Thursday, July 28, 2022

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಎಸ್. ವಿರುಪಾಕ್ಷಪ್ಪ, ಉಪಾಧ್ಯಕ್ಷರಾಗಿ ರಾಜಶೇಖರನಾಯ್ಕ ಅವಿರೋಧ ಆಯ್ಕೆ

ಭದ್ರಾವತಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಎಸ್. ವಿರುಪಾಕ್ಷಪ್ಪ, ಉಪಾಧ್ಯಕ್ಷರಾಗಿ ರಾಜಶೇಖರನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದು, ಇವರನ್ನು ಬ್ಯಾಂಕ್ ವತಿಯಿಂದ ಅಭಿನಂದಿಸಲಾಯಿತು.
    ಭದ್ರಾವತಿ, ಜು. ೨೮: ನಗರದ ಚನ್ನಗಿರಿ ರಸ್ತೆಯಲ್ಲಿರುವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ) ಅಧ್ಯಕ್ಷರಾಗಿ ಹುಣಸೇಕಟ್ಟೆ ಗ್ರಾಮದ ಎಸ್. ವಿರುಪಾಕ್ಷಪ್ಪ ಆಯ್ಕೆಯಾಗಿದ್ದಾರೆ.
    ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹುಣಸೇಕಟ್ಟೆ ಗ್ರಾಮದ ಎಸ್. ವಿರುಪಾಕ್ಷಪ್ಪ ಅಧ್ಯಕ್ಷರಾಗಿ ಮತ್ತು ಅರಸನಗಟ್ಟ ತಾಂಡ್ಯದ ರಾಜಶೇಖರನಾಯ್ಕ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಬ್ಯಾಂಕಿನಲ್ಲಿ ಒಟ್ಟು ೧೩ ನಿರ್ದೇಶಕರಿದ್ದು, ಕಳೆದ ಕೆಲವು ವರ್ಷಗಳಿಂದ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಕಾರ್ಗಿಲ್ ವಿಜಯೋತ್ಸವ ದಿನ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಹಾಗೂ ಸಂಘದ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸೈನಿಕರ ಕುಟುಂಬ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜು. ೨೮:  ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಹಾಗೂ ಸಂಘದ ನೂತನ ಕಚೇರಿ ಉದ್ಘಾಟನಾ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ನೆರವೇರಿಸಿದರು.
    ಲಯನ್ಸ್ ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ಹಿರಿಯ ಮಾಜಿ ಸೈನಿಕರು, ಕ್ರೀಡಾ ಸಾಧಕರು, ನಗರಸಭಾ ಸದಸ್ಯರು ಹಾಗು ಮಾಜಿ ಸೈನಿಕರ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
    ತಹಸೀಲ್ದಾರ್ ಆರ್. ಪ್ರದೀಪ್,  ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ನಗರಸಭಾ ಅಧ್ಯಕ್ಷೆ ಗೀತಾ ರಾಜಕುಮಾರ್, ಉಪಾಧ್ಯಕ್ಷ ಚನ್ನಪ್ಪ,  ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ತಾಲೂಕು ಮಾಜಿ ಸೈನಿಕರ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಶಶಿಕಲಾ ಉಪಸ್ಥಿತರಿದ್ದರು.
    ತಾಲೂಕು ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಮೇಜರ್ ವಿಕ್ರಂ ಎಸ್ ಕೆದಲಾಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಮಾಜಿ ಸೈನಿಕರ ಕುಟುಂಬಸ್ಥರು, ನ್ಯೂಟೌನ್ ಸರ್.ಎಂ.ವಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್‌ಸಿಸಿ ಹಾಗೂ ಸ್ಕೌಟ್ ವಿದ್ಯಾರ್ಥಿಗಳು, ಸಿದ್ಧಾರ್ಥ ಅಂಧರ ಕೇಂದ್ರದ ವಿಕಲಚೇತನರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ವೆಂಕಟಗಿರಿ ವಂದಿಸಿದರು.

Wednesday, July 27, 2022

ಕೇಂದ್ರ ಸರ್ಕಾರದಿಂದ ಪೊಲೀಸ್, ಇ.ಡಿ ದುರ್ಬಳಕೆ : ವಿನಾಕಾರಣ ಕಾಂಗ್ರೆಸ್ ನಾಯಕರಿಗೆ ಕಿರುಕುಳ

ಜಾರಿ ನಿರ್ದೇಶನಾಲಯ(ಇ.ಡಿ) ಮತ್ತು ಪೊಲೀಸ್ ಇಲಾಖೆಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುವ ಮೂಲಕ ವಿನಾಕಾರಣ ಕಾಂಗ್ರೆಸ್ ಪಕ್ಷದ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಭದ್ರಾವತಿಯಲ್ಲಿ ಯುವ ಕಾಂಗ್ರೆಸ್ ಗ್ರಾಮಾಂತರ ಘಟಕದಿಂದ ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ. ಜು, ೨೭: ಜಾರಿ ನಿರ್ದೇಶನಾಲಯ(ಇ.ಡಿ) ಮತ್ತು ಪೊಲೀಸ್ ಇಲಾಖೆಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುವ ಮೂಲಕ ವಿನಾಕಾರಣ ಕಾಂಗ್ರೆಸ್ ಪಕ್ಷದ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಗ್ರಾಮಾಂತರ ಘಟಕದಿಂದ ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಪ್ರಮುಖರು ಮಾತನಾಡಿ, ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಇದನ್ನು ವಿರೋಧಿಸಿ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯವರು ಮೌನ ಪ್ರತಿಭಟನೆಗೆ ಮುಂದಾದಾಗ ಅವರನ್ನು ಬಂಧಿಸಲು ಪೊಲೀಸರು ಯತ್ನಿಸಿದ್ದು, ಈ ಸಂದರ್ಭದಲ್ಲಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ಅವರ ಹಲ್ಲೆ ನಡೆಸಿ ಬಂಧಿಸಲಾಗಿದೆ ಇದನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.
    ಇ.ಡಿ ಮತ್ತು ಪೊಲೀಸ್ ಇಲಾಖೆಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ದೇಶಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು ಎಚ್ಚರಿಸಿದರು.
ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಅಫ್ತಾಬ್ ಅಹ್ಮದ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಯುವ ಮುಖಂಡ ಬಿ.ಎಸ್ ಗಣೇಶ್, ನಗರಸಭೆ ಸದಸ್ಯರಾದ ಬಿ.ಎಂ ಮಂಜುನಾಥ್(ಟೀಕು), ಬಷೀರ್ ಅಹ್ಮದ್, ಸೈಯದ್ ರಿಯಾಜ್ ಅಹ್ಮದ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಚಿನ್ ಸಿಂಧ್ಯಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣರಾಜು, ಕಾರ್ಯದರ್ಶಿಗಳಾದ ಕೇಶವ,  ನ್ಯಾಯವಾದಿ ಎಂ. ಶಿವಕುಮಾರ್. ಐಸಾಕ್ ಲಿಂಕನ್,  ಅಭಿಲಾಶ್, ತಬ್ರೆಜ್ ಖಾನ್, ರಜಿನಿ, ವಿನಯ್, ಹರೀಶ್, ಎಂ.ಡಿ ಸಜ್ಜಾದ್, ಸೈಯದ್ ಸರ್ಫರಾಜ್, ಶ್ರೀನಿವಾಸ್, ಮುನಾವರ್, ಲೋಕೇಶ್, ಉಮರ್, ನಾಗೇಶ್, ಮಂಜು, ಡೊನಾಲ್ಡ್, ಪೃಥ್ವಿರಾಜ್, ರವಿ, ಫೈಸಲ್, ಆಫೀಫ್, ಅಜ್ಗರ್, ಸಾಧಿಕ್, ಮೋನೋ ಮತ್ತು ದಿಲೀಪ್ ಕುಮಾರ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ನವೀಕರಣಗೊಂಡ ದೇವಾಲಯದ ಪ್ರಾಂಗಣ ಲೋಕಾರ್ಪಣೆ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ನವೀಕರಣಗೊಂಡ ಪ್ರಾಂಗಣವನ್ನು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೋ ಲೋಕಾರ್ಪಣೆಗೊಳಿಸಿದರು.
    ಭದ್ರಾವತಿ, ಜು. ೨೭ : ನಗರದ ಪ್ರಮುಖ ಕ್ರೈಸ್ತ ದೇವಾಲಯಗಳಲ್ಲಿ ಒಂದಾಗಿರುವ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ನವೀಕರಣಗೊಂಡ ಪ್ರಾಂಗಣವನ್ನು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೋ ಲೋಕಾರ್ಪಣೆಗೊಳಿಸಿದರು.
    ತನ್ನದೇ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡು ಬಂದಿರುವ ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ಇಂಟರ್‌ಲಾಕ್ ಅಳವಡಿಕೆಯೊಂದಿಗೆ ನವೀಕರಣಗೊಳಿಸುವ ಮೂಲಕ ಪ್ರಾಂಗಣ ಮತ್ತಷ್ಟು ಆಕರ್ಷಕವಾಗಿ ಕಂಗೊಳಿಸುವಂತೆ ಮಾಡಲಾಗಿದೆ. ಲೋಕಾರ್ಪಣೆಗೊಳಿಸಿದ ಡಾ. ಫ್ರಾನ್ಸಿಸ್ ಸೆರಾವೋ ಅವರು ನವೀಕರಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


      ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ :
    ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೦೦ಕ್ಕೂ ಹೆಚ್ಚು ಅಂಕ ಪಡೆದ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
    ವೈಸಿಎಸ್/ಐಸಿವೈಎಂ, ಪೀಠ ಸೇವಕರು ಮತ್ತು ಮಹಿಳಾ ಸಂಘಟನೆಯ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ನಡೆಯಿತು.
    ದೇವಾಲಯದ ಧರ್ಮಗುರು ಫಾದರ್ ಲಾನ್ಸಿ ಡಿಸೋಜ,  ಪಾಲನ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್, ಡಾನ್ ಬಾಸ್ಕೋ ಕೈಗಾರಿಕಾ ತರಬೇತಿ ಸಂಸ್ಥೆ ನಿರ್ದೇಶಕ ಫಾದರ್ ಆರೋಗ್ಯ ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, July 26, 2022

ನೀರು ಮಿತವಾಗಿ ಸದ್ಬಳಕೆ ಮಾಡಿಕೊಂಡಲ್ಲಿ ೨ ಬೆಳೆ ಬೆಳೆಯಲು ಸಾಧ್ಯ

ಭದ್ರೆಗೆ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಎಚ್.ಆರ್ ಬಸವರಾಜಪ್ಪ

ಭದ್ರಾವತಿ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್ ಬಸವರಾಜಪ್ಪ ಸೇರಿದಂತೆ ರೈತರು ಭದ್ರೆಗೆ ಬಾಗಿನ ಸಮರ್ಪಿಸಿದರು. 
    ಭದ್ರಾವತಿ, ಜು. ೨೬: ಭದ್ರಾ ಜಲಾಶಯದ ನೀರು ಮಿತವಾಗಿ ಸಮರ್ಪಕವಾಗಿ ಬಳಕೆ ಮಾಡಿಕೊಂಡಲ್ಲಿ ರೈತರು ವಾರ್ಷಿಕ ೨ ಬೆಳೆಗಳನ್ನು ಬೆಳೆಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್ ಬಸವರಾಜಪ್ಪ ಹೇಳಿದರು.
    ಅವರು ಮಂಗಳವಾರ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಭದ್ರೆಗೆ ಬಾಗಿನ ಸಮರ್ಪಿಸಿ ಮಾತನಾಡಿದರು. ಕೆಲವು ವರ್ಷಗಳಿಂದ ಜಲಾಶಯ ಪೂರ್ಣಪ್ರಮಾಣದಲ್ಲಿ ಭರ್ತಿಯಾಗುತ್ತಿದ್ದು, ಈ ಬಾರಿ ಇನ್ನೂ ಬೇಗನೆ ಪೂರ್ಣಗೊಂಡಿದೆ. ರೈತರು ಕಳೆದ ಬಾರಿ ೨ ಬೆಳೆಗಳನ್ನು ಬೆಳೆದಿದ್ದರು. ಈ ಬಾರಿ ಸಹ ನೀರನ್ನು ಮಿತವಾಗಿ ಬಳಸಿಕೊಂಡಲ್ಲಿ ೨ ಬೆಳೆಗಳನ್ನು ಬೆಳೆಯಲು ಸಾಧ್ಯ ಎಂದರು.
    ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಇನ್ನೂ ಮುಖ್ಯ ಕಾಲುವೆಗಳ ಆಧುನೀಕರಣ ಪೂರ್ಣಗೊಂಡಿಲ್ಲ.  ಉಪಕಾಲುವೆಗಳನ್ನು ನಿರ್ಮಾಣ ಮಾಡಿಲ್ಲ. ಇದರಿಂದಾಗಿ ನೀರು ವ್ಯರ್ಥವಾಗುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರ ತಕ್ಷಣ ಗಮನ ಹರಿಸಿ ಹೊಸದಾಗಿ ಕ್ರಿಯಾಯೋಜನೆ ರೂಪುರೇಷೆ ಸಿದ್ದಗೊಳಿಸಬೇಕೆಂದು ಆಗ್ರಹಿಸಿದರು.
    ಪ್ರಸ್ತುತ ನೀರು ವ್ಯರ್ಥವಾಗುತ್ತಿರುವ ಹಿನ್ನಲೆಯಲ್ಲಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ರೈತರು ಸಂಕಷ್ಟ ಎದುರಿಸುವಂತಾಗುತ್ತಿದೆ. ಈ ಹಿನ್ನಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ೧೨.೫ ಟಿ.ಎಂ.ಸಿ ನೀರನ್ನು ತುಂಗಾ ನದಿ ಜಲಾಶಯದಿಂದಿ ಬಳಸಿಕೊಳ್ಳಲು ಹೊಸದಾಗಿ ಕ್ರಿಯಾಯೋಜನೆ ಸಿದ್ದಪಡಿಸಬೇಕೆಂದು ಒತ್ತಾಯಿಸಿದರು.
    ಚಂದ್ರಪ್ಪ, ಈಶಣ್ಣ, ಇ.ಬಿ ಜಗದೀಶ್, ಎಸ್. ಶಿವಮೂರ್ತಿ, ರಾಘವೇಂದ್ರ, ಎಂ. ಮಹೇಶ್ವರಪ್ಪ, ನಾಗರಾಜ್, ಸಿ. ಚಂದ್ರಪ್ಪ ಮತ್ತು ಪಂಚಾಕ್ಷರಿ ಸೇರಿದಂತೆ ಇನ್ನಿತರ ರೈತ ಮುಖಂಡರು, ರೈತರು ಸೇರಿದಂತೆ ವಿವಿದ ಸಂಘ-ಸಂಸ್ಥೆಗಳ ಪ್ರಮುಖರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.


ನಗರಸಭೆ ಮಾಜಿ ಉಪಾಧ್ಯಕ್ಷೆ ಕೆ.ಬಿ ಶ್ರೀಲಕ್ಷ್ಮಿಗೆ ಪುತ್ರ ವಿಯೋಗ

ಬಿ.ಕೆ ಅನಿಲ್‌ಕುಮಾರ್  
ಭದ್ರಾವತಿ, ಜು. ೨೬ : ನಗರಸಭೆ ಮಾಜಿ ಉಪಾಧ್ಯಕ್ಷೆ ಕೆ.ಬಿ ಶ್ರೀಲಕ್ಷ್ಮಿ ಅವರ ಪುತ್ರ ಬೊಮ್ಮನಕಟ್ಟೆ ನಿವಾಸಿ ಬಿ.ಕೆ ಅನಿಲ್‌ಕುಮಾರ್(೫೧) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಎಂಪಿಎಂ ಕಾರ್ಮಿಕ ಮುಖಂಡ, ತಂದೆ ಬಿ.ಎನ್ ಕೃಷ್ಣಮೂರ್ತಿ, ತಾಯಿ ಕೆ.ಬಿ ಶ್ರೀಲಕ್ಷ್ಮಿ, ಪತ್ನಿ, ಇಬ್ಬರು ಪುತ್ರಿಯರು ಇದ್ದರು. ಮೃತರ ನಿಧನಕ್ಕೆ ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸದಸ್ಯ ಬಿ.ಕೆ ಮೋಹನ್, ಮಾಜಿ ಸದಸ್ಯರಾದ ವೆಂಕಟಯ್ಯ, ರಾಜು, ಪುಟ್ಟೇಗೌಡ, ಕುರುಹಿನಶೆಟ್ಟಿ ಸಮಾಜ, ದೇವಾಂಗ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.


ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ : ನಿಷೇಧಿತ ಪ್ಲಾಸ್ಟಿಕ್ ವಶ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿರುವ ಘಟನೆ ನಡೆದಿದೆ.
    ಭದ್ರಾವತಿ, ಜು. ೨೬: ನಗರಸಭೆ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿರುವ ಘಟನೆ ನಡೆದಿದೆ.
    ಶಿವಮೊಗ್ಗ ಪರಿಸರ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ನಗರದ ಸಿ.ಎನ್ ರಸ್ತೆ, ಭೂತನಗುಡಿ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಲಾಯಿತು.
    ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್, ಹಿರಿಯ ಆರೋಗ್ಯ ನಿರೀಕ್ಷಕರಾದ ಆರ್.ಬಿ ಸತೀಶ್, ಆಶಾಲತಾ ಸೇರಿದಂತೆ ಇನ್ನಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರ ಜು.೧ರಿಂದ ರಾಜ್ಯಾದ್ಯಂತ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದು, ನಗರಸಭೆ ಅಧಿಕಾರಿಗಳು ಪ್ರತಿದಿನ ದಾಳಿ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ. ಆದರೂ ಸಹ ಪ್ಲಾಸ್ಟಿಕ್ ಬಳಕೆ ಮುಂದುವರೆದಿದೆ.