ಮದ್ಯದಂಗಡಿಗಳ ಸ್ಥಳಾಂತರ, ದೇವಸ್ಥಾನಕ್ಕೆ ರಸ್ತೆ ಹಾಗೂ ಅಪಘಾತ ನಿಯಂತ್ರಿಸಲು ರಸ್ತೆಗೆ ಹಂಪ್ಸ್ ಅಳವಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಭದ್ರಾವತಿ ತಾಲೂಕು ಕಚೇರಿ ಮುಂಭಾಗ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
ಭದ್ರಾವತಿ, ಏ. ೧೮: ಮದ್ಯದಂಗಡಿಗಳ ಸ್ಥಳಾಂತರ, ದೇವಸ್ಥಾನಕ್ಕೆ ರಸ್ತೆ ಹಾಗೂ ಅಪಘಾತ ನಿಯಂತ್ರಿಸಲು ರಸ್ತೆಗೆ ಹಂಪ್ಸ್ ಅಳವಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ತಾಲೂಕು ಕಚೇರಿ ಮುಂಭಾಗ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
ನಗರದ ಜನ್ನಾಪುರ ವಾಣಿಜ್ಯ ರಸ್ತೆಯಲ್ಲಿ ಇತ್ತೀಚೆಗೆ ಮದ್ಯದಂಗಡಿಯೊಂದರಲ್ಲಿ ಗಲಾಟೆ ನಡೆದು ಈ ಭಾಗದಲ್ಲಿ ಅಶಾಂತಿ ವಾತಾವರಣ ನಿರ್ಮಾಣಗೊಂಡಿತ್ತು. ಅಲ್ಲದೆ ಘಟನೆಗೆ ಕಾರಣರಾದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇದೇ ರೀತಿ ಡೈರಿ ವೃತ್ತದಲ್ಲಿರುವ ಮದ್ಯದಂಗಡಿಯಲ್ಲೂ ಆಗಾಗ ಗಲಾಟೆಗಳು ನಡೆದು ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಎರಡು ಮದ್ಯದಂಗಡಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಯಿತು.
ತಾಲೂಕಿನ ಎಲ್ಲಾ ಸಿಎಲ್ ೨ ಮದ್ಯದಂಗಡಿಗಳಲ್ಲಿ ಹಾಗೂ ಜನ್ನಾಪುರ ನೋಟಿಫೈಡ್ ರಸ್ತೆಯಲ್ಲಿರುವ ಎಂಎಸ್‌ಐಎಲ್ ಮದ್ಯದಂಗಡಿಯಲ್ಲಿ ಎಂಆರ್‌ಪಿ ದರ ಬದಲು ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಅಬಕಾರಿ ನಿಯಮದ ವಿರುದ್ಧವಾಗಿ ಮದ್ಯದಂಗಡಿಗಳ ಬಳಿ ಮದ್ಯಸೇವನೆಗೆ ಪ್ರತ್ಯೇಕವಾಗಿ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ. ಈ ಸಂಬಂಧ ಸಹ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಲಾಗಿದೆ ಎಂದು ದೂರವಾಯಿತು.
ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸುಮಾರು ೧೫೦ ವರ್ಷಗಳಿಗೂ ಹಳೇಯದಾದ ಇತಿಹಾಸ ಪ್ರಸಿದ್ದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಇಲಾಖೆಗೆ ಕಳೆದ ಒಂದು ವರ್ಷದಿಂದ ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಯಿತು.
ನಗರದ ಹುಡ್ಕೋ ಕಾಲೋನಿ ಪ್ರೊ. ಬಿ. ಕೃಷ್ಣಪ್ಪ ವೃತ್ತದಿಂದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್‌ವರೆಗೆ ರಸ್ತೆ ಅಗಲೀಕರಣ ನಡೆದು ಹೊಸ ರಸ್ತೆ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಲಾರಿ, ಬಸ್ಸು ಸೇರಿದಂತೆ ಬಾರಿ ವಾಹನಗಳು ಸಂಚರಿಸುತ್ತಿವೆ. ಇದರಿಂದಾಗಿ ಮಹಿಳೆಯರು, ಮಕ್ಕಳು, ವಯೋವೃದ್ಧರು ರಸ್ತೆ ದಾಟಲು ತೊಂದರೆಯಾಗುತ್ತಿದ್ದು, ಅಪಘಾತಗಳು ಹೆಚ್ಚಾಗುವ ಸಾಧ್ಯ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ರಸ್ತೆಗಳಲ್ಲಿ ಹಂಪ್ಸ್‌ಗಳನ್ನು ಅಳವಡಿಸಲು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಲಾಯಿತು.
ತಕ್ಷಣ ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನ್ಯಾಯ ಸಿಗುವವರೆಗೂ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಲಾಯಿತು.
ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ ಧನಂಜಯ, ಹಿರಿಯ ಮುಖಂಡ ಸುರೇಂದ್ರಪ್ಪ, ಯುವ ಮುಖಂಡ ಅರುಣ್‌ಕುಮಾರ್, ತಿಮ್ಮೇಗೌಡ, ಚಂದ್ರಣ್ಣ ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
No comments:
Post a Comment