Tuesday, July 19, 2022

‎ ಮುಂಗಾರು ಸಂಭ್ರಮ : 26 ಕವಿಗಳಿಂದ ಸ್ವ ರಚಿತ ಕವನ ವಾಚನ



ಭದ್ರಾವತಿ, ಜು. 19: ಸಿದ್ದಾರೂಢ ನಗರದ ಹೆಬ್ಬೂರು ಮಹಾವಿದ್ಯಾಲಯದ  ಡಿ ಕೆ ಶಿವಕುಮಾರ್ ಬಿ.ಎಡ್ ಕಾಲೇಜಿನಲ್ಲಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಮುಂಗಾರು ಸಂಭ್ರಮ ಕವಿಗೋಷ್ಠಿಯಲ್ಲಿ 26 ಕವಿಗಳು ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.
       ಮುಂಗಾರು ಮಳೆ, ಪ್ರವಾಹ,  ಮಾತೃ ಮಮತೆ ಮತ್ತು ಪ್ರಕೃತಿ ಸೊಬಗು ಕುರಿತ  ತಮ್ಮ ಸ್ವ ರಚಿತ ಕವನ ವಾಚಿಸಿದರು.  ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಚಟುವಟಿಕೆಗಳನ್ನು  ಆಯೋಜಿಸಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳಲ್ಲೂ ಸಾಹಿತ್ಯ ಚಟುವಟಿಕೆಗಳ ಕುರಿತು ಆಸಕ್ತಿ ಮೂಡಿಸುವುದು ಪರಿಷತ್ ಉದ್ದೇಶವಾಗಿದೆ. 
      ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ  ಚುಟುಕು ಕವನ ವಾಚಿಸುವ ಮೂಲಕ ಕವಿಗೋಷ್ಠಿ ಉದ್ಘಾಟಿಸಿದರು. ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
     ಹೆಬ್ಬೂರು ಮಹಾವಿದ್ಯಾಲಯದ ಸಲಹಾ ಮಂಡಳಿ ಅಧ್ಯಕ್ಷ  ಮೋಹನ್, ಪ್ರಾಂಶುಪಾಲ ಪಾಲಾಕ್ಷ,  ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್  ಸುಧಾಮಣಿ, ಪರಿಷತ್ ಕಾರ್ಯದರ್ಶಿಗಳಾದ ಟಿ. ತಿಮ್ಮಪ್ಪ, ಜಗದೀಶ್, ಮಾಯಮ್ಮ, ಕಮಲಕರ, ಹಿರಿಯ ಸಾಹಿತಿಗಳಾದ ಜೆ. ಎನ್ ಬಸವರಾಜಪ್ಪ, ಕಾಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

‎ ನಿರಂತರ ಮಳೆಗೆ ಗ್ಯಾರೇಜ್ ಕ್ಯಾಂಪ್ನಲ್ಲಿ ಮನೆಗಳ ಗೋಡೆ ಕುಸಿತ : ತಹಶೀಲ್ದಾರ್ ನೇತೃತ್ವದ ತಂಡ ಪರಿಶೀಲನೆ

ಭದ್ರಾವತಿ, ಜು. 19: ಕಳೆದ ಸುಮಾರು ಒಂದು ವಾರದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ಸಿಂಗಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ಯಾರೇಜ್ ಕ್ಯಾಂಪ್ ಗ್ರಾಮದಲ್ಲಿ ಕೆಲವು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. 
    ಗ್ರಾಮದ ಕುಲಮೆ ಗಣೇಶ್,  ತಂಗರಾಜ್ ಹಾಗೂ ಸುಲೇಮಾನ್ ರವರ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ.    ತಹಸೀಲ್ದಾರ್  ಆರ್ ಪ್ರದೀಪ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕವಿತಾ ರುದ್ರೇಶ್  ಹಾಗೂ ವಾರ್ಡ್ ಸದಸ್ಯೆ ಮಂಜುಳಾ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರನ್ನೊಳಗೊಂಡ ತಂಡ  ಭೇಟಿ ನೀಡಿ ಪರಿಶೀಲನೆ ನಡೆಸಿತು.

Monday, July 18, 2022

ಅಂತರಾಷ್ಟ್ರೀಯ ಯೋಗಪಟು ಡಾ. ನಿಂಗೇಶ್‌ಗೆ ಮದರ್ ಇಂಡಿಯಾ ಅಂತರಾಷ್ಟ್ರೀಯ ಪ್ರಶಸ್ತಿ


ಭದ್ರಾವತಿ ಹೊಸಮನೆ ಕುವೆಂಪು ನಗರ ನಿವಾಸಿ, ಅಂತರಾಷ್ಟ್ರೀಯ ಯೋಗಪಟು ಡಾ. ನಿಂಗೇಶ್ ಅವರಿಗೆ .ಯೋಗ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಮದರ್ ಇಂಡಿಯಾ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
--    ಭದ್ರಾವತಿ, ಜು. ೧೮: ನಗರದ ಹೊಸಮನೆ ಕುವೆಂಪು ನಗರ ನಿವಾಸಿ, ಅಂತರಾಷ್ಟ್ರೀಯ ಯೋಗಪಟು ಡಾ. ನಿಂಗೇಶ್ ಅವರಿಗೆ .ಯೋಗ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಮದರ್ ಇಂಡಿಯಾ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನವತಿಯಿಂದ ಆಯೋಜಿಸಲಾಗಿದ್ದ ವಚನ ವೈಭವ ವಿಚಾರಸಂಕಿರಣ, ನಾಟ್ಯ ವೈಭವ ಮತ್ತು ಗಾನ ವೈಭವ ಕಾರ್ಯಕ್ರಮದಲ್ಲಿ ಡಾ. ನಿಂಗೇಶ್ ಅವರಿಗೆ ವೇದಿಕ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
    ಚಿಬನೂರಿನ ಸುಕ್ಷೇತ್ರ ಮಠದ ಶ್ರೀ ರಾಮಲಿಂಗಯ್ಯ ಸ್ವಾಮೀಜಿ, ನಿವೃತ್ತ ನ್ಯಾಯದೀಶ ಅರಳಿ ನಾಗರಾಜು, ಪ್ರತಿಷ್ಠಾನದ ಅಧ್ಯಕ್ಷ ಡಾ. ಗುಣವಂತ ಮಂಜು. ನಿರೂಪಕಿ ದಿವ್ಯಾ ಆಲೂರು, ಗಾಯಕ ಶಶಿಧರ್ ಕೋಟೆ, ಹಾಸ್ಯನಟ ಚಿಕ್ಕಣ್ಣ, ಚಲಪತಿ ಮತ್ತು ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರವಾಹದಿಂದ ಹೊಸಸೇತುವೆ ಮುಕ್ತಿ : ಜೆಸಿಬಿ ಬಳಸಿ ಮರದ ದಿಂಬಿ, ಕಸಕಡ್ಡಿ, ತ್ಯಾಜ್ಯ ತೆರವು

ಭದ್ರಾ ಜಲಾಶಯ ಸಮೀಪ ಮುಖ್ಯ ಕಾಲುವೆಯಲ್ಲಿ ಮಣ್ಣು ಕುಸಿತ


ಭದ್ರಾ ಜಲಾಶಯದಿಂದ ಸ್ವಲ್ಪ ದೂರದಲ್ಲಿ ಮುಖ್ಯ ಕಾಲುವೆಯ ಎರಡು ಬದಿ ಭಾನುವಾರ ಮಣ್ಣು ಕುಸಿತವಾಗಿರುವ ಘಟನೆ ನಡೆದಿದೆ.
    ಭದ್ರಾವತಿ, ಜು. ೧೮: ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಕಳೆದ ೩ ದಿನಗಳಿಂದ ಉಂಟಾಗಿದ್ದ ಪ್ರವಾಹ ಇಳಿಮುಖವಾಗಿದ್ದು, ಹೊಸಸೇತುವೆ ಮುಳುಗಡೆಯಿಂದ ಮುಕ್ತಿ ಪಡೆದಿದೆ.
    ಭದ್ರಾ ಜಲಾಶಯದಿಂದ ನದಿಗೆ ಬಿಡಲಾಗುತ್ತಿರುವ ಹೆಚ್ಚುವರಿ ನೀರಿನ ಪ್ರಮಾಣ ಕಡಿಮೆಗೊಳಿಸಿರುವ ಕಾರಣ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಇರುವ ಹೊಸಸೇತವೆ ಸೋಮವಾರ ಬೆಳಿಗ್ಗೆ ಮುಳುಗಡೆಯಿಂದ ಮುಕ್ತಿ ಪಡೆದಿದೆ. ಜೆಸಿಬಿ ಯಂತ್ರದಿಂದ ಸೇತುವೆ ಮೇಲೆ ಸಿಲುಕಿಕೊಂಡಿದ್ದ ಮರದ ದಿಂಬಿ, ಕಸಕಡ್ಡಿ, ತ್ಯಾಜ್ಯ ತೆರವುಗೊಳಿಸಲಾಯಿತು. ಸೇತುವೆಯಿಂದ ಅರ್ಧ ಅಡಿಯಷ್ಟು ಮಾತ್ರ ನೀರು ಕಡಿಮೆಯಾಗಿದ್ದು, ಈ ಹಿನ್ನಲೆಯಲ್ಲಿ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ.
    ಮುಕ್ತಿ ಪಡೆಯದ ಸಂಗಮೇಶ್ವರ :
ಹಳೇಸೇತುವೆ ಬಳಿ ಭದ್ರಾ ನದಿಯಲ್ಲಿರುವ ಸಂಗಮೇಶ್ವರ ದೇವಸ್ಥಾನ ಪ್ರವಾಹದಿಂದ ಇನ್ನೂ ಮುಕ್ತಿ ಪಡೆದಿಲ್ಲ. ಪ್ರತಿ ಬಾರಿ ದೇವಸ್ಥಾನ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗುತ್ತಿದ್ದು, ಆದರೂ ಸಹ ದೇವಸ್ಥಾನಕ್ಕೆ ಹೆಚ್ಚಿನ ಹಾನಿಯಾಗದಿರುವುದು ವಿಶೇಷತೆಯಾಗಿದೆ. ಪ್ರತಿ ವರ್ಷ ಮಹಾಶಿವರಾತ್ರಿಯಂದು ಈ ದೇವಸ್ಥಾನ ಪ್ರಮುಖ ಆಕರ್ಷಕ ಕೇಂದ್ರವಾಗಿ ಕಂಡು ಬರುತ್ತದೆ.
    ಹೊಸ ಸೇತುವೆಗೆ ಹಾನಿ :
ಪ್ರತಿ ಬಾರಿ ಮಳೆಗಾಲದ ಸಂದರ್ಭದಲ್ಲಿ ಹೊಸಸೇತುವೆಯ ಎರಡು ಬದಿಯ ತಡೆಗೋಡೆಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ಬೃಹತ್ ಗಾತ್ರದ ನೀರಿನ ಕೊಳವೆ, ದೂರವಾಣಿ ಕೇಬಲ್‌ಗಳು ಸಹ ನೀರಿನಲ್ಲಿ ಕತ್ತರಿಸಿ ಹೋಗುತ್ತಿವೆ.  ಇದರಿಂದಾಗಿ ಲಕ್ಷಾಂತರ ರು. ವ್ಯಯಿಸುವಂತಾಗಿದೆ. ಕಳೆದ ಬಾರಿ ಕೊಚ್ಚಿ ಹೋಗಿದ್ದ ತಡೆಗೋಡೆ ನಿರ್ಮಿಸಿ ೬ ತಿಂಗಳು ಕಳೆದಿಲ್ಲ. ಪುನಃ ಇದೀಗ ಕೊಚ್ಚಿ ಹೋಗಿದೆ. ಈ ನಡುವೆ ಹಲವಾರು ವರ್ಷಗಳಿಂದ ಈ ಸೇತುವೆಗೆ ಬದಲಿ ಸೇತುವೆ ನಿರ್ಮಿಸುವಂತೆ ಬೇಡಿಕೆ ಸಹ ಇದೆ. ಆದರೆ ಇದುವರೆಗೂ ಬೇಡಿಕೆ ಈಡೇರಿಲ್ಲ.
    ಭದ್ರಾ ಜಲಾಶಯ ಸಮೀಪ ಮುಖ್ಯ ಕಾಲುವೆಯಲ್ಲಿ ಮಣ್ಣು ಕುಸಿತ :
    ಜಲಾಶಯದಿಂದ ಸ್ವಲ್ಪ ದೂರದಲ್ಲಿ ಮುಖ್ಯ ಕಾಲುವೆಯ ಎರಡು ಬದಿ ಭಾನುವಾರ ಮಣ್ಣು ಕುಸಿತವಾಗಿರುವ ಘಟನೆ ನಡೆದಿದೆ. ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟ ಹಿನ್ನಲೆಯಲ್ಲಿ ಮುಖ್ಯ ಕಾಲುವೆ ಎರಡು ಬದಿ ಮಣ್ಣು ಕುಸಿತವಾಗಿದೆ ಎನ್ನಲಾಗಿದೆ. ಅದರಲ್ಲೂ ಒಂದು ಬದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಸಿತವಾಗಿದ್ದು, ಜಲಾಶಯ ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಮುನ್ನಚ್ಚರಿಕೆ ಕ್ರಮವಾಗಿ ಬ್ಯಾರಿಗೇಡ್‌ಗಳನ್ನು ಅಳವಡಿಸಿದ್ದಾರೆ.
    ಕಳೆದ ತಿಂಗಳು ಸಹ ಈ ಭಾಗದಲ್ಲಿ ಕುಸಿತವಾಗಿದ್ದು, ಆದರೆ ಜಲಾಶಯದ ಅಧಿಕಾರಿಗಳು ಗಮನ ಹರಿಸಿಲ್ಲ ನಿರ್ಲಕ್ಷ್ಯತನ ವಹಿಸಿದ್ದಾರೆ. ಅನಾಹುತಗಳು ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.  
    ಕಳೆದ ಬಾರಿ ಜಲಾಶಯದಿಂದ ನದಿಗೆ ನೀರು ಹರಿಸುವುದು ಸ್ಥಗಿತಗೊಳಿಸಿದ ನಂತರ ತಳ ಭಾಗದಲ್ಲಿ ಕಳಪೆ ಕಾಮಗಾರಿ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟ ನಡೆಸಿ ಪುನಃ ಗುಣಮಟ್ಟದ ಕಾಮಗಾರಿ ನಡೆಸುವಂತೆ ಆಗ್ರಹಿಸಲಾಗಿತ್ತು.


ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಕಳೆದ ೩ ದಿನಗಳಿಂದ ಉಂಟಾಗಿದ್ದ ಪ್ರವಾಹ ಇಳಿಮುಖವಾಗಿದ್ದು, ಹೊಸಸೇತುವೆ ಮುಳುಗಡೆಯಿಂದ ಮುಕ್ತಿ ಪಡೆದಿದೆ. ಸೋಮವಾರ ಜೆಸಿಬಿ ಮೂಲಕ ಸೇತುವೆ ಮೇಲೆ ಸಿಲುಕಿಕೊಂಡಿದ್ದ ಮರದ ದಿಂಬಿ, ಕಸಕಡ್ಡಿ, ತ್ಯಾಜ್ಯ ತೆರವುಗೊಳಿಸಲಾಯಿತು.

ಹಳೇ ಹಿರಿಯೂರು ಗ್ರಾಮಠಾಣಾ ಜಾಗ ಕಬಳಿಕೆಗೆ ಯತ್ನ : ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ


ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿಗೆ ಸೇರಿದ ಹಳೇ ಹಿರಿಯೂರು ಗ್ರಾಮಠಾಣಾ ಜಾಗವನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳ ಕುಟುಂಬದವರು ಹಾಗು ಹಣವಂತರು ಎಕರೆಗಟ್ಟಲೇ ಅಕ್ರಮವಾಗಿ ಕಬಳಿಸಲು ಯತ್ನಿಸಿದ್ದು, ಇದಕ್ಕೆ ಸಹಕರಿಸಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗು ನಿವೇಶನ ರಹಿತ ಹಿಂದುಳಿದ ವರ್ಗದ ಬಡ ಕುಟುಂಬಗಳಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿವತಿಯಿಂದ ಸೋಮವಾರ ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಜು. ೧೮: ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿಗೆ ಸೇರಿದ ಹಳೇ ಹಿರಿಯೂರು ಗ್ರಾಮಠಾಣಾ ಜಾಗವನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳ ಕುಟುಂಬದವರು ಹಾಗು ಹಣವಂತರು ಎಕರೆಗಟ್ಟಲೇ ಅಕ್ರಮವಾಗಿ ಕಬಳಿಸಲು ಯತ್ನಿಸಿದ್ದು, ಇದಕ್ಕೆ ಸಹಕರಿಸಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗು ನಿವೇಶನ ರಹಿತ ಹಿಂದುಳಿದ ವರ್ಗದ ಬಡ ಕುಟುಂಬಗಳಿಗೆ ನಿವೇಶನ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಆಗ್ರಹಿಸಿದರು.
    ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಮುಖಂಡರು, ಹಳೇಹಿರಿಯೂರು ಗ್ರಾಮಠಾಣಾ ಜಾಗದಲ್ಲಿ ಸರ್ಕಾರ ೧೯೯೨ರ ಅವಧಿಯಲ್ಲಿ ೧೪೦ ನಿವೇಶನಗಳನ್ನು ಬಡವರಿಗೆ ಹಂಚಿಕೆ ಮಾಡಿದೆ. ಇನ್ನೂ ನೂರಾರು ಕುಟುಂಬಗಳಿಗೆ ನಿವೇಶನ ನೀಡುವಷ್ಟು ಜಾಗವಿದ್ದರೂ ಸಹ ಕಳೆದ ಸುಮಾರು ೩೦ ವರ್ಷಗಳಿಂದ ನಿವೇಶನ ರಹಿತ ಹಿಂದುಳಿದ ವರ್ಗದ ಬಡ ಕುಟುಂಬಗಳಿಗೆ ನಿವೇಶನ ನೀಡಿಲ್ಲ. ಪ್ರಸ್ತುತ ಅಧಿಕಾರಿದಲ್ಲಿರುವ ಗ್ರಾಮ ಪಂಚಾಯಿತಿ ಸದಸ್ಯರುಗಳ ಕುಟುಂಬ ವರ್ಗದವರು ಹಾಗು ಹಣವಂತರು ಎಕರೆಗಟ್ಟಲೇ ಜಾಗವನ್ನು ಅಕ್ರಮವಾಗಿ ಕಬಳಿಸಲು ಯತ್ನಿಸಿದ್ದು, ಇದಕ್ಕೆ ಈ ಹಿಂದಿನ ಅಭಿವೃಧ್ಧಿ ಅಧಿಕಾರಿ ಹಾಗು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಅಭಿವೃದ್ಧಿ ಅಧಿಕಾರಿ ಸಹಕರಿಸಿದ್ದಾರೆ. ಈ ಸಂಬಂಧ ನಡೆದಿರುವ ಭ್ರಷ್ಟಾಚಾರ ಕುರಿತು ಸಮಿತಿ ದಾಖಲೆ ಸಮೇತ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಅಕ್ರಮವಾಗಿ ಕಬಳಿಸಿರುವ ಹಳೇ ಹಿರಿಯೂರು ಗ್ರಾಮಠಾಣಾ ಜಾಗವನ್ನು ತೆರವುಗೊಳಿಸಿ ನಿವೇಶನ ರಹಿತ ಹಿಂದುಳಿದ ವರ್ಗದ ಬಡ ಕುಟುಂಬಗಳಿಗೆ ನಿವೇಶನ ನೀಡಬೇಕು. ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಎಲ್ಲಾ ಭ್ರಷ್ಟಾಚಾರಗಳ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಎಂ. ಏಳುಕೋಟಿ, ತಾಲೂಕು ಸಂಚಾಲಕ ಆರ್. ರವಿನಾಯ್ಕ, ಮಹಿಳಾ ಘಟಕದ ಸಂಚಾಲಕಿ ಜೀವಾ, ಕೆ.ಟಿ ಪ್ರಸನ್ನ, ಸತ್ಯನಾರಾಯಣ್ ರಾವ್, ಸಂತೋಷ್, ಎಚ್.ವೈ ಕುಮಾರ್, ಬಿ. ರವಿ, ಶಿವು ಸೇರಿದಂತೆ ಗ್ರಾಮದ ಪ್ರಮುಖರು, ಗ್ರಾಮಸ್ಥರು ಸೇರಿದಂತೆ  ಇನ್ನಿತರರು ಪಾಲ್ಗೊಂಡಿದ್ದರು.
    ಇದಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಾಲೂಕು ಪಂಚಾಯಿತಿವರೆಗೂ ಮೆರವಣಿಗೆ ನಡೆಸಲಾಯಿತು.

Sunday, July 17, 2022

ಭದ್ರಾ ನದಿಯಲ್ಲಿ ತಗ್ಗಿದ್ದ ಪ್ರವಾಹ : ೩ ದಿನಗಳಿಂದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ಥರು

ವಿವಿಧ ಸೇವಾ ಕಾರ್ಯಗಳ ಮೂಲಕ ಮಾನವೀಯತೆ ಮೆರೆದ ರಾಜಕೀಯ ಪಕ್ಷಗಳು, ವಿವಿಧ ಸಂಘ-ಸಂಸ್ಥೆಗಳು, ದಾನಿಗಳು

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ವತಿಯಿಂದ ಸುಮಾರು ೩೫೦ ನೆರೆ ಸಂತ್ರಸ್ಥರಿಗೆ ಒಂದು ವಾರದವರೆಗೆ ಉಚಿತವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಡಿ. ಪ್ರಭಾಕರ ಬೀರಯ್ಯ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
    ಭದ್ರಾವತಿ, ಜು. ೧೭ : ನಗರದ ಹೃದಯ ಭಾಗದಲ್ಲಿ ಕಳೆದ ೨ ದಿನಗಳಿಂದ ಭದ್ರಾ ನದಿಯಿಂದ ಉಂಟಾಗಿರುವ ಪ್ರವಾಹ ಭಾನವಾರ ಸ್ವಲ್ಪಮಟ್ಟಿಗೆ ತಗ್ಗಿದ್ದು, ಪ್ರವಾಹ ಸಂಪೂರ್ಣವಾಗಿ ಉಳಿಮುಖವಾಗುವವರೆಗೂ ಸಂತ್ರಸ್ಥರು ಕಾಳಜಿ ಕೇಂದ್ರಗಳಲ್ಲಿಯೇ ಉಳಿದು ಕೊಳ್ಳುವಂತಾಗಿದೆ. ಈ ನಡುವೆ ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು, ದಾನಿಗಳು ಸಂತ್ರಸ್ಥರ ನೆರವಿಗೆ ಮುಂದಾಗುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
      ತಾಲೂಕಿನಲ್ಲಿ ಒಟ್ಟು ೪ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು ೬೪೪ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ೪ ಕಾಳಜಿ ಕೇಂದ್ರಗಳ ಪೈಕಿ ೩ ನಗರಸಭೆ ವ್ಯಾಪ್ತಿಯಲ್ಲಿದ್ದು, ೫೩೪ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ನಗರಸಭೆ, ತಾಲೂಕು ಪಂಚಾಯಿತಿ ಮತ್ತು ತಾಲೂಕು ಆಡಳಿತದಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
      ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ವತಿಯಿಂದ ಉಚಿತವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ:
      ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ವತಿಯಿಂದ ಸುಮಾರು ೩೫೦ ನೆರೆ ಸಂತ್ರಸ್ಥರಿಗೆ ಒಂದು ವಾರದವರೆಗೆ ಉಚಿತವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ ಕೈಗೊಳ್ಳಲಾಗಿದೆ.
      ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಭಾನುವಾರ ಸಂತ್ರಸ್ಥರಿಗೆ ಊಟ ಬಡಿಸುವ ಮೂಲಕ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
      ನಗರಸಭೆ ಪೌರಾಯುಕ್ತ ಮನುಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಕಂದಾಯಾಧಿಕಾರಿ ಎಂ.ಎಸ್ ರಾಜ್‌ಕುಮಾರ್ ಸೇರಿದಂತೆ ನಗರಸಭೆ ಸಿಬ್ಬಂದಿಗಳು, ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್‌ನ ಪರಮೇಶ್ವರಪ್ಪ ಸೇರಿದಂತೆ ಸೇವಾಕರ್ತರು ಉಪಸ್ಥಿತರಿದ್ದರು.  


ಬಿಜೆಪಿ ಪಕ್ಷದ ವತಿಯಿಂದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿರುವ ನೆರೆ ಸಂತ್ರಸ್ಥರಿಗೆ ಉಚಿತವಾಗಿ ಮಲಗುವ ಹೊದಿಕೆ, ಬಿಸ್ಕೆಟ್, ಬ್ರೆಡ್ ಮತ್ತು ಹಣ್ಣು ವಿತರಿಸಲಾಯಿತು.  
      ಬಿಜೆಪಿ ಪಕ್ಷದ ವತಿಯಿಂದ ಹೊದಿಕೆ, ಬಿಸ್ಕೆಟ್, ಬ್ರೆಡ್, ಹಣ್ಣು ವಿತರಣೆ:
      ಬಿಜೆಪಿ ಪಕ್ಷದ ವತಿಯಿಂದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿರುವ ನೆರೆ ಸಂತ್ರಸ್ಥರಿಗೆ ಉಚಿತವಾಗಿ ಮಲಗುವ ಹೊದಿಕೆ, ಬಿಸ್ಕೆಟ್, ಬ್ರೆಡ್ ಮತ್ತು ಹಣ್ಣು ವಿತರಿಸಲಾಯಿತು.  
      ಪಕ್ಷದ ಪ್ರಮುಖರಾದ ಎಸ್. ಕುಮಾರ್, ವಿ. ಕದಿರೇಶ್, ಎಂ. ಪ್ರಭಾಕರ್, ಚನ್ನೇಶ್, ಕೆ. ಮಂಜುನಾಥ್, ಕರಿಗೌಡ್ರು, ವಿಜಯ್, ಮಂಜುನಾಥ್, ಸತೀಶ್, ರಾಮನಾಥ್ ಬರ್ಗೆ, ರಾಘವೇಂದ್ರ, ಮಂಜುಳಾ, ಕೃಷ್ಣಮೂರ್ತಿ, ಉಮಾ, ಲತಾ, ಪ್ರಭಾಕರ್, ದೇವು, ಅಪ್ಪು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಜೆಡಿಎಸ್ ಪಕ್ಷದ ವತಿಯಿಂದ ಉಚಿತವಾಗಿ ಸ್ವೆಟರ್ ಸೇರಿದಂತೆ ಬೆಚ್ಚನೆ ಹೊದಿಕೆಗಳನ್ನು ವಿತರಿಸಲಾಯಿತು.
            ಜೆಡಿಎಸ್ ಪಕ್ಷದ ವತಿಯಿಂದ ಸ್ಟೆಟ್ಟರ್ ಸೇರಿದಂತೆ ಬೆಚ್ಚನೆ ಹೊದಿಕೆಗಳ ವಿತರಣೆ:
      ಕಾಳಜಿ ಕೇಂದ್ರಗಳಲ್ಲಿ ಉಳಿದುಕೊಂಡಿರುವ ನೆರೆ ಸಂತ್ರಸ್ಥರಿಗೆ ಜೆಡಿಎಸ್ ಪಕ್ಷದ ವತಿಯಿಂದ ಉಚಿತವಾಗಿ ಸ್ವೆಟರ್ ಸೇರಿದಂತೆ ಬೆಚ್ಚನೆ ಹೊದಿಕೆಗಳನ್ನು ವಿತರಿಸಲಾಯಿತು.
      ಸಂತ್ರಸ್ಥರಿಗೆ ಪಕ್ಷದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡವುದಾಗಿ ಭರವಸೆ ನೀಡಲಾಯಿತು. ಪಕ್ಷದ ಪ್ರಮುಖರಾದ ಶಾರದ ಅಪ್ಪಾಜಿ, ಆರ್. ಕರುಣಾಮೂರ್ತಿ, ಡಿ.ಟಿ ಶ್ರೀಧರ್, ಮಧುಕುಮಾರ್, ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತುಂಬಿ ಹರಿಯುತ್ತಿರುವ ಭದ್ರೆಗೆ ಬಾಗಿನ ಸಮರ್ಪಣೆ

ಕಳೆದ ೨ ದಿನಗಳಿಂದ ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಿಂದ ಉಂಟಾಗಿದ್ದ  ಪ್ರವಾಹ ಸ್ವಲ್ಪಮಟ್ಟಿಗೆ ತಗ್ಗಿದ್ದು, ಈ ನಡುವೆ ಭಾನುವಾರ ಪತಂಜಲಿ ಯೋಗ ಸಂಸ್ಥೆ ಹಾಗು ಪದ್ಮಾಂಭ ಸ್ವಯಂ ಸೇವಾ ಸಂಸ್ಥೆಯ ಮಹಿಳೆಯರಿಂದ ಬಾಗಿನ ಸಮರ್ಪಿಸಲಾಯಿತು.
ಭದ್ರಾವತಿ, ಜು. ೧೭: ಕಳೆದ ೨ ದಿನಗಳಿಂದ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಿಂದ ಉಂಟಾಗಿದ್ದ  ಪ್ರವಾಹ ಸ್ವಲ್ಪಮಟ್ಟಿಗೆ ತಗ್ಗಿದ್ದು, ಈ ನಡುವೆ ಭಾನುವಾರ ಪತಂಜಲಿ ಯೋಗ ಸಂಸ್ಥೆ ಹಾಗು ಪದ್ಮಾಂಭ ಸ್ವಯಂ ಸೇವಾ ಸಂಸ್ಥೆಯ ಮಹಿಳೆಯರಿಂದ ಬಾಗಿನ ಸಮರ್ಪಿಸಲಾಯಿತು.
      ಧಾರ್ಮಿಕ ಆಚರಣೆಗಳನ್ನು ನೆರವೇರಿಸಿ ನಂತರ ಬಾಗಿನ ಸಮರ್ಪಿಸುವ ಮೂಲಕ ರೈತರು, ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಭದ್ರೆ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಲಾಯಿತು.


      ಪದ್ಮಾಂಭ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್, ಗೌರಮ್ಮ, ಸರ್ವೇಶ್ವರಿ, ಕೋಕಿಲಾ, ವಾಣಿಶ್ರೀ, ಶೋಭಾ, ಅನಿತಾ, ಉಷಾ, ಶೋಭಾ, ಪ್ರತಿಭಾ, ಪ್ರೀತಿ, ಸುಶೀಲಾ, ಅಶ್ವಿನಿ, ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.