Wednesday, February 17, 2021

ಶ್ರೀ ಮಾತಂಗಮ್ಮ ದೇವಿಯ ಉತ್ಸವ ಮೂರ್ತಿಗೆ ಕಲಾಹೋಮ, ಕುಂಬಾಭಿಷೇಕ

ಭದ್ರಾವತಿ, ಫೆ. ೧೭: ಹಿರಿಯೂರು ಡಾ. ಬಿ.ಆರ್ ಅಂಬೇಡ್ಕರ್ ಕಾಲೋನಿಯಲ್ಲಿರುವ ಶ್ರೀ ಮಾತಂಗಮ್ಮ ದೇವಿ ಮತ್ತು ಶ್ರೀ ದುರ್ಗಮ್ಮ ದೇವಿ ಹಾಗು ಶ್ರೀ ಕಲುಬೆ ರಂಗನಾಥಸ್ವಾಮಿ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಾತಂಗಮ್ಮ ದೇವಿಯ ಉತ್ಸವ ಮೂರ್ತಿಗೆ ಕಲಾಹೋಮ ಮತ್ತು ಕುಂಬಾಭಿಷೇಕ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ಹಿರಿಯೂರು ಶ್ರೀ ಅಚಲ ಸದ್ಗುರು ಆಶ್ರಮದ ಶ್ರೀ ಲಕ್ಷ್ಮಣಾರ್ಯ ಸ್ವಾಮೀಜಿ ಮತ್ತು ಚಿತ್ರದುರ್ಗ ಆದಿಜಾಂಬವ ಮಠದ ಶ್ರೀ ಷಡಕ್ಷರ ಮುನಿ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಶ್ರೀ ಮಾತಂಗಮ್ಮ ದೇವಿಯ ಉತ್ಸವ ಮೂರ್ತಿಗೆ ಕಲಾಹೋಮ ಮತ್ತು ಕುಂಬಾಭಿಷೇಕ ಮಹೋತ್ಸವ ಯಶಸ್ವಿಯಾಗಿ ಜರುಗಲು ಕಾರಣಕರ್ತರಾದ ದೇವಸ್ಥಾನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾಕರ್ತರು ಹಾಗು ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.
ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್,  ಪ್ರಮುಖರಾದ ಬಾರಂದೂರು ರಂಗಪ್ಪ, ಕೃಷ್ಣಪ್ಪ ವೀರಾಪುರ, ಕೃಷ್ಣ, ಗವಿಸಿದ್ದಪ್ಪ, ಪ್ರಭಾಕರ್, ಮಹೇಶ್, ಹರೀಶ್, ಸಂಪತ್‌ಕುಮಾರ್, ಕೃಷ್ಣ, ಶಿವು, ಸಿದ್ದಪ್ಪ, ಸುನಿಲ್, ಅಣ್ಣಪ್ಪ, ಮಂಜುನಾಥ್ ಸೇರದಿಂತೆ ಇನ್ನಿತರರು ಉಪಸ್ಥಿತರಿದ್ದರು.

ಚಿತ್ರ: ಡಿ೧೭-ಬಿಡಿವಿಟಿ೩
ಹಿರಿಯೂರು ಡಾ. ಬಿ.ಆರ್ ಅಂಬೇಡ್ಕರ್ ಕಾಲೋನಿಯಲ್ಲಿರುವ ಶ್ರೀ ಮಾತಂಗಮ್ಮ ದೇವಿ ಮತ್ತು ಶ್ರೀ ದುರ್ಗಮ್ಮ ದೇವಿ ಹಾಗು ಶ್ರೀ ಕಲುಬೆ ರಂಗನಾಥಸ್ವಾಮಿ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಾತಂಗಮ್ಮ ದೇವಿಯ ಉತ್ಸವ ಮೂರ್ತಿಗೆ ಕಲಾಹೋಮ ಮತ್ತು ಕುಂಬಾಭಿಷೇಕ ಮಹೋತ್ಸವ ಧಾರ್ಮಿಕ ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.

ಫೆ.೨೦ರಂದು ಬೃಹತ್ ಪ್ರತಿಭಟನಾ ಮೆರವಣಿಗೆ

   

   ಭದ್ರಾವತಿ, ಫೆ. ೧೭: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ ಫೆ.೨೦ ರಂದು ಬೆಳಿಗ್ಗೆ ೧೦ ಗಂಟೆಗೆ ನಗರ ಹಾಗು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
    ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕರ್ತರು, ರೈತರು, ಕಾರ್ಮಿಕರು, ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು, ವರ್ತಕರು, ವ್ಯಾಪಾರಸ್ಥರು, ಯುವ ಸಮುದಾಯದವರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಫೆ. ೧೯ ಶಿವಾಜಿ ಮಹಾರಾಜರ ೩೯೪ನೇ ಜಯಂತ್ಯೋತ್ಸವ

  

   ಭದ್ರಾವತಿ, ಫೆ. ೧೭: ನಗರದ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ವತಿಯಿಂದ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ಸಹಯೋಗದೊಂದಿಗೆ ಫೆ. ೧೯ರ ಬೆಳಿಗ್ಗೆ ೧೦ ಗಂಟೆಗೆ ಶ್ರೀ ಶಿವಾಜಿ ಮಹಾರಾಜರ ೩೯೪ನೇ ಜಯಂತ್ಯೋತ್ಸವ ತಾಲೂಕು ಕಚೇರಿ ಸಭಾಂಗಣದಲ್ಲಿ  ಹಮ್ಮಿಕೊಳ್ಳಲಾಗಿದೆ.
    ಸಂಘದ ಅಧ್ಯಕ್ಷ ಯಶವಂತರಾವ್ ಘೋರ್ಪಡೆ ಅಧ್ಯಕ್ಷತೆ ವಹಿಸಲಿದ್ದು, ಕೋವಿಡ್-೧೯ರ ಹಿನ್ನಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ.
  ಸಮಾಜ ಬಂಧುಗಳು, ಸಾರ್ವಜನಿಕರು ಸಹಕರಿಸುವಂತೆ ಕಾರ್ಯದರ್ಶಿ ಪ್ರಕಾಶ್‌ರಾವ್ ದುರೆ ಕೋರಿದ್ದಾರೆ.  

ಕಾಡುಕೋಣ ದಾಳಿಗೆ ಕಾಲೇಜು ವಿದ್ಯಾರ್ಥಿ ಬಲಿ


    ಭದ್ರಾವತಿ, ಫೆ. ೧೭: ಕಾಡುಕೋಣ ದಾಳಿಗೆ ತುತ್ತಾಗಿ ಕಾಲೇಜು ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ತಾಲೂಕಿನ ಅರಣ್ಯ ವ್ಯಾಪ್ತಿಯ ಬಿಸಿಲುಮನೆ ಗ್ರಾಮದಲ್ಲಿ ನಡೆದಿದೆ.
   ಅಂತರಗಂಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಗೌತಮ್ (೧೮) ಎಂಬಾತ ಜಾತ್ರೆ ಪ್ರಯುಕ್ತ ಮಂಗಳವಾರ ದೊಡ್ಡೇರಿ ಚೌಡಮ್ಮ ದೇವಸ್ಥಾನಕ್ಕೆ ಹೂವು ತಲುಪಿಸಲು ದ್ವಿಚಕ್ರವಾಹನದಲ್ಲಿ ಅಂತರಗಂಗೆ ಕ್ಯಾಂಪ್ ರಂಗನಾಥಪುರದಿಂದ ತೆರಳುತ್ತಿದ್ದಾಗ ಮಾರ್ಗಮಧ್ಯೆ ಬಿಸಿಲುಮನೆ ಗ್ರಾಮದ ಸಮೀಪ ಕಾಡುಕೋಣಗಳ ದಾಳಿಗೆ ಒಳಗಾಗಿ ಪ್ರಾಣ ಉಳಿಸಿಕೊಳ್ಳುವ ಜೀವ ಭಯದಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.  
   ಮೃತನ ತಾಯಿ ಮಂಜಮ್ಮ ಹಾಗೂ ತಂದೆ ಕುಮರೇಶ್ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.  ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್.ಕುಮಾರ್ ಸೇರಿದಂತೆ ಮುಖಂಡರುಗಳು ಭೇಟಿ ನೀಡಿ ಸ್ವಾಂತನ ಹೇಳಿದರು.
   ಕಾಡಿನಂಚಿನ ದೊಡ್ಡೇರಿ- ಗಂಗೂರು ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಕಂಗಲಾಗಿದ್ದು, ರೈತರು ಬೆಳೆ ಹಾನಿ ಜೊತೆಗೆ ಜೀವ ಭಯದಲ್ಲಿ ಬದುಕು ಸಾಗಿಸುವಂತಾಗಿದೆ. ಅರಣ್ಯ ಇಲಾಖೆ ಗ್ರಾಮಸ್ಥರಿಗೆ ರಕ್ಷಣೆ ನೀಡುವ ಜೊತೆಗೆ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ.

Tuesday, February 16, 2021

ಸೈದರ ಕಲ್ಲಹಳ್ಳಿ, ಸನ್ಯಾಸಿಕೊಡಮಗ್ಗೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

   ಭದ್ರಾವತಿ, ಫೆ. ೧೬: ತಾಲೂಕಿನ ಎರಡು ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮಂಗಳವಾರ ನಡೆಯಿತು.
    ಸೈದರ ಕಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ  ಒಟ್ಟು ೯ ಸದಸ್ಯರಿದ್ದು, 'ಎ' ವರ್ಗ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಸುಪ್ರಿತ ಹಾಗು ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಎಂ. ಮಲ್ಲೇಶಪ್ಪ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚೇತನ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
   ಸನ್ಯಾಸಿಕೊಡಮಗ್ಗೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೦ ಸದಸ್ಯರಿದ್ದು,  ಪರಿಶಿಷ್ಟ ಜಾತಿಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಿ. ನಾಗೇಶಪ್ಪ ಹಾಗು 'ಎ' ವರ್ಗ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ನೀಲಮ್ಮ ಆಯ್ಕೆಯಾಗಿದ್ದಾರೆ. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಸಿ ಶಶಿಧರ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

Monday, February 15, 2021

ಮಹಿಳಾ ಸೇವಾ ಸಮಾಜದ ಕಟ್ಟಡ ಉದ್ಘಾಟನೆ

ಸುಮಾರು ೫ ದಶಕಗಳಿಗೂ ಹಳೇಯದಾದ ಹಳೇನಗರದ ಮಹಿಳಾ ಸೇವಾ ಸಮಾಜದ ನೂತನ ಕಟ್ಟಡವನ್ನು ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
   ಭದ್ರಾವತಿ, ಫೆ. ೧೫: ಸುಮಾರು ೫ ದಶಕಗಳಿಗೂ ಹಳೇಯದಾದ ಹಳೇನಗರದ ಮಹಿಳಾ ಸೇವಾ ಸಮಾಜದ ನೂತನ ಕಟ್ಟಡವನ್ನು ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
     ಈ ಮಹಿಳಾ ಸೇವಾ ಸಮಾಜ ತನ್ನದೇ ಆದ ವಿಶಿಷ್ಟತೆಯಿಂದ ಗುರುತಿಸಿಕೊಂಡಿದೆ. ಹಳೇಯ ಕಟ್ಟಡ ಶಿಥಿಲಗೊಂಡ ಹಿನ್ನಲೆಯಲ್ಲಿ ಅದನ್ನು ನೆಲಸಮಗೊಳಿಸಿ ನಗರಸಭೆ ಅನುದಾನದಲ್ಲಿ ಸುಮಾರು ೨೦ ಲಕ್ಷ ರು. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಮೇಲ್ಭಾಗದ ಕಟ್ಟಡಕ್ಕೆ ಸಂಸದರ ನಿಧಿಯಿಂದ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಭೂಮಿ ಪೂಜೆ ಸಹ ನೆರವೇರಿಸಲಾಯಿತು.
    ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ರೈಲ್ವೆ ಸಲಹಾ ಸಮಿತಿ ಸದಸ್ಯ ಎನ್. ವಿಶ್ವನಾಥರಾವ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಭೋವಿ ನಿಗಮದ ನಿರ್ದೇಶಕ ಜಿ. ಆನಂದಕುಮಾರ್, ಸಮಾಜದ ಹಿರಿಯ ಸದಸ್ಯರು, ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ಹಾಗು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರ ಆರಂಭಿಸುವಂತೆ ಒತ್ತಾಯಿಸಿ ಎಸ್‌ಡಿಪಿಐ ಮನವಿ

  ಭದ್ರಾವತಿ ತಾಲೂಕಿನ ವಿವಿಧೆಡೆ ಗ್ರಾಮೀಣ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸುವಂತೆ ಒತ್ತಾಯಿಸಿ ಸೋಮವಾರ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕಿ ಅಮೂಲ್ಯರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
    ಭದ್ರಾವತಿ, ಫೆ. ೧೫: ತಾಲೂಕಿನ ವಿವಿಧೆಡೆ ಗ್ರಾಮೀಣ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸುವಂತೆ ಒತ್ತಾಯಿಸಿ ಸೋಮವಾರ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕಿ ಅಮೂಲ್ಯರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
   ಕೋವಿಡ್-೧೯ರ ಹಿನ್ನಲೆಯಲ್ಲಿ ಕಡಿತಗೊಳಿಸಲಾಗಿದ್ದ ಬಸ್ ಸಂಚಾರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಇನ್ನೂ ಸರಿಯಾಗಿ ಆರಂಭಗೊಂಡಿಲ್ಲ. ಬಸ್‌ಗಳ ಸಂಚಾರ ಕಡಿಮೆ ಇದ್ದು, ಇದರಿಂದಾಗಿ ಬಹಳಷ್ಟು ಕಡೆ ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಥಿಗಳು, ಸರ್ಕಾರಿ ಹಾಗು ಖಾಸಗಿ ನೌಕರರು, ಕೂಲಿ ಕಾರ್ಮಿಕರು, ವೃದ್ದರು, ಮಹಿಳೆಯರು ನಗರ ಪ್ರದೇಶಗಳಿಗೆ ಬಂದು ಹೋಗುವುದು ಕಷ್ಟಕರವಾಗಿದೆ ಎಂದು ಅಳಲು ವ್ಯಕ್ತಪಡಿಸಲಾಗಿದೆ.
   ತಕ್ಷಣ ಒಂದನೇ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಟಿಪ್ಪು ಸರ್ಕಲ್, ಅನ್ವರ್ ಕಾಲೋನಿ, ಅಮೀರ್ ಜಾನ್ ಕಾಲೋನಿ, ಹೊಳೆಹೊನ್ನೂರು ಮಾರ್ಗವಾಗಿ ದಾಸರಕಲ್ಲಹಳ್ಳಿಯಿಂದ ಹೊಳೆಹೊನ್ನೂರುವರೆಗೆ, ಎರಡನೇ ಮಾರ್ಗವಾಗಿ ಮುಖ್ಯ ಬಸ್ ನಿಲ್ದಾಣದಿಂದ ಅರಬಿಳಚಿವರೆಗೆ, ಮೂರನೇ ಮಾರ್ಗವಾಗಿ ಮುಖ್ಯ ಬಸ್ ನಿಲ್ದಾಣದಿಂದ ಹೊಸಮನೆ, ಕಾಚಗೊಂಡನಹಳ್ಳಿ, ದೇವರಹಳ್ಳಿ, ಗುಡ್ಡದ ನೇರಳೆಕೆರೆವರೆಗೆ ಹಾಗು ನಾಲ್ಕನೇ ಮಾರ್ಗವಾಗಿ ತಾಲೂಕಿನ ಹೊಳೆಹೊನ್ನೂರು, ಕೈಮರ, ಕಲ್ಲಿಹಾಳ್, ಮಾರಶೆಟ್ಟಿಹಳ್ಳಿ, ಅರಬಿಳಚಿ, ಅರಬಿಳಚಿ ಕ್ಯಾಂಪ್, ಕೂಡ್ಲಿಗೆರೆ, ಅರಳಿಹಳ್ಳಿ, ಶ್ರೀರಾಮನಗರ, ಸೀಗೆಬಾಗಿ ಮೂಲಕ ಆಲ್ ಮಹಮೂದ್ ಶಾಲೆ, ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಿಂದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ವರೆಗೆ ಮತ್ತು ೫ನೇ ಮಾರ್ಗವಾಗಿ ಮುಖ್ಯ ಬಸ್ ನಿಲ್ದಾಣದಿಂದ ನ್ಯೂಟೌನ್, ಜಯಶ್ರೀ ಸರ್ಕಲ್, ಮಿಲ್ಟ್ರಿಕ್ಯಾಂಪ್, ಬೊಮ್ಮನಕಟ್ಟೆ, ಹಿರಿಯೂರು, ಗೊಂದಿ, ಹುಣಸೇಕಟ್ಟೆ ಜಂಕ್ಷನ್‌ವರೆಗೆ ಬಸ್ ಸಂಚಾರ ಆರಂಭಿಸುವಂತೆ ಮನವಿ ಮಾಡಲಾಗಿದೆ.
   ಎಸ್‌ಡಿಪಿಐ ತಾಲೂಕು ಘಟಕದ ಅಧ್ಯಕ್ಷ ಮಹಮದ್ ತಾಹೇರ್, ಕಾರ್ಯದರ್ಶಿ ಮಹಮದ್ ಗೌಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.