ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲು
ಭದ್ರಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಬಿ.ಕೆ ಸಂಗಮೇಶ್ವರ್ ಪರವಾಗಿ ಪ್ರಚಾರ ನಡೆಸುತ್ತಿದ್ದ ವಾಹನ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ತಂಡ ವಶಕ್ಕೆ ಪಡೆದಿರುವುದು.
ಭದ್ರಾವತಿ, ಏ. ೪ : ಕಾಂಗ್ರೆಸ್ ಅಭ್ಯರ್ಥಿ ಶಾಸಕ ಬಿ.ಕೆ ಸಂಗಮೇಶ್ವರ್ ಪರವಾಗಿ ಪ್ರಚಾರ ನಡೆಸುತ್ತಿದ್ದ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
ಟಾಟಾ ಏಸ್ ವಾಹನದಲ್ಲಿ ಸಂಗಮೇಶ್ವರ್ ಪರವಾಗಿ ಪ್ರಚಾರ ನಡೆಸುತ್ತಿದ್ದು, ಚುನಾವಣಾ ಆಯೋಗದಿಂದ ಅನುಮತಿ ಪಡೆಯದೆ ಶಾಸಕರ ಭಾವಚಿತ್ರ, ಕಾಂಗ್ರೆಸ್ ಪಕ್ಷದ ಚಿಹ್ನೆ, ಬಾವುಟದೊಂದಿಗೆ ಹಾಗು ಎಲ್‌ಇಡಿ ಪರದೆ ಮೂಲಕ ಶಾಸಕರ ಸಾಧನೆಗಳ ಪ್ರದರ್ಶನ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಎಂದು ವಾಹನವನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಘಟನೆ ವಿವರ :
ಶಾಸಕ ಬಿ.ಕೆ ಸಂಗಮೇಶ್ವರ್ ಪರವಾಗಿ ಕಳೆದ ಸುಮಾರು ೨ ತಿಂಗಳಿನಿಂದ ಕ್ಷೇತ್ರದಾದ್ಯಂತ ಟಾಟಾ ಏಸ್ ವಾಹನದಲ್ಲಿ ಶಾಸಕರ ಭಾವಚಿತ್ರ, ಕಾಂಗ್ರೆಸ್ ಪಕ್ಷದ ಚಿಹ್ನೆ, ಬಾವುಟದೊಂದಿಗೆ ಹಾಗು ಎಲ್‌ಇಡಿ ಪರದೆ ಮೂಲಕ ಶಾಸಕರ ಸಾಧನೆಗಳ ಪ್ರದರ್ಶನ ಮಾಡುವ ಮೂಲಕ ಪ್ರಚಾರ ನಡೆಸಲಾಗುತ್ತಿದ್ದು, ಸೋಮವಾರ ಸಂಜೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಗವಿರಂಗಪ್ಪ ನೇತೃತ್ವದ ತಂಡ ಈ ವಾಹನ ತಪಾಸಣೆ ನಡೆಸಿದಾಗ ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯದೆ ಪ್ರಚಾರ ಕಾರ್ಯ ಕೈಗೊಳ್ಳುತ್ತಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಚಾಲಕನನ್ನು ಬಂಧಿಸಿ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
No comments:
Post a Comment