Tuesday, April 4, 2023

ಅತಂತ್ರದಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ

ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಮನವಿ

ಭದ್ರಾವತಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಕಾರ್ಖಾನೆ ಉಳಿಸುವಂತೆ ಮನವಿ ಮಾಡಿದ್ದಾರೆ.
    ಭದ್ರಾವತಿ, ಏ. ೫: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಹೋರಾಟ ಮುಂದುವರೆದಿದ್ದು, ಗುತ್ತಿಗೆ ಕಾರ್ಮಿಕರ ಅನಿರ್ಧಿಷ್ಟಾವಧಿ ಹೋರಾಟ ಈಗಾಗಲೇ ೭೫ ದಿನಗಳನ್ನು ಪೂರೈಸಿದೆ. ಈ ಹಿಂದೆ ಮಾ.೩೧ರಿಂದ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಆದರೆ ಈ ಕುರಿತು ಆಡಳಿತ ಮಂಡಳಿ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ನಡುವೆ ಗುತ್ತಿಗೆ ಕಾರ್ಮಿಕರು ಅತಂತ್ರದಲ್ಲಿ ಹೋರಾಟ ಮುಂದುವರೆಸುವಂತಾಗಿದೆ.
    ಒಂದೆಡೆ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಇದರಿಂದಾಗಿ ಹೋರಾಟಕ್ಕೆ ಬೆಂಬಲ ನೀಡುವವರು ಮೌನಕ್ಕೆ ಒಳಗಾಗುವಂತಾಗಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರಕ್ಕೆ ಅಥವಾ ಆಡಳಿತ ಮಂಡಳಿಗೆ ಕಾರ್ಖಾನೆ ಕುರಿತು ಸೂಕ್ತ ನಿರ್ಧಾರ ಕೈಗೊಂಡು ಪ್ರಕಟಿಸಲು ಸಹ  ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೂ ಗುತ್ತಿಗೆ ಕಾರ್ಮಿಕರು ತಮ್ಮ ಮುಂದಿನ ಹೋರಾಟ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಅತಂತ್ರ ಸ್ಥಿತಿ ಎದುರಾಗಿದ್ದು, ಸಂಕಷ್ಟದಲ್ಲಿಯೇ ಗುತ್ತಿಗೆ ಕಾರ್ಮಿಕರು ತಮ್ಮ ಹೋರಾಟ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
    ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಮನವಿ :
    ಗುತ್ತಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಕಾರ್ಖಾನೆ ಉಳಿಸುವಂತೆ ಮನವಿ ಮಾಡಿದ್ದಾರೆ.
    ಮನವಿಗೆ ಸ್ಪಂದಿಸಿರುವ ಡಾ. ವೀರೇಂದ್ರ ಹೆಗ್ಗಡೆಯವರು ಪೂರಕವಾಗಿ ಸ್ಪಂದಿಸಿದ್ದಾರೆ. ಸಿಐಟಿಯು ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ವಿನಯ್ ಕುಮಾರ್, ಅವಿನಾಶ್, ಎಐಟಿಯುಸಿ ಅಧ್ಯಕ್ಷ ಕುಮಾರ ಸ್ವಾಮಿ, ಶಿವನಾಗು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment