Saturday, April 23, 2022

ದೇಶದಲ್ಲಿ, ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಜೆಡಿಎಸ್ ಕೊಡುಗೆ ಅಪಾರ

ರಾಜ್ಯದ ಮುಂದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ : ಎಚ್.ಡಿ ರೇವಣ್ಣ

ಭದ್ರಾವತಿ ತಾಲೂಕಿನ ಭದ್ರಾ ಜಲಾಶಯ ಸಮೀಪದ ಬಿ.ಆರ್ ಪ್ರಾಜೆಕ್ಟ್‌ನಲ್ಲಿ ಶನಿವಾರ 'ಜನತಾ ಜಲಧಾರೆ ಯಾತ್ರೆ' ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆಯನ್ನು ಮಾಜಿ ಸಚಿವ ಎಚ್.ಡಿ ರೇವಣ್ಣ ಉದ್ಘಾಟಿಸಿದರು.  
    ಭದ್ರಾವತಿ, ಏ. ೨೩: ದೇಶದಲ್ಲಿ ಹಾಗು ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಜೆಡಿಎಸ್ ಸರ್ಕಾರ ನೀಡಿರುವ ಕೊಡುಗೆ ಅಪಾರವಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ನೀಡಿರುವಷ್ಟು ಅನುದಾನ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನೀಡಿಲ್ಲ ಎಂದು ಮಾಜಿ ಸಚಿವ ರೇವಣ ಹೇಳಿದರು.
    ಅವರು ಶನಿವಾರ ತಾಲೂಕಿನ ಭದ್ರಾ ಜಲಾಶಯ ಸಮೀಪದ ಬಿ.ಆರ್ ಪ್ರಾಜೆಕ್ಟ್‌ನಲ್ಲಿ 'ಜನತಾ ಜಲಧಾರೆ ಯಾತ್ರೆ' ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.
    ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ೧೦೦ಕ್ಕೆ ೧೦೦ರಷ್ಟು ಸತ್ಯ. ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಸಹ ಇಂದಿಗೂ ನೀರಾವರಿ ಯೋಜನೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ೫೦ ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಹಾಗು ಆ ನಂತರ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಗಳು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡಿಲ್ಲ. ಇವುಗಳ ಕೊಡುಗೆ ಅತ್ಯಲ್ಪವಾಗಿದ್ದು, ಜೆಡಿಎಸ್ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನಗಳನ್ನು ಬಿಡುಗಡೆಗೊಳಿಸುವ ಮೂಲಕ ಹಲವು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದರು.
    ಜೆಡಿಎಸ್ ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ಯಾರೊಂದಿಗೂ ರಾಜಿ ಮಾಡಿಕೊಂಡಿಲ್ಲ. ತನ್ನದೇ ಆದ ದೃಢ ನಿರ್ಧಾರಗಳನ್ನು ಹೊಂದಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಎ ಮತ್ತು ಬಿ ಟೀಮ್‌ಗಳಾಗಿ ಹೊಂದಾಣಿಕೆ ರಾಜಕಾರಣ ಮಾಡುತ್ತಿವೆ. ಕೋಲಾರದಲ್ಲಿ ಹಿರಿಯ ರಾಜಕೀಯ ಮುತ್ಸದ್ದಿ ಕೆ.ಎಚ್ ಮುನಿಯಪ್ಪನವರನ್ನು ಹಾಗು ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿವೆ ಎಂದರು ಆರೋಪಿಸಿದರು.
    ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಶಾರದ ಅಪ್ಪಾಜಿ ಮಾತನಾಡಿ, ಕ್ಷೇತ್ರದಲ್ಲಿ ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರ ಕೊಡುಗೆ ಅನನ್ಯವಾಗಿದೆ. ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಕ್ಷೇತ್ರದಲ್ಲಿ ಅಪ್ಪಾಜಿಯವರ ಕನಸಿನ ಹಲವಾರು ನೀರಾವರಿ ಯೋಜನೆಗಳು ಇಂದಿಗೂ ಅನುಷ್ಠಾನಗೊಳ್ಳದೆ ನೆನೆಗುದಿಗೆ ಬಿದ್ದಿವೆ. ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳುವ ಜೊತೆಗೆ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಪುನಶ್ಚೇತನಗೊಳ್ಳಬೇಕಾಗಿದೆ. ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳು ಉಳಿದುಕೊಂಡಿವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಜೆಡಿಎಸ್ ಪಕ್ಷ ಬೆಂಬಲಿಸುವ ಮೂಲಕ ಕ್ಷೇತ್ರದಿಂದ ನನ್ನನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು. ಅಪ್ಪಾಜಿ ಅವರಿಗೆ ನೀಡುತ್ತಿದ್ದ ಎಲ್ಲಾ ರೀತಿಯ ಸಹಕಾರ ನನಗೂ ನೀಡಬೇಕೆಂದು ಮನವಿ ಮಾಡಿದರು.

ಕುಮಾರಸ್ವಾಮಿ ವಿಧಿ ಲಿಖಿತ..!
ಕೋಡಿಮಠದ ಶ್ರೀಗಳು ಭವಿಷ್ಯ ವಾಣಿ ನುಡಿದಿರುವ ಮೆಸೇಜ್ ಇತ್ತೀಚೆಗೆ ವಾಟ್ಸಪ್‌ನಲ್ಲಿ ಗಮನಿಸಿದ್ದೇನೆ. ಶ್ರೀಗಳು ರಾಜ್ಯದ ಮುಂದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಎಂದು ಖಚಿತವಾಗಿ ತಿಳಿಸಿದ್ದಾರೆ. ಇದು ವಿಧಿ ಲಿಖಿತವಾಗಿದ್ದು, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.
                                                                                                        - ಎಚ್.ಡಿ ರೇವಣ್ಣ, ಮಾಜಿ ಸಚಿವ

    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಾಜಿ ಶಾಸಕಿ ಶಾರದ ಪೂರ್‍ಯಾನಾಯ್ಕ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಪಕ್ಷದ ಯುವ ಘಟಕದ ನೂತನ ಜಿಲ್ಲಾಧ್ಯಕ್ಷ ಮಧುಕುಮಾರ್, ಯುವ ಘಟಕದ ತಾಲೂಕು ಅಧ್ಯಕ್ಷ ಎಂ.ಎ ಅಜಿತ್, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಶಿಮೂಲ್ ಮಾಜಿ ಅಧ್ಯಕ್ಷ ಡಿ. ಆನಂದ್, ನಗರಸಭೆ ವಿರೋಧ ಪಕ್ಷದ ನಾಯಕ ಬಸವರಾಜ ಬಿ. ಆನೇಕೊಪ್ಪ, ಸದಸ್ಯರಾದ ಉದಯಕುಮಾರ್, ಕೋಟೇಶ್ವರರಾವ್, ವಿಜಯ, ಸವಿತಾ, ಜಯಶೀಲ, ರೇಖಾ, ಮಂಜುಳ, ಪಲ್ಲವಿ, ನಾಗರತ್ನ, ರೂಪಾವತಿ, ಮುಖಂಡರಾದ ಡಿ.ಟಿ ಶ್ರೀಧರ್, ಮುರ್ತುಜಾಖಾನ್, ನಂಜುಂಡೇಗೌಡ, ಲೋಕೇಶ್ವರರಾವ್, ಮೈಲಾರಪ್ಪ, ಉಮೇಶ್, ಗೊಂದಿ ಜಯರಾಂ, ದಿಲೀಪ್, ಗಿರಿನಾಯ್ಡು, ಗುಣಶೇಖರ್, ಕೆಬಲ್ ಸುರೇಶ್, ಅಶೋಕ್‌ಕುಮಾರ್, ಭಾಗ್ಯಮ್ಮ, ವಿಶಾಲಾಕ್ಷಿ  ಸೇರಿದಂತೆ ಇನ್ನಿತರರು ಕೈಜೋಡಿಸಿ ಬಹಿರಂಗಸಭೆ ಯಶಸ್ವಿಗೆ ಮುಂದಾಗಿದ್ದಾರೆ.
    ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಎಂ. ರಾಜು ಸ್ವಾಗತಿಸಿದರು. ಎಚ್.ಬಿ ರವಿಕುಮಾರ್ ವಂದಿಸಿದರು. ಮಾಜಿ ಉಪಾಧ್ಯಕ್ಷೆ ಮಹಾದೇವಿ ಸಂಗಡಿಗರು ಪ್ರಾರ್ಥಿಸಿದರು.
    ಇದಕ್ಕೂ ಮೊದಲು ತಾಲೂಕಿನ ಶ್ರೀರಾಮನಗರದ ಶ್ರೀ ರಾಮೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 'ಜನತಾ ಜಲಧಾರೆ ಯಾತ್ರೆ'ಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ಸುಮಾರು ೧ ಗಂಟೆಗೆ ಯಾತ್ರೆ ಬಿ.ಆರ್ ಪ್ರಾಜೆಕ್ಟ್ ತಲುಪಿತು. ನಂತರ ಭದ್ರಾ ಜಲಾಶಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ 'ಜನತಾ ಜಲಧಾರೆ ಯಾತ್ರೆ' ರಥಕ್ಕೆ ಅಭಿಷೇಕ ಸಲ್ಲಿಸಲಾಯಿತು.


ಭದ್ರಾವತಿ ತಾಲೂಕಿನ ಭದ್ರಾ ಜಲಾಶಯ ಸಮೀಪದ ಬಿ.ಆರ್ ಪ್ರಾಜೆಕ್ಟ್‌ನಲ್ಲಿ ಶನಿವಾರ 'ಜನತಾ ಜಲಧಾರೆ ಯಾತ್ರೆ' ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆಯಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ, ಮಾಜಿ ಶಾಸಕಿ ಶಾರದ ಪೂರ್‍ಯನಾಯ್ಕ, ಶಾರದ ಅಪ್ಪಾಜಿ ಅವರನ್ನು ಅಭಿನಂದಿಸಲಾಯಿತು.  

No comments:

Post a Comment