Monday, April 19, 2021

ಹೊಸಹಳ್ಳಿ ಗ್ರಾಮವೊಂದರಲ್ಲೇ ೫೫ ಮಂದಿಗೆ ಕೊರೋನಾ ಸೋಂಕು

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿ ೫೫ ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವ  ಹಿನ್ನಲೆಯಲ್ಲಿ ಗ್ರಾಮಕ್ಕೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
  ಭದ್ರಾವತಿ, ಏ. ೧೯: ತಾಲೂಕಿನ ಕೂಡ್ಲಿಗೆರೆ ಹೋಬಳಿ ಹೊಸಹಳ್ಳಿ ಗ್ರಾಮವೊಂದರಲ್ಲೇ ೫೫ ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಹಿನ್ನಲೆಯಲ್ಲಿ ಸೋಮವಾರ ಗ್ರಾಮವನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ.
    ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಹೊಸಹಳ್ಳಿ ಗ್ರಾಮದಲ್ಲಿ ಒಟ್ಟು ೧೯೫ ಮನೆಗಳಿದ್ದು, ೮೧೨ ಜನಸಂಖ್ಯೆ ಹೊಂದಿದೆ. ಏ.೧೪ರಂದು ಗ್ರಾಮದ ೧೮೬ ಮಂದಿಯ ಗಂಟಲು ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ೫೫ ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.
   ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕಂದಾಯಾಧಿಕಾರಿ ಪ್ರಶಾಂತ್, ಗ್ರಾಮ ಲೆಕ್ಕಾಧಿಕಾರಿ ಪ್ರೇಮ್‌ಕುಮಾರ್, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ತಂಡದಲ್ಲಿ ಉಪಸ್ಥಿತರಿದ್ದರು.

ಏ.೨೦ರಂದು ಬಿಜೆಪಿ ಕಾರ್ಯಕರ್ತರ ಸಮಾವೇಶ

ಭದ್ರಾವತಿ, ಏ. ೧೯: ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಏ.೨೦ರಂದು ಸಂಜೆ ೪.೩೦ಕ್ಕೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ.
      ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್ ರುದ್ರೇಗೌಡ, ಭಾರತಿಶೆಟ್ಟಿ, ವಿಧಾನಸಭಾ ಸದಸ್ಯ ಕೆ.ಬಿ ಅಶೋಕ್‌ನಾಯ್ಕ್, ಮುಖಂಡರಾದ ಆರ್.ಕೆ ಸಿದ್ದರಾಮಣ್ಣ, ಎಂ.ಬಿ ಭಾನುಪ್ರಕಾಶ್, ಗಿರೀಶ್‌ಪಟೇಲ್, ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
   ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಚನ್ನೇಶ್ ಮತ್ತು ಹನುಮಂತನಾಯ್ಕ ಕೋರಿದ್ದಾರೆ.

ನಗರಸಭೆ ಚುನಾವಣೆ : ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

ಮಾನವ ಹಕ್ಕುಗಳ  ಹೋರಾಟ ಸಮಿತಿ ವತಿಯಿಂದ ಭದ್ರಾವತಿ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿರುವ ಜಾಗೃತಿ ಕಾರ್ಯಕ್ರಮಕ್ಕೆ ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು.
   ಭದ್ರಾವತಿ, ಏ. ೧೯: ನಗರಸಭೆ ಬಗ್ಗೆ ಅರಿವು ಹೊಂದಿರುವ, ನಗರಸಭೆ ಆಸ್ತಿ ರಕ್ಷಣೆ, ಮೂಲ ಸೌಲಭ್ಯಗಳನ್ನು ಕಲ್ಪಿಸುವ, ಜನರ ಸಂಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕಾಳಜಿ ಹೊಂದಿರುವ ಸಮರ್ಥರನ್ನು ಈ ಬಾರಿ ಚುನಾವಣೆಯಲ್ಲಿ ಆಯ್ಕೆ ಮಾಡುವಂತೆ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ನಗರದ ಮಾನವ ಹಕ್ಕುಗಳ  ಹೋರಾಟ ಸಮಿತಿ ವತಿಯಿಂದ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿರುವ ಜಾಗೃತಿ ಕಾರ್ಯಕ್ರಮಕ್ಕೆ ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು.
    ನಗರಸಭೆ ವ್ಯಾಪ್ತಿಯಲ್ಲಿ ಆಟೋ ಮೂಲಕ ಏ.೨೬ರವರೆಗೆ ಬೆಳಿಗ್ಗೆ ೮ ರಿಂದ ಸಂಜೆ ೫ ಗಂಟೆವರೆಗೆ ಕರಪತ್ರ ವಿತರಿಸುವ ಜೊತೆಗೆ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಸಮಿತಿ ಕೈಗೊಂಡಿದೆ.
   ಕರಪತ್ರ ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ವಿತರಿಸಿದ ಪೌರಾಯುಕ್ತರು, ಮತದಾರರು ಜಾಗೃತಿಗೊಳ್ಳುವಂತೆ ಕೈಗೊಂಡಿರುವ ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಕೋರಿದರು.
ನಗರಸಭೆ ವ್ಯವಸ್ಥಾಪಕಿ ಸುನಿತಾಕುಮಾರಿ, ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಚಂದ್ರಶೇಖರ್, ಬ್ರಹ್ಮಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೊರೋನಾಗೆ ಎಂಪಿಎಂ ಉದ್ಯೋಗಿ ಬಲಿ

ಮಂಜುನಾಥ್  
 ಭದ್ರಾವತಿ, ಏ. ೧೯:  ನಿಯೋಜನೆ ಮೇರೆಗೆ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಗರದ ಮೈಸೂರು ಕಾಗದ ಕಾರ್ಖಾನೆ ಉದ್ಯೋಗಿ ಮಂಜುನಾಥ್(೫೯) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
    ಪತ್ನಿ, ಇಬ್ಬರು ಪುತ್ರರನ್ನು ಹೊಂದಿದ್ದರು. ಸೋಂಕು ತಗುಲಿದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮಂಜುನಾಥ್ ಕಾರ್ಮಿಕ ಸಂಘದಲ್ಲಿ ಖಜಾಂಚಿಯಾಗಿ, ಮೈಸೂರು ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೃತರ ನಿಧನಕ್ಕೆ ಕಾರ್ಮಿಕ ಮುಖಂಡರು  ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Sunday, April 18, 2021

ಏ.೧೯ ನಾಮಪತ್ರ ಹಿಂಪಡೆಯಲು ಕೊನೆಯ ದಿನ

     ಭದ್ರಾವತಿ, ಏ. ೧೮: ನಗರಸಭೆ ೩೫ ವಾರ್ಡ್‌ಗಳ ಚುನಾವಣೆ ಸಂಬಂಧ ನಾಮಪತ್ರ ಹಿಂಪಡೆಯಲು ಏ.೧೯ ಕೊನೆಯ ದಿನವಾಗಿದ್ದು, ನಾಮಪತ್ರ ಪರಿಶೀಲನೆ ನಂತರ ೧೯೫ ನಾಮಪತ್ರಗಳು ಕ್ರಮ ಬದ್ದವಾಗಿವೆ. ಸೋಮವಾರ ಸಂಜೆ ವೇಳೆಗೆ ಅಂತಿಮ ಕಣದಲ್ಲಿರುವವರ ಮಾಹಿತಿ ತಿಳಿದು ಬರಲಿದೆ.
     ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮೂರು ಪಕ್ಷಗಳು ೩೫ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಉಳಿದಂತೆ ೯೦ ಅಭ್ಯರ್ಥಿಗಳ ಪೈಕಿ ಎಎಪಿ-೭, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ-೨, ಎಐಎಂಐಎಂ-೨, ಎಸ್‌ಡಿಪಿಐ-೩ ಮತ್ತು ಪಕ್ಷೇತರ-೭೬ ಅಭ್ಯರ್ಥಿಗಳು ಇದ್ದು, ಪಕ್ಷೇತರ ಅಭ್ಯರ್ಥಿಗಳ ಪೈಕಿ ಬಹಳಷ್ಟು ಮಂದಿ ನಾಮಪತ್ರ ಹಿಂಪಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಈ ನಡುವೆ ಪ್ರತಿ ಬಾರಿ ೨ ರಿಂದ ೩ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

ರಂಜಾನ್ ಮಾಸ : ದೀನದಲಿತರಿಗೆ ಆಹಾರ ಸಾಮಾಗ್ರಿ ವಿತರಣೆ

ರಂಜಾನ್ ಮಾಸದ ಹಿನ್ನಲೆಯಲ್ಲಿ ಭದ್ರಾವತಿ ಸಫಾ ಬೈತುಲ್ ಮಾಲ್ ರಿಲಿಜನ್ ಅಂಡ್ ವೆಲ್ಫೇರ್ ಟ್ರಸ್ಟ್ ವತಿಯಿಂದ ದೀನದಲಿತರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಏ. ೧೮: ರಂಜಾನ್ ಮಾಸದ ಹಿನ್ನಲೆಯಲ್ಲಿ ನಗರದ ಸಫಾ ಬೈತುಲ್ ಮಾಲ್ ರಿಲಿಜನ್ ಅಂಡ್ ವೆಲ್ಫೇರ್ ಟ್ರಸ್ಟ್ ವತಿಯಿಂದ ದೀನದಲಿತರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
    ಟ್ರಸ್ಟ್ ವತಿಯಿಂದ ಪ್ರತಿ ವರ್ಷ ರಂಜಾನ ಮಾಸದಲ್ಲಿ ಆಹಾರ ಸಾಮಗ್ರಿಗಳನ್ನು ದೀನದಲಿತರಿಗೆ ವಿತರಿಸಿಕೊಂಡು ಬರಲಾಗುತ್ತಿದೆ. ಅಲ್ಲದೆ ದೀನದಲಿತರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಟ್ರಸ್ಟ್ ಅಧ್ಯಕ್ಷ ಮೌಲಾನ ಅಸ್ಲಂ ಸಾಬ್ ಅಧ್ಯಕ್ಷತೆ ವಹಿಸಿದ್ದರು. ನಜೀರ್ ಅಹಮದ್,  ಸನಾವುಲ್ಲಾ ಸಾಬ್, ಮೌಲಾನ ಸಗೀರ್ ಸಾಬ್. ಅಫೀಸ್ ಉಲ್ಲಾ ಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಮುಸ್ತಿ ಸಾಧಿಕ್ ಸಾಬ್ ಪ್ರಾರ್ಥಿಸಿದರು. ಸಾಧಿಕ್ ಮೌಲಾನ ವಂದಿಸಿದರು.

ಏ.೧೯ರಿಂದ ಚುನಾವಣಾ ಜಾಗೃತಿ ಕಾರ್ಯಕ್ರಮ

ಭದ್ರಾವತಿ, ಏ. ೧೮: ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಏ.೧೯ ರಿಂದ ೨೬ರ ವರೆಗೆ ಭಿತ್ತಿಪತ್ರದ ಮೂಲಕ ನಗರಸಭೆ ೩೫ ವಾರ್ಡ್‌ಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಆಟೋ ಮೂಲಕ ಬೆಳಿಗ್ಗೆ ೮ ರಿಂದ ಸಂಜೆ ೫ ಗಂಟೆವರೆಗೆ ಪ್ರಚಾರ ನಡೆಯಲಿದ್ದು, ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವ, ಪ್ರಾಮಾಣಿಕ ಹಾಗು ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಹಾಗು ಹಣ, ಹೆಂಡ ಸೇರಿದಂತೆ ಇನ್ನಿತರ ಅಮಿಷಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸಲಾಗುವುದು.
ಕಾರ್ಯಕ್ರಮಕ್ಕೆ ಏ.೧೯ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಮುಂಭಾಗ ಪೌರಾಯುಕ್ತ ಮನೋಹರ್ ಚಾಲನೆ ನೀಡಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಕೋರಿದ್ದಾರೆ.