Monday, March 7, 2022

ಮಹಿಳೆ ಯಾವುದೇ ಸಂದರ್ಭದಲ್ಲಿ, ಯಾವುದೇ ರೀತಿಯ ಕೆಲಸ ಸಮರ್ಥವಾಗಿ ನಿಭಾಯಿಸಬಲ್ಲಳು

ಗಮನ ಸೆಳೆಯುತ್ತಿರುವ ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ : ಮಾ.೧೧ರಂದು ಬಜೆಟ್ ಮಂಡನೆ


ಗೀತಾರಾಜ್‌ಕುಮಾರ್, ಅಧ್ಯಕ್ಷರು, ನಗರಸಭೆ, ಭದ್ರಾವತಿ.
    * ಅನಂತಕುಮಾರ್
    ಭದ್ರಾವತಿ, ಮಾ. ೭: ಸಾಮಾಜಿಕ ಸೇವಾ ಕಾರ್ಯಗಳಿಗೆ ಮಾತ್ರ ತಮ್ಮ ಬದುಕನ್ನು ಮೀಸಲಿಟ್ಟಿದ್ದ ಕುಟುಂಬವೊಂದರ ಸದಸ್ಯೆಯೊಬ್ಬರು ಅನಿವಾರ್ಯ ಕಾರಣಗಳಿಂದ ರಾಜಕೀಯಕ್ಕೆ ಪ್ರವೇಶಿಸಿ ಮೊದಲ ಹಂತದಲ್ಲಿಯೇ ಉನ್ನತ ಹುದ್ದೆ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯದ ಅನುಭವವಿಲ್ಲದ್ದರೂ ಕಳೆದ ಸುಮಾರು ೫ ತಿಂಗಳಿನಿಂದ ಯಶಸ್ವಿಯಾಗಿ ಅಧಿಕಾರ ನಿಭಾಯಿಸಿಕೊಂಡು ಬರುವ ಮೂಲಕ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
    ನಗರಸಭೆ ವಾರ್ಡ್ ನಂ.೨ರಲ್ಲಿ ಈ ಬಾರಿ ಆಯ್ಕೆಯಾಗಿರುವ ಗೀತಾ ಕೆ.ಜಿ ರಾಜ್‌ಕುಮಾರ್‌ರವರು ನಗರಸಭೆ ಅಧ್ಯಕ್ಷರಾಗಿ ಹೊಸ ಅನುಭವದೊಂದಿಗೆ ಮುನ್ನಡೆಯುತ್ತಿದ್ದಾರೆ. ಮಹಿಳೆ ಕೇವಲ ಮನೆಗೆ ಸೀಮಿತವಲ್ಲ. ಯಾವುದೇ ಸಂದರ್ಭದಲ್ಲಿ, ಯಾವುದೇ ರೀತಿಯ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬಲ್ಲಳು ಎಂಬುದನ್ನು ಇವರು ಸಾಧಿಸಿ ತೋರಿಸುತ್ತಿದ್ದಾರೆ.
    ಗೀತಾರವರ ಪತಿ ಕೆ.ಜಿ ರಾಜ್‌ಕುಮಾರ್‌ರವರ ಕುಟುಂಬ ಕ್ಷೇತ್ರದಲ್ಲಿ ಚಿರಪರಿಚಿತವಾಗಿದ್ದು, ಕಡದಕಟ್ಟೆ ಬಳಿ ವಿದ್ಯಾಸಂಸ್ಥೆ ನಿರ್ಮಾಣದ ಜೊತೆಗೆ ಆನೇಕ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಪ್ರತಿಷ್ಠಿತ ಕುಟುಂಬವಾಗಿದೆ. ರಾಜ್‌ಕುಮಾರ್‌ರವರ ತಂದೆ ರಾಮನಗೌಡ್ರು ಮೂಲತಃ ಕಾಂಗ್ರೆಸ್ ಪಕ್ಷದವರಾಗಿದ್ದು, ತಾಲೂಕು ಬೋರ್ಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತದ ನಂತರ ಈ ಕುಟುಂಬದ ಯಾರೊಬ್ಬರೂ ಸಹ ರಾಜಕೀಯದ ಕಡೆ ಗಮನ ಹರಿಸಿರಲಿಲ್ಲ. ಹಲವಾರು ಬಾರಿ ಅವಕಾಶಗಳು ಲಭಿಸಿದರೂ ಸಹ ರಾಜಕೀಯದಿಂದ ಅಂತರ ಕಾಯ್ದುಕೊಂಡಿತ್ತು. ಈ ಬಾರಿ ನಗರಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸ್ಥಳೀಯರಿಂದ ಹೆಚ್ಚಿನ ಒತ್ತಡಗಳು ಬಂದ ಹಿನ್ನಲೆಯಲ್ಲಿ ಹಾಗು ರಾಮನಗೌಡ್ರುರವರ ರಾಜಕಾರಣಕ್ಕೆ ಪುನಃ ಮರುಜೀವ ನೀಡಬೇಕೆಂಬ ಆಶಯದೊಂದಿಗೆ ಗೀತಾರವರು ಕಣಕ್ಕಿಳಿಯುವುದು ಅನಿವಾರ್ಯವಾಯಿತು. ಇದಕ್ಕೆ ಪೂರಕವೆಂಬಂತೆ ಗೀತಾರವರು ಗೆಲುವು ಸಾಧಿಸುವ ಜೊತೆಗೆ ಅಧ್ಯಕ್ಷರಾಗಿ ಸಹ ಆಯ್ಕೆಯಾಗಿ ಮುನ್ನಡೆಯುತ್ತಿದ್ದಾರೆ.  
    ತಮ್ಮ ರಾಜಕೀಯ ಅನುಭವಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿರುವ ಗೀತಾರವರು, ನನಗೆ ರಾಜಕೀಯ ಹೊಸದು. ಲಯನ್ಸ್ ಕ್ಲಬ್‌ನಲ್ಲಿ ಸದಸ್ಯೆಯಾಗಿ ಒಂದಿಷ್ಟು ಸೇವಾ ಕಾರ್ಯಗಳಲ್ಲಿ ಭಾಗಿಯಾದ ಅನುಭವ ಹೊಂದಿದ್ದೇನೆ. ಉಳಿದಂತೆ ಬಹುತೇಕ ಸಮಯ ಕುಟುಂಬಕ್ಕಾಗಿ ಮೀಸಲಿಟ್ಟಿದೆ. ಅನಿವಾರ್ಯ ಕಾರಣಗಳಿಂದ ಚುನಾವಣೆಗೆ ಸ್ಪರ್ಧಿಸುವಂತಾಯಿತು. ನಿರೀಕ್ಷೆ ಇಲ್ಲದೆ ಅಧ್ಯಕ್ಷ ಸ್ಥಾನ ಸಹ ಲಭಿಸಿದೆ. ಇದೀಗ ಕುಟುಂಬದ ಜವಾಬ್ದಾರಿಯೊಂದಿಗೆ ಈ ಹುದ್ದೆಯನ್ನು ಸಹ ಎಲ್ಲರ ಸಹಕಾರದಿಂದ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ನನಗೆ ಪತಿ ರಾಜ್‌ಕುಮಾರ್‌ರವರು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಸೊಸೆಯ ಆಗಮನದಿಂದ ಮನೆ ಜವಾಬ್ದಾರಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಉಳಿದಂತೆ ಇದುವರೆಗೂ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದರು.
    ಈ ನಡುವೆ ಗೀತಾರವರು ಮಾ.೧೧ರಂದು ಮೊದಲ ಬಾರಿಗೆ ನಗರಸಭೆ ಆಯ-ವ್ಯಯ ಮಂಡಿಸಲಿದ್ದು, ನಗರದ ಜನತೆ ಈ ಬಾರಿ ಹೊಸ ನಿರೀಕ್ಷೆಗಳೊಂದಿಗೆ ಎದುರು ನೋಡುವಂತಾಗಿದೆ.

No comments:

Post a Comment