ಭತ್ತದ ಬೆಳೆಗೂ ವ್ಯಾಪಿಸುವ ಆತಂಕ : ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ
ಭದ್ರಾವತಿ, ಏ. ೨೨: ತಾಲೂಕಿನ ಕೆಲವು ಭಾಗಗಳಲ್ಲಿ ಇದೀಗ ಮೆಕ್ಕೆಜೋಳ ಬೆಳೆಗೆ 'ಲದ್ದಿ ಹುಳು' ಬಾಧೆ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ರೈತರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಈ ನಡುವೆ 'ಲದ್ದಿ ಹುಳು' ಬಾಧೆ ಭತ್ತದ ಬೆಳೆಗೂ ವ್ಯಾಪಿಸಿಕೊಳ್ಳುವ ಆತಂಕ ಎದುರಾಗಿದ್ದು, ಕೃಷಿ ಇಲಾಖೆ ರೈತರಿಗೆ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದೆ.
ತಾಲೂಕಿನ ಕೂಡ್ಲಿಗೆರೆ ಹೋಬಳಿ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆದೊಡ್ಡಿ, ಬಸಲಿಕಟ್ಟೆ, ಬಂಡಿಗುಡ್ಡ, ದೊಡ್ಡೇರಿ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಅಡಕೆ ತೋಟಗಳಲ್ಲಿ ಮೇವಿಗಾಗಿ ಬೆಳೆದಿರುವ ಮೆಕ್ಕೆಜೋಳ ಬೆಳೆಯಲ್ಲಿ 'ಲದ್ದಿ ಹುಳು' ಬಾಧೆ ಕಾಣಿಸಿಕೊಂಡಿದ್ದು, ಶೇ.೭೦ರಷ್ಟು ಬೆಳೆ ಹಾನಿಗೊಳಗಾಗಿರುತ್ತದೆ.
ಲದ್ದಿ ಹುಳು ಮುಂದಿನ ೪-೫ ದಿವಸಗಳಲ್ಲಿ ಭತ್ತದ ಬೆಳೆಗು ಹಾನಿ ಉಂಟುಮಾಡವ ಸಂಭವವಿದ್ದು, ಈ ವ್ಯಾಪ್ತಿಯ ರೈತರು ಸಾಮೂಹಿಕವಾಗಿ ಹತೋಟಿ ಕ್ರಮವನ್ನು ಕೈಗೊಳ್ಳಬೇಕಾಗಿದೆ.
ಹತೋಟಿ ಕ್ರಮಗಳು:
ಕೀಟನಾಶಕ ಸಿಂಪಡಣೆ: ಎಮ್ಮಮ್ಕಟಿನ್ ಬೆಂಜೋಯೇಟ್ (Emmamectin Benzoate) ಕೀಟನಾಶಕವನ್ನು ಪ್ರತಿ ಔಷಧಿ ಕ್ಯಾನ್‌ಗೆ ೧೦ ಗ್ರಾಂ ಕೀಟನಾಶಕವನ್ನು ಬೇರೆಸಿ ಪ್ರತಿ ಎಕರೆಗೆ ೧೫೦ ರಿಂದ ೨೦೦ ಲೀಟರ್ ದ್ರಾವಣ ಸಿಂಪಡಿಸಬೇಕು.
ವಿಷಪ್ರಾಶನ: ೧೦ ಕೆಜಿ ಅಕ್ಕಿ ತೌಡು, ೨ ಕೆಜಿ ಬೆಲ್ಲ , ೨೫೦ ಎಂ.ಎಲ್ ಕ್ಲೋರೋಪೈರಿಫಾಸ್ ಕ್ರಿಮಿನಾಶಕ ಹಾಗೂ ನೀರು.
ಮಾಡುವ ವಿಧಾನ: ೨ ಕೆಜಿ ಬೆಲ್ಲವನ್ನು ೫ ಲೀಟರ್ ನೀರಿನಲ್ಲಿ ಕರಗಿಸಿ ೧೦ ಕೆಜಿ ಅಕ್ಕಿ ತೌಡಿಗೆ ಸೇರಿಸಿ ಚನ್ನಾಗಿ ಬೇರಿಸಿ, ೨೫೦ ಎಂ.ಎಲ್ ಕ್ಲೋರೋಪೈರಿಫಾಸ್ ಕ್ರಿಮಿನಾಶಕ ಮಿಶ್ರಣಮಾಡಿ ೨೪ ಗಂಟೆಗಳ ಕಾಲ ಗಾಳಿ ಆಡದಂತೆ ಚೀಲದಲ್ಲಿ ಕಟ್ಟಿ ಇಡುವುದು. ಮಾರನೇ ದಿನ ಸಂಜೆ ೪ ಗಂಟೆ ನಂತರ ಈ ವಿಷಪ್ರಾಶನವನ್ನು ಉಂಡೆ ಮಾಡಿ ಒಂದು ಎಕರೆ ಜಮೀನಿನಲ್ಲಿ ಇಡುವುದು.
ಹೆಚ್ಚಿನ ಮಾಹಿತಿಗೆ ಕೂಡ್ಲಿಗೆರೆ ಭಾಗದ ಕೃಷಿ ಆಧಿಕಾರಿ ಮೊ: ೮೨೭೭೯೩೨೬೫೦ ಅಥವಾ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಮೊ: ೭೮೯೨೪೨೫೪೫೫ ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆದೊಡ್ಡಿ, ಬಸಲಿಕಟ್ಟೆ, ಬಂಡಿಗುಡ್ಡ, ದೊಡ್ಡೇರಿ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಅಡಕೆ ತೋಟಗಳಲ್ಲಿ ಮೇವಿಗಾಗಿ ಬೆಳೆದಿರುವ ಮೆಕ್ಕೆಜೋಳ ಬೆಳೆಯಲ್ಲಿ 'ಲದ್ದಿ ಹುಳು' ಬಾಧೆ ಕಾಣಿಸಿಕೊಂಡಿದ್ದು, ಶೇ.೭೦ರಷ್ಟು ಬೆಳೆ ಹಾನಿಗೊಳಗಾಗಿರುತ್ತದೆ.
No comments:
Post a Comment