Wednesday, March 24, 2021

ವಿಶ್ವ ಕ್ಷಯ ರೋಗ ದಿನಾಚರಣೆ : ಜಾಥಾ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಚಾಲನೆ

ಭದ್ರಾವತಿಯಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಬುಧವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಚಾಲನೆ ನೀಡಿದರು.  
   ಭದ್ರಾವತಿ, ಮಾ. ೨೪: ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಬುಧವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಚಾಲನೆ ನೀಡಿದರು.  
    ತಾಲೂಕು ಆರೋಗ್ಯಾಧಿಕಾರಿ ಎಂ.ವಿ ಅಶೋಕ್ ಮಾತನಾಡಿ,  'ಕ್ಷಯ ರೋಗ ನಿರ್ಮೂಲನೆಗೆ ಕಾಲಘಟಿಸುತ್ತಿದೆ' ಘೋಷ ವಾಕ್ಯದೊಂದಿಗೆ ಈ ಬಾರಿ ವಿಶ್ವ ಕ್ಷಯ ರೋಗ ದಿನಾಚರಣೆ ಆಚರಿಸಲಾಗುತ್ತಿದೆ. ಭಾರತದಲ್ಲಿ ಪ್ರತಿದಿನ ೬,೦೦೦ ರೋಗಿಗಳಿಗೆ ಕ್ಷಯರೋಗ ಕಂಡುಬರುತ್ತಿದ್ದು, ಸುಮಾರು ೬೦೦ ಜನ (೫ ನಿಮಿಷಕ್ಕೆ ಇಬ್ಬರು) ಸಾವನ್ನಪ್ಪುತ್ತಿದ್ದಾರೆ. ಸತತ ೨ ವಾರಗಳ ಕೆಮ್ಮು ಮತ್ತು ಕಫ, ಸಂಜೆ ಜ್ವರ, ಎದೆ ನೋವು, ರಾತ್ರಿ ವೇಳೆ ಬೆವರುವುದು, ತೂಕ ಕಡಿಮೆ ಆಗುವುದು ಹಾಗೂ ಕೆಲವೊಮ್ಮೆ ರಕ್ತದಲ್ಲಿ ಕಫ ಬೀಳುವುದು. ಕ್ಷಯರೋಗದ ಮುಖ್ಯ ಲಕ್ಷಣಗಳಾಗಿವೆ ಎಂದರು.
   ಕ್ಷಯರೋಗಿಯು ಕೆಮ್ಮಿದಾಗ ಮತ್ತು ಸೀನಿದಾಗ ಹೊರಬರುವ ತುಂತುರು ಹನಿಗಳಿಂದ ಗಾಳಿಯ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ರೋಗಾಣುಗಳು ಹರಡುತ್ತವೆ.  ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಾಹಿತಿ ಶಿಕ್ಷಣ ಮತ್ತು ಸಂಪರ್ಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಈ ವರ್ಷ ಕ್ಷಯರೋಗ ನಿರ್ಮೂಲನೆಗೆ ಶಿವಮೊಗ್ಗ ಜಿಲ್ಲೆ ಆಯ್ಕೆಯಾಗಿದ್ದು, ಈ ಹಿನ್ನಲೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಬೀದಿ ನಾಟಕಗಳನ್ನು, ಶಾಲಾ-ಕಾಲೇಜುಗಳಲ್ಲಿ ಐ.ಇ.ಸಿ ಕಾರ್ಯಕ್ರಮ, ನಗರದ ಪ್ರಮುಖ ಕಟ್ಟಡಗಳ ಮೇಲೆ ಕೆಂಪು ದೀಪಗಳನ್ನು ಬೆಳಗಿಸುವುದು ಹಾಗು ತಾಲೂಕಿನ ಎಲ್ಲಾ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಆಯಾ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಐ.ಇ.ಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.  
    ಆಶಾ ಮೇಲ್ವಿಚಾರಕಿ ವಸಂತ, ಹಿರಿಯ ಆರೋಗ್ಯ ಸಹಾಯಕ ಆನಂದಮೂರ್ತಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ನಿರ್ಮಲ ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಕಾಲೇಜ್ ನರ್ಸಿಂಗ್ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
   ತಾಲೂಕು ಕಛೇರಿ ಮುಂಭಾಗ ಆರಂಭಗೊಂಡ ಜಾಥಾ ಬಸವೇಶ್ವರ ವೃತ್ತ, ಸಿ.ಎನ್ ರಸ್ತೆ ರಸ್ತೆ ಮೂಲಕ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ತಲುಪಿತು.  

Tuesday, March 23, 2021

ಲತೀಶ್ ಪಾಲ್ದಾನೆ ವರ್ಗಾವಣೆ : ಬೀಳ್ಕೊಡುಗೆ

ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲತೀಶ್ ಪಾಲ್ದಾನೆ ಮಂಗಳೂರು ಆಕಾಶವಾಣಿ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದು, ಈ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಿ ಬೀಳ್ಕೊಡುಗೆ ನೀಡಲಾಯಿತು.
   ಭದ್ರಾವತಿ, ಮಾ. ೨೩: ನಗರದ ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲತೀಶ್ ಪಾಲ್ದಾನೆ ಮಂಗಳೂರು ಆಕಾಶವಾಣಿ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದಾರೆ.
   ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಜೊತೆಗೆ ಎಲ್ಲರೊಂದಿಗೂ ಒಡನಾಟಹೊಂದಿದ್ದ ಲತೀಶ್ ಪಾಲ್ದಾನೆರವರ ಕರ್ತವ್ಯ ಸ್ಮರಿಸುವ ಜೊತೆಗೆ ವಿಶೇಷವಾಗಿ ಆಕಾಶವಾಣಿ ಕೇಂದ್ರದ ಸಾಂದರ್ಭಿಕ ಉದ್ಘೋಷಕರು ಅಭಿನಂದಿಸುವ ಮೂಲಕ ಬೀಳ್ಕೊಡುಗೆ ನೀಡಿದರು.
     ಕರ್ನಾಟಕ ರಾಜ್ಯ ಸಾಂದರ್ಭಿಕ ಉದ್ಘೋಷಕರ ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ ಶರ್ಮ, ಶಾರದಾ, ಬಸವರಾಜು, ಶಕೀಲ್, ಶೋಭಾ, ನಂದಿನಿ, ಮೀನಾ, ಪ್ರೇಮಲತಾ, ಯೋಗೀಶ್ವರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂಚಿ ಹೊನ್ನಮ್ಮ ಬಾಲಕಿಯರ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಭದ್ರಾವತಿ ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಹಾಗೂ ವೈಯುಕ್ತಿಕ ಚಾಂಪಿಯನ್ ಶಿಪ್ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಮಾ. ೨೩: ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಹಾಗೂ ವೈಯುಕ್ತಿಕ ಚಾಂಪಿಯನ್ ಶಿಪ್ ತಮ್ಮದಾಗಿಸಿಕೊಂಡಿದ್ದಾರೆ.
   ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪಂದ್ಯಾವಳಿಯಲ್ಲಿ ತಾಲೂಕಿನ ವಿವಿಧ ಕಾಲೇಜುಗಳ ಕ್ರೀಡಾ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದವು. ಬಹುತೇಕ ತಂಡಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದವು.
   ಕಾಲೇಜಿನ ವಿದ್ಯಾರ್ಥಿನಿಯರ ಸಾಧನೆಯನ್ನು ಪ್ರಾಂಶುಪಾಲರು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಉಪನ್ಯಾಸಕ ವೃಂದ ಹಾಗು ಸಿಬ್ವಂದಿ ವರ್ಗದವರು ಅಭಿನಂದಿಸಿದ್ದಾರೆ.

೧೮೫ನೇ ಶ್ರಿ ರಾಮಕೃಷ್ಣ ಪರಮಹಂಸರ ಜಯಂತಿ

ಭದ್ರಾವತಿ ಹಳೇನಗರದ ಖಂಡೇರಾವ್ ಕೊಪ್ಪಲ್‌ನಲ್ಲಿರುವ ಶ್ರೀ ರಾಮಕೃಷ್ಣ ಗುರುಕುಲಾಶ್ರಮದಲ್ಲಿ ೧೮೫ನೇ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ ಆಚರಿಸಲಾಯಿತು.
   ಭದ್ರಾವತಿ, ಮಾ. ೨೩: ಹಳೇನಗರದ ಖಂಡೇರಾವ್ ಕೊಪ್ಪಲ್‌ನಲ್ಲಿರುವ ಶ್ರೀ ರಾಮಕೃಷ್ಣ ಗುರುಕುಲಾಶ್ರಮದಲ್ಲಿ ೧೮೫ನೇ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ ಆಚರಿಸಲಾಯಿತು.
   ೧೯೫೧ರಲ್ಲಿ ಸಂಗೀತ ವಿದ್ವಾನ್ ದಿವಂಗತ ಎಚ್.ಎನ್ ರಾಜಣ್ಣನವರಿಂದ ಸ್ಥಾಪಿತವಾದ ಈ ಗುರುಕುಲಾಶ್ರಮದಲ್ಲಿ ಪ್ರತಿ ವರ್ಷ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಜಯಂತಿ ಅಂಗವಾಗಿ ಭಜನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಗುರುಕುಲಾಶ್ರಮದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾ.೨೪ರಂದು ವಿಶ್ವ ಕ್ಷಯರೋಗ ದಿನಾಚರಣೆ : ಜಾಥಾ

    ಭದ್ರಾವತಿ, ಮಾ. ೨೩: ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಮಾ.೨೪ರಂದು ಜಾಥಾ ಹಮ್ಮಿಕೊಳ್ಳಲಾಗಿದೆ.
     ಈ ಬಾರಿ 'ಕ್ಷಯರೋಗ ನಿರ್ಮೂಲನೆಗೆ ಕಾಲಘಟಿಸುತ್ತಿದೆ' ಘೋಷ ವಾಕ್ಯದೊಂದಿಗೆ ವಿಶ್ವ ಕ್ಷಯರೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ಬೆಳಿಗ್ಗೆ ೯.೩೦ಕ್ಕೆ ತಾಲೂಕು ಕಛೇರಿ ಮುಂಭಾಗದಿಂದ ಜಾಥಾ ಆರಂಭಗೊಂಡು ಬಸವೇಶ್ವರ ವೃತ್ತ, ಸಿ.ಎನ್ ರಸ್ತೆ ಮೂಲಕ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ತಲುಪಲಿದೆ.
ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಆರ್‌ಎಸ್‌ಎಸ್ ಧುರೀಣ ವೆಂಕಟೇಶ್ ರಾಜ್ ಅರಸು ನಿಧನ

ವೆಂಕಟೇಶ್ ರಾಜ್ ಅರಸು
   ಭದ್ರಾವತಿ, ಮಾ. ೨೩: ಸಂಘ ಪರಿವಾರದ ಹಿರಿಯ ಧುರೀಣ, ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಕಾರ್ಮಿಕ ವೆಂಕಟೇಶ್ ರಾಜ್ ಅರಸು ನಿಧನ ಹೊಂದಿದರು.
ನಗರದ ಹೊಸಮನೆ ಹನುಮಂತನಗರದಲ್ಲಿ ವಾಸವಾಗಿದ್ದ ವೆಂಕಟೇಶ್ ರಾಜ್ ಅರಸುರವರು ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಹೊಂದಿದ್ದರು.
    ಇವರು ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ತರಬೇತಿ ಪಡೆದು ಸಂಘ ಪರಿವಾರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಒಡನಾಡಿಯಾಗಿದ್ದರು. ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಶಿವಮೊಗ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರು ೩ ಜಿಲ್ಲೆಗಳನ್ನೊಳಗೊಂಡ ಯುವಮೋರ್ಚಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ರೈತ ಹೋರಾಟಗಳಲ್ಲಿ ಸಹ ಮುಂಚೂಣಿಯಲ್ಲಿದ್ದರು.
    ಇವರ ನಿಧನಕ್ಕೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ನರಸಿಂಹಚಾರ್, ನಗರಸಭೆ ಮಾಜಿ ಉಪಾಧ್ಯಕ್ಷ ಟಿ. ವೆಂಕಟೇಶ್ ಸೇರಿದಂತೆ ಸಂಘ ಪರಿವಾರದ ಪ್ರಮುಖರು, ಬಿಜೆಪಿ ಪಕ್ಷದ ಮುಖಂಡರು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Monday, March 22, 2021

ಪಂಗುಣಿ-ಉತ್ತಿರ’ ತೀರ್ಥ ಕಾವಡಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

'
ಭದ್ರಾವತಿ ಸಮೀಪದ ಎಂ.ಸಿ ಹಳ್ಳಿಯಲ್ಲಿರುವ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಮಾ.೩೧ರವರೆಗೆ 'ಪಂಗುಣಿ-ಉತ್ತಿರ' ತೀರ್ಥ ಕಾವಡಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಸೋಮವಾರ ತರೀಕೆರೆ ಕ್ಷೇತ್ರದ ಶಾಸಕ ಡಿ.ಎಸ್ ಸುರೇಶ್ ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
  ಭದ್ರಾವತಿ, ಮಾ. ೨೨: ಇಲ್ಲಿಗೆ ಸಮೀಪದ ಎಂ.ಸಿ ಹಳ್ಳಿಯಲ್ಲಿರುವ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಮಾ.೩೧ರವರೆಗೆ 'ಪಂಗುಣಿ-ಉತ್ತಿರ' ತೀರ್ಥ ಕಾವಡಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಸೋಮವಾರ ತರೀಕೆರೆ ಕ್ಷೇತ್ರದ ಶಾಸಕ ಡಿ.ಎಸ್ ಸುರೇಶ್ ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀ ಕ್ಷೇತ್ರದ ಮುರುಗೇಶ್ ಸ್ವಾಮೀಜಿ ನೇತೃತ್ವದಲ್ಲಿ ಬೆಳಿಗ್ಗೆ ವಿಶೇಷ ಪೂಜೆ, ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಮಾ.೨೮ರಂದು ಪಂಗುಣಿ-ಉತ್ತಿರ ತೀರ್ಥ ಕಾವಡಿ ಉತ್ಸವ ನಡೆಯಲಿದ್ದು, ಅಂದು ಬೆಳಿಗ್ಗೆ ೪ ಗಂಟೆಗೆ ವಿಶ್ವರೂಪ ದರ್ಶನ, ೫ ಗಂಟೆಗೆ ಉತ್ಸವ ಪೂಜೆ, ೬.೩೦ರಿಂದ ಭಕ್ತರು ಹರಕೆ ಹೊತ್ತು ತರುವ ಪುಣ್ಯತೀರ್ಥ ಮತ್ತು ಕಾವಡಿ ಸಮರ್ಪಣೆ, ೮ ಗಂಟೆಗೆ ಸಂಧಿಪೂಜೆ, ಮಧ್ಯಾಹ್ನ ೧೨ ಗಂಟೆಗೆ ಕೂಡ್ಲಿ ಸಂಗಮತೀರ್ಥ ಅಭಿಷೇಕ ಮತ್ತು ಉಚ್ಚಿಕಾಲಪೂಜೆ, ಸಂಜೆ ೫.೩೦ಕ್ಕೆ ದೀಪರಾಧನೆ, ರಾತ್ರಿ ೧೦ಕ್ಕೆ ಅರ್ಧಜಾಮ ಪೂಜೆ ಜರುಗಲಿವೆ.
    ಧ್ವಜಾರೋಹಣ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪ್ರಮುಖರಾದ ಚಂದ್ರಘೋಷಣ್, ಕಣ್ಣಪ್ಪ, ಸುಂದರ್‌ಬಾಬು, ತಾಲೂಕು ಪಂಚಾಯಿತಿ ಸದಸ್ಯ ಕೆ. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.