Friday, April 22, 2022

ಮೆಕ್ಕೆಜೋಳ ಬೆಳೆಗೆ ‘ಲದ್ದಿ ಹುಳು’ ಬಾಧೆ : ಶೇ.೭೦ರಷ್ಟು ಬೆಳೆ ಹಾನಿ

ಭತ್ತದ ಬೆಳೆಗೂ ವ್ಯಾಪಿಸುವ ಆತಂಕ : ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ

    ಭದ್ರಾವತಿ, ಏ. ೨೨:  ತಾಲೂಕಿನ ಕೆಲವು ಭಾಗಗಳಲ್ಲಿ ಇದೀಗ ಮೆಕ್ಕೆಜೋಳ ಬೆಳೆಗೆ 'ಲದ್ದಿ ಹುಳು' ಬಾಧೆ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ರೈತರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಈ ನಡುವೆ 'ಲದ್ದಿ ಹುಳು' ಬಾಧೆ ಭತ್ತದ ಬೆಳೆಗೂ ವ್ಯಾಪಿಸಿಕೊಳ್ಳುವ ಆತಂಕ ಎದುರಾಗಿದ್ದು, ಕೃಷಿ ಇಲಾಖೆ ರೈತರಿಗೆ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದೆ.
    ತಾಲೂಕಿನ ಕೂಡ್ಲಿಗೆರೆ ಹೋಬಳಿ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆದೊಡ್ಡಿ, ಬಸಲಿಕಟ್ಟೆ, ಬಂಡಿಗುಡ್ಡ, ದೊಡ್ಡೇರಿ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಅಡಕೆ ತೋಟಗಳಲ್ಲಿ ಮೇವಿಗಾಗಿ ಬೆಳೆದಿರುವ ಮೆಕ್ಕೆಜೋಳ ಬೆಳೆಯಲ್ಲಿ 'ಲದ್ದಿ ಹುಳು' ಬಾಧೆ ಕಾಣಿಸಿಕೊಂಡಿದ್ದು, ಶೇ.೭೦ರಷ್ಟು ಬೆಳೆ ಹಾನಿಗೊಳಗಾಗಿರುತ್ತದೆ.
    ಲದ್ದಿ ಹುಳು ಮುಂದಿನ ೪-೫ ದಿವಸಗಳಲ್ಲಿ ಭತ್ತದ ಬೆಳೆಗು ಹಾನಿ ಉಂಟುಮಾಡವ ಸಂಭವವಿದ್ದು,  ಈ ವ್ಯಾಪ್ತಿಯ ರೈತರು ಸಾಮೂಹಿಕವಾಗಿ ಹತೋಟಿ ಕ್ರಮವನ್ನು ಕೈಗೊಳ್ಳಬೇಕಾಗಿದೆ.
    ಹತೋಟಿ ಕ್ರಮಗಳು:
    ಕೀಟನಾಶಕ ಸಿಂಪಡಣೆ: ಎಮ್ಮಮ್ಕಟಿನ್ ಬೆಂಜೋಯೇಟ್ (Emmamectin Benzoate) ಕೀಟನಾಶಕವನ್ನು ಪ್ರತಿ ಔಷಧಿ ಕ್ಯಾನ್‌ಗೆ ೧೦ ಗ್ರಾಂ ಕೀಟನಾಶಕವನ್ನು ಬೇರೆಸಿ ಪ್ರತಿ ಎಕರೆಗೆ ೧೫೦ ರಿಂದ ೨೦೦ ಲೀಟರ್ ದ್ರಾವಣ ಸಿಂಪಡಿಸಬೇಕು.
    ವಿಷಪ್ರಾಶನ:  ೧೦ ಕೆಜಿ ಅಕ್ಕಿ  ತೌಡು, ೨ ಕೆಜಿ ಬೆಲ್ಲ , ೨೫೦ ಎಂ.ಎಲ್  ಕ್ಲೋರೋಪೈರಿಫಾಸ್ ಕ್ರಿಮಿನಾಶಕ ಹಾಗೂ ನೀರು.
    ಮಾಡುವ ವಿಧಾನ: ೨ ಕೆಜಿ ಬೆಲ್ಲವನ್ನು ೫ ಲೀಟರ್ ನೀರಿನಲ್ಲಿ ಕರಗಿಸಿ ೧೦ ಕೆಜಿ ಅಕ್ಕಿ ತೌಡಿಗೆ ಸೇರಿಸಿ ಚನ್ನಾಗಿ ಬೇರಿಸಿ, ೨೫೦ ಎಂ.ಎಲ್ ಕ್ಲೋರೋಪೈರಿಫಾಸ್ ಕ್ರಿಮಿನಾಶಕ ಮಿಶ್ರಣಮಾಡಿ ೨೪ ಗಂಟೆಗಳ ಕಾಲ ಗಾಳಿ ಆಡದಂತೆ ಚೀಲದಲ್ಲಿ ಕಟ್ಟಿ ಇಡುವುದು. ಮಾರನೇ ದಿನ ಸಂಜೆ ೪ ಗಂಟೆ ನಂತರ ಈ ವಿಷಪ್ರಾಶನವನ್ನು ಉಂಡೆ ಮಾಡಿ ಒಂದು ಎಕರೆ ಜಮೀನಿನಲ್ಲಿ ಇಡುವುದು.
    ಹೆಚ್ಚಿನ ಮಾಹಿತಿಗೆ ಕೂಡ್ಲಿಗೆರೆ ಭಾಗದ ಕೃಷಿ ಆಧಿಕಾರಿ ಮೊ: ೮೨೭೭೯೩೨೬೫೦ ಅಥವಾ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಮೊ: ೭೮೯೨೪೨೫೪೫೫ ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.


ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆದೊಡ್ಡಿ, ಬಸಲಿಕಟ್ಟೆ, ಬಂಡಿಗುಡ್ಡ, ದೊಡ್ಡೇರಿ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಅಡಕೆ ತೋಟಗಳಲ್ಲಿ ಮೇವಿಗಾಗಿ ಬೆಳೆದಿರುವ ಮೆಕ್ಕೆಜೋಳ ಬೆಳೆಯಲ್ಲಿ 'ಲದ್ದಿ ಹುಳು' ಬಾಧೆ ಕಾಣಿಸಿಕೊಂಡಿದ್ದು, ಶೇ.೭೦ರಷ್ಟು ಬೆಳೆ ಹಾನಿಗೊಳಗಾಗಿರುತ್ತದೆ.

ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಆರೋಗ್ಯ ಮೇಳ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಏ. ೨೨: ಮನುಷ್ಯನಿಗೆ ಆರೋಗ್ಯವೇ ಭಾಗ್ಯ. ಆರೋಗ್ಯವಿಲ್ಲದಿದ್ದರೆ ಏನನ್ನು ಸಹ ಸಾಧಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ಮೇಳ ಆಯೋಜನೆ ಮಾಡುವ ಮೂಲಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶುಕ್ರವಾರ ಆರೋಗ್ಯ ಇಲಾಖೆ ವತಿಯಿಂದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು.
    ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಜಾಗೃತಿ ಹೊಂದಬೇಕು. ಇಲ್ಲವಾದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಸರ್ಕಾರ ಹಲವಾರು ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಇವುಗಳ ಸದುಪಯೋಗಪಡೆದುಕೊಳ್ಳಬೇಕೆಂದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮಾತನಾಡಿ, ನಮ್ಮ ಆರೋಗ್ಯ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಇಂದು ನಾವು ನಮ್ಮ ಮನೆಗಳಲ್ಲಿ ಬೇಕರಿ ಹಾಗು ಹೊರಗಿನಿಂದ ತಂದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಮಹಿಳೆಯರು ಮನೆಗಳಲ್ಲಿ ತಮಗೆ ಲಭ್ಯವಿರುವ ಸೊಪ್ಪು, ತರಕಾರಿ, ಬೇಳೆ-ಕಾಳುಗಳನ್ನು ಬಳಸಿ ರುಚಿ ಹಾಗು ಶುಚಿಯಾದ ಗುಣಮಟ್ಟದ ಆಹಾರ ಸಿದ್ದಪಡಿಸಿ ಮಕ್ಕಳಿಗೆ ನೀಡಬೇಕು. ಇದರಿಂದ ಆರೋಗ್ಯ ರಕ್ಷಣೆ ಸಾಧ್ಯ. ಇವುಗಳ ಜೊತೆಗೆ ಮಹಿಳೆಯರು ಹೆಚ್ಚಾಗಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಮಹಿಳೆಯರು ಆರೋಗ್ಯವಾಗಿದ್ದಾಗ ಮಾತ್ರ ಕುಟುಂಬದಲ್ಲಿ ಎಲ್ಲರೂ ಆರೋಗ್ಯದಿಂದ ಇರಲು ಸಾಧ್ಯ ಎಂದರು.
    ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಉಚಿತ ಆರೋಗ್ಯ ಮತ್ತು ಶಿಕ್ಷಣ ಈ ಎರಡು ಸಮರ್ಪಕವಾಗಿ ಲಭಿಸಿದರೆ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ. ಅಲ್ಲದೆ ಆರೋಗ್ಯವಂತರು ಈ ದೇಶದ ಆಸ್ತಿ. ಅರೋಗ್ಯ ಹಾಳುಮಾಡಿಕೊಂಡವರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಶಾಲೆಗಳು ಉಳಿಯಬೇಕೆಂದರು.
    ಹಿರಿಯ ವೈದ್ಯಾಧಿಕಾರಿ ಡಾ. ಗುಡದಪ್ಪ ಕಸಬಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಇಂದು ನಾವುಗಳು ಆರೋಗ್ಯವನ್ನು ನಿರ್ಲಕ್ಷ್ಯ ಮಾಡಿರುವ ಹಿನ್ನೆಲೆಯಲ್ಲಿ ಅತಿಚಿಕ್ಕವಯಸ್ಸಿನಲ್ಲಿಯೇ ಸಾವು ನೋವುಗಳನ್ನು ಎದುರಿಸುವಂತಾಗಿದೆ. ಆರೋಗ್ಯ ಬಗ್ಗೆ ಎಚ್ಚರ ವಹಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆರೋಗ್ಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
    ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ತಹಸೀಲ್ದಾರ್ ಆರ್. ಪ್ರದೀಪ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ನಗರಸಭಾ ಸದಸ್ಯರಾದ ಅನುಸುಧಾ ಮೋಹನ್, ಕಾಂತರಾಜ್, ಜಾರ್ಜ್, ರಿಯಾಜ್ ಅಹಮದ್, ಸರ್ವಮಂಗಳ, ಲತಾ ಚಂದ್ರಶೇಖರ್, ಸವಿತಾ ಉಮೇಶ್, ಶಶಿಕಲಾ ನಾರಾಯಣಪ್ಪ, ಎಂ. ಪ್ರಭಾಕರ್, ಕರಿಗೌಡ ಹಾಗು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಅನುಷಾ, ರಾಮನಾಥ್ ಬರ್ಗೆ, ಕೃಷ್ಣಮೂರ್ತಿ, ಗಣೇಶ್‌ರಾವ್, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಡಾ. ಶಂಕರಪ್ಪ, ಡಾ. ಓ. ಮಲ್ಲಪ್ಪ, ಡಾ. ಶಿವಪ್ರಸಾದ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  
    ಹಿರಿಯ ವೈದ್ಯಾಧಿಕಾರಿ ಡಾ. ಗುಡದಪ್ಪ ಕಸಬಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಸ್ವಾಗತಿಸಿದರು. ನೆಹರೂ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ವಂದಿಸಿದರು. ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು, ವಿವಿಧ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಮೇಳದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ವಿಭಾಗಗಳಿಂದ ಹಾಗು ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.


ಭದ್ರಾವತಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ನಗರಸಭೆ ಉಪಾಧ್ಯಕ್ಷ ಚನ್ನಪ್ಪ ವಸ್ತು ಪ್ರದರ್ಶನ ಉದ್ಘಾಟಿಸಿದರು.


Thursday, April 21, 2022

ಕುಟುಂಬದಲ್ಲಿ ಉತ್ತಮ ವಾತಾವರಣ ರೂಪುಗೊಳ್ಳಲು ಸಂಗೀತ ಸಹಕಾರಿ : ಶಿವರಾಜ್

ವೀರಶೈವ ಲಿಂಗಾಯಿತ ಮಹಿಳಾ ವೇದಿಕೆ ವತಿಯಿಂದ ಭದ್ರಾವತಿ ಹಳೇನಗರದ ಶ್ರೀ ವೀರಶೈವ ಸಮುದಾಯ ಭವನದಲ್ಲಿ  ವಚನ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು.
    ಭದ್ರಾವತಿ, ಏ. ೨೧: ಕುಟುಂಬದಲ್ಲಿ ಉತ್ತಮ ವಾತಾವರಣ ರೂಪುಗೊಳ್ಳಲು ಸಂಗೀತ ಸಹಕಾರಿಯಾಗಿದ್ದು, ಸಂಗೀತದಂತಹ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ ಗಾಯಕ ಶಿವರಾಜ್ ಹೇಳಿದರು.
    ಅವರು ವೀರಶೈವ ಲಿಂಗಾಯಿತ ಮಹಿಳಾ ವೇದಿಕೆ ವತಿಯಿಂದ ಹಳೇನಗರದ ಶ್ರೀ ವೀರಶೈವ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಚನ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡು ಮಾತನಾಡಿದರು.
    ಇಂದು ನಾವು ಪಾಶ್ಚಿಮಾತ್ಯ ಸಂಗೀತದ ಕಡೆ ಹೆಚ್ಚಿನ ಒಲುವು ತೋರುತ್ತಿದ್ದೇವೆ. ಆದರೆ ಅದಕ್ಕಿಂತ ನಮ್ಮ ಸನಾತನ ಪರಂಪರೆಯ ಸಂಗೀತ, ವಚನಗಳು ಮನಸ್ಸಿಗೆ ನೀಡುವ ಸಂತೋಷ, ನೆಮ್ಮದಿ ಅವುಗಳು ನೀಡುವುದಿಲ್ಲ ಎಂದರು.
ಸಂಗೀತದಿಂದ ಹಲವು ಖಾಯಿಲೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿದ ಹಲವಾರು ಘಟನೆಗಳು ವೈಜ್ಞಾನಿಕವಾಗಿ ಸಾಕ್ಷಿಯಾಗಿವೆ. ಇಂತಹ ವಿಶಿಷ್ಟವಾದ ಮಾಂತ್ರಿಕ ಶಕ್ತಿ ಹೊಂದಿರುವಂತಹ ಕ್ಷೇತ್ರದತ್ತ ಒಲವು ಬೆಳೆಸಿಕೊಳ್ಳಿ ಎಂದರು.
    ಸಂಗೀತ ವಿದೂಷಿಗಳಾದ ಗಾಯಿತ್ರಿ ಹಾಗು ಗಿರಿಜಾ ಮಾತನಾಡಿ, ಮಹಿಳೆಯರು ರಾಗ, ತಾಳ, ಭಾವ, ಸಾಹಿತ್ಯದೊಂದಿಗೆ ಸಂಗೀತದ ಜೊತೆ ವಚನಗಳನ್ನು ಹೇಳುವ ಅಭ್ಯಾಸ ಬೆಳೆಸಿಕೊಂಡಾಗ ಮಾತ್ರ ಅಂತಹವರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಗಳು ದೊರೆಯುತ್ತವೆ ಎಂದರು.
    ಸಂಗೀತ ಹಾಗು ವಚನಗಳನ್ನು ಕಲಿಯಲು ವಯಸ್ಸಿನ ಮಿತಿ ಇಲ್ಲ. ಆದರೆ ಕಲಿಯುವ ಆಸಕ್ತಿ ಬಹುಮುಖ್ಯ. ಇಂತಹ ಕಾರ್ಯಕ್ರಮ ಮತ್ತು ಶಿಬಿರಗಳಲ್ಲಿ ಭಾಗವಹಿಸಿದಾಗ ಮನಸ್ಸಿಗೆ ನೆಮ್ಮದಿ, ಆನಂದ ದೊರೆಯುತ್ತದೆ. ಅಲ್ಲದೆ ಪರಸ್ಪರರಲ್ಲಿ ಸ್ನೇಹ ಭಾವದ ಸಂಬಂಧ ಹೆಚ್ಚಾಗುತ್ತದೆ ಎಂದರು.
    ಆರ್.ಎಸ್ ಶೋಭಾ ಅಧ್ಯಕ್ಷತೆ ವಹಿಸಿದ್ದರು. ಸುಲೋಚನಾ ಪ್ರಾರ್ಥಿಸಿದರು. ನಾಗರತ್ನ ವಿ ಕೋಠಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಂತ ವಂದಿಸಿದರು. ಭಾಗ್ಯ, ಪುಟ್ಟಮ್ಮ, ಉಷಾ, ಶೃತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಹಿಳೆಯರು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತಗೊಳ್ಳಬಾರದು : ಮಹಾದೇವ್

ಭದ್ರಾವತಿಯಲ್ಲಿ ಸ್ನೇಹ ಮಿಲನ ಮಹಿಳಾ ಸಂಘದ ವತಿಯಿಂದ  ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಏ. ೨೧: ಮಹಿಳಾ ಸಂಘಗಳು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತಗೊಳ್ಳಬಾರದು ಎಂದು ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಉಪಾಧ್ಯಕ್ಷ ಮಹಾದೇವ್ ಹೇಳಿದರು.
     ಅವರು ನಗರದ ಸ್ನೇಹ ಮಿಲನ ಮಹಿಳಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಾಲ ಪಡೆಯುವುದು, ಪಡೆದ ಸಾಲವನ್ನು ತೀರಿಸುವುದು, ಉಳಿತಾಯ ಮಾಡುವುದು ಇಷ್ಟಕ್ಕೆ ಸೀಮಿತವಾಗಬಾರದು. ಮಹಾನ್ ಆದರ್ಶ ವ್ಯಕ್ತಿಗಳ ಜನ್ಮದಿನಾಚರಣೆ, ಸಾಮಾಜಿಕ ಸೇವಾ ಕಾರ್ಯಗಳು ಸೇರಿದಂತೆ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಮ್ಮ ಬದ್ದತೆಯನ್ನು ಪ್ರದರ್ಶಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಪ್ರಸ್ತುತ ದಿನಗಳಲ್ಲಿ ಒಂದು ಅಥವಾ ಎರಡು ಪದವಿ ಪಡೆಯುವುದೇ ಹೆಚ್ಚು. ಅಂಬೇಡ್ಕರ್‌ರವರು ಅಂದಿನ ಕಾಲದಲ್ಲಿಯೇ ೨೭ ಪದವಿಗಳನ್ನು ಪಡೆಯುವ ಮೂಲಕ ಮಹಾನ್ ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಅವರ ಕಠಿಣ ಪರಿಶ್ರಮ ದೇಶದ ಮಹಾನ್ ವ್ಯಕ್ತಿಯನ್ನಾಗಿ ಮಾಡುವಲ್ಲಿ ಸಹಕಾರಿಯಾಯಿತು. ಇವರ ಸ್ಮರಣೆ ಮಾಡುವುದು ಇಂದಿನ ಅಗತ್ಯವಾಗಿದೆ. ಅಂಬೇಡ್ಕರ್ ಹಾಗು ಅಕ್ಕಮಹಾದೇವಿಯವರ ಜೀವನ ಚರಿತ್ರೆ ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
    ಸಂಘದ ಅಧ್ಯಕ್ಷೆ ಕವಿತಾ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಖಜಾಂಚಿ ಬಿ.ಎಸ್ ರೂಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ವತ್ಸಲಾ ರಮೇಶ್ ಸ್ವಾಗತಿಸಿದರು.  ರೇಣುಕಾ ಯಶೋಧರ ನಿರೂಪಿಸಿದರು. ಮಂಜುಳಾ ವಂದಿಸಿದರು.
ಕಾರ್ಯಕ್ರಮದಲ್ಲಿ ಯಶೋಧರ,  ಮಂಜುಳ. ಬಿ.ಎಸ್.ರೂಪಾ. ಸೇರಿದಂತೆ ಹಲವರಿದ್ದರು.

ಏ.೩೦, ಮೇ.೧ರಂದು ಎರಡು ದಿನ ಕಬಡ್ಡಿ ಪಂದ್ಯಾವಳಿ

ಭದ್ರಾವತಿ, ಏ. ೨೧: ಡಾ. ಬಿ.ಆರ್ ಅಂಬೇಡ್ಕರ್ ಯುವಕರ ಸಂಘ ಹಾಗು ಆರ್‌ಎಸ್‌ಎನ್ ಸ್ಪೋಟ್ಸ್ ಕ್ಲಬ್ ವತಿಯಿಂದ ಏ.೨೩ ಮತ್ತು ೨೪ ಎರಡು ದಿನಗಳ ಕಾಲ ನಗರದ ನ್ಯೂಟೌನ್ ಆಂಜನೇಯ ಅಗ್ರಹಾರ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದ ಸಮೀಪ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಮುಂದೂಡಲಾಗಿದೆ.
    ಏ.೩೦ ಮತ್ತು ಮೇ.೧ರಂದು ಪಂದ್ಯಾವಳಿ ನಡೆಯಲಿದ್ದು, ಕ್ರೀಡಾಪಟುಗಳು ಹಾಗು ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪಂದ್ಯಾವಳಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ:  ೯೯೦೨೧೯೨೦೨೩ ಅಥವಾ ೯೯೬೪೪೪೬೧೨೩ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಏ.೨೨ರಂದು ವಿದ್ಯುತ್ ನಿಲುಗಡೆ

    ಭದ್ರಾವತಿ, ಏ. ೨೧: ಮೆಸ್ಕಾಂ ನಗರ ಉಪವಿಭಾಗದ ವತಿಯಿಂದ ಹಳೇನಗರದ ಬಸವೇಶ್ವರ ವೃತ್ತದ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಹಮ್ಮಿಕೊಂಡಿರುವುದರಿಂದ ಏ.೨೨ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
    ಬಸವೇಶ್ವರ ವೃತ್ತ, ಖಾಜಿ ಮೊಹಲ್ಲಾ, ಎನ್‌ಎಸ್‌ಟಿ ರಸ್ತೆ, ಮಾಧವಚಾರ್ ವೃತ್ತ, ಕನಕ ಮಂಟಪ ಮೈದಾನ, ಕುರುಬರ ಬೀದಿ, ಬ್ರಾಹ್ಮಣರ ಬೀದಿ, ಸಿ.ಎನ್ ರಸ್ತೆ, ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜು, ಹಳೇನಗರ ಮಾರುಕಟ್ಟೆ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

Wednesday, April 20, 2022

ಗರೀಬ್ ಕಲ್ಯಾಣ ಅನ್ನಯೋಜನೆಯಡಿ ಉಚಿತ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ

ಭದ್ರಾವತಿ, ಏ. ೨೦: ನಗರಸಭೆ ವಾರ್ಡ್ ೩೧ರ ಜಿಂಕ್‌ಲೈನ್ ನ್ಯಾಯಬೆಲೆ ಅಂಗಡಿಯಲ್ಲಿ  ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆ ಅಡಿಯಲ್ಲಿ ಅಜಾದಿ-ಕಾ-ಅಮೃತ್ ಮಹೋತ್ಸವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಉಚಿತ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.
    ಭದ್ರಾವತಿ, ಏ. ೨೦: ನಗರಸಭೆ ವಾರ್ಡ್ ೩೧ರ ಜಿಂಕ್‌ಲೈನ್ ನ್ಯಾಯಬೆಲೆ ಅಂಗಡಿಯಲ್ಲಿ  ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆ ಅಡಿಯಲ್ಲಿ ಅಜಾದಿ-ಕಾ-ಅಮೃತ್ ಮಹೋತ್ಸವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಉಚಿತ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.
    ಗರೀಬ್ ಕಲ್ಯಾಣ ಅನ್ನಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ಪಡಿತರದಾರನಿಗೆ ೫ ಕೆ.ಜಿ ಹೆಚ್ಚುವರಿ ಅಕ್ಕಿಯನ್ನು ನೀಡುತ್ತಿದ್ದು, ಇದರ ಜೊತೆಗೆ ರಾಜ್ಯ ಸರ್ಕಾರದ ೧ ಕೆ.ಜಿ ಹೆಚ್ಚುವರಿ ಅಕ್ಕಿ ಸೇರಿ ಒಟ್ಟು ೧೧ ಕೆ.ಜಿ ಅಕ್ಕಿಯನ್ನು ಮಾ.೧೯ರಿಂದ ನೀಡಲಾಗುತ್ತಿದೆ. ಇದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿ ನ್ಯಾಯಾಬೆಲೆ ಅಂಗಡಿಯಲ್ಲೂ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.  
    ನಗರಸಭೆ ಸದಸ್ಯೆ ಪಲ್ಲವಿ, ನಗರ ಆಹಾರ ನಿರೀಕ್ಷಕಿ ಗಾಯತ್ರಿದೇವಿ, ಜಾಗೃತಿ ಸಮಿತಿ ಸದಸ್ಯೆ ಸುಶೀಲಮ್ಮ, ನ್ಯಾಯಬೆಲೆ ಅಂಗಡಿ ಮಾಲೀಕ ಸಿದ್ದಲಿಂಗಯ್ಯ, ಮುಖಂಡರಾದ ದಿಲೀಪ್, ಎಚ್.ಕೆ ರಾಜು, ಜಿ. ಕುಮಾರ್, ನಾಗರಾಜ ಕದಂ, ಪಡಿತರದಾರರು ಉಪಸ್ಥಿತರಿದ್ದರು.