Tuesday, April 19, 2022

ಏ.೨೨ರಂದು ‘ಬೃಹತ್ ಆರೋಗ್ಯ ಮೇಳ’ ಯಶಸ್ವಿಗೆ ಸಹಕರಿಸಿ

ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಮನವಿ

ಭದ್ರಾವತಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಏ.೨೨ರಂದು ತಾಲೂಕು ಮಟ್ಟದ  'ಬೃಹತ್ ಆರೋಗ್ಯ ಮೇಳ' ಏರ್ಪಡಿಸಲಾಗಿದ್ದು, ಮೇಳ ಯಶಸ್ವಿಗೊಳಿಸುವ ಸಂಬಂಧ ತಾಲೂಕು ಕಛೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
    ಭದ್ರಾವತಿ, ಏ. ೧೯: ಆರೋಗ್ಯ ಇಲಾಖೆ ವತಿಯಿಂದ ಏ.೨೨ರಂದು ತಾಲೂಕು ಮಟ್ಟದ  'ಬೃಹತ್ ಆರೋಗ್ಯ ಮೇಳ' ಏರ್ಪಡಿಸಲಾಗಿದ್ದು, ಮೇಳ ಯಶಸ್ವಿಗೊಳಿಸುವ ಸಂಬಂಧ ತಾಲೂಕು ಕಛೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
    ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ ಆರ್. ಪ್ರದೀಪ್, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ, ಎಬಿಎಆರ್‌ಕೆ (ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ) ಯೋಜನೆ ಮತ್ತು ಕ್ಷೇಮ ಕೇಂದ್ರಗಳಲ್ಲಿ ದೊರೆಯುವ ಇತರೆ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಮೇಳದಲ್ಲಿ ಅರಿವು ಮೂಡಿಸುವ ಅಗತ್ಯವಿದ್ದು, ಈ ಸಂಬಂಧ ಆರೋಗ್ಯ ಇಲಾಖೆ ಗಮನ ಹರಿಸಬೇಕೆಂದರು.
    ಮೇಳದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು, ಆಸನಗಳ ವ್ಯವಸ್ಥೆ ಕಲ್ಪಿಸಿಕೊಡುವ ಜೊತೆಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರವಹಿಸಬೇಕು. ರೆಡ್‌ಕ್ರಾಸ್, ರೋಟರಿ, ಲಯನ್ಸ್ ಕ್ಲಬ್ ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳು ಹಾಗು ಸ್ವಯಂ ಸೇವಕರ ಸಹಕಾರ ಪಡೆದುಕೊಳ್ಳುವಂತೆ ಹಾಗು ತಾಲೂಕಿನಲ್ಲಿ ಕೇಂದ್ರ ಮತ್ತು ರಾಜ್ಯ ಆರೋಗ್ಯ ಯೋಜನೆಗಳ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳ ವಿವರ ಪ್ರದರ್ಶಿಸುವಂತೆ ಸಲಹೆ ನೀಡಿದರು.
    ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಮಾತನಾಡಿ, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಮೇಳ ನಡೆಯಲಿದೆ. ತಪಾಸಣೆಗೆ ಬರುವವರನ್ನು ನೋಂದಣಿ ಮಾಡಿಸಿಕೊಂಡು ಎಬಿಎಆರ್‌ಕೆ ಕಾರ್ಡ್ ಹಾಗೂ ಡಿಜಿಟಲ್ ಹೆಲ್ತ್ ಐಡಿ ಕಾರ್ಡ್ ಗ್ಗೆ ಮಾಹಿತಿಯನ್ನು ನೀಡಲಾಗುವುದು. ಕಾರ್ಡ್ ಇಲ್ಲದವರಿಗೆ ಸ್ಥಳದಲ್ಲಿಯೇ ಕಾರ್ಡ್ ವಿತರಣೆ ಮಾಡಲಾಗುವುದು. ತಜ್ಞವೈದ್ಯರಿಂದ ತಪಾಸಣೆ ನಡೆಸಿ ಲಭ್ಯವಿರುವ ಚಿಕಿತ್ಸೆ ನೀಡಲಾಗುವುದು. ಅಲ್ಲದೆ ಆಪ್ತಸಮಾಲೋಚನೆಗೂ ಅವಕಾಶ ಕಲ್ಪಿಸಲಾಗಿದ್ದು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಅವಶ್ಯಕವಿರುವ ಎಲ್ಲಾ ಔಷಧಗಳು ಹಾಗೂ ಫಾರ್ಮಸಿಸ್ಟ್, ಪ್ರಯೋಗಶಾಲಾ ತಂತ್ರಜ್ಞರ ಸೇವೆ ಲಭ್ಯವಿದೆ. ಯಾವುದೇ ರೀತಿ ತೊಂದರೆಯಾಗದಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
    ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ ಮಾತನಾಡಿ, ಮೇಳದಲ್ಲಿ ವೈದ್ಯಕೀಯ ಶಸ್ತ್ರ ಚಿಕಿತ್ಸಕರು, ಪ್ರಸೂತಿ ಮತ್ತು ಸ್ತ್ರೀರೋಗ, ಕೀಲು, ಮೂಳೆ, ಚರ್ಮ ಮತ್ತು ಲೈಂಗಿಕ ರೋಗ, ಇಎನ್‌ಟಿ(ಕಿವಿ, ಮೂಗು ಮತ್ತು ಗಂಟಲು), ನೇತ್ರ, ದಂತ, ಮಾನಸಿಕ ರೋಗ ಮತ್ತು ಆಯುರ್ವೇದ ತಜ್ಞರು ಲಭ್ಯವಿರಲಿದ್ದಾರೆ.  ಹೆಚ್‌ಐವಿ ಆಪ್ತಸಮಾಲೋಚನೆ ಮತ್ತು ಪರೀಕ್ಷೆ, ಹದಿಹರೆಯದವರಿಗೆ ಆಪ್ತಸಮಾಲೋಚನೆ, ಪೌಷ್ಠಿಕ ಆಹಾರ ತಯಾರಿ ಪ್ರಾತ್ಯಕ್ಷತೆ, ಕ್ಷಯ ರೋಗ, ಮಲೇರಿಯಾ, ಹಿಮೋಗ್ಲೋಬಿನ್ ಪರೀಕ್ಷೆಗಳು ಮತ್ತು ಆರೋಗ್ಯ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.  
        ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಿಶು ಅಭಿವೃದ್ದಿ ಯೋಜನೆ ಅಧಿಕಾರಿ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರಾಜೇಶ್ವರಿ, ವೈದ್ಯರಾದ ಡಾ. ಹೇಮಲತಾ, ಡಾ. ರವಿಶಂಕರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆನಂದ ಮೂರ್ತಿ, ಸುಂದರ್ ಬಾಬು ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.  

ಜಿಲ್ಲಾ ಯುವ ಜನತಾದಳ ಅಧ್ಯಕ್ಷರಾಗಿ ಮಧುಕುಮಾರ್ ನೇಮಕ

ಮಧುಕುಮಾರ್
    ಭದ್ರಾವತಿ, ಏ. ೧೯: ಶಿವಮೊಗ್ಗ ಜಿಲ್ಲಾ ಯುವ ಜನತಾದಳ(ಜಾತ್ಯಾತೀತ) ಅಧ್ಯಕ್ಷರಾಗಿ ಕಾಗದನಗರದ ನಿವಾಸಿ, ಯುವ ಮುಖಂಡ ಮಧುಕುಮಾರ್ ನೇಮಕಗೊಂಡಿದ್ದಾರೆ. 
ಸುಮಾರು ೨೨ ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಧುಕುಮಾರ್‌ರವರು ಪ್ರಸ್ತುತ ಯುವ ಜನತಾದಳ(ಜಾತ್ಯಾತೀತ) ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಜಿಲ್ಲೆಯಲ್ಲಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸಲು ಯುವ ಸಮುದಾಯದ ಅಗತ್ಯತೆ ಮನಗಂಡು ಇವರನ್ನು ಜಿಲ್ಲಾಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ. 
ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಪಕ್ಷದ ಯುವ ಮುಖಂಡರು ಹಾಗು ಕಾರ್ಯಕರ್ತರು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ ಬಲವರ್ಧನೆಗೊಳಿಸುವಂತೆ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆದೇಶ ಪತ್ರದಲ್ಲಿ ಸೂಚಿಸಿದ್ದಾರೆ.  
ಮಧುಕುಮಾರ್ ನಗರಸಭೆ ಹಿರಿಯ ಸದಸ್ಯೆ ವಿಜಯರವರ ಪುತ್ರರಾಗಿದ್ದಾರೆ. ಶಿವಮೊಗ್ಗ ಜಿಲ್ಲಾ ಯುವ ಜನತಾದಳ(ಜಾತ್ಯಾತೀತ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಧುಕುಮಾರ್‌ರವರಿಗೆ ಸಹೋದರ ಅಶೋಕ್‌ಕುಮಾರ್, ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ, ಮಾಜಿ ಶಾಸಕಿ ಶಾರದ ಪೂರ್‍ಯಾನಾಯ್ಕ, ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಯುವ ಘಟಕದ ತಾಲೂಕು ಅಧ್ಯಕ್ಷ ಎಂ.ಎ ಅಜಿತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್,  ಸೇರಿದಂತೆ ಇನ್ನಿತರರು ಅಭಿನಂದನೆ ಸಲ್ಲಿಸಿದ್ದಾರೆ. 
ಜಿಲ್ಲಾಧ್ಯಕ್ಷರಾಗಿ ನೇಮಕಗೊಳ್ಳಲು ಕಾರಣಕರ್ತರಾದ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಮಧುಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ. 

Monday, April 18, 2022

ವಿಜೃಂಭಣೆಯಿಂದ ಜರುಗಿದ ಶ್ರೀ ಸುಶಮೀಂದ್ರತೀರ್ಥರ ಆರಾಧನಾ ಮಹೋತ್ಸ

ಭದ್ರಾವತಿ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಸೋಮವಾರ ಶ್ರೀ ಸುಶಮೀಂದ್ರತೀರ್ಥರ ಆರಾಧನಾ ಮಹೋತ್ಸವ ಸೋಮವಾರ ನಡೆಯಿತು.
    ಭದ್ರಾವತಿ, ಏ. ೧೮: ನಗರದ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಸೋಮವಾರ ಶ್ರೀ ಸುಶಮೀಂದ್ರತೀರ್ಥರ ಆರಾಧನಾ ಮಹೋತ್ಸವ ಸೋಮವಾರ ನಡೆಯಿತು.
    ಪಂಚಾಮೃತ ಅಭಿಷೇಕದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪಂಡಿತ್ ಭೀಮಾಚಾರ್‌ರವರು ಶ್ರೀ ಸುಶಮೀಂದ್ರತೀರ್ಥರು ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರವಚನ ನಡೆಸಿಕೊಟ್ಟರು.
    ನಂತರ ಶ್ರೀಮಠದ ಪ್ರಾಕಾರದಲ್ಲಿ ಶ್ರೀ ಸುಶಮೀಂದ್ರ ತೀರ್ಥರ ಭಾವಚಿತ್ರದೊಂದಿಗೆ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಅಷ್ಟಾವಧಾನ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಿತು.
    ಶ್ರೀಮಠದ ಶೇಷಗಿರಿ ಆಚಾರ್ ಮತ್ತು ಗೋಪಾಲಚಾರ್, ಶ್ರೀನಿವಾಸಚಾರ್, ಪ್ರಧಾನ ಅರ್ಚಕ ಜಗನ್ನಾಥಚಾರ್, ವೆಂಕಟೇಶ, ಜಯತೀರ್ಥ, ರಮಾಕಾಂತ್, ವೆಂಕಟೇಶ್, ರಾಘವೇಂದ್ರ, ವಾಸುದೇವಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಜೃಂಭಣೆಯಿಂದ ಜರುಗಿದ ದೇವರಹಳ್ಳಿ ಶ್ರೀ ರಂಗನಾಥಸ್ವಾಮಿ ರಥೋತ್ಸವ

ಭದ್ರಾವತಿ ತಾಲೂಕಿನ ದೇವರಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಏ. ೧೮: ತಾಲೂಕಿನ ದೇವರಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
    ರಥೋತ್ಸವ ಅಂಗವಾಗಿ ಶ್ರೀ ರಂಗನಾಥಸ್ವಾಮಿಗೆ ವಿಶೇಷ ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಅಚರಣೆಗಳು ಜರುಗಿದವು. ದೇವರಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಥೋತ್ಸವ ಏ.೧೯ರವರೆಗೆ ನಡೆಯಲಿದೆ.

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಧರಣಿ ಸತ್ಯಾಗ್ರಹ

ಮದ್ಯದಂಗಡಿಗಳ ಸ್ಥಳಾಂತರ, ದೇವಸ್ಥಾನಕ್ಕೆ ರಸ್ತೆ ಹಾಗೂ ಅಪಘಾತ ನಿಯಂತ್ರಿಸಲು ರಸ್ತೆಗೆ ಹಂಪ್ಸ್ ಅಳವಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಭದ್ರಾವತಿ ತಾಲೂಕು ಕಚೇರಿ ಮುಂಭಾಗ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
    ಭದ್ರಾವತಿ, ಏ. ೧೮:  ಮದ್ಯದಂಗಡಿಗಳ ಸ್ಥಳಾಂತರ, ದೇವಸ್ಥಾನಕ್ಕೆ ರಸ್ತೆ ಹಾಗೂ ಅಪಘಾತ ನಿಯಂತ್ರಿಸಲು ರಸ್ತೆಗೆ ಹಂಪ್ಸ್ ಅಳವಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ತಾಲೂಕು ಕಚೇರಿ ಮುಂಭಾಗ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
   ನಗರದ ಜನ್ನಾಪುರ ವಾಣಿಜ್ಯ ರಸ್ತೆಯಲ್ಲಿ ಇತ್ತೀಚೆಗೆ ಮದ್ಯದಂಗಡಿಯೊಂದರಲ್ಲಿ ಗಲಾಟೆ ನಡೆದು ಈ ಭಾಗದಲ್ಲಿ ಅಶಾಂತಿ ವಾತಾವರಣ ನಿರ್ಮಾಣಗೊಂಡಿತ್ತು. ಅಲ್ಲದೆ ಘಟನೆಗೆ ಕಾರಣರಾದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇದೇ ರೀತಿ ಡೈರಿ ವೃತ್ತದಲ್ಲಿರುವ  ಮದ್ಯದಂಗಡಿಯಲ್ಲೂ ಆಗಾಗ ಗಲಾಟೆಗಳು ನಡೆದು ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಎರಡು ಮದ್ಯದಂಗಡಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಯಿತು.
    ತಾಲೂಕಿನ ಎಲ್ಲಾ ಸಿಎಲ್ ೨ ಮದ್ಯದಂಗಡಿಗಳಲ್ಲಿ ಹಾಗೂ ಜನ್ನಾಪುರ ನೋಟಿಫೈಡ್ ರಸ್ತೆಯಲ್ಲಿರುವ ಎಂಎಸ್‌ಐಎಲ್ ಮದ್ಯದಂಗಡಿಯಲ್ಲಿ ಎಂಆರ್‌ಪಿ ದರ ಬದಲು ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಅಬಕಾರಿ ನಿಯಮದ ವಿರುದ್ಧವಾಗಿ  ಮದ್ಯದಂಗಡಿಗಳ ಬಳಿ ಮದ್ಯಸೇವನೆಗೆ ಪ್ರತ್ಯೇಕವಾಗಿ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ. ಈ ಸಂಬಂಧ ಸಹ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.  ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಲಾಗಿದೆ ಎಂದು ದೂರವಾಯಿತು.
    ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸುಮಾರು ೧೫೦ ವರ್ಷಗಳಿಗೂ ಹಳೇಯದಾದ ಇತಿಹಾಸ ಪ್ರಸಿದ್ದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಇಲಾಖೆಗೆ ಕಳೆದ ಒಂದು ವರ್ಷದಿಂದ ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಯಿತು.
    ನಗರದ ಹುಡ್ಕೋ ಕಾಲೋನಿ ಪ್ರೊ. ಬಿ. ಕೃಷ್ಣಪ್ಪ ವೃತ್ತದಿಂದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್‌ವರೆಗೆ ರಸ್ತೆ ಅಗಲೀಕರಣ ನಡೆದು ಹೊಸ ರಸ್ತೆ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಲಾರಿ, ಬಸ್ಸು ಸೇರಿದಂತೆ ಬಾರಿ ವಾಹನಗಳು ಸಂಚರಿಸುತ್ತಿವೆ. ಇದರಿಂದಾಗಿ ಮಹಿಳೆಯರು, ಮಕ್ಕಳು, ವಯೋವೃದ್ಧರು ರಸ್ತೆ ದಾಟಲು ತೊಂದರೆಯಾಗುತ್ತಿದ್ದು, ಅಪಘಾತಗಳು ಹೆಚ್ಚಾಗುವ ಸಾಧ್ಯ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ರಸ್ತೆಗಳಲ್ಲಿ ಹಂಪ್ಸ್‌ಗಳನ್ನು ಅಳವಡಿಸಲು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಲಾಯಿತು.
    ತಕ್ಷಣ ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನ್ಯಾಯ ಸಿಗುವವರೆಗೂ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಲಾಯಿತು.
    ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ ಧನಂಜಯ, ಹಿರಿಯ ಮುಖಂಡ ಸುರೇಂದ್ರಪ್ಪ, ಯುವ ಮುಖಂಡ ಅರುಣ್‌ಕುಮಾರ್, ತಿಮ್ಮೇಗೌಡ, ಚಂದ್ರಣ್ಣ ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.


ಜನ್ನಾಪುರ ಕೆರೆ ಸೆರ್ವೆ ನಡೆಸಿ, ಹೂಳು ತೆಗೆದು ಅಭಿವೃದ್ಧಿಗೊಳಿಸಲು ತೀರ್ಮಾನ

ನಗರಸಭೆ ಸಭಾಂಗಣದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ನಡೆದ ಸಭೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಸರ್ವೆ ನಂ.೭೦ರ ೪೫ ಎಕರೆ ೨೦ ಗುಂಟೆ ಸರ್ಕಾರಿ ಕೆರೆ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ ಹಾಗು ಹೂಳು ತೆಗೆದು ಸ್ವಚ್ಛಗೊಳಿಸುವ ಸಂಬಂಧ ಸೋಮವಾರ ತಹಸಿಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ನಗರಸಭೆ ಸಭಾಂಗಣದಲ್ಲಿ ಸಭೆ ನಡೆಯಿತು.
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಜನ್ನಾಪುರ ಸರ್ವೆ ನಂ.೭೦ರ ೪೫ ಎಕರೆ ೨೦ ಗುಂಟೆ ಸರ್ಕಾರಿ ಕೆರೆ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ ಹಾಗು ಹೂಳು ತೆಗೆದು ಸ್ವಚ್ಛಗೊಳಿಸುವ ಸಂಬಂಧ ಸೋಮವಾರ ತಹಸಿಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ನಗರಸಭೆ ಸಭಾಂಗಣದಲ್ಲಿ ಸಭೆ ನಡೆಯಿತು.
    ಸಭೆಯಲ್ಲಿ ಪಾಲ್ಗೊಂಡಿದ್ದ ಸಿದ್ದಾಪುರ-ಜನ್ನಾಪುರ ಕೆರೆ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಮಾತನಾಡಿ, ಕೆರೆ ಒತ್ತುವರಿ ತೆರವು ಹಾಗು ಅಭಿವೃದ್ಧಿಗೊಳಿಸುವ ಸಂಬಂಧ ಈಗಾಗಲೇ ಹೋರಾಟ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ತಾಲೂಕು ಆಡಳಿತ ಕೈಗೊಂಡಿರುವ ಕ್ರಮದ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ ಎಂದರು.
    ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಆರ್. ಪ್ರದೀಪ್, ಕೆರೆಯ ಒಟ್ಟು ವಿಸ್ತೀರ್ಣದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು ಕಾನೂನಿನ ಪ್ರಕಾರ ೪ ಎಕರೆ ೩೬ ಗುಂಟೆ ಜಮೀನು ಹಾಗು ೦೪ ಗುಂಟೆ ಖರಾಬು ಸೇರಿ ಒಟ್ಟು ೫ ಎಕರೆ ಕೆರೆಯಿಂದ ಬೇರ್ಪಡಿಸಿದ್ದಾರೆ. ಗ್ರಾಮ ನಕಾಶೆ ಪ್ರಕಾರ ಪ್ರಸ್ತುತ ಕೆರೆಯ ವಿಸ್ತ್ರೀರ್ಣ ೪೫ ಎಕರೆ ೨೦ ಗುಂಟೆಯಾಗಿದೆ. ಈ ಹಿನ್ನಲೆಯಲ್ಲಿ ನಿಗದಿಯಾಗಿರುವ ವಿಸ್ತೀರ್ಣದಂತೆ ಸರ್ವೆ ನಡೆಸಿ ಬೌಂಡರಿ ಗುರುತಿಸಿ ಅಭಿವೃದ್ಧಿಗೊಳಿಸಲು ಶಿವಮೊಗ್ಗ-ಭದ್ರಾವತಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದರು.
    ಕೆರೆ ಸಮೀಪದ ರೈತರು ಹಾಗು ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಮಾತನಾಡಿ, ಮಲಮೂತ್ರ, ಕೊಳಚೆ  ನೀರು ಹಾಗು ಇನ್ನಿತರ ತ್ಯಾಜ್ಯಗಳಿಂದ  ಕೆರೆ ಸಂಪೂರ್ಣವಾಗಿ ಕಲ್ಮಶಗೊಂಡಿದೆ. ದುರ್ವಾಸನೆ ಬೀರುತ್ತಿದ್ದು, ರೋಗರುಜಿನಗಳು ಹರಡುತ್ತಿವೆ. ಅಲ್ಲದೆ ಸಮೀಪದ ರೈತರಲ್ಲಿ ನೀರಿನಿಂದ ದುಷ್ಪರಿಣಾ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಹೂಳು ತೆಗೆದು ನೀರು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮೊದಲು ಕೆರೆಯ ಸಮೀಪದಲ್ಲಿನ ನಿವಾಸಿಗಳು, ರೈತರ ವಾಸ್ತವ ಸ್ಥಿತಿಗಳನ್ನು ಅರಿತುಕೊಳ್ಳಿ. ಕೆರೆಯ ಸಂಪೂರ್ಣ ಸರ್ವೆ ನಡೆಸಿ ನೂರಾರು ವರ್ಷಗಳಿಂದ ಮಲಮೂತ್ರಗಳಿಂದ ತುಂಬಿಕೊಂಡಿರುವ ಹೂಳು ತೆಗೆಯಲು ಹಾಗು ಒತ್ತುವರಿ ಕಾರ್ಯಾಚರಣೆ ನಡೆಸಲು ಕ್ರಮ ಕೈಗೊಳ್ಳಿ. ಕೆರೆಯ ನೀರು ಶುದ್ಧೀಕರಣಗೊಳಿಸಿ, ದುವಾರ್ಸನೆ, ರೋಗರುಜಿನಗಳಿಂದ ಮುಕ್ತಿಗೊಳಿಸಿ  ಆ ನಂತರ ದೋಣಿ ವಿಹಾರ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಿ.
                                                               - ಬಾಲಕೃಷ್ಣ, ಅಧ್ಯಕ್ಷ, ಸಾರ್ವಜನಿಕ ಕುರಿತುಕೊರತೆ ಹೋರಾಟ ಸಮಿತಿ.

        ಇದಕ್ಕೆ ಪ್ರತಿಕ್ರಿಯಿಸಿದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಕೆರೆ ಅಭಿವೃದ್ಧಿಗೊಳಿಸುವ ಸಂಬಂಧ ೨೦೧೬ರಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಇಲಾಖೆಗೆ ನಿರಾಪೇಕ್ಷಣಾ ಪತ್ರ ಬರೆದು ಕೈಗೊಳ್ಳಬೇಕಾಗಿರುವ ಕಾರ್ಯಸೂಚಿಗಳ ಬಗ್ಗೆ ತಿಳಿಸಿದ್ದರು. ಇದರಿಂದಾಗಿ ಕಾಮಗಾರಿ ಡಿಪಿಆರ್ ಸಿದ್ದಪಡಿಸುವಾಗ ಹೂಳು ತೆಗೆಯುವ ಪ್ರಸ್ತಾಪ ಸೇರ್ಪಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿ ಆದರೂ ಬೇಡಿಕೆಯಂತೆ ಲಭ್ಯವಾಗುವ ಅನುದಾನ ಬಳಸಿಕೊಂಡು ಸಾಧ್ಯವಾದಷ್ಟು ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೆರೆ ಸಂಪೂರ್ಣವಾಗಿ ಕಲ್ಮಶಗೊಂಡಿದ್ದರೂ ಮೀನು ಸಾಕಾಣಿಕೆಗೆ ಅವಕಾಶ ನೀಡಲಾಗಿದ್ದು, ಕೆರೆಯ ಮೀನುಗಳನ್ನು ತಿಂದವರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಮೀನು ಸಾಕಾಣಿಕೆಗೆ ತಡೆ ನೀಡಬೇಕು. ಜೊತೆಗೆ ಕೆರೆಯಲ್ಲಿರುವ ಹೂಳು ತೆಗೆಯಲು ನಗರಸಭೆ ಹಿರಿಯ ಮಾಜಿ ಸದಸ್ಯ ಬಾಲಕೃಷ್ಣ ನೇತೃತ್ವದಲ್ಲಿ ಕೆರೆ ಸಮೀಪದಲ್ಲಿರುವ ರೈತರ ಸಮಿತಿ ರಚನೆ ಮಾಡಬೇಕು.
                                                                 - ಆರ್. ವೇಣುಗೋಪಾಲ್, ಮಾಜಿ ಅಧ್ಯಕ್ಷ, ಸ್ಥಾಯಿ ಸಮಿತಿ, ನಗರಸಭೆ.

    ಸಭೆಯಲ್ಲಿ ಪುನಃ ಕೆರೆ ಒಟ್ಟು ವಿಸ್ತೀರ್ಣದ ಸರ್ವೆ ನಡೆಸುವಂತೆ ಆಗ್ರಹ ಕೇಳಿ ಬಂದ ಹಿನ್ನಲೆಯಲ್ಲಿ ತಾಲೂಕು ಆಡಳಿತ, ನೀರಾವರಿ ಇಲಾಖೆ ಹಾಗು ನಗರಸಭೆ ವತಿಯಿಂದ ಜಂಟಿಯಾಗಿ ಪ್ರಸ್ತುತ ನಿಗದಿಯಾಗಿರುವ ೪೫ ಎಕರೆ, ೨೦ ಗುಂಟೆ ಕೆರೆ ಸರ್ವೆ ಕಾರ್ಯ ನಡೆಸಲು ತೀರ್ಮಾನಿಸಲಾಯಿತು. ಉಳಿದಂತೆ ನಗರಸಭೆ ವತಿಯಿಂದ ಕೆರೆ ಸಮೀಪ ರಾಜಕಾಲುವೆ ನಿರ್ಮಿಸಿ ಕೆರೆಗೆ ಮಲಮೂತ್ರ, ಕೊಳಚೆ ನೀರು ಹಾಗು ಇನ್ನಿತರ ತ್ಯಾಜ್ಯ ಸೇರ್ಪಡೆಗೊಳ್ಳದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು.
    ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಕೆ. ಪರಮೇಶ್, ಇಂಜಿನಿಯರ್ ರಂಗಾರಾಜಪುರೆ, ಕಂದಾಯಾಧಿಕಾರಿ ರಾಜ್‌ಕುಮಾರ್, ನೀರಾ ಇಲಾಖೆ ಬಿಆರ್‌ಎಲ್‌ಬಿಸಿ ಹಾಗು ಸೂಡಾ ಅಧಿಕಾರಿಗಳು ಉಪಸ್ಥಿತರಿದ್ದರು.
    ಸಿದ್ದಾಪುರ-ಜನ್ನಾಪುರ ಕೆರೆ ಸಂರಕ್ಷಣಾ ಸಮಿತಿ ಪ್ರಮುಖರಾದ ಬಾಲಕೃಷ್ಣ, ಸುರೇಶ್, ಜಿ. ರಾಜು, ಎನ್. ರಾಮಕೃಷ್ಣ, ಕೆ. ಮಂಜುನಾಥ್, ಚನ್ನಪ್ಪ, ಎಸ್. ಮಂಜುನಾಥ್, ನಗರಸಭಾ ಸದಸ್ಯರಾದ ಆರ್. ಮೋಹನ್‌ಕುಮಾರ್, ಕಾಂತರಾಜ್, ಜಾರ್ಜ್, ರಿಯಾಜ್ ಅಹಮದ್, ಬಿ.ಟಿ ನಾಗರಾಜ್, ಲತಾ ಚಂದ್ರಶೇಖರ್ ಹಾಗು ವಿರೋಧ ಪಕ್ಷದ ನಾಯಕ ಬಸವರಾಜ ಬಿ. ಆನೇಕೊಪ್ಪ ಸೂಡಾ ಸದಸ್ಯೆ  ಹೇಮಾವತಿ ವಿಶ್ವನಾಥ್ ಹಾಗು ನಗರಸಭೆ, ತಾಲೂಕು ಕಛೇರಿ, ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಇನ್ನಿತರ ಸಂಘಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

Sunday, April 17, 2022

ಏ.೧೭ರಂದು ಜನ್ನಾಪುರ ಕೆರೆ ಅಭಿವೃದ್ಧಿಪಡಿಸುವ ಸಂಬಂಧ ಸಭೆ

    ಭದ್ರಾವತಿ, ಏ. ೧೭:  ಕಸಬಾ ಹೋಬಳಿ ಜನ್ನಾಪುರ ಸರ್ವೆ ನಂ.೭೦ರ ೪೫ ಎಕರೆ ೨೦ ಗುಂಟೆ ಸರ್ಕಾರಿ ಕೆರೆ ಅನಧಿಕೃತ ಒತ್ತುವರಿ ತೆರವುಗೊಳಿಸಿ, ಸ್ವಚ್ಛಗೊಳಿಸಿ, ಅಭಿವೃದ್ಧಿಪಡಿಸುವ ಸಂಬಂಧ ಏ.೧೮ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಸಭಾಂಗಣದಲ್ಲಿ ಸಭೆ ನಡೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ತಹಸೀಲ್ದಾರ್ ಆರ್. ಪ್ರದೀಪ್, ಉಪಸ್ಥಿತರಿರುವರು. ನಗರಸಭೆ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ, ನೀರಾವರಿ ಇಲಾಖೆ ಬಿಆರ್‌ಎಲ್‌ಬಿಸಿ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಶಿವಮೊಗ್ಗ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.