Tuesday, March 8, 2022

ಕಾಶಿ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥ ಧಾರ್ಮಿಕ ಆಚರಣೆ ನೆರವೇಸಿದ ಬಿಳಿಕಿ ಶ್ರೀ

ಭದ್ರಾವತಿ ತಾಲೂಕಿನ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಪವಿತ್ರ ಕ್ಷೇತ್ರ ಕಾಶಿಗೆ ತೆರಳಿ ವಿಶ್ವನಾಥ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿವಿಧ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದ್ದಾರೆ.
    ಭದ್ರಾವತಿ, ಮಾ. ೮: ತಾಲೂಕಿನ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಪವಿತ್ರ ಕ್ಷೇತ್ರ ಕಾಶಿಗೆ ತೆರಳಿ ವಿಶ್ವನಾಥ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿವಿಧ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದ್ದಾರೆ.
    ತಾವರಕೆರೆ ಶಿಲಾಮಠದ ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗು ಭಕ್ತ ವೃಂದದೊಂದಿಗೆ ಬಿಳಿಕಿ ಶ್ರೀಗಳು ಕಾಶಿ ಗಂಗಾ ನದಿ ತೀರದಲ್ಲಿ ಮಹಾಪೂಜೆ, ಗಂಗಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದ್ದು, ಅಲ್ಲದೆ ಕಾಶಿ ಮಹಾಪೀಠದ ಜಗದ್ಗುಗಳ ದರ್ಶನ ಪಡೆದು ಕೃಪೆಗೆ ಪಾತ್ರರಾಗಿದ್ದಾರೆ.
    ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಪದಾಧಿಕಾರಿಗಳಾದ ಅಧ್ಯಕ್ಷ ಎಚ್. ಮಂಜುನಾಥ್, ಉಪಾಧ್ಯಕ್ಷರಾದ ಆರ್.ಎನ್ ರುದ್ರೇಶ್, ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಆರ್. ಆನಂದ್ ಮತ್ತು ಖಜಾಂಚಿ ರಮೇಶ್ ಸೇರಿದಂತೆ ಇನ್ನಿತರ ಭಕ್ತರು ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹೇಮಾವತಿ ನೇಮಕ

ಹೇಮಾವತಿ
    ಭದ್ರಾವತಿ, ಮಾ. ೮: ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹುತ್ತಾಕಾಲೋನಿ ನಿವಾಸಿ ಹೇಮಾವತಿ ಅವರನ್ನು ನೇಮಕಗೊಳಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಕೆ. ಅನಿತಾ ಕುಮಾರಿ ಆದೇಶ ಹೊರಡಿಸಿದ್ದಾರೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಸೂಚನೆ ಮೇರೆಗೆ ಹೇಮಾವತಿಯವರನ್ನು ನೇಮಕಗೊಳಿಸಲಾಗಿದ್ದು, ಪಕ್ಷದ ಸೂಚನೆ, ಆದೇಶಗಳ ಅನುಸಾರ ಪಕ್ಷ ನೀಡುವ ಜವಾಬ್ದಾರಿಯನ್ನು ಪಕ್ಷದ ನೀತಿ ನಿರೂಪನೆಗಳು ಉಲ್ಲಂಘನೆಯಾಗದಂತೆ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ ನೇಮಕಾತಿ ಆದೇಶದಲ್ಲಿ ಸೂಚಿಸಿದ್ದಾರೆ.
    ಈ ಹಿಂದೆ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುಳಾ ರಾಮಚಂದ್ರರವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ.


Monday, March 7, 2022

ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ : ಎಂ. ಶ್ರೇಯಸ್ ತೃತೀಯ ಸ್ಥಾನ

ಕರ್ನಾಟಕ ರಾಜ್ಯ ಕರಾಟೆ ಅಕಾಡೆಮಿ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭದ್ರಾವತಿ ಹಳೇನಗರದ ಕನಕ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಎಂ. ಶ್ರೇಯಸ್ ಭಾಗವಹಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ.
    ಭದ್ರಾವತಿ, ಮಾ. ೭: ಕರ್ನಾಟಕ ರಾಜ್ಯ ಕರಾಟೆ ಅಕಾಡೆಮಿ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಹಳೇನಗರದ ಕನಕ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಎಂ. ಶ್ರೇಯಸ್ ಭಾಗವಹಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ.
    ಶ್ರೇಯಸ್ ೧೨ ಕೆ.ಜಿ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದುಕೊಂಡು ಕೀರ್ತಿ ತಂದಿದ್ದಾನೆ. ಈ ವಿದ್ಯಾರ್ಥಿಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲ ಸಿ.ಡಿ ಮಂಜುನಾಥ್ ಹಾಗು ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಮಹಿಳೆ ಯಾವುದೇ ಸಂದರ್ಭದಲ್ಲಿ, ಯಾವುದೇ ರೀತಿಯ ಕೆಲಸ ಸಮರ್ಥವಾಗಿ ನಿಭಾಯಿಸಬಲ್ಲಳು

ಗಮನ ಸೆಳೆಯುತ್ತಿರುವ ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ : ಮಾ.೧೧ರಂದು ಬಜೆಟ್ ಮಂಡನೆ


ಗೀತಾರಾಜ್‌ಕುಮಾರ್, ಅಧ್ಯಕ್ಷರು, ನಗರಸಭೆ, ಭದ್ರಾವತಿ.
    * ಅನಂತಕುಮಾರ್
    ಭದ್ರಾವತಿ, ಮಾ. ೭: ಸಾಮಾಜಿಕ ಸೇವಾ ಕಾರ್ಯಗಳಿಗೆ ಮಾತ್ರ ತಮ್ಮ ಬದುಕನ್ನು ಮೀಸಲಿಟ್ಟಿದ್ದ ಕುಟುಂಬವೊಂದರ ಸದಸ್ಯೆಯೊಬ್ಬರು ಅನಿವಾರ್ಯ ಕಾರಣಗಳಿಂದ ರಾಜಕೀಯಕ್ಕೆ ಪ್ರವೇಶಿಸಿ ಮೊದಲ ಹಂತದಲ್ಲಿಯೇ ಉನ್ನತ ಹುದ್ದೆ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯದ ಅನುಭವವಿಲ್ಲದ್ದರೂ ಕಳೆದ ಸುಮಾರು ೫ ತಿಂಗಳಿನಿಂದ ಯಶಸ್ವಿಯಾಗಿ ಅಧಿಕಾರ ನಿಭಾಯಿಸಿಕೊಂಡು ಬರುವ ಮೂಲಕ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
    ನಗರಸಭೆ ವಾರ್ಡ್ ನಂ.೨ರಲ್ಲಿ ಈ ಬಾರಿ ಆಯ್ಕೆಯಾಗಿರುವ ಗೀತಾ ಕೆ.ಜಿ ರಾಜ್‌ಕುಮಾರ್‌ರವರು ನಗರಸಭೆ ಅಧ್ಯಕ್ಷರಾಗಿ ಹೊಸ ಅನುಭವದೊಂದಿಗೆ ಮುನ್ನಡೆಯುತ್ತಿದ್ದಾರೆ. ಮಹಿಳೆ ಕೇವಲ ಮನೆಗೆ ಸೀಮಿತವಲ್ಲ. ಯಾವುದೇ ಸಂದರ್ಭದಲ್ಲಿ, ಯಾವುದೇ ರೀತಿಯ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬಲ್ಲಳು ಎಂಬುದನ್ನು ಇವರು ಸಾಧಿಸಿ ತೋರಿಸುತ್ತಿದ್ದಾರೆ.
    ಗೀತಾರವರ ಪತಿ ಕೆ.ಜಿ ರಾಜ್‌ಕುಮಾರ್‌ರವರ ಕುಟುಂಬ ಕ್ಷೇತ್ರದಲ್ಲಿ ಚಿರಪರಿಚಿತವಾಗಿದ್ದು, ಕಡದಕಟ್ಟೆ ಬಳಿ ವಿದ್ಯಾಸಂಸ್ಥೆ ನಿರ್ಮಾಣದ ಜೊತೆಗೆ ಆನೇಕ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಪ್ರತಿಷ್ಠಿತ ಕುಟುಂಬವಾಗಿದೆ. ರಾಜ್‌ಕುಮಾರ್‌ರವರ ತಂದೆ ರಾಮನಗೌಡ್ರು ಮೂಲತಃ ಕಾಂಗ್ರೆಸ್ ಪಕ್ಷದವರಾಗಿದ್ದು, ತಾಲೂಕು ಬೋರ್ಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತದ ನಂತರ ಈ ಕುಟುಂಬದ ಯಾರೊಬ್ಬರೂ ಸಹ ರಾಜಕೀಯದ ಕಡೆ ಗಮನ ಹರಿಸಿರಲಿಲ್ಲ. ಹಲವಾರು ಬಾರಿ ಅವಕಾಶಗಳು ಲಭಿಸಿದರೂ ಸಹ ರಾಜಕೀಯದಿಂದ ಅಂತರ ಕಾಯ್ದುಕೊಂಡಿತ್ತು. ಈ ಬಾರಿ ನಗರಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸ್ಥಳೀಯರಿಂದ ಹೆಚ್ಚಿನ ಒತ್ತಡಗಳು ಬಂದ ಹಿನ್ನಲೆಯಲ್ಲಿ ಹಾಗು ರಾಮನಗೌಡ್ರುರವರ ರಾಜಕಾರಣಕ್ಕೆ ಪುನಃ ಮರುಜೀವ ನೀಡಬೇಕೆಂಬ ಆಶಯದೊಂದಿಗೆ ಗೀತಾರವರು ಕಣಕ್ಕಿಳಿಯುವುದು ಅನಿವಾರ್ಯವಾಯಿತು. ಇದಕ್ಕೆ ಪೂರಕವೆಂಬಂತೆ ಗೀತಾರವರು ಗೆಲುವು ಸಾಧಿಸುವ ಜೊತೆಗೆ ಅಧ್ಯಕ್ಷರಾಗಿ ಸಹ ಆಯ್ಕೆಯಾಗಿ ಮುನ್ನಡೆಯುತ್ತಿದ್ದಾರೆ.  
    ತಮ್ಮ ರಾಜಕೀಯ ಅನುಭವಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿರುವ ಗೀತಾರವರು, ನನಗೆ ರಾಜಕೀಯ ಹೊಸದು. ಲಯನ್ಸ್ ಕ್ಲಬ್‌ನಲ್ಲಿ ಸದಸ್ಯೆಯಾಗಿ ಒಂದಿಷ್ಟು ಸೇವಾ ಕಾರ್ಯಗಳಲ್ಲಿ ಭಾಗಿಯಾದ ಅನುಭವ ಹೊಂದಿದ್ದೇನೆ. ಉಳಿದಂತೆ ಬಹುತೇಕ ಸಮಯ ಕುಟುಂಬಕ್ಕಾಗಿ ಮೀಸಲಿಟ್ಟಿದೆ. ಅನಿವಾರ್ಯ ಕಾರಣಗಳಿಂದ ಚುನಾವಣೆಗೆ ಸ್ಪರ್ಧಿಸುವಂತಾಯಿತು. ನಿರೀಕ್ಷೆ ಇಲ್ಲದೆ ಅಧ್ಯಕ್ಷ ಸ್ಥಾನ ಸಹ ಲಭಿಸಿದೆ. ಇದೀಗ ಕುಟುಂಬದ ಜವಾಬ್ದಾರಿಯೊಂದಿಗೆ ಈ ಹುದ್ದೆಯನ್ನು ಸಹ ಎಲ್ಲರ ಸಹಕಾರದಿಂದ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ನನಗೆ ಪತಿ ರಾಜ್‌ಕುಮಾರ್‌ರವರು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಸೊಸೆಯ ಆಗಮನದಿಂದ ಮನೆ ಜವಾಬ್ದಾರಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಉಳಿದಂತೆ ಇದುವರೆಗೂ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದರು.
    ಈ ನಡುವೆ ಗೀತಾರವರು ಮಾ.೧೧ರಂದು ಮೊದಲ ಬಾರಿಗೆ ನಗರಸಭೆ ಆಯ-ವ್ಯಯ ಮಂಡಿಸಲಿದ್ದು, ನಗರದ ಜನತೆ ಈ ಬಾರಿ ಹೊಸ ನಿರೀಕ್ಷೆಗಳೊಂದಿಗೆ ಎದುರು ನೋಡುವಂತಾಗಿದೆ.

ತಾಲೂಕು ಮಟ್ಟದ ಷಟಲ್ ಪಂದ್ಯಾವಳಿ : ಸುನಿಲ್-ವರುಣ್ ಪ್ರಥಮ ಸ್ಥಾನ

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಭದ್ರಾವತಿ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದಲ್ಲಿರುವ ಷಟಲ್ ಒಳಾಂಗಣ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಷಟಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.
    ಭದ್ರಾವತಿ, ಮಾ. ೭: ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದಲ್ಲಿರುವ ಷಟಲ್ ಒಳಾಂಗಣ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಷಟಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.
    ಪಂದ್ಯಾವಳಿಯಲ್ಲಿ ಸುನಿಲ್ ಮತ್ತು ವರುಣ್ ಪ್ರಥಮ, ಅನಿಲ್ ಮತ್ತು ಶಶಾಂಕ್ ದ್ವಿತೀಯ ಮತ್ತು ಅಮರ್ ಮತ್ತು ರಘು ತೃತೀಯ ಸ್ಥಾನಗಳನ್ನು ಪಡೆದುಕೊಂಡರು.  ಈ ಪಂದ್ಯಾವಳಿಯ ಶ್ರೇಷ್ಠ ಆಟಗಾರರಾಗಿ ಜೀವನ್ ಮತ್ತು ಶಶಾಂಕ್ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
    ಪಂದ್ಯಾವಳಿಯನ್ನು ಚಿಕ್ಕಮಗಳೂರು ಯೋಜನಾ ನಿರ್ದೇಶಕ ಮನೋಹರ್ ಉದ್ಘಾಟಿಸಿದರು. ನಗರಸಭಾ ಸದಸ್ಯರಾದ ಬಿ.ಎಂ. ಮಂಜುನಾಥ್(ಟೀಕು), ಆರ್. ಶ್ರೇಯಸ್(ಚಿಟ್ಟೆ) ಮತ್ತು ಅನುಪಮಾ ಚನ್ನೇಶ್, ಪ್ರಮುಖರಾದ ಶಿವಲಿಂಗೇಗೌಡ, ಸಿದ್ದಲಿಂಗಯ್ಯ, ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ರೀಡಾಂಗಣಕ್ಕೆ ಕೊಡುಗೆಯಾಗಿ ನೀಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.


ಮೋಜಿನ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದ ಮಹಿಳಾ ಕಾರ್ಮಿಕರು

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಆಯೋಜನೆ


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕಾಯಂ ಹಾಗು ಗುತ್ತಿಗೆ ಮಹಿಳಾ ಕಾರ್ಮಿಕ ಮಹಿಳೆಯರಿಗೆ ಈ ಬಾರಿ ವಿಶೇಷವಾಗಿ ಮೋಜಿನ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
    ಭದ್ರಾವತಿ, ಮಾ ೭: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕಾಯಂ ಹಾಗು ಗುತ್ತಿಗೆ ಮಹಿಳಾ ಕಾರ್ಮಿಕ ಮಹಿಳೆಯರಿಗೆ ಈ ಬಾರಿ ವಿಶೇಷವಾಗಿ ಮೋಜಿನ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
    ಕಾರ್ಖಾನೆಯ ಎಚ್‌ಆರ್‌ಡಿ ಮತ್ತು ಪಿ.ಆರ್ ಇಲಾಖೆಗಳ ಸಹಕಾರದೊಂದಿಗೆ ೨ ದಿನಗಳ ಕಾಲ ಆಯೋಜಿಸಲಾಗಿದ್ದ ಮೋಜಿನ ಕ್ರೀಡೆಯಲ್ಲಿ ಸುಮಾರು ೫೦ ಕಾಯಂ ಹಾಗು ಗುತ್ತಿಗೆ ಮಹಿಳಾ ಕಾರ್ಮಿಕರು ಪಾಲ್ಗೊಂಡು ಸಂಭ್ರಮಿಸಿದರು.
    ಪ್ರತಿ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕಾರ್ಖಾನೆಯಲ್ಲಿ ವಿಶೇವವಾಗಿ ಅಚರಿಸಿಕೊಂಡು ಬರಲಾಗುತ್ತಿದ್ದು, ಮಾ.೮ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಖಾನೆ ಆಡಳಿತ ಮಂಡಳಿ ಸಮಸ್ತ ಮಹಿಳೆಯರಿಗೆ ಶುಭ ಕೋರಿದ್ದು, ಅಲ್ಲದೆ ಕಾರ್ಖಾನೆ ಆಡಳಿತ ಕಛೇರಿಯ ಸಭಾಂಗಣದಲ್ಲಿ ಮಧ್ಯಾಹ್ನ ೨.೩೦ ರಿಂದ ಸಾಂಸ್ಕೃತಿಕ ಹಾಗು ವಿಚಾರ ಸಂಕೀರಣ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಿಳೆ ಮತ್ತು ಸಬಲೀಕರಣ ಸೇರಿದಂತೆ ಹಲವು ವಿಚಾರಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾತನಾಡಲಿದ್ದಾರೆ.  

Sunday, March 6, 2022

ಶಿವಮೊಗ್ಗ ಪ್ರತ್ಯೇಕ ಹಾಲು ಒಕ್ಕೂಟ, ವಾರ್ಡ್‌ಗಳಲ್ಲಿ ಕ್ಲಿನಿಕ್, ಯಶಸ್ವಿನಿ ಆರೋಗ್ಯ ಯೋಜನೆ ಅನುಷ್ಠಾನಗೊಳ್ಳಲಿ

ಶಿಮುಲ್ ಮಾಜಿ ಅಧ್ಯಕ್ಷ ಆನಂದ್, ಎಎಪಿ ಜಿಲ್ಲಾಧ್ಯಕ್ಷ ರವಿಕುಮಾರ್, ಬಿಜೆಪಿ ಯುವ ಮುಖಂಡ ಸುನೀಲ್ ಗಾಯಕ್ವಾಡ್ ಸರ್ಕಾರಕ್ಕೆ ಕೃತಜ್ಞತೆ

ಡಿ. ಆನಂದ್, ಶಿಮುಲ್ ಮಾಜಿ ಅಧ್ಯಕ್ಷರು, ಭದ್ರಾವತಿ

    ಭದ್ರಾವತಿ, ಮಾ. ೬: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಾರಿ ಮಂಡಿಸಿರುವ ಬಜೆಟ್‌ನಲ್ಲಿ ಶಿವಮೊಗ್ಗ ಹಾಲು ಒಕ್ಕೂಟವನ್ನು ಪ್ರತ್ಯೇಕಿಸುವ ಕುರಿತು  ಪ್ರಸ್ತಾಪ ಮಾಡಿರುವುದು ಒಳ್ಳೆಯ ಬೆಳೆವಣಿಗೆಯಾಗಿದ್ದು, ಇದು ಅನುಷ್ಠಾನಗೊಂಡಲ್ಲಿ ಶಿವಮೊಗ್ಗ ಜಿಲ್ಲೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಒಕ್ಕೂಟದ ಮಾಜಿ ಅಧ್ಯಕ್ಷ ಡಿ. ಆನಂದ್ ತಿಳಿಸಿದ್ದಾರೆ.
    ಒಕ್ಕೂಟ ಪ್ರತ್ಯೇಕಿಸುವ ವಿಚಾರ ಹಲವಾರು ವರ್ಷಗಳಿಂದ ಉಳಿದುಕೊಂಡಿದ್ದು, ಪ್ರಸ್ತುತ ಒಕ್ಕೂಟ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಿರುವ ಹಿನ್ನಲೆಯಲ್ಲಿ ಒಂದು ಜಿಲ್ಲೆಯವರು ಗಳಿಸುವ ಲಾಭ ೩ ಜಿಲ್ಲೆಗಳಿಗೆ ಹಂಚಿಕೆಯಾಗುತ್ತಿದೆ. ಇದರಿಂದಾಗಿ ಒಕ್ಕೂಟ ಬೆಳವಣಿಗೆ ಕಾಣಲು ಸಾಧ್ಯವಾಗುತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿದಿನ ಸುಮಾರು ೨.೫ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಈ ಪೈಕಿ ಸುಮಾರು ೧.೫ ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಎರಡು ಜಿಲ್ಲೆಗಳು ಸೇರಿ ಪ್ರತಿದಿನ ಒಟ್ಟು ಸುಮಾರು ೩ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಆದರೆ ಸುಮಾರು ೧.೫ ಲಕ್ಷ ಲೀಟರ್ ಹಾಲು ಮಾತ್ರ ಮಾರಾಟವಾಗುತ್ತಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಆರೋಗ್ಯ ದೊದ್ಲಾ ಸೇರಿದಂತೆ ಖಾಸಗಿ ಕಂಪನಿಗಳ ಹಾಲು ಹೆಚ್ಚಾಗಿ ಮಾರಾಟವಾಗುತ್ತಿದ್ದು, ಇದರಿಂದಾಗಿ ಒಕ್ಕೂಟದ ಹಾಲು ಉಳಿಯುತ್ತಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಒಕ್ಕೂಟ ರಚನೆಯಾದಲ್ಲಿ ಜಿಲ್ಲೆಯಲ್ಲಿರುವ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.


ಎಚ್. ರವಿಕುಮಾರ್, ಆಮ್ ಆದ್ಮಿ ಜಿಲ್ಲಾಧ್ಯಕ್ಷರು, ಭದ್ರಾವತಿ.

    ಪ್ರತಿ ವಾರ್ಡ್‌ಗಳಲ್ಲಿ ಕ್ಲಿನಿಕ್ ಪ್ರಸ್ತಾವನೆಗೆ ಅಭಿನಂದನೆ :

    ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿರುವ ಬಜೆಟ್ ಸಮಾಧಾನಕರವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ತಿಳಿಸಿದ್ದಾರೆ.
    ಆಮ್ ಆದ್ಮಿ ಪಕ್ಷದ ದೆಹಲಿ ಸರ್ಕಾರ ಬಡ ವರ್ಗದವರಿಗೆ ಗುಣಮಟ್ಟದ ಆರೋಗ್ಯ ನೀಡುವ ಹಿನ್ನಲೆಯಲ್ಲಿ ಮೊಹಲ್ಲಾ ಕ್ಲಿನಿಕ್‌ಗಳನ್ನು ಆರಂಭಿಸಿದೆ. ಇದೆ ರೀತಿ ಇದೀಗ ರಾಜ್ಯದಲ್ಲಿ ಪ್ರತಿ ವಾರ್ಡ್‌ಗಳಲ್ಲಿ ಕ್ಲಿನಿಕ್ ಆರಂಭಿಸುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಪಕ್ಷದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ. ಜೊತೆಗೆ ತಕ್ಷಣ ಕ್ಲಿನಿಕ್‌ಗಳನ್ನು ಆರಂಭಿಸುವಂತೆ ಮನವಿ ಮಾಡಿದ್ದಾರೆ.


ಸುನೀಲ್ ಗಾಯಕ್ವಾಡ್, ಯುವ ಮುಖಂಡರು, ಬಿಜೆಪಿ, ಭದ್ರಾವತಿ.

    ಯಶಸ್ವಿನಿ ಯೋಜನೆಯಿಂದ ಮಲೆನಾಡಿನ ಭಾಗದ ರೈತರಿಗೆ ಹೆಚ್ಚಿನ ಅನುಕೂಲ:

    ರೈತ ನಾಯಕ, ಬಡವರ ಬಂಧು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಈ ಹಿಂದೆ ಆರಂಭಿಸಿದ್ದ ಯಶಸ್ವಿನಿ ಆರೋಗ್ಯ ಯೋಜನೆಗೆ ಈ ಬಾರಿ ಮಂಡಿಸಿರುವ ಬಜೆಟ್‌ನಲ್ಲಿ ಮರುಜೀವ ತುಂಬಲು ಮುಂದಾಗಿರುವುದು ಒಳ್ಳೆಯ ಬೆಳೆವಣಿಗೆಯಾಗಿದೆ ಎಂದು ಬಿಜೆಪಿ ಯುವ ಮುಖಂಡ ಸುನೀಲ್ ಗಾಯಕ್ವಾಡ್ ತಿಳಿಸಿದ್ದಾರೆ.
    ರೈತರಿಗೆ ಪ್ರಸ್ತುತ ಕೆಲವು ಆರೋಗ್ಯ ಯೋಜನೆಗಳು ಜಾರಿಯಲ್ಲಿದ್ದರೂ ಸಹ ಇವುಗಳಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಯಡಿಯೂರಪ್ಪನವರು ಆರಂಭಿಸಿದ ಯಶಸ್ವಿನಿ ಯೋಜನೆಯಿಂದ ಈ ಹಿಂದೆ ಸಾಕಷ್ಟು ರೈತರಿಗೆ ಹೆಚ್ಚಿನ ಅನುಕೂಲವಾಗಿತ್ತು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಲವಾರು ಮಾರ್ಪಾಡುಗಳೊಂದಿಗೆ ಪುನಃ ಯಶಸ್ವಿನಿ ಯೋಜನೆ ಆರಂಭಿಸುವುದಾಗಿ ಪ್ರಸ್ತಾಪಿಸುವ ಜೊತೆಗೆ ರು. ೩೦೦ ಕೋ. ಮೀಸಲಿಟ್ಟಿರುವುದು ಸಂತೋಷದ ವಿಚಾರವಾಗಿದೆ. ಯಶಸ್ವಿಯೋಜನೆಯಿಂದ ಮಲೆನಾಡಿನ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.