Wednesday, February 17, 2021

ಕಾಡುಕೋಣ ದಾಳಿಗೆ ಕಾಲೇಜು ವಿದ್ಯಾರ್ಥಿ ಬಲಿ


    ಭದ್ರಾವತಿ, ಫೆ. ೧೭: ಕಾಡುಕೋಣ ದಾಳಿಗೆ ತುತ್ತಾಗಿ ಕಾಲೇಜು ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ತಾಲೂಕಿನ ಅರಣ್ಯ ವ್ಯಾಪ್ತಿಯ ಬಿಸಿಲುಮನೆ ಗ್ರಾಮದಲ್ಲಿ ನಡೆದಿದೆ.
   ಅಂತರಗಂಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಗೌತಮ್ (೧೮) ಎಂಬಾತ ಜಾತ್ರೆ ಪ್ರಯುಕ್ತ ಮಂಗಳವಾರ ದೊಡ್ಡೇರಿ ಚೌಡಮ್ಮ ದೇವಸ್ಥಾನಕ್ಕೆ ಹೂವು ತಲುಪಿಸಲು ದ್ವಿಚಕ್ರವಾಹನದಲ್ಲಿ ಅಂತರಗಂಗೆ ಕ್ಯಾಂಪ್ ರಂಗನಾಥಪುರದಿಂದ ತೆರಳುತ್ತಿದ್ದಾಗ ಮಾರ್ಗಮಧ್ಯೆ ಬಿಸಿಲುಮನೆ ಗ್ರಾಮದ ಸಮೀಪ ಕಾಡುಕೋಣಗಳ ದಾಳಿಗೆ ಒಳಗಾಗಿ ಪ್ರಾಣ ಉಳಿಸಿಕೊಳ್ಳುವ ಜೀವ ಭಯದಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.  
   ಮೃತನ ತಾಯಿ ಮಂಜಮ್ಮ ಹಾಗೂ ತಂದೆ ಕುಮರೇಶ್ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.  ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್.ಕುಮಾರ್ ಸೇರಿದಂತೆ ಮುಖಂಡರುಗಳು ಭೇಟಿ ನೀಡಿ ಸ್ವಾಂತನ ಹೇಳಿದರು.
   ಕಾಡಿನಂಚಿನ ದೊಡ್ಡೇರಿ- ಗಂಗೂರು ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಕಂಗಲಾಗಿದ್ದು, ರೈತರು ಬೆಳೆ ಹಾನಿ ಜೊತೆಗೆ ಜೀವ ಭಯದಲ್ಲಿ ಬದುಕು ಸಾಗಿಸುವಂತಾಗಿದೆ. ಅರಣ್ಯ ಇಲಾಖೆ ಗ್ರಾಮಸ್ಥರಿಗೆ ರಕ್ಷಣೆ ನೀಡುವ ಜೊತೆಗೆ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ.

No comments:

Post a Comment