Saturday, April 9, 2022

ಮಕ್ಕಳನ್ನು ಹೀಯಾಳಿಸುವ ಮನೋಭಾವ ಬೆಳೆಸಿಕೊಳ್ಳಬಾರದು : ಅಪರಂಜಿ ಶಿವರಾಜ್

ಭದ್ರಾವತಿ ಜನ್ನಾಪುರ ಅಪರಂಜಿ ಅಭಿನಯ ಶಾಲೆಯ ರಜಾ-ಮಜಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಶನಿವಾರ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
    ಭದ್ರಾವತಿ, ಏ. ೯: ಪೋಷಕರು ತಮ್ಮ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಮಕ್ಕಳನ್ನು ಹೀಯಾಳಿಸುವ ಮನೋಭಾವ ಬೆಳೆಸಿಕೊಳ್ಳಬಾರದು ಎಂದು ರಂಗಕರ್ಮಿ, ಕಿರುತೆರೆ-ಚಲನಚಿತ್ರ ನಟ ಅಪರಂಜಿ ಶಿವರಾಜ್ ಹೇಳಿದರು.
    ಅವರು ಶನಿವಾರ ನಗರದ ಉಂಬ್ಳೆಬೈಲು ರಸ್ತೆಯಲ್ಲಿರುವ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಪರಂಜಿ ಅಭಿನಯ ಶಾಲೆಯ ರಜಾ-ಮಜಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಮಕ್ಕಳನ್ನು ಮಾನಸಿಕವಾಗಿ ಖಿನ್ನತೆಗೆ ಒಳಗಾಗುವಂತೆ ಪೋಷಕರು ವರ್ತಿಸಬಾರದು. ಅವರೊಂದಿಗೆ ಸಂಯಮದಿಂದ ನಡೆದುಕೊಳ್ಳಬೇಕು. ಅವರ ಬಾಲ್ಯದ ಬೆಳವಣಿಗೆ ಉತ್ತಮವಾಗಿರಬೇಕು. ಕಳೆದ ಸುಮಾರು ೨ ವರ್ಷಗಳಿಂದ ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಅಭಿನಯ ಶಾಲೆಯಿಂದ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಸ್ವಲ್ಪ ಹಿನ್ನಡೆಯಾಯಿತು. ಈ ಬಾರಿ ಸುಮಾರು ೧ ವಾರದವರೆಗೆ ಶಿಬಿರ ನಡೆದಿದ್ದು, ಈ ಶಿಬಿರ ಕೇವಲ ಮಕ್ಕಳ ಪ್ರತಿಭೆಗಳಿಗೆ ಒಂದು ವೇದಿಕೆಯಾಗಿದ್ದು, ಮಕ್ಕಳು ನಿರಂತರವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದರು.
    ಹಿರಿಯೂರು ಶ್ರೀ ಗುರು ಮಹಾರುದ್ರಸ್ವಾಮಿ ಗುರುಕುಲ ವಿದ್ಯಾ ಸಂಸ್ಥೆಯ ಶ್ರೀ ಬಸಪ್ಪಗೌಡ, ಮಲ್ಲಪ್ಪಗೌಡ ಸ್ಮಾರಕ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಹರೋನಹಳ್ಳಿ ಸ್ವಾಮಿ ಮಾತನಾಡಿ, ಇಂದಿನ ಮಕ್ಕಳು ಅತ್ಯಂತ ಪ್ರತಿಭಾವಂತರಾಗಿದ್ದು, ಅವರಲ್ಲಿನ ಪ್ರತಿಭೆಗಳನ್ನು ನಾವುಗಳು ಅರಿತುಕೊಳ್ಳಬೇಕು. ಮಕ್ಕಳ ಶಿಬಿರ ನಡೆಸುವುದು ತುಂಬಾ ಕಷ್ಟದ ಕೆಲಸವಾಗಿದ್ದು, ಅಪರಂಜಿ ಶಿವರಾಜ್‌ರವರು ಮಕ್ಕಳ ಮೇಲೆ ವಿಶೇಷ ಕಾಳಜಿ ಹೊಂದಿರುವುದು ಶ್ಲಾಘನೀಯ ಎಂದರು.
    ವೇದಿಕೆಯಲ್ಲಿ ರೋಟರಿ ಕ್ಲಬ್ ಎಚ್.ವಿ ಆದರ್ಶ, ರಾಘವೇಂದ್ರ ಉಪಾಧ್ಯಾಯ, ಅಪರಂಜಿ ಅಭಿನಯ ಶಾಲೆ ಅಧ್ಯಕ್ಷೆ ಪುಷ್ಪಲತಾ ಉಪಸ್ಥಿತರಿದ್ದರು. ಮಕ್ಕಳಿಂದ ಏಕಪಾತ್ರಾಭಿನಯ, ಜಾನಪದ ನ್ಯತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

No comments:

Post a Comment