Friday, April 22, 2022

‘ಜನತಾ ಜಲಧಾರೆ ಯಾತ್ರೆ’ ಬಹಿರಂಗ ಸಭೆಗೆ ಭರದ ಸಿದ್ದತೆ : ಮುಖಂಡರಲ್ಲಿ ಉತ್ಸಾಹ

ಸಭೆಯಲ್ಲಿ ಪಾಲ್ಗೊಳ್ಳಲಿರುವ ಮಾಜಿ ಪ್ರಧಾನಿ ದೇವೇಗೌಡ

    ಭದ್ರಾವತಿ, ಏ. ೨೨: ರಾಜ್ಯದ ಸಮಗ್ರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯಾರ್ಪಣೆಗಾಗಿ ಜಾತ್ಯಾತೀತ ಜನತಾದಳ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ 'ಜನತಾ ಜಲಧಾರೆ ಯಾತ್ರೆ' ಶುಕ್ರವಾರ ಸಂಜೆ ತಾಲೂಕಿನ ಶ್ರೀರಾಮನಗರಕ್ಕೆ ಆಗಮಿಸಿತು.  
    ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ತುಂಗಾಭದ್ರಾ ಸಂಗಮ ಸ್ಥಳದ ಸಮೀಪದ ಚಿಕ್ಕಕೂಡ್ಲಿಯಿಂದ ಯಾತ್ರೆ ಹೊಳೆಹೊನ್ನೂರು, ಕೈಮರ, ಅರಹತೊಳಲು, ಕಲ್ಲಿಹಾಳ್, ಅರಬಿಳಿಚಿ, ಕೂಡ್ಲಿಗೆರೆ ಮಾರ್ಗವಾಗಿ ಶ್ರೀರಾಮನಗರ ಪ್ರವೇಶಿಸಿತು.
ಮಾಜಿ ಪ್ರಧಾನಿ ಆಗಮನಕ್ಕೆ ಭರದ ಸಿದ್ದತೆ :
    'ಜನತಾ ಜಲಧಾರೆ ಯಾತ್ರೆ' ಅಂಗವಾಗಿ ಶನಿವಾರ ಭದ್ರಾ ಜಲಾಶಯದ ಸಮೀಪದ ಬಿ.ಆರ್ ಪ್ರಾಜೆಕ್ಟ್‌ನಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆಗಮಿಸಲಿದ್ದಾರೆ ಈ ಹಿನ್ನಲೆಯಲ್ಲಿ ನಗರದಲ್ಲಿ ಭರದ ಸಿದ್ದತೆ ನಡೆಸಲಾಗಿದೆ.
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ನಂತರ ಶಾರದ ಅಪ್ಪಾಜಿ ನೇತೃತ್ವದಲ್ಲಿ ನಡೆಸುತ್ತಿರುವ ಬೃಹತ್ ಬಹಿರಂಗ ಸಭೆ ಇದಾಗಿದ್ದು, ನಗರದೆಲ್ಲೆಡೆ ಜೆಡಿಎಸ್ ಪಕ್ಷದ ಧ್ವಜ, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. 'ಜನತಾ ಜಲಧಾರೆ ಯಾತ್ರೆ'ಗೆ ಸ್ವಾಗತಕೋರಲು ಪ್ರಮುಖ ವೃತ್ತಗಳಲ್ಲಿ, ರಸ್ತೆಗಳಲ್ಲಿ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.



     ಮುಖಂಡರಲ್ಲಿ ಉತ್ಸಾಹ :
    ಕಳೆದ ಕೆಲವು ತಿಂಗಳಿನಿಂದ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಅಪ್ಪಾಜಿ ಅವರೊಂದಿಗೆ ಗುರುತಿಸಿಕೊಂಡಿದ್ದ ಪ್ರಮುಖರು ಪಕ್ಷ ತೊರೆದು ಬೇರೆ ಬೇರೆ ಪಕ್ಷಗಳಿಗೆ ಸೇರ್ಪಡೆಗೊಂಡರೂ ಸಹ ಶಾರದ ಅಪ್ಪಾಜಿ  ಯಾವುದಕ್ಕೂ ಎದೆಗುಂದದೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ ಪ್ರಸ್ತುತ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮುಖಂಡರು, ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ.
    ಪಕ್ಷದ ಯುವ ಘಟಕದ ನೂತನ ಜಿಲ್ಲಾಧ್ಯಕ್ಷ ಮಧುಕುಮಾರ್ ಹೆಚ್ಚು ಉತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇವರೊಂದಿಗೆ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಯುವ ಘಟಕದ ತಾಲೂಕು ಅಧ್ಯಕ್ಷ ಎಂ.ಎ ಅಜಿತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಶಿಮೂಲ್ ಮಾಜಿ ಅಧ್ಯಕ್ಷ ಡಿ. ಆನಂದ್, ನಗರಸಭೆ ವಿರೋಧ ಪಕ್ಷದ ನಾಯಕ ಬಸವರಾಜ ಬಿ. ಆನೇಕೊಪ್ಪ, ಸದಸ್ಯರಾದ ಉದಯಕುಮಾರ್, ಕೋಟೇಶ್ವರರಾವ್, ವಿಜಯ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಎಚ್.ಬಿ ರವಿಕುಮಾರ್, ಎಂ. ರಾಜು, ಮುಖಂಡರಾದ ಕರಿಯಪ್ಪ, ಮುರ್ತುಜಾಖಾನ್, ನಂಜುಂಡೇಗೌಡ, ಲೋಕೇಶ್ವರರಾವ್, ಮೈಲಾರಪ್ಪ, ಉಮೇಶ್, ಗೊಂದಿ ಜಯರಾಂ, ದಿಲೀಪ್, ಗಿರಿನಾಯ್ಡು, ಗುಣಶೇಖರ್ ಸೇರಿದಂತೆ ಇನ್ನಿತರರು ಕೈಜೋಡಿಸಿ ಬಹಿರಂಗಸಭೆ ಯಶಸ್ವಿಗೆ ಮುಂದಾಗಿದ್ದಾರೆ.

No comments:

Post a Comment