ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ
ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿಗೆ ಸೇರಿದ ಹಳೇ ಹಿರಿಯೂರು ಗ್ರಾಮಠಾಣಾ ಜಾಗವನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳ ಕುಟುಂಬದವರು ಹಾಗು ಹಣವಂತರು ಎಕರೆಗಟ್ಟಲೇ ಅಕ್ರಮವಾಗಿ ಕಬಳಿಸಲು ಯತ್ನಿಸಿದ್ದು, ಇದಕ್ಕೆ ಸಹಕರಿಸಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗು ನಿವೇಶನ ರಹಿತ ಹಿಂದುಳಿದ ವರ್ಗದ ಬಡ ಕುಟುಂಬಗಳಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿವತಿಯಿಂದ ಸೋಮವಾರ ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ಜು. ೧೮: ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿಗೆ ಸೇರಿದ ಹಳೇ ಹಿರಿಯೂರು ಗ್ರಾಮಠಾಣಾ ಜಾಗವನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳ ಕುಟುಂಬದವರು ಹಾಗು ಹಣವಂತರು ಎಕರೆಗಟ್ಟಲೇ ಅಕ್ರಮವಾಗಿ ಕಬಳಿಸಲು ಯತ್ನಿಸಿದ್ದು, ಇದಕ್ಕೆ ಸಹಕರಿಸಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗು ನಿವೇಶನ ರಹಿತ ಹಿಂದುಳಿದ ವರ್ಗದ ಬಡ ಕುಟುಂಬಗಳಿಗೆ ನಿವೇಶನ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಆಗ್ರಹಿಸಿದರು.
ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಮುಖಂಡರು, ಹಳೇಹಿರಿಯೂರು ಗ್ರಾಮಠಾಣಾ ಜಾಗದಲ್ಲಿ ಸರ್ಕಾರ ೧೯೯೨ರ ಅವಧಿಯಲ್ಲಿ ೧೪೦ ನಿವೇಶನಗಳನ್ನು ಬಡವರಿಗೆ ಹಂಚಿಕೆ ಮಾಡಿದೆ. ಇನ್ನೂ ನೂರಾರು ಕುಟುಂಬಗಳಿಗೆ ನಿವೇಶನ ನೀಡುವಷ್ಟು ಜಾಗವಿದ್ದರೂ ಸಹ ಕಳೆದ ಸುಮಾರು ೩೦ ವರ್ಷಗಳಿಂದ ನಿವೇಶನ ರಹಿತ ಹಿಂದುಳಿದ ವರ್ಗದ ಬಡ ಕುಟುಂಬಗಳಿಗೆ ನಿವೇಶನ ನೀಡಿಲ್ಲ. ಪ್ರಸ್ತುತ ಅಧಿಕಾರಿದಲ್ಲಿರುವ ಗ್ರಾಮ ಪಂಚಾಯಿತಿ ಸದಸ್ಯರುಗಳ ಕುಟುಂಬ ವರ್ಗದವರು ಹಾಗು ಹಣವಂತರು ಎಕರೆಗಟ್ಟಲೇ ಜಾಗವನ್ನು ಅಕ್ರಮವಾಗಿ ಕಬಳಿಸಲು ಯತ್ನಿಸಿದ್ದು, ಇದಕ್ಕೆ ಈ ಹಿಂದಿನ ಅಭಿವೃಧ್ಧಿ ಅಧಿಕಾರಿ ಹಾಗು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಅಭಿವೃದ್ಧಿ ಅಧಿಕಾರಿ ಸಹಕರಿಸಿದ್ದಾರೆ. ಈ ಸಂಬಂಧ ನಡೆದಿರುವ ಭ್ರಷ್ಟಾಚಾರ ಕುರಿತು ಸಮಿತಿ ದಾಖಲೆ ಸಮೇತ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅಕ್ರಮವಾಗಿ ಕಬಳಿಸಿರುವ ಹಳೇ ಹಿರಿಯೂರು ಗ್ರಾಮಠಾಣಾ ಜಾಗವನ್ನು ತೆರವುಗೊಳಿಸಿ ನಿವೇಶನ ರಹಿತ ಹಿಂದುಳಿದ ವರ್ಗದ ಬಡ ಕುಟುಂಬಗಳಿಗೆ ನಿವೇಶನ ನೀಡಬೇಕು. ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಎಲ್ಲಾ ಭ್ರಷ್ಟಾಚಾರಗಳ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಎಂ. ಏಳುಕೋಟಿ, ತಾಲೂಕು ಸಂಚಾಲಕ ಆರ್. ರವಿನಾಯ್ಕ, ಮಹಿಳಾ ಘಟಕದ ಸಂಚಾಲಕಿ ಜೀವಾ, ಕೆ.ಟಿ ಪ್ರಸನ್ನ, ಸತ್ಯನಾರಾಯಣ್ ರಾವ್, ಸಂತೋಷ್, ಎಚ್.ವೈ ಕುಮಾರ್, ಬಿ. ರವಿ, ಶಿವು ಸೇರಿದಂತೆ ಗ್ರಾಮದ ಪ್ರಮುಖರು, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಾಲೂಕು ಪಂಚಾಯಿತಿವರೆಗೂ ಮೆರವಣಿಗೆ ನಡೆಸಲಾಯಿತು.
No comments:
Post a Comment