ಸೆ.೨೮ರ ಕರ್ನಾಟಕ ಬಂದ್‌ಗೆ ಕಾಂಗ್ರೆಸ್ ಬೆಂಬಲ
ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಸೆ.೨೮ರಂದು ಕರೆ ನೀಡಲಾಗಿರುವ ಬಂದ್‌ಗೆ ಪೂರಕ ಬೆಂಬಲ ನೀಡುವ ಸಂಬಂಧ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಪತ್ರಿಕಾಗೋಷ್ಠಿ ನಡೆಯಿತು.
ಭದ್ರಾವತಿ, ಸೆ. ೨೪: ಜನ ವಿರೋಧಿ, ರೈತ ವಿರೋಧಿ ಧೋರಣೆಗಳನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಸೆ.೨೮ರಂದು ಹಮ್ಮಿಕೊಳ್ಳಲಾಗಿರುವ ಕರ್ನಾಟಕ ಬಂದ್‌ಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಸ್ಪಷ್ಟಪಡಿಸಿದರು.
ಅವರು ಗುರುವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತರಲು ಮುಂದಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುಚ್ಛಕ್ತಿ ಕಾಯ್ದೆ ತಿದ್ದುಪಡಿ ೩ ಮಸೂದೆಗಳನ್ನು ಚರ್ಚೆಗೆ ಅವಕಾಶ ನೀಡದೇ ಸುಗ್ರೀವಾಜ್ಞೆ ಮೂಲಕ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಈ ಮಸೂದೆಗಳ ವಿರುದ್ಧ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ. ಹೋರಾಟಕ್ಕೆ ಪೂರಕವಾಗಿ ಕಾಂಗ್ರೆಸ್ ಸಹ ಬೆಂಬಲ ನೀಡಲಿದೆ ಎಂದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಬಡವರ ಜಮೀನು ಶ್ರೀಮಂತರ ಪಾಲಾಗುವಂತೆ ಮಾಡಲಾಗುತ್ತಿದೆ. ರೆಸಾರ್ಟ್, ಲೇಔಟ್, ಬಡಾವಣೆ ಸೇರಿದಂತೆ ಇನ್ನಿತರ ವಾಣಿಜ್ಯ ಕೇಂದ್ರಗಳಾಗಿ ರೈತರ ಕೃಷಿ ಭೂಮಿಯನ್ನು ಮಾರ್ಪಾಡು ಮಾಡಲಾಗುತ್ತಿದೆ. ಆಹಾರ ಭದ್ರತೆ ಕಾಯ್ದೆಯಡಿಯಲ್ಲಿ ಜಾರಿಗೆ ತರಲಾಗಿದ್ದ ಪಡಿತರ ವ್ಯವಸ್ಥೆಯನ್ನೂ ಸಹ ಸರ್ಕಾರ ಕಿತ್ತುಕೊಂಡು ಬಡವರು ಹಾಗು ರೈತರನ್ನು ನಿರ್ನಾಮ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರೈತರ ಹಿತಕಾಯುವಲ್ಲಿ ಮುಂದಾಗಿದೆ. ರೈತರು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ ಪಡಿಸಿ ಉತ್ತಮ ಬೆಲೆಗೆ ಮಾರಾಟ ಮಾಡುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಪ್ರಸ್ತುತ ತಿದ್ದುಪಡಿ ಕಾಯ್ದೆಯಿಂದಾಗಿ ರೈತರು ಸಮಿತಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ತಪ್ಪಿಹೋಗಿದೆ. ಬಂಡವಾಳ ಶಾಯಿಗಳು ನಿಗದಿಪಡಿಸಿದ ಬೆಲೆಗೆ ರೈತರು ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ರೈತರು ಪ್ರಶ್ನಿಸುವ ಅಧಿಕಾರ ಕಳೆದುಕೊಂಡಂತಾಗಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ, ಎಪಿಎಂಸಿ ಅಧ್ಯಕ್ಷ ಲವೇಶ್‌ಗೌಡ, ಮುಖಂಡರಾದ ಮಹಮದ್ ಸನಾವುಲ್ಲಾ, ರಾಘವೇಂದ್ರ, ಆಂಜನಪ್ಪ, ಪುಟ್ಟೇಗೌಡ, ಜಯರಾಜ್, ಅಮೀರ್‌ಜಾನ್, ಚನ್ನಪ್ಪ, ಅರುಣ್, ರೂಪಾ ನಾರಾಯಣ, ಅಣ್ಣೋಜಿರಾವ್, ಗೋಪಿ, ನಂಜಪ್ಪ, ರಾಜು, ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.