ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. ೨೨ರ ಉಜ್ಜನಿಪುರದ ಬಿಳಿಕಟ್ಟೆ ಕೆರೆ ಮತ್ತು ಬಳಸಕಟ್ಟೆ ಕೆರೆ ತೆರವು ಕಾರ್ಯಾ ಚರಣೆ ಶುಕ್ರವಾರ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ನಡೆಯಿತು.
ಭದ್ರಾವತಿ, ಏ. ೮: ನಗರಸಭೆ ವ್ಯಾಪ್ತಿಯ ವಾರ್ಡ್ ನಂ. ೨೨ರ ಉಜ್ಜನಿಪುರದ ಬಿಳಿಕಟ್ಟೆ ಕೆರೆ ಮತ್ತು ಬಳಸಕಟ್ಟೆ ಕೆರೆ ತೆರವು ಕಾರ್ಯಾಚರಣೆ ಶುಕ್ರವಾರ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ನಡೆಯಿತು.
ರಾಷ್ಟ್ರೀಯ ಹೆದ್ದಾರಿ-೨೦೬ ಚತುಷ್ಪಥ ರಸ್ತೆಯ ಪಕ್ಕದಲ್ಲಿರುವ ಸರ್ವೆ ನಂ. ೧೩ರ ೬ ಎಕರೆ ೧೮ ಗುಂಟೆ ವಿಸ್ತೀರ್ಣ ಹೊಂದಿರುವ ಬಿಳಿಕಟ್ಟೆ ಕೆರೆ ಮತ್ತು ೪ ಎಕರೆ ೦೧ ಗುಂಟೆ ವಿಸ್ತೀರ್ಣ ಹೊಂದಿರುವ ಸರ್ವೆ ನಂ. ೧೬ರ ಬಳಸಕಟ್ಟೆ ಕೆರೆ ಸುಮಾರು ೩-೪ ದಶಕಗಳಿಂದ ಒತ್ತುವರಿಯಾಗಿದ್ದು, ಎರಡೂ ಕೆರೆಗಳ ಒಟ್ಟು ೧೦ ಎಕರೆ ೧೮ ಗುಂಟೆ ವಿಸ್ತೀರ್ಣದಲ್ಲಿ ಬಹುಭಾಗವನ್ನು ಆಕ್ರಮಿಸಿಕೊಂಡು ಅಡಕೆ, ತೆಂಗು ತೋಟಗಳನ್ನು ನಿರ್ಮಿಸಿಕೊಂಡು ಇನ್ನಿತರ ಉಪಬೆಳೆಗಳನ್ನು ಬೆಳೆಯಲಾಗುತ್ತಿದೆ.
ಎರಡು ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ನಮ್ಮ ಸಂಪೂರ್ಣ ಸಹಕಾರವಿದ್ದು, ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳ ತೆರವು ಕಾರ್ಯಾಚರಣೆ ನಡೆಸಬೇಕು. ಕೆರೆ ತೆರವು ವಿಚಾರದಲ್ಲಿ ಯಾವುದೇ ತಾರತಮ್ಯವಿಲ್ಲ. ಕೆರೆಗಳನ್ನು ಅಭಿವೃದ್ಧಿಪಡಿಸಿ ಮಾದರಿ ನಗರವನ್ನಾಗಿಸಬೇಕು.
- ಎಂ.ಎ ಅಜಿತ್, ನಗರಸಭೆ ಮಾಜಿ ಸದಸ್ಯ.
ಈ ಎರಡೂ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳುವಂತೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಪುತ್ರ, ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್, ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಮತ್ತು ಜಿಲ್ಲಾ ಸಂಚಾಲಕ ಚಿನ್ನಯ್ಯ ಹಾಗು ಕನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ದೇವರಾಜ ಅರಸು ಜನಸ್ಪಂದನಾ ವೇದಿಕೆ ಮತ್ತು ಮಹಿಳಾ ವೇದಿಕೆ ವತಿಯಿಂದ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ ನಗರಸಭೆ ಆಡಳಿತ ಸಹ ತಾಲೂಕು ಆಡಳಿತಕ್ಕೆ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಪೂರಕ ಮಾಹಿತಿಗಳೊಂದಿಗೆ ವರದಿ ಸಲ್ಲಿಸಿತ್ತು. ಇದರನ್ವಯ ತಹಸೀಲ್ದಾರ್ ಆರ್. ಪ್ರದೀಪ್ ಕೆರೆ ಸರ್ವೆ ಕಾರ್ಯ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರು.
ತಹಸೀಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ :
ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಹೆಚ್ಚಿನ ಆಸಕ್ತಿವಹಿಸಿರುವ ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್‌ರವರ ಅನುಪಸ್ಥಿತಿಯಲ್ಲಿ ಖುದ್ದಾಗಿ ಸ್ಥಳಕ್ಕೆ ಆಗಮಿಸಿ ನಗರಸಭೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿದರು.
ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಯಾವುದೇ ರೀತಿಯ ಒತ್ತಡಕ್ಕೂ ಸಹ ಮಣಿಯುವುದಿಲ್ಲ. ಎಲ್ಲಾ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು.
- ಆರ್. ಪ್ರದೀಪ್ ತಹಸೀಲ್ದಾರ್, ಭದ್ರಾವತಿ.
ತಾಲೂಕಿನಾದ್ಯಂತ ಬಹುತೇಕ ಕೆರೆಗಳು ಪ್ರಭಾವಿ ವ್ಯಕ್ತಿಗಳಿಂದ ಒತ್ತುವರಿಯಾಗಿದ್ದು, ತೆರವು ಕಾರ್ಯಾಚರಣೆ ಕೈಗೊಳ್ಳುವುದು ಸವಾಲಿನ ಕೆಲಸವಾಗಿದೆ. ಈ ಹಿಂದೆ ನಗರಸಭೆ ಪೌರಾಯುಕ್ತರಾಗಿದ್ದ ಮನೋಹರ್‌ರವರು ದಿಟ್ಟ ನಿರ್ಧಾರ ಕೈಗೊಂಡು ತೆರವು ಕಾರ್ಯಾಚರಣೆ ನಡೆಸಿದ್ದರು. ಇದೀಗ ತಹಸೀಲ್ದಾರ್ ಆರ್. ಪ್ರದೀಪ್ ಸಹ ದಿಟ್ಟತನದಿಂದ ಕಾರ್ಯಾಚರಣೆಗೆ ಮುಂದಾಗಿದ್ದು, ಆರಂಭಿಕ ಹಂತದಲ್ಲಿ ಯಶಸ್ಸು ಸಾಧಿಸಿದ್ದಾರೆ. ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೭೦ ಕೆರೆಗಳ ಬೌಂಡರಿ ನಿಗದಿಗೆ ಆದೇಶವಾಗಿದ್ದು, ಈ ಪೈಕಿ ೨೩ ಕೆರೆಗಳ ಬೌಂಡರಿ ನಿಗದಿಪಡಿಸಲಾಗಿದೆ. ಆದರೆ ತೆರವು ಕಾರ್ಯಾಚರಣೆ ನಡೆದಿರುವುದಿಲ್ಲ. ತೆರವು ಕಾರ್ಯಾಚರಣೆ ಕೈಗೊಳ್ಳಲು ಸ್ಥಳೀಯರು ಹಾಗು ಜನಪ್ರನಿಧಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳಿಂದ ಸಹಕಾರ ಹೆಚ್ಚಿನದ್ದಾಗಿದೆ.
ಒಂದು ವರ್ಷದ ಹಿಂದೆ ಸರ್ವೆ ಕಾರ್ಯ ನಡೆದಿದ್ದರೂ ತೆರವು ಕಾರ್ಯಾಚರಣೆ ನಡೆದಿರಲಿಲ್ಲ:
ಈ ಹಿಂದಿನ ನಗರಸಭೆ ಪೌರಾಯುಕ್ತ ಮನೋಹರ್‌ರವರ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆದು ಬೌಂಡರಿ ನಿಗದಿಪಡಿಸಲಾಗಿತ್ತು. ಆದರೆ ಪ್ರಭಾವಿಗಳ ಒತ್ತಡದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದಿರಲಿಲ್ಲ ಎನ್ನಲಾಗಿದೆ. ಈ ಬಾರಿ ಸಹ ಸಾಕಷ್ಟು ಒತ್ತಡಗಳು ಕಂಡು ಬಂದರೂ ಸಹ ತಹಸೀಲ್ದಾರ್ ಆರ್. ಪ್ರದೀಪ್ ದಿಟ್ಟತನದಿಂದ ಕಾರ್ಯಾಚರಣೆ ನಡೆಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬೆಳಿಗ್ಗೆಯಿಂದ ಸಂಜೆವರೆಗೂ ನಡೆದ ಕಾರ್ಯಾಚರಣೆ :
ತೆರವು ಕಾರ್ಯಾಚರಣೆಯಲ್ಲಿ ಸುಮಾರು ಒಂದೂವರೆ ಎಕರೆಯಲ್ಲಿ ಬೆಳೆಯಲಾಗಿದ್ದ ನೂರಾರು ಅಡಿಕೆ ಮರಗಳು ಹಾಗು ತೆಂಗು ಸೇರಿದಂತೆ ಇನ್ನಿತರ ಬೆಳೆ ನಾಶವಾಗಿದ್ದು, ಅಂದಾಜು ಸುಮಾರು ರು.೪೦ ಲಕ್ಷ ನಷ್ಟ ಉಂಟಾಗಿದೆ ಎನ್ನಲಾಗಿದೆ. ಉಳಿದಂತೆ ಅರ್ಧ ಎಕರೆ ಪ್ರದೇಶದಲ್ಲಿ ಲೇಔಟ್ ನಿರ್ಮಿಸಿಕೊಂಡಿದ್ದು, ಲೇಔಟ್ ಸಹ ತೆರವುಗೊಳಿಸಲಾಗಿದೆ.
ಕೆರೆಗಳನ್ನು ಅಭಿವೃದ್ಧಿಗೊಳಿಸುವ ಸಂಬಂಧ ಹಲವಾರು ವರ್ಷಗಳಿಂದ ನಡೆಸುತ್ತಿರುವ ನಮ್ಮ ಹೋರಾಟಕ್ಕೆ ಇದೀಗ ಜಯ ಲಭಿಸಿದೆ. ಕೆರೆ ಒತ್ತುವರಿ ಕಾರ್ಯಾಚರಣೆಯಲ್ಲಿ ದಿಟ್ಟ ಕ್ರಮ ಕೈಗೊಂಡಿರುವ ತಹಸೀಲ್ದಾರ್‌ರವರಿಗೆ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆಗಳು. ಉಳಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಬೌಂಡರಿ ನಿಗದಿಪಡಿಸಲಾಗಿರುವ ಸುಮಾರು ೭೦ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಬೇಕು.
-ಆರ್. ವೇಣುಗೋಪಾಲ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ.
ಸರ್ಕಾರಿ ಭೂ ಮಾಪಕರಾದ ದಿಲೀಪ್ ಮತ್ತು ಮಂಜಾನಾಯ್ಕ, ಕಂದಾಯಾಧಿಕಾರಿ ಪ್ರಶಾಂತ್, ರಾಜಸ್ವ ನಿರೀಕ್ಷಕ ಓಂಕಾರಪ್ಪ, ಗ್ರಾಮ ಲೆಕ್ಕಾಧಿಕಾರಿ ಶಿವಣ್ಣ, ನಗರಸಭೆ ಇಂಜಿನಿಯರ್ ರಂಗರಾಜಪುರ ಮತ್ತು ಕಂದಾಯಾಧಿಕಾರಿ ರಾಜಕುಮಾರ್ ಪೊಲೀಸ್ ಇನ್ಸ್ ಪೆಕ್ಟರ್ ಈ ಓ ಮಂಜುನಾಥ್ ಸೇರಿದಂತೆ ಇನ್ನಿತರ ಅಧಿಕಾರಿಗಳು ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕೆರೆ ತೆರವು ಕಾರ್ಯಾಚರಣೆಯಿಂದ ಉಜ್ಜನಿಪುರ ಗ್ರಾಮಸ್ಥರಿಗೆ ಮಳೆಗಾಲದಲ್ಲಿ ಮನೆಗೆ ನೀರು ನುಂಗುವ ಸಮಸ್ಯೆಯಿಂದ ಪಾರಾಗುವಂತಾಗಿದೆ. ಕಳೆದ ಬಾರಿ ನೀರು ನುಗ್ಗಿ ಹಾನಿಯಾದ ಮನೆಗಳಿಗೆ ಇದುವರೆಗೂ ಪರಿಹಾರ ನೀಡಿಲ್ಲ. ತಕ್ಷಣ ಪರಿಹಾರ ನೀಡಬೇಕು.
- ವೆಂಕಟಯ್ಯ ನಗರಸಭೆ ಮಾಜಿ ಸದಸ್ಯ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ನಗರಸಭೆ ಮಾಜಿ ಸದಸ್ಯರಾದ ಬದರಿ ನಾರಾಯಣ, ವೆಂಕಟಯ್ಯ, ಎಂ.ಎ ಅಜಿತ್, ಗುಣಶೇಖರ್, ಮಹೇಶ್, ಪ್ರವೀಣ್‌ಕುಮಾರ್, ಆಂಜನಪ್ಪ, ಮುಖಂಡರಾದ ಕ್ಲಬ್ ಸುರೇಶ್, ಜಯರಾಮ್, ಧನುಷ್‌ಬೋಸ್ಲೆ, ಮೊಬೈಲ್‌ನಾಗ, ಹಾಲ್ ಪ್ರಕಾಶ್, ಮುರುಗೇಶ್, ಪರಮೇಶ್ವರಪ್ಪ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು. ಭದ್ರತೆಗೆ ಪೇಪರ್‌ಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿತ್ತು.