Wednesday, October 13, 2021

ದಲಿತ ಬಾಲಕಿ ಮೇಲೆ ದೌರ್ಜನ್ಯ, ಅತ್ಯಾಚಾರ ಘಟನೆ : ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿ ಹಾಳ ಗ್ರಾಮದ ದಲಿತ ಬಾಲಕಿಯ ಮೇಲೆ ನಡೆದ ದೌರ್ಜನ್ಯ ಮತ್ತು ಅತ್ಯಾಚಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಅ. ೧೩: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿ ಹಾಳ ಗ್ರಾಮದ ದಲಿತ ಬಾಲಕಿಯ ಮೇಲೆ ನಡೆದ ದೌರ್ಜನ್ಯ ಮತ್ತು ಅತ್ಯಾಚಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಆಗ್ರಹಿಸಿದರು.
    ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಮುಖಂಡರು, ದಲಿತ ಬಾಲಕಿಯರ ಮೇಲಿನ ದೌರ್ಜನ್ಯ ಹಾಗು ಅತ್ಯಾಚಾರ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ದಲಿತ ಕುಟುಂಬದ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ದೌರ್ಜನ್ಯ ಹಾಗು ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯ ಸಂಘಟನಾ ಸಂಚಾಲಕ ಶಿವಬಸಪ್ಪನವರು, ತಾಲೂಕು ಸಂಚಾಲಕ ಆರ್. ರವಿನಾಯ್ಕ ಪ್ರತಿಭಟನೆ ನೇತೃತ್ವ ವಹಿಸಿದ್ದರು. ನಗರ ಸಂಚಾಲಕ ಆರ್. ತಮ್ಮಯ್ಯ, ಶಿಕ್ಷಕ ಮಹಾದೇವಪ್ಪ ಮತ್ತು ಸಂಘಟನಾ  ಸಂಚಾಲಕ ಶಿವನಾಯ್ಕ, ನಾಗೇಶ್, ಸೋನಿ ಮೆಲೋಡಿ ಮಾಲೀಕ ಅರ್ ಹರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಪಾರಂಪರಿಕ ಸ್ಥಳಗಳು, ಪ್ರವಾಸಿ ತಾಣಗಳು, ವನ್ಯ ಜೀವಿ ನೆಲೆಗಳು ಇಲ್ಲಿ ಅನಾವರಣ

ಮೈಸೂರು ದಸರಾ ನಾಡಹಬ್ಬ ಗೊಂಬೆ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ದಂಪತಿ

ಭದ್ರಾವತಿ ನ್ಯೂಕಾಲೋನಿ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೀಪದ ವಿಐಎಸ್‌ಎಲ್ ವಸತಿ ಗೃಹದಲ್ಲಿ ವಾಸವಾಗಿರುವ ಉಮೇಶ್ ಹಾಗು ಕುಸುಮ ದಂಪತಿ ಈ ಬಾರಿ ಕೈಗೊಂಡಿರುವ ದಸರಾ ಗೊಂಬೆ ಪ್ರದರ್ಶನ ಎಲ್ಲರನ್ನು ಆಕರ್ಷಿಸುತ್ತಿದೆ.

     * ಅನಂತಕುಮಾರ್
     ಭದ್ರಾವತಿ: ವೈಭವದ ಮೈಸೂರು ದಸರಾ ನಾಡಹಬ್ಬ ಪರಂಪರೆ ಕೇವಲ ಗೊಂಬೆ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೆ. ನಮ್ಮ ಸುತ್ತಮುತ್ತಲಿನ ಪಾರಂಪರಿಕ ಸ್ಥಳಗಳು, ಪ್ರವಾಸಿ ತಾಣಗಳು, ವನ್ಯ ಜೀವಿ ನೆಲೆಗಳನ್ನು ಸಹ ಅನಾವರಣಗೊಳಿಸುವ ಮೂಲಕ ನಗರದ ನಿವಾಸಿಗಳಾದ ಉಮೇಶ್ ಮತ್ತು ಕುಸುಮ ದಂಪತಿ ಜನರ ಗಮನ ಸೆಳೆಯುತ್ತಿದ್ದಾರೆ.
    ನಗರದ ನ್ಯೂಕಾಲೋನಿ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೀಪದ ವಿಐಎಸ್‌ಎಲ್ ವಸತಿ ಗೃಹದಲ್ಲಿ ವಾಸವಾಗಿರುವ ವೆಸ್ಟೀಜ್ ಹೆಲ್ತ್‌ಕೇರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶ್ ಹಾಗು ನ್ಯಾಯಾಂಗ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಸುಮ ದಂಪತಿ ಕಳೆದ ೨೦ ವರ್ಷಗಳಿಂದ ಮೈಸೂರು ದಸರಾ ನಾಡಹಬ್ಬ ಪರಂಪರೆಯನ್ನು ಗೊಂಬೆ ಪ್ರದರ್ಶನದ ಮೂಲಕ ಉಕ್ಕಿನ ನಗರದ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ನಮ್ಮ ನಾಡಿನ ಭವ್ಯ ಪರಂಪರೆ ಮುಂದಿನ ಪೀಳಿಗೆಗೂ ಉಳಿಯಬೇಕೆಂಬ ಆಶಯ ನಮ್ಮದಾಗಿದೆ. ಅದರಲ್ಲೂ ಉಕ್ಕಿನ ನಗರದ ಜನತೆಗೆ ಈ ಪರಂಪರೆಯನ್ನು ಪರಿಚಯಿಸುವ ಮೂಲಕ ಸಮಾಜದ ಎಲ್ಲರೂ ಜಾತಿ, ಧರ್ಮ, ಭೇದಭಾವ ಮರೆತು ಒಗ್ಗಟ್ಟಾಗಿ ಆಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ.
                                                                                                                  - ಉಮೇಶ್, ಭದ್ರಾವತಿ




    ವಿಶೇಷ ಎಂದರೆ ವನ್ಯ ಜೀವಿ ತಾಣಗಳಾದ ಶಿವಮೊಗ್ಗ ತಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ, ಸಕ್ರೆಬೈಲು ಆನೆ ಬಿಡಾರ, ಭದ್ರಾ ಅಭಯಾರಣ್ಯ, ಗುಡವಿ ಪಕ್ಷಿ ಧಾಮ, ಮತ್ಸ್ಯ ಧಾಮ ಹಾಗು ವಿಜಯ ನಗರ, ಚಾಮುಂಡಿ ಬೆಟ್ಟ, ಶ್ರೀ ಕ್ಷೇತ್ರ ಧರ್ಮಸ್ಥಳ, ಇಡಗುಂಜಿ, ಗಾಣಗಾಪುರ, ಗೋಕರ್ಣ ಸೇರಿದಂತೆ ಹಲವು ಪ್ರವಾಸಿ ತಾಣಗಳು ಹಾಗು ಧಾರ್ಮಿಕ ಕ್ಷೇತ್ರಗಳನ್ನು ಆಕರ್ಷಕವಾಗಿ ಅನಾವರಣಗೊಳಿಸಲಾಗಿದೆ. ಇದರ ಜೊತೆಗೆ ಆಧುನಿಕ ಶೈಲಿಯ ಅಡುಗೆ ಮನೆ ಹಾಗು ಪ್ರಾಚಿನ ಕಾಲದ ಅಡುಗೆ ಮನೆ ಮತ್ತು ನಗರದ ಪದ್ಮನಿಲಯ ಹೋಟೆಲ್ ಸಹ ಇಲ್ಲಿ ತೆರೆದುಕೊಂಡಿವೆ.

ತಾಯಿ ಮನೆಯಿಂದ ರೂಢಿಸಿಕೊಂಡು ಬಂದ ಭವ್ಯಪರಂಪರೆಯ ಈ ಆಚರಣೆಯನ್ನು ಅತ್ತೆಯ ಮನೆಯಲ್ಲೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಪ್ರತಿ ವರ್ಷ ವಿಭಿನ್ನತೆ ಕಾಯ್ದುಕೊಂಡು ಬರಲಾಗುತ್ತಿದೆ. ಈ ಗೊಂಬೆ ಪ್ರದರ್ಶನವನ್ನು ವೀಕ್ಷಿಸಲು ಪ್ರತಿ ವರ್ಷ ನೂರಾರು ಮಂದಿ ಆಗಮಿಸುತ್ತಿದ್ದು, ಮತ್ತಷ್ಟು ಸ್ಪೂರ್ತಿಯನ್ನುಂಟು ಮಾಡುತ್ತಿದೆ.
                                                                                                                 - ಕುಸುಮ, ಭದ್ರಾವತಿ

    ಉಳಿದಂತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯನ್ನೊಳಗೊಂಡಂತೆ ನವದುರ್ಗಿಯರು, ಶೃಂಗೇರಿ ಶಾರದಾಂಬೆ, ಆಚಾರ್ಯತ್ರಯರು, ದಶವತಾರ, ವಿಶ್ವರೂಪ, ಶ್ರೀ ತಿರುಪತಿ ವೆಂಕಟೇಶ್ವರ, ಸಪ್ತಋಷಿ, ಸಂಗೀತ ವಾದ್ಯಗಳು, ಬೆಣ್ಣೆಕೃಷ್ಣ, ಲಲಿತಾದೇವಿ ಅಷ್ಟ ಲಕ್ಷ್ಮಿಯರು, ತ್ರಿಶಕ್ತಿ ಅನಂತಪದ್ಮನಾಭ, ರುಕ್ಮಿಣಿ ಪಾಂಡುರಂಗ ಜೊತೆಗೆ ವಿಶೇಷವಾಗಿ ಸುಮಾರು ೧೫೦ ವರ್ಷ ಹಳೆಯದಾದ ಪಟ್ಟದ ಗೊಂಬೆ ಸಹ ಇದ್ದು ಇವುಗಳನ್ನು ನೋಡಿ ಆನಂದಿಸುವ ಜೊತೆಗೆ ಕಣ್ತುಂಬಿ ಕೊಳ್ಳಬಹುದಾಗಿದೆ. ಇವುಗಳ ನಡುವೆ ದೇಶದ ಬೆನ್ನೆಲುಬು ರೈತನನ್ನು ಈ ದಂಪತಿ ಸ್ಮರಿಸಿರುವುದು ಈ ದಂಪತಿಯ ಮತ್ತೊಂದು ವಿಶೇಷವಾಗಿದೆ.
    ಉಮೇಶ್ ಅವರ ತಾಯಿ ನಾಗರತ್ನ ಅವರ ಮಾರ್ಗದರ್ಶನದಲ್ಲಿ ಮಕ್ಕಳಾದ ಸ್ಕಂದ ಭಾರದ್ವಾಜ್ ಮತ್ತು ಸ್ತುತಿ ಭಾರದ್ವಾಜ್ ಅವರ ಸಹಕಾರದೊಂದಿಗೆ ಈ ದಂಪತಿ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಯಶಸ್ವಿಯಾಗಿ ಈ ಕಾರ್ಯವನ್ನು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ನಿವಾಸಿಗಳು ಪ್ರತಿ ವರ್ಷ ಇವರ ಮನೆಗೆ ಭೇಟಿ ನೀಡಿ ಗೊಂಬೆ ಪ್ರದರ್ಶನ ವೀಕ್ಷಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ.

Tuesday, October 12, 2021

ಬದಲಾದ ಕಾಲಘಟ್ಟಕ್ಕೆ ಹೊಂದಿಕೊಂಡ ಅಂಚೆ ಇಲಾಖೆ : ಪ್ರೊ. ಸಿ.ಎಂ ತ್ಯಾಗರಾಜ್

ಭದ್ರಾವತಿ ಪ್ರಧಾನ ಅಂಚೆ ಕಛೇರಿಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ರಾಷ್ಟ್ರೀಯ ಅಂಚೆ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಅ. ೧೨: ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಅಂಚೆ ಇಲಾಖೆ ಸಹ ಹೊಂದಿಕೊಳ್ಳುತ್ತಿದ್ದು, ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಆಡಳಿತಾಧಿಕಾರಿ ಪ್ರೊ. ಸಿ.ಎಂ ತ್ಯಾಗರಾಜ್ ಹೇಳಿದರು.
    ಅವರು ಮಂಗಳವಾರ ನಗರದ ಪ್ರಧಾನ ಅಂಚೆ ಕಛೇರಿಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಅಂಚೆ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
    ಬ್ಯಾಂಕಿಂಗ್, ಜೀವಾವಿಮಾ ಸೇರಿದಂತೆ ಹಲವು ರೀತಿಯ ಸೇವೆಗಳನ್ನು ಸಹ ಅಂಚೆ ಇಲಾಖೆ ತನ್ನ ವ್ಯಾಪ್ತಿಗೆ ಸೇರ್ಪಡೆ ಮಾಡಿಗೊಳ್ಳುವ ಜೊತೆಗೆ ಉತ್ತಮವಾಗಿ ನಿರ್ವಹಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.  ಅಂಚೆ ಇಲಾಖೆ ಸಿಬ್ಬಂದಿಗಳು ಕಾರ್ಯ ನಿರ್ವಹಣೆಯಲ್ಲಿ ಇನ್ನೂ ಹೆಚ್ಚಿನ ಗಮನ ಹರಿಸಬೇಕು. ಸಾರ್ವಜನಿಕ ವಲಯಗಳು ಅಭಿವೃದ್ಧಿ ಪಥದಲ್ಲಿ ಸಾಗಲು ಹೊಸ ಹೊಸ ಅವಿಷ್ಕಾರಗಳು ನಡೆಯಬೇಕೆಂದರು.
    'ಡಿ' ಗ್ರೂಪ್ ನೌಕರರ ವಿಭಾಗದಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಣೆಯಲ್ಲಿ ದಾನಿಷ್ ಪಟೇಲ್,  ಅತ್ಯುತ್ತಮ ವಿಲೇವಾರಿಗಾಗಿ ಪೋಸ್ಟ್ ಮ್ಯಾನ್ ವಿಭಾಗದಲ್ಲಿ ಎಚ್.ವಿ ರಾಜ್‌ಕುಮಾರ್, ಇದೆ ವಿಭಾಗದಲ್ಲಿ ಎಚ್. ಗೀತಾ, ಪೋಸ್ಟ್‌ಮ್ಯಾನ್ ವಿಭಾಗದ ಅಂಚೆ ವಿಂಗಡಣೆಯಲ್ಲಿ ಡಿ. ಗೋವಿಂದರಾಜು, ಹೆಚ್ಚಿನ ಆರ್ಥಿಕ ನಿರ್ವಹಣೆಯಲ್ಲಿ ಉದಯಚಾರ್, ಎಚ್. ಮಂಜುನಾಥ್, ಉತ್ತಮ ಹಾಜರಾತಿಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ವಿಭಾಗದಲ್ಲಿ ವಿದ್ಯಾ ಕೃಷ್ಣ ಮತ್ತು ಬಿ.ಸಿ ರಾಘವೇಂದ್ರ, ಉತ್ತಮ ಎನ್‌ಎಸ್‌ಸಿ ಏಜೆಂಟ್ ಎಸ್.ಕೆ ಗಣೇಶ್ ಮತ್ತು ಆರ್.ಡಿ ಏಜೆಂಟ್ ಲಕ್ಷ್ಮಮ್ಮ ಬಹುಮಾನಗಳನ್ನು ಪಡೆದುಕೊಂಡರು.
    ಕಾರ್ಯಕ್ರಮದಲ್ಲಿ  ಪ್ರಧಾನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ವಿ. ಶಶಿಧರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಂಚೆ ಅಧೀಕ್ಷಕ ಜಿ. ಹರೀಶ್, ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಅನಿಲ್‌ಕುಮಾರ್, ಅಂಚೆ ನಿರೀಕ್ಷಕ ಪ್ರಹ್ಲಾದನಾಯಕ್, ವಿಜಯಕುಮಾರ್, ನಾಗರಾಜ್, ಎಂ. ಪೂಜಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂಪಿಎಂ ಕಾರ್ಖಾನೆಯಲ್ಲಿ ಉದ್ಯೋಗವಿಲ್ಲದೆ ಉಳಿದುಕೊಂಡಿರುವ ಕಾರ್ಮಿಕರಿಗೆ ಜೀವನಾಂಶ ನೀಡಿ

ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಎಂಪಿಎಂ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಆದೇಶಿಸಿರುವ ಮಾಹಿತಿ ಅರಿತು ಮಂಗಳವಾರ ಕಾರ್ಖಾನೆ ಮುಂಭಾಗ ಕೆಲ ಕಾರ್ಮಿಕರು ತಮ್ಮ ಅಳಲು ವ್ಯಕ್ತಪಡಿಸಿದರು.
    ಭದ್ರಾವತಿ, ಅ. ೧೨: ಎಂಪಿಎಂ ಕಾರ್ಖಾನೆಯಲ್ಲಿ ನಿಯೋಜನೆ ಮೇರೆಗೆ ವಿವಿಧ ನಿಗಮ ಮಂಡಳಿಗಳಲ್ಲಿ ಎರವಲು ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಹೊರತುಪಡಿಸಿ ಪ್ರಸ್ತುತ ಯಾವುದೇ ಉದ್ಯೋಗವಿಲ್ಲದೆ ಉಳಿದುಕೊಂಡಿರುವ ಸುಮಾರು ೧೨೦ ಕಾರ್ಮಿಕರಿಗೆ ಸರ್ಕಾರ ತಕ್ಷಣ ಜೀವನಾಂಶ ನೀಡಬೇಕು. ಇಲ್ಲವಾದಲ್ಲಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಕೆಲ ಕಾರ್ಮಿಕರು ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಆದೇಶಿಸಿರುವ ಮಾಹಿತಿ ಅರಿತು ಮಂಗಳವಾರ ಕಾರ್ಖಾನೆ ಮುಂಭಾಗ ತಮ್ಮ ಅಳಲು ವ್ಯಕ್ತಪಡಿಸಿದ ಕೆಲ ಕಾರ್ಮಿಕರು, ಭವಿಷ್ಯದಲ್ಲಿ ಅಭಿವೃದ್ಧಿಪಡಿಸಬಹುದಾದ ಕಾರ್ಖಾನೆಯನ್ನು ಇದೀಗ ಎಲ್ಲರೂ ಸಂಪೂರ್ಣವಾಗಿ ಮುಚ್ಚುವ ಬಗ್ಗೆಯೇ ಚಿಂತನೆ ನಡೆಸುತ್ತಿದ್ದಾರೆ ಹೊರತು ಉಳಿಸಿಕೊಳ್ಳುವ ಬಗ್ಗೆ ಯಾರು ಸಹ ಚಿಂತನೆ ನಡೆಸುತ್ತಿಲ್ಲ. ಇದೊಂದು ವಿಪರ್ಯಾಸದ ಸಂಗತಿಯಾಗಿದ್ದು, ರಾಜಕಾರಣಿಗಳ ಪಿತೂರಿಯೇ ಕಾರ್ಖಾನೆಯ ಇಂದಿನ ಸ್ಥಿತಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
    ಸರ್ಕಾರ ತನ್ನ ಧೋರಣೆಯನ್ನು ಬದಲಿಸಿಕೊಂಡು ತಕ್ಷಣ ಅಗತ್ಯವಿರುವ ಬಂಡವಾಳ ತೊಡಗಿಸಿ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು. ಪ್ರಸ್ತುತ ಉಳಿದುಕೊಂಡಿರುವ ಸುಮಾರು ೧೨೦ ಕಾರ್ಮಿಕರಿಗೆ ತಕ್ಷಣ ಜೀವನಾಂಶ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದರು.
        ಸಮಸ್ತ ನಾಗರೀಕರೊಂದಿಗೆ ಉಗ್ರ ಹೋರಾಟ :
    ಪ್ರಸ್ತುತ ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು. ಕಾರ್ಖಾನೆಯ ಇಂದಿನ ಸ್ಥಿತಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗು ಸರ್ಕಾರದ ನಿರ್ಲಕ್ಷ್ಯತನಗಳು ಕಾರಣಗಳಾಗಿವೆ ಎಂದು ಕಾರ್ಮಿಕ ಮುಖಂಡ, ಎಎಪಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆರೋಪಿಸಿದರು.
    ಕ್ಷೇತ್ರದ ನಾಗರೀಕರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಎಂಪಿಎಂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟಕ್ಕೆ ಮುಂದಾಗಬೇಕು. ನಮ್ಮ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು.

ಮೊದಲು ಎಂಪಿಎಂ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಒದಗಿಸಲಿ : ಎಸ್. ಚಂದ್ರಶೇಖರ್

ಪ್ರಸ್ತುತ ಹೊರಡಿಸಲಾಗಿರುವ ಆದೇಶವನ್ನು ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು

ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್
    ಭದ್ರಾವತಿ, ಅ. ೧೨: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಸಂಬಂಧ ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ನೀಡಿರುವ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ತಿಳಿಸಿದರು.
    ಅಪರ ಮುಖ್ಯ ಕಾರ್ಯದರ್ಶಿ ಡಾ. ಜಿ. ಕಲ್ಪನಾ ಅವರು ಹೊರಡಿಸಿರುವ ಆದೇಶ ಪ್ರತಿಯನ್ನು ಸಂಘ ಸ್ವೀಕರಿಸಿದೆ. ಈ ಹಿಂದೆ ಆಡಳಿತ ಮಂಡಳಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಸಂಬಂಧ ನೋಟಿಸ್ ಹೊರಡಿಸಿದ್ದು, ಇದರ ವಿರುದ್ಧ ಅಧಿಕೃತ ಕಾರ್ಮಿಕ ಸಂಘ ಉಚ್ಛ ನ್ಯಾಯಾಲಯದ ಮೋರೆ ಹೋದ ಹಿನ್ನಲೆಯಲ್ಲಿ ವಿಚಾರಣೆ ನಡೆದು ಮಧ್ಯಂತರ ಆದೇಶ ಹೊರಡಿಸಲಾಗಿತ್ತು. ಈ ಆದೇಶದ ಪ್ರಕಾರ ಮೊದಲು ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಉದ್ಯೋಗದ ಭದ್ರತೆ ನೀಡುವಂತೆ ಸೂಚಿಸಲಾಗಿತ್ತು. ಆ ನಂತರ ಮುಂದಿನ ವಿಚಾರಣೆ ಕೈಗೆತ್ತಿಗೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿತ್ತು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವಾಗ ಈ ರೀತಿ ಆದೇಶ ಹೊರಡಿಸಿರುವುದು ಸರಿಯಾದ ಕ್ರಮವಲ್ಲ ಎಂದರು.
    ಕಾರ್ಖಾನೆಯಲ್ಲಿರುವ ಕಾರ್ಮಿಕರಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಉದ್ಯೋಗದ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದಕ್ಕೆ ಸರ್ಕಾರ ನ್ಯಾಯಾಲಯದಲ್ಲಿ ಒಪ್ಪಿಗೆ ಸಹ ಸೂಚಿಸಿದೆ. ಆದರೆ ಸರ್ಕಾರ ನಿಗಮ ಮಂಡಳಿಳಿಗೆ ಕೇವಲ ಒಂದೇ ಒಂದು ಪತ್ರ ಬರೆದಿದೆ ಹೊರತು ಸುಮಾರು ೧ ರಿಂದ ೨ ವರ್ಷದವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಡುವೆ ಕೆಲವು ಕಾರ್ಮಿಕರನ್ನು ನಿಯೋಜನೆ ಮೇರೆಗೆ ವಿವಿಧ ನಿಗಮ ಮಂಡಳಿಗಳಲ್ಲಿ ಎರವಲು ಸೇವೆಗೆ ಕಳುಹಿಸಲಾಗಿದೆ. ಎಲ್ಲಾ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಒದಗಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಆಡಳಿತ ಮಂಡಳಿ ಸಲ್ಲಿಸಿರುವ ಅರ್ಜಿಗೆ ನಮ್ಮ ತಕರಾರು ಇಲ್ಲ. ಕಾರ್ಮಿಕರಿಗೆ ಮೊದಲು ಉದ್ಯೋಗದ ಭದ್ರತೆ ಸಿಗಬೇಕು. ಆ ನಂತರ ಕಾರ್ಖಾನೆ ಮುಚ್ಚುವ ಆದೇಶ ಹೊರಡಿಸಲಿ. ಈ ಹಿನ್ನಲೆಯಲ್ಲಿ ಪ್ರಸ್ತುತ ಹೊರಡಿಸಲಾಗಿರುವ ಆದೇಶವನ್ನು ಪ್ರಶ್ನಿಸಲಾಗುವುದು ಎಂದರು.

Monday, October 11, 2021

ಯೋಗ ಭಂಗಿಯಲ್ಲಿ ಡಿ. ನಾಗರಾಜ್ ಗ್ಲೋಬಲ್ ವರ್ಲ್ಡ್ ರೆಕಾರ್ಡ್

ಭದ್ರಾವತಿ ವಿವೇಕಾನಂದ ಯೋಗ ಟ್ರಸ್ಟ್‌ನ ಡಿ. ನಾಗರಾಜ್ ಅವರ ಯೋಗ ಕ್ಷೇತ್ರದಲ್ಲಿನ ೪ ದಶಕದ ಸಾಧನೆಯನ್ನು ಗುರುತಿಸಿ ರಾಷ್ಟ್ರೀಯ ಯೋಗಿ-ಯೋಗ ಆವಾರ್ಡ್ ನೀಡಿ ಗೌರವಿಸಲಾಗಿದೆ.
    ಭದ್ರಾವತಿ, ಅ. ೧೧: ಆನ್‌ಲೈನ್  ಮೂಲಕ ಬೆಂಗಳೂರಿನ ನಾಗರಭಾವಿಯ ಸೆಂಟ್ ಸೋಫಿಯಾ ಕಾನ್ವೆಂಟ್ ಹೈಸ್ಕೂಲ್‌ನಲ್ಲಿ ನಡೆದ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಹಾಗು ರಾಷ್ಟ್ರೀಯ ಯೋಗಿ-ಯೋಗ ಆವಾರ್ಡ್-೨೦೨೧ ಸ್ಪರ್ಧೆಯಲ್ಲಿ ನಗರದ ವಿವೇಕಾನಂದ ಯೋಗ ಟ್ರಸ್ಟ್‌ನ ಡಿ. ನಾಗರಾಜ್ ಪ್ರಾಸಾರಿತ ಪಾದೋತ್ತಾಸನದ ಯೋಗ ಭಂಗಿಯಲ್ಲಿ ೫ ನಿಮಿಷ ಮಾಡಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.
    ಯೋಗ ಕ್ಷೇತ್ರದಲ್ಲಿನ ನಾಗರಾಜ್ ಅವರ ೪ ದಶಕದ ಸಾಧನೆಯನ್ನು ಗುರುತಿಸಿ ರಾಷ್ಟ್ರೀಯ ಯೋಗಿ-ಯೋಗ ಆವಾರ್ಡ್ ನೀಡಿ ಗೌರವಿಸಲಾಗಿದೆ.
    ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಡೈರೆಕ್ಟರ್ ಡಾ. ಸುಬ್ರಮಣಿ, ಸಂಯೋಜಕ ಡಾ. ಕಮಲ್‌ಕಣ್ಣನ್, ಉಪಾಧ್ಯಕ್ಷ ಡಾ. ಮುರುಗನ್, ಯೋಗ ಮಹಾದೇವಾ ಹಾಗು ಡಾ. ಶಿವಪ್ರಕಾಶ್ ಮತ್ತು ಸೋಪಿಯಾ ಕಾನ್ವೆಂಟ್ ಹೈಸ್ಕೂಲ್ ಪ್ರಾಂಶುಪಾಲೆ ಡಾ. ಕಲ್ಪನಾ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಭಾರತ, ಥೈಲ್ಯಾಂಡ್, ಮಲೇಷಿಯಾ, ಶ್ರೀಲಂಕಾ ಮತ್ತು ವಿಯೆಟ್ನಾಂ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಸುಮಾರು ೪೭೭ ಯೋಗಪಟುಗಳು ಭಾಗವಹಿಸಿದ್ದರು.

ಇತಿಹಾಸದ ಗರ್ಭ ಸೇರಿದ ಮೈಸೂರು ಕಾಗದ ಕಾರ್ಖಾನೆ : ಬೀಗ ಮುದ್ರೆಗೆ ಆದೇಶ

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ
    ಭದ್ರಾವತಿ, ಅ. ೧೧: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಇದೀಗ ಇತಿಹಾಸದ ಗರ್ಭದೊಳಗೆ ಮುಚ್ಚಿ ಹೋಗಿದೆ. ಪುನಃ ಆರಂಭಗೊಳ್ಳುವ ನಿರೀಕ್ಷೆ ಹುಸಿಯಾಗಿದೆ. ಇಲ್ಲಿಯವರೆಗೂ ನಡೆಸಿಕೊಂಡು ಬಂದ ಹೋರಾಟಗಳಿಗೆ ಬೆಲೆ ಇಲ್ಲದಂತಾಗಿದೆ.
    ೧೦ ಜೂನ್ ೨೦೧೯ರಂದು ಕಾರ್ಖಾನೆ ಆಡಳಿತ ಮಂಡಳಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಅಂತಿಮ ಆದೇಶವನ್ನು ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಜಿ. ಕಲ್ಪನಾ ೭ ಅಕ್ಟೋಬರ್ ೨೦೨೧ರಂದು ಹೊರಡಿಸಿದ್ದಾರೆ.
    ಕಾರ್ಖಾನೆಯ ಆಡಳಿತ ಮಂಡಳಿ  ಹಾಗು ಎದುರುದಾರರಾದ ದಿ ಮೈಸೂರು ಪೇಪರ್ ಮಿಲ್ಸ್ ಎಂಪ್ಲಾಯೀಸ್ ಅಸೋಸಿಯೇಷನ್ ಮತ್ತು ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘ ಇವುಗಳು ಸಲ್ಲಿಸಿದ್ದ ಅರ್ಜಿಗಳನ್ನು ರಾಜ್ಯ ಉಚ್ಛನ್ಯಾಯಾಲಯದ ತೀರ್ಪಿನ ಆದೇಶದಂತೆ ಸುಧೀರ್ಘವಾಗಿ ವಿಚಾರಣೆ ನಡೆಸಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಅಂತಿಮ ಆದೇಶ ಹೊರಡಿಸಿದ್ದಾರೆ.
    ಸುಮಾರು ೧೩ ಪುಟಗಳನ್ನು ಒಳಗೊಂಡಿರುವ ಆದೇಶ ಪ್ರತಿಯಲ್ಲಿ ಆಡಳಿತ ಮಂಡಳಿ ಕಾರ್ಖಾನೆಯನ್ನು ಮುಚ್ಚಲು ನೀಡಿರುವ ಸಕಾರಣಗಳನ್ನು ಹಾಗು ಇದಕ್ಕೆ ಪ್ರತಿಯಾಗಿ ಎರಡು ಕಾರ್ಮಿಕ ಸಂಘಟನೆಗಳ ಆಕ್ಷೇಪಣೆಗಳನ್ನು ಸ್ವವಿವರವಾಗಿ ತಿಳಿಸಲಾಗಿದೆ.
ಒಂದು ಕಾಲದಲ್ಲಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ  ಪ್ರಮುಖ ಪಾತ್ರವಹಿಸಿದ್ದ, ತನ್ನದೇ ಆದ ಬ್ರಾಂಡ್‌ನೊಂದಿಗೆ ದೇಶೀಯ ಹಾಗು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದ ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಬೃಹತ್ ಕಾರ್ಖಾನೆಯೊಂದು ಇದೀಗ ಇತಿಹಾಸದ ಗರ್ಭದೊಳಗೆ ಮುಚ್ಚಿ ಹೋಗುತ್ತಿರುವುದು ದುರಂತದ ಸಂಗತಿಯಾಗಿದೆ.
    ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಾಯ ಅವರ ಪರಿಶ್ರಮದ ಫಲವಾಗಿ ಆರಂಭಗೊಂಡ ಕಾರ್ಖಾನೆಯನ್ನು ಕೊನೆಗೂ ಉಳಿಸಿಕೊಳ್ಳಲಾಗದಿರುವುದು ಕ್ಷೇತ್ರದ ಕಾರ್ಮಿಕರು, ರೈತರು, ವ್ಯಾಪಾರಸ್ಥರು ಸೇರಿದಂತೆ ಸಮಸ್ತ ನಾಗರೀಕರಲ್ಲಿ ನೋವುಂಟು ಮಾಡಿದೆ.