ ಗೊಂದಲ ನಿರ್ಮಾಣವಾಗಿದೆ. ತಕ್ಷಣ ಪೂರಕ ಮಾಹಿತಿ ನೀಡುವಂತೆ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ದಿ ಎಕ್ಸ್‌ಟೆನ್‌ಷನ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಬಿ.ಎಸ್ ನಾರಾಯಣಪ್ಪ ಪೂರ್ವಭಾವಿ ಸಭೆಗೆ ಅಗತ್ಯವಿರುವ ಪೂರಕವಾದ ಮಾಹಿತಿಗಳನ್ನು ಮುಂಚಿತವಾಗಿ ಪತ್ರಕರ್ತರಿಗೆ ನೀಡಬೇಕಾಗಿದೆ. ಇದರಿಂದ ಸಭೆಗೆ ಬರುವ ಮೊದಲೇ ಎಲ್ಲರಿಗೂ ಪೂರಕ ಮಾಹಿತಿ ತಿಳಿದುಬರುತ್ತದೆ.  ಈ ಹಿಂದಿನಿಂದಲೂ ಮೊದಲೇ ಪೂರಕ ಮಾಹಿತಿಗಳನ್ನು ನೀಡಲಾಗುತ್ತಿತ್ತು. ಆದರೆ ಈ ಬಾರಿ ಪತ್ರಕರ್ತರೇ ಕೇಳುವಂತಹ ಸ್ಥಿತಿ ಉದ್ಭವವಾಗಿದೆ ಎಂದರು.
    ಮನೆ ಮಾಲೀಕರ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಮಾತನಾಡಿ, ಪೂರಕ ಮಾಹಿತಿಯಲ್ಲಿ ಕಳೆದ ಸಾಲಿನ ಬಜೆಟ್ ಅಂಕಿ-ಅಂಶಗಳನ್ನು ನೀಡಿಲ್ಲ. ಇದರಿಂದಾಗಿ ಈ ಬಾರಿ ಯಾವುದಕ್ಕೆ ಎಷ್ಟು ಹಣ ಮೀಸಲಿಡಬೇಕೆಂಬುದು ತಿಳಿದು ಬರುತ್ತಿಲ್ಲ. ನಗರದಲ್ಲಿ ನೈರ್ಮಲ್ಯೀಕರಣ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಈ ಹಿನ್ನಲೆಯಲ್ಲಿ ಇನ್ನೂ ಹೆಚ್ಚಿನ ಹಣ ಮೀಸಲಿಟ್ಟು ವ್ಯವಸ್ಥಿತವಾಗಿ ನಡೆಸುವ ಮೂಲಕ ನಗರವನ್ನು ಮಾದರಿಯನ್ನಾಗಿಸಬೇಕೆಂದರು.
    ನಗರಸಭಾ ವ್ಯಾಪ್ತಿಯ ಎಲ್ಲಾ ಕನ್ಸರ್‍ವೆನ್ಸಿ ರಸ್ತೆಗಳನ್ನು ಹಾಗು ಚರಂಡಿಗಳನ್ನು ಸ್ವಚ್ಛಗೊಳಿಸುವುದು. ಇದರಿಂದ ರೋಗರುಜಿನಗಳು ಕಾಣಿಸಿಕೊಳ್ಳುವುದಿಲ್ಲ. ಜೊತೆಗೆ ಸೊಳ್ಳೆಗಳ ಹಾವಳಿ ಕಡಿಮೆಯಾಗಲಿದೆ.  ಈ ಹಿನ್ನಲೆಯಲ್ಲಿ ಇದಕ್ಕೆ ತಗುಲುವ ವೆಚ್ಚವನ್ನು ಬಜೆಟ್‌ನಲ್ಲಿ ತೆಗೆದಿರಿಸಬೇಕೆಂದರು.
    ನಗರಸಭೆ ವತಿಯಿಂದ ನೀರಿನ ನಿರ್ವಹಣೆಗೆ ಮಾಡುತ್ತಿರುವ ಖರ್ಚು ಅಧಿಕವಾಗಿದ್ದು, ಇದನ್ನು ಕಡಿಮೆಗೊಳಿಸಬೇಕು. ಭದ್ರಾ ನದಿಯು ನಗರದ ಮಧ್ಯ ಭಾಗದಲ್ಲಿ ಹರಿಯುತ್ತಿದ್ದರೂ ಸಹ ನೀರಿಗೆ ಹೆಚ್ಚಿನ ಶುಲ್ಕ ವಸೂಲಾತಿ ಮಾಡುತ್ತಿರುವುದು ಸರಿಯಲ್ಲ. ಅನಗತ್ಯವಾಗಿರುವ ಬೀದಿ ನಲ್ಲಿಗಳನ್ನು ಮತ್ತು ಅನಧಿಕೃತ ನಲ್ಲಿಗಳನ್ನು ಪತ್ತೆ ಹಚ್ಚಿ ನೀರು ಸರಬರಾಜು ಸ್ಥಗಿತಗೊಳಿಸುವುದು. ಪೌರಸೇವಾ ನೌಕರರು ಮತ್ತು ಧಾರ್ಮಿಕ ಕೇಂದ್ರಗಳು ಹೊರತುಪಡಿಸಿ ಬೇರೆ ಯಾರಿಗೂ ಉಚಿತವಾಗಿ ನೀರಿನ ವ್ಯವಸ್ಥೆ ಕಲ್ಪಿಸಬಾರದು. ಬಾಡಿಗೆ ಮನೆಗಳಿಂದಲೂ ನೀರಿನ ಶುಲ್ಕ ವಸೂಲಾತಿ ಮಾಡಬೇಕೆಂದರು.
    ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಿಸಬೇಕು. ನಿಗದಿತ ಸಮಯಕ್ಕೆ ಸರಿಯಾಗಿ ಬೀದಿಗಳನ್ನು ನಂದಿಸಬೇಕು. ಇದರಿಂದ ಅನಗತ್ಯವಾಗಿ ವಿದ್ಯುತ್ ಪೋಲಾಗುವುದನ್ನು ತಡೆಯಬಹುದಾಗಿದ್ದು, ಜೊತೆಗೆ ಮುಖ್ಯರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಬೇಕು. ಇದರಿಂದ ವಿದ್ಯುತ್ ಉಳಿತಾಯವಾಗಲಿದೆ. ನಗರಸಭೆ ವ್ಯಾಪ್ತಿಯ ಎಲ್ಲಾ ಉದ್ದಿಮೆ ಹಾಗು ಅಂಗಡಿ ಮುಂಗಟ್ಟುಗಳು ಕಡ್ಡಾಯವಾಗಿ ಪರವಾನಗಿ ಪಡೆಯುವಂತೆ ಕ್ರಮ ಕೈಗೊಂಡು ಆದಾಯ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.
    ಟಿ. ವೆಂಕಟೇಶ್ ಮಾತನಾಡಿ, ನಗರಸಭೆ ವ್ಯಾಪ್ತಿಯ ವಾಣಿಜ್ಯ ಪ್ರದೇಶಗಳಲ್ಲಿ ಖಾಲಿ ಇರುವ ನಿವೇಶನಗಳನ್ನು ಆರ್ಥಿಕವಾಗಿ ಲಾಭ ತಂದುಕೊಡುವ ನಿಟ್ಟಿನಲ್ಲಿ ಸದ್ಬಳಕೆ ಮಾಡಿಕೊಳ್ಳುವ ಬದಲು ವಿವಿಧ ಸಂಘ-ಸಂಸ್ಥೆಗಳಿಗೆ ನೀಡುತ್ತಿರುವುದು ಸರಿಯಲ್ಲ. ಜೊತೆಗೆ ನಗರಸಭೆ ವ್ಯಾಪ್ತಿಯಲ್ಲಿ ಖಾಸಗಿ ಹಾಗು ಅನಧಿಕೃತ ಬಡಾವಣೆಗಳು ಹೆಚ್ಚಾಗುತ್ತಿವೆ. ಇವುಗಳಿಂದ ನಗರಸಭೆಗೆ ಯಾವುದೇ ರೀತಿ ಆದಾಯ ಬರುತ್ತಿಲ್ಲ. ಈ ಹಿನ್ನಲೆಯಲ್ಲಿ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು. ಶಿವಮೊಗ್ಗ ಮತ್ತು ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕೇವಲ ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗಿರುವಂತೆ ಕೆಲಸ ಮಾಡುತ್ತಿದ್ದು, ಹೊಸ ಯೋಜನೆಗಳು ನಗರಕ್ಕೆ ಮಂಜೂರಾಗುತ್ತಿಲ್ಲ. ಇದರಿಂದ ನಗರಸಭೆಗೆ ಬರಬೇಕಾದ ಆದಾಯ ಕುಂಠಿತವಾಗುತ್ತಿದ್ದು, ಈ ಬಗ್ಗೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.
    ಹಿರಿಯ ಪತ್ರಕರ್ತ ಎನ್. ಬಾಬು ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ನಗರದ ಜನತೆಗೆ ಶಾಪವಾಗಿ ಪರಿಣಮಿಸಿದೆ. ಈ ಕುರಿತು ಹಲವಾರು ಬಾರಿ ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ. ಜೊತೆಗೆ ನೀರಿನ ಮೀಟರ್ ಅಳವಡಿಕೆ ಕಾಮಗಾರಿ ಸಹ ಅತ್ಯಂತ ಕಳಪೆಯಿಂದ ಕೂಡಿದ್ದು, ಈ ಎರಡು ಕಾಮಗಾರಿಗಳ ವಿರುದ್ಧ ದೊಡ್ಡ ಮಟ್ಟದ ಚಳುವಳಿ ನಡೆಸಬೇಕಾದ ಅನಿವಾರ್ಯತೆ ಇದೆ. ಇದೆ ರೀತಿ ಕಂದಾಯ ಪಾವತಿಗೆ ರಶೀದಿ ನೀಡುತ್ತಿಲ್ಲ. ಕಳೆದ ಒಂದು ವರ್ಷದ ಹಿಂದಿನ ರಶೀದಿ ಇಂದಿಗೂ ಲಭ್ಯವಾಗಿಲ್ಲ. ಜನರು ಅಲೆದಾಡುವಂತಾಗಿದೆ. ಇವೆಲ್ಲವನ್ನು ಸರಿಪಡಿಸಿಕೊಳ್ಳಬೇಕೆಂದು ಎಚ್ಚರಿಸಿದರು.
    ಇದೆ ಹಲವಾರು ಮಂದಿ ಸಲಹೆ, ಮಾರ್ಗದರ್ಶನಗಳನ್ನು ನೀಡಿದರು. ಇದಕ್ಕೂ ಮೊದಲು ಕಂದಾಯಾಧಿಕಾರಿ ರಾಜ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ೧೩೫೬ ಲಕ್ಷ ರು. ನಗರಸಭೆಯಿಂದ ಮತ್ತು ೩೯೬೭ ಲಕ್ಷ ರು. ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಅನುದಾನ ಒಟ್ಟು ೫೩೨೩ ಲಕ್ಷ ರು. ಆದಾಯ ನಿರೀಕ್ಷಿಸಲಾಗಿದೆ. ಇದಕ್ಕೆ ಸರಿ ಹೊಂದುವಂತೆ ಬಜೆಟ್ ಮಂಡನೆ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದ್ದು, ಈ ಹಿನ್ನಲೆಯಲ್ಲಿ ನಗರದ ಬೆಳವಣಿಗೆಗೆ ಅಗತ್ಯವಿರುವ ಸಲಹೆ, ಮಾರ್ಗದರ್ಶನ ನೀಡುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಪೌರಾಯುಕ್ತ ಕೆ. ಪರಮೇಶ್, ನಗರಸಭೆ ೩೫ ವಾರ್ಡ್‌ಗಳ ಸದಸ್ಯರು ಹಾಗು ೫ ಜನ ನೂತನ ನಾಮನಿರ್ದೇಶನಗೊಂಡ ಸದಸ್ಯರು, ನಗರಸಭೆ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.


ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಬಜೆಟ್ ಮಂಡನೆ ಪೂರ್ವಭಾವಿ ಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

No comments:

Post a Comment