Saturday, September 3, 2022

ಬಬ್ಬೂರುಕಮ್ಮೆ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ

ಭದ್ರಾವತಿ ನಗರದ ಜನ್ನಾಪುರ ಬಬ್ಬೂರುಕಮ್ಮೆ ಸೇವಾ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಭದ್ರಾವತಿ, ಸೆ. ೩: ನಗರದ ಜನ್ನಾಪುರ ಬಬ್ಬೂರುಕಮ್ಮೆ ಸೇವಾ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಪ್ರತಿಭಾವಂತ ವಿದ್ಯಾರ್ಥಿಗಳಾದ ಸ್ಕಂದ ಭಾರದ್ವಾಜ್ ಮತ್ತು ವಿಕಾಸ್ ಅವರನ್ನು ತಾಲೂಕು ಬ್ರಾಹ್ಮಣ ಸಭಾ ಪ್ರಮುಖರಾದ ಎ.ಎನ್ ಸುರೇಶ್ ಸನ್ಮಾನಿಸಿ ಗೌರವಿಸಿದರು. ಬಬ್ಬೂರುಕಮ್ಮೆ ಸೇವಾ ಸಂಘದ ಅಧ್ಯಕ್ಷ ಎಚ್.ಎಸ್ ನಂಜುಂಡಯ್ಯ ಅಧ್ಯಕ್ಷತೆ ವಹಿಸಿದ್ದರು,
    ಎಚ್.ಆರ್ ಸುಧಾ ಪ್ರಾರ್ಥಿಸಿದರು, ಡಾ.ಎಂ.ಎಚ್ ವಿದ್ಯಾಶಂಕರ್ ಸ್ವಾಗತಿಸಿದರು. ಎಚ್.ಆರ್ ಶ್ರೀಧರೇಶ್ ಭಾರದ್ವಾಜ್ ನಿರೂಪಿಸಿ, ದಿನೇಶ್ ವಂದಿಸಿದರು.

ಸೆ.೪ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯ್ಕೆ ಸ್ಪರ್ಧೆಗಳು

    ಭದ್ರಾವತಿ, ಸೆ. ೩: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸೆ.೪ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯ್ಕೆ ಸ್ಪರ್ಧೆಗಳು ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನಡೆಯಲಿವೆ.
    ಅಥ್ಲೆಟಿಕ್ ಸ್ಪರ್ಧೆಗಳು (ಪುರುಷರಿಗೆ) : ೧೦೦೦ ಮೀ., ೨೦೦ ಮೀ., ೪೦೦ ಮೀ., ೫೦೦ ಮೀ., ೧೫೦೦ ಮೀ. ಮತ್ತು ೫೦೦೦ ಮೀ. ಓಟ ಹಾಗು ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಡಿಸ್ಕಸ್ ಎಸೆತ ಮತ್ತು ಜಾವಲಿನ್ ಥ್ರೋ, ೪*೧೦೦ ಮತ್ತು ೪*೪೦೦ ರಿಲೆ ಮತ್ತು ೧೧೦ ಮೀ. ಹರ್ಡಲ್ಸ್ ಸ್ಪರ್ಧೆಗಳು.
    ಅಥ್ಲೆಟಿಕ್ ಸ್ಪರ್ಧೆಗಳು (ಮಹಿಳೆಯರಿಗೆ) : ೧೦೦ ಮೀ., ೨೦೦ ಮೀ., ೪೦೦ ಮೀ., ೮೦೦ ಮೀ., ೧೫೦೦ ಮೀ. ಮತ್ತು ೩೦೦೦ ಮೀ. ಓಟ ಹಾಗು ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಡಿಸ್ಕಸ್ ಎಸೆತ ಮತ್ತು ಜಾವಲಿನ್ ಥ್ರೋ, ೪*೧೦೦ ಮತ್ತು ೪*೪೦೦ ರಿಲೆ ಮತ್ತು ೧೦೦ ಮೀ. ಹರ್ಡಲ್ಸ್ ಸ್ಪರ್ಧೆಗಳು.
    ಉಳಿದಂತೆ ಪುರುಷರಿಗೆ ಪುಟ್‌ಬಾಲ್, ಪುರುಷ ಮತ್ತು ಮಹಿಳೆಯರಿಗೆ ಖೋ-ಖೋ, ಕಬಡ್ಡಿ, ವಾಲಿಬಾಲ್, ಥ್ರೋ ಬಾಲ್ ಮತ್ತು ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿವೆ.
    ಹೆಚ್ಚಿನ ಮಾಹಿತಿಗೆ ಯುವ ಸಬಲೀಕರಣ ಹಾಗು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಮೊ: ೯೦೦೮೯೪೯೮೪೭ ಅಥವಾ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜಿ. ಪ್ರಭು, ಮೊ: ೯೮೪೫೪೦೫೮೫೯ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

Friday, September 2, 2022

ಚಿರತೆ ಸೆರೆ ಹಿಡಿದು ಆತಂಕ ದೂರ ಮಾಡಿ, ಸೂಕ್ತ ಪರಿಹಾರ ನೀಡಿ : ವಲಯ ಅರಣ್ಯಾಧಿಕಾರಿಗೆ ಮನವಿ

ಭದ್ರಾವತಿ ತಾಲೂಕಿನ ಅರಹತೊಳಲು, ಕೈಮರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅಲ್ಲದೆ ಒಂದು ಹಸು ಚಿರತೆಗೆ ಬಲಿಯಾಗಿದೆ. ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ತಕ್ಷಣ ಚಿರತೆಯನ್ನು ಸೆರೆ ಹಿಡಿದು ರೈತರ ಆತಂಕ ದೂರ ಮಾಡುವಂತೆ ಶಾಂತಿ ಸಾಗರ, ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
    ಭದ್ರಾವತಿ, ಸೆ. ೨: ತಾಲೂಕಿನ ಅರಹತೊಳಲು, ಕೈಮರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅಲ್ಲದೆ ಒಂದು ಹಸು ಚಿರತೆಗೆ ಬಲಿಯಾಗಿದೆ. ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ತಕ್ಷಣ ಚಿರತೆಯನ್ನು ಸೆರೆ ಹಿಡಿದು ರೈತರ ಆತಂಕ ದೂರ ಮಾಡುವಂತೆ ಶಾಂತಿ ಸಾಗರ, ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
    ಚಿರತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಈ ನಡುವೆ ಬೊಮ್ಮನಕಟ್ಟೆ ಗ್ರಾಮದ ಮಂಜಪ್ಪ ಎಂಬ ರೈತನಿಗೆ ಸೇರಿದ ಹಸು ಚಿರತೆಗೆ ಬಲಿಯಾಗಿದ್ದು, ಇದರಿಂದಾಗಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಗ್ರಾಮಸ್ಥರು ಮನೆಗಳಿಂದ ಹೊರಬರುತ್ತಿಲ್ಲ. ರೈತರು ಹೊಲ-ಗದ್ದೆ, ತೋಟಗಳಿಗೆ ಹೋಗಲು ಭಯಭೀತರಾಗಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಚಿರತೆಯನ್ನು ಸೆರೆ ಹಿಡಿದು ಆತಂಕ ದೂರ ಮಾಡುವಂತೆ ಹಾಗು ಹಸು ಕಳೆದುಕೊಂಡಿರುವ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಕೋರಲಾಗಿದೆ.
    ರೈತ ಸಂಘದ ತಾಲೂಕು ಅಧ್ಯಕ್ಷ ಹಿರಿಯಣ್ಣಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್, ಶರಶ್ಚಂದ್ರ, ಮಂಜುನಾಥ್, ತಿಮ್ಮಣ್ಣ, ಗೋವಿಂದಪ್ಪ, ಗಂಗಮ್ಮ, ಕರಿಬಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕ್ಷೇತ್ರದಲ್ಲಿ ನಿರುದ್ಯೋಗ : ಕುಟುಂಬದ ಎಲ್ಲಾ ಜವಾಬ್ದಾರಿ ಮಹಿಳೆಯರ ಮೇಲಿದೆ

ಅಪ್ಪಾಜಿ ೨ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಶಾರದ ಅಪ್ಪಾಜಿ

 ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ತಾಲೂಕು ಸವಿತಾ ಸಮಾಜ ಹಾಗು ದಯಾಸಾಗರ್ ಟ್ರಸ್ಟ್  ವತಿಯಿಂದ ಶುಕ್ರವಾರ ಭದ್ರಾವತಿ  ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯಲ್ಲಿರುವ ದಯಾಸಾಗರ್ ಟ್ರಸ್ಟ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿರಾಶ್ರಿತರು ಹಾಗು ವಿಕಲಚೇತನರಿಗೆ ಉಚಿತ ಕೇಶವಿನ್ಯಾಸ(ಕಟಿಂಗ್ ಮತ್ತು ಶೇವಿಂಗ್) ಕಾರ್ಯಕ್ರಮ ನಡೆಯಿತು.
    ಭದ್ರಾವತಿ, ಸೆ. ೨ : ಪ್ರಸ್ತುತ ಕ್ಷೇತ್ರದಲ್ಲಿ ಪುರುಷರು ನಿರುದ್ಯೋಗಿಗಳಾಗುತ್ತಿದ್ದು, ಮಹಿಳೆಯರೇ ಕುಟುಂಬದ ಎಲ್ಲಾ ಜವಾಬ್ದಾರಿ ನಿಭಾಯಿಸುವಂತಾಗಿದೆ. ಪರಿಸ್ಥಿತಿ ಇದೆ ರೀತಿ ಮುಂದುವರೆದ್ದಲ್ಲಿ ಭವಿಷ್ಯದಲ್ಲಿ ಸಂಕಷ್ಟ ಎದುರಾಗಲಿದೆ ಎಂದು ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಹೇಳಿದರು.
    ಅವರು ಶುಕ್ರವಾರ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ತಾಲೂಕು ಸವಿತಾ ಸಮಾಜ ಹಾಗು ದಯಾಸಾಗರ್ ಟ್ರಸ್ಟ್  ವತಿಯಿಂದ ನಗರದ ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯಲ್ಲಿರುವ ದಯಾಸಾಗರ್ ಟ್ರಸ್ಟ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿರಾಶ್ರಿತರು ಹಾಗು ವಿಕಲಚೇತನರಿಗೆ ಉಚಿತ ಕೇಶವಿನ್ಯಾಸ(ಕಟಿಂಗ್ ಮತ್ತು ಶೇವಿಂಗ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


    ಇಂದು ಮಹಿಳೆಯರು ಮನೆಯ ಒಳಗೆ ಹಾಗು ಹೊರಗೆ ಎಲ್ಲಾ ಕೆಲಸಗಳನ್ನು ಮಾಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಸರ್ಕಾರ ಒಂದೆಡೆ ಉಚಿತ ಅಕ್ಕಿ ನೀಡುತ್ತಿದ್ದು, ಮತ್ತೊಂದೆಡೆ ಮಹಿಳೆಯರು ಸ್ವಸಹಾಯ ಸಂಘ-ಸಂಸ್ಥೆಗಳಲ್ಲಿ ದುಡಿದು ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಈ ನಡುವೆ ಪುರುಷರು ಯಾವುದೇ ಕೂಲಿ ಕೆಲಸಕ್ಕೂ ಸಹ ಹೋಗದೆ ಮನೆಯಲ್ಲಿಯೇ ಇದ್ದು ಸೋಮಾರಿಗಳಾಗುತ್ತಿದ್ದಾರೆ. ಇದು ಪ್ರಸ್ತುತ ಕ್ಷೇತ್ರದಲ್ಲಿನ ಪರಿಸ್ಥಿತಿಯಾಗಿದ್ದು, ಭವಿಷ್ಯದಲ್ಲಿ ಸಂಕಷ್ಟ ಎದುರಾಗುವ ಆತಂಕ ಕಂಡು ಬರುತ್ತಿದೆ. ಪುರುಷ ಮತ್ತು ಮಹಿಳೆ ಇಬ್ಬರು ಸಹ ದುಡಿಯಬೇಕು. ಆಗ ಮಾತ್ರ ಸಮಸ್ಯೆಗಳಿಂದ ಹೊರಬರಲು ಸಾಧ್ಯ. ಇದಕ್ಕೆ ಪರಿಹಾರ ಕ್ಷೇತ್ರದ ಎರಡು ಕಣ್ಣುಗಳಾಗಿರುವ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅಭಿವೃದ್ಧಿಯಾಗಬೇಕು. ಎಂ.ಜೆ ಅಪ್ಪಾಜಿ ಅವರು ಈ ಎರಡು ಕಾರ್ಖಾನೆಗಳ ಮೇಲೆ ಹೊಂದಿದ್ದ ಇಚ್ಛಾ ಶಕ್ತಿಯನ್ನು ಬೇರೆ ಯಾವ ರಾಜಕಾರಣಿ ಸಹ ಹೊಂದಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.


ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ತಾಲೂಕು ಸವಿತಾ ಸಮಾಜ ಹಾಗು ದಯಾಸಾಗರ್ ಟ್ರಸ್ಟ್  ವತಿಯಿಂದ ಶುಕ್ರವಾರ ಭದ್ರಾವತಿ  ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯಲ್ಲಿರುವ ದಯಾಸಾಗರ್ ಟ್ರಸ್ಟ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿರಾಶ್ರಿತರು ಹಾಗು ವಿಕಲಚೇತನರಿಗೆ ಉಚಿತ ಕೇಶವಿನ್ಯಾಸ(ಕಟಿಂಗ್ ಮತ್ತು ಶೇವಿಂಗ್) ಕಾರ್ಯಕ್ರಮವನ್ನು ಶಾರದ ಅಪ್ಪಾಜಿ ಉದ್ಘಾಟಿಸಿದರು.
    ಕುಟುಂಬದಲ್ಲಿ ಪುರುಷರಿಗೆ ಮಹಿಳೆಯರು ಹೆಚ್ಚಿನ ಸಹಕಾರ ನೀಡಬೇಕು. ಪುರುಷರು ಮಾಡುವ ಯಾವುದೇ ಕೆಲಸವಿರಲಿ ಅದನ್ನು ಬೆಂಬಲಿಸಿ ಪ್ರೋತ್ಸಾಹಿಸಿದಾಗ ಮಾತ್ರ ಅವರು ಸಹ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಅಪ್ಪಾಜಿ ಅವರು ಸಾಮಾನ್ಯ ಕಾರ್ಮಿಕನಾಗಿದ್ದು, ಅವರು ರಾಜಕೀಯದಲ್ಲಿ ಹೆಚ್ಚಿನ ಅಸಕ್ತಿ ತೋರಿಸಿದರು. ಅವರು ಕೈಗೊಳ್ಳುತ್ತಿದ್ದ ಯಾವುದೇ ಕೆಲಸಕ್ಕೂ ಕುಟುಂಬದಲ್ಲಿ ವಿರೋಧ ವ್ಯಕ್ತಪಡಿಸಲಿಲ್ಲ. ಅದರಲ್ಲೂ ಕ್ಷೇತ್ರದ ಜನರು ಈ ನಿಟ್ಟಿನಲ್ಲಿ ಅವರಿಗೆ ಹೆಚ್ಚಿನ ಸಹಕಾರ ನೀಡಿದರು. ಇದರಿಂದಾಗಿ ಅವರು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಸ್ಮರಿಸಿದರು.



    ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿ, ಅಪ್ಪಾಜಿ ಕ್ಷೇತ್ರದಲ್ಲಿ ಬಡ ಜನರ ಧ್ವನಿಯಾಗಿದ್ದರು. ಅವರ ರಾಜಕೀಯ ಬದುಕು ವಿಶಿಷ್ಟವಾಗಿದೆ. ಕ್ಷೇತ್ರದ ಅಭಿವೃದ್ದಿ ವಿಚಾರಗಳಲ್ಲಿ ಅವರು ಎಂದಿಗೂ ನಿರ್ಲಕ್ಷ್ಯತನ ತೋರಿಸಲಿಲ್ಲ. ಸದಾ ಕಾಲ ಜನರ ಮಧ್ಯೆ ಇದ್ದವರು ಎಂದು ಬಣ್ಣಿಸಿದರು.
    ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಸವಿತಾ ಸಮಾಜದ ಪ್ರಮುಖರಾದ ಬಿ.ಎನ್ ಮಹೇಶ್‌ಕುಮಾರ್, ನರಸಿಂಹಮೂರ್ತಿ, ಗೋಪಿ, ಮಹಿಳಾ ಘಟಕದ ಅಧ್ಯಕ್ಷೆ ರುಕ್ಮಿಣಿಯಮ್ಮ, ನಾಗವೇಣಿ, ಧರ್ಮರಾಜ್, ರಮೇಶ್, ಶಂಕರ್, ದಯಾಸಾಗರ್ ಟ್ರಸ್ಟ್‌ನ ಆರ್. ಮೋಸಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವರದರಾಜ್ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಹಿರಿಯ ಸದಸ್ಯರಾದ ಶ್ರೀನಿವಾಸ್, ಗಾಡಿ ಶ್ರೀನಿವಾಸ್ ಮತ್ತು ಬಸ್‌ಸ್ಟಾಂಡ್ ಮಹೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ತಾಲೂಕುಮಟ್ಟದ ಯುವಸಂಸತ್ ರಚನಾ ಸಭೆ

ಭದ್ರಾವತಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗು ಪದನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕುಮಟ್ಟದ ಯುವಸಂಸತ್ ರಚನಾ ಸಭೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉದ್ಘಾಟಿಸಿದರು.
ಭದ್ರಾವತಿ, ಸೆ. ೨: ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗು ಪದನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕುಮಟ್ಟದ ಯುವಸಂಸತ್ ರಚನಾ ಸಭೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉದ್ಘಾಟಿಸಿದರು.
ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಯುವಸಂಸತ್ ರಚನೆ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಮಾಜ ವಿಜ್ಞಾನ ಕ್ಲಬ್ ಅಧ್ಯಕ್ಷ ಸಿ.ಡಿ ಮಂಜುನಾಥ್, ಶಿಕ್ಷಣ ಸಂಯೋಜಕ ರವಿಕುಮಾರ್, ಬಿಆರ್‌ಪಿ ಬಿ.ಆರ್ ಪ್ರಭಾಕರ್, ಹಿರಿಯ ಶಿಕ್ಷಕ ಸತ್ಯನಾರಾಯಣ ಭಟ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜಿ. ಪ್ರಭು, ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
       

Thursday, September 1, 2022

ಜನನಾಯಕ ಅಗಲಿ ೨ ವರ್ಷ : ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮಾಸದ ನೆನಪು


ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ

    ಅನಂತಕುಮಾರ್
    ಭದ್ರಾವತಿ: ಕ್ಷೇತ್ರದ ೩ ದಶಕಗಳ ರಾಜಕೀಯ ಕೊಂಡಿಯೊಂದು ಕಳಚಿ ಹೋಗಿ ಇದೀಗ ಎರಡು ವರ್ಷ ಕಳೆದಿದ್ದು, ಆದರೂ ಸಹ ಜನಮಾನಸದಲ್ಲಿ ಮಾಜಿ ಶಾಸಕ ಎಂ.ಜಿ ಅಪ್ಪಾಜಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ.  ಸೆ.೨, ೨೦೨೦ರಂದು ನಡುರಾತ್ರಿ ಅಪ್ಪಾಜಿ ಇಹಲೋಕ ತ್ಯಜಿಸುತ್ತಾರೆಂಬ ಕನಸು ಸಹ ಯಾರಿಗೂ ಇರಲಿಲ್ಲ. ಅವರ ನಿಧನದ ಸುದ್ದಿ ಕ್ಷೇತ್ರದ ಜನತೆಯನ್ನು ಒಮ್ಮೆ ತಲ್ಲಣಗೊಳಿಸಿತ್ತು.
    ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಾಗಿ ೨೦ ರು. ಸಂಬಳಕ್ಕೆ ದುಡಿಯುತ್ತಿದ್ದ ಅಪ್ಪಾಜಿ ಆರಂಭದಲ್ಲಿ ಕಾರ್ಮಿಕ ಹೋರಾಟಗಾರನಾಗಿ ಗುರುತಿಸಿ ಕೊಂಡಿದ್ದರು. ತಿಂಗಳ ಸಂಬಳದಲ್ಲಿ ಜೀವನ ನಡೆಸುವುದೇ ಕಷ್ಟವಿರುವ ಸಂದರ್ಭದಲ್ಲಿ ಜನರು ನೀಡಿದ ದೇಣಿಗೆ ಹಣದಿಂದಲೇ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ಅಸ್ತಿತ್ವ ಕಂಡು ಕೊಂಡರು. ನಂತರ ಅವರು ೩ ಬಾರಿ ಶಾಸಕರಾದರೂ ಸಾಮಾನ್ಯರಂತೆ ಬದುಕಿ ಕ್ಷೇತ್ರದ ಜನರೊಂದಿಗೆ ಗುರುತಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಅವರು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.
    ಅಧಿಕಾರ ಇರಲಿ, ಇಲ್ಲದಿರಲಿ ಕ್ಷೇತ್ರದಲ್ಲಿ ಅಪ್ಪಾಜಿ ತಮ್ಮದೇ ಆದ ವರ್ಚಸ್ಸು, ಮತ ಬ್ಯಾಂಕ್ ಹೊಂದಿದ್ದರು. ಈ ನಡುವೆ ಸ್ಥಳೀಯ ಸಂಸ್ಥೆಗಳ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಹಲವು ಮುಖಂಡರು ರಾಜಕೀಯವಾಗಿ ಮುಂಚೂಣಿಗೆ ಬರಲು ಕಾರಣಕರ್ತರಾಗಿದ್ದರು. ಇದೀಗ ಅಪ್ಪಾಜಿ ಇಲ್ಲದೆ ೨ ವರ್ಷ ಕಳೆದಿದ್ದು, ಈ ನಡುವೆ ಎದುರಾದ ಗ್ರಾಮ ಪಂಚಾಯಿತಿ, ನಗರಸಭೆ ಚುನಾವಣೆಗಳಲ್ಲಿ ಅಪ್ಪಾಜಿ ಹಿಂಬಾಲಕರು ಸ್ವಲ್ಪ ಮಟ್ಟಿಗೆ ಹಿನ್ನಡೆ ಎದುರಿಸಿದ್ದಾರೆ. ಒಂದು ಹಂತದಲ್ಲಿ ಹಿನ್ನಡೆಯಾಗಿರಬಹುದು. ಆದರೆ ಭವಿಷ್ಯದಲ್ಲಿ ಪೂರ್ಣ ಗುರಿ ಸಾಧಿಸುವ ವಿಶ್ವಾಸ ಹೆಚ್ಚಿಸಿಕೊಂಡಿರುವುದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ.
    ಅಪ್ಪಾಜಿ ಕುಟುಂಬ ಸಹ ಅಗಲಿಕೆ ನೋವಿನಿಂದ ಹಂತ ಹಂತವಾಗಿ ಹೊರಬಂದಿದ್ದು, ಅಪ್ಪಾಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಭವಿಷ್ಯದಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸುತ್ತಿದೆ. ಪ್ರಸ್ತುತ ಅಪ್ಪಾಜಿ ಹಿಂಬಾಲಕರು ಶಾರದ ಅಪ್ಪಾಜಿ ಮಾರ್ಗದರ್ಶನದಲ್ಲಿಯೇ ಮುನ್ನಡೆಯುತ್ತಿದ್ದು, ಈಗಾಗಲೇ ಅಪ್ಪಾಜಿ ಅವರು ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಶಾರದ ಅಪ್ಪಾಜಿ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಈ ಹಿನ್ನಲೆಯಲ್ಲಿ ಅಭ್ಯರ್ಥಿ ಕುರಿತು ಯಾವುದೇ ಗೊಂದಲ ಇಲ್ಲವಾಗಿದೆ.
    ಪಕ್ಷದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಶಾರದ ಅಪ್ಪಾಜಿ ಇದೀಗ ತಮ್ಮದೇ ಪಡೆಯನ್ನು ಸಮರ್ಥವಾಗಿ ಕಟ್ಟಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಹೊಸ ಪದಾಧಿಕಾರಿಗಳನ್ನು ನೇಮಕಗೊಳಿಸಿದ್ದಾರೆ. ಯಾವುದೇ ಕಾರಣಕ್ಕೂ ಅಪ್ಪಾಜಿ ಅವರ ವರ್ಚಸ್ಸಿನ ಮತಗಳು ಛಿದ್ರವಾಗದಂತೆ ಹಾಗು ಹೊಸ ಮತದಾರರನ್ನು ಸೆಳೆಯಲು ನಾನಾ ರೀತಿಯ ತಂತ್ರಗಾರಿಕೆಗಳಿಗೆ ಮೊರೆ ಹೋಗಿದ್ದಾರೆ. ಈ ನಡುವೆ ಎದುರಾಗಿರುವ ಅಪ್ಪಾಜಿಯವರ ಎರಡನೇ ವರ್ಷದ ನೆನಪು ಇವರಲ್ಲಿ ಮತ್ತಷ್ಟು ಚೈತನ್ಯವನ್ನುಂಟು ಮಾಡಲಿದೆ ಎನ್ನುವ ವಿಶ್ವಾಸ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹೊಂದಿದ್ದಾರೆ.
    ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ವಿವಿಧೆಡೆ ಕಾರ್ಯಕ್ರಮ:
    ಉಚಿತ ಕೇಶವಿನ್ಯಾಸ :
ತಾಲೂಕು ಸವಿತಾ ಸಮಾಜ ಹಾಗು ದಯಾಸಾಗರ್ ಟ್ರಸ್ಟ್  ವತಿಯಿಂದ ಸೆ.೨ರಂದು ಬೆಳಿಗ್ಗೆ ೧೦.೩೦ಕ್ಕೆ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯಲ್ಲಿರುವ ದಯಾಸಾಗರ್ ಟ್ರಸ್ಟ್ ಆವರಣದಲ್ಲಿ ನಿರಾಶ್ರಿತರು ಹಾಗು ವಿಕಲಚೇತನರಿಗೆ ಉಚಿತ ಕೇಶವಿನ್ಯಾಸ(ಕಟಿಂಗ್ ಮತ್ತು ಶೇವಿಂಗ್) ಹಮ್ಮಿಕೊಳ್ಳಲಾಗಿದೆ. ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
    ಪುಣ್ಯಸ್ಮರಣೆ :
    ಕಾಗದನಗರದ ವಾರ್ಡ್ ನಂ.೧ರ ಉದ್ಯಾನವನದಲ್ಲಿ ಸಂಜೆ ೭.೩೦ಕ್ಕೆ ಅಪ್ಪಾಜಿ ಅವರ ೨ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಶ್ರೀ ವಿನಾಯಕ ಗೆಳೆಯರ ಬಳಗ ಹಾಗು ಶಾರದ ಅಪ್ಪಾಜಿ ಅಭಿಮಾನಿಗಳ ಬಳಗ ಮತ್ತು ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರಸಭೆ ವಾರ್ಡ್ ನಂ.೧೯ರ ಸದಸ್ಯ ಬಸವರಾಜ ಬಿ. ಆನೇಕೊಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಗೌರಿ-ಗಣೇಶ ಹಬ್ಬ ಶಾಂತಿಯುತವಾಗಿ ವಿಜೃಂಭಣೆಯಿಂದ ಆಚರಣೆ

ಭದ್ರಾವತಿ ಹೊಸಮನೆ ವ್ಯಾಪ್ತಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಯಶಸ್ವಿಯಾಗಿ ನಡೆಯಿತು.
    ಭದ್ರಾವತಿ, ಸೆ. ೧ : ತಾಲೂಕಿನಾದ್ಯಂತ ಗೌರಿ-ಗಣೇಶ ಹಬ್ಬ ಶಾಂತಿಯುತವಾಗಿ ವಿಜೃಂಭಣೆಯಿಂದ ಜರುಗಿತು. ನಗರ ವ್ಯಾಪ್ತಿಯ ಪ್ರಮುಖ ಸಂಘಟನೆಗಳು ಬುಧವಾರ ಸಂಜೆ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದವು.
    ಹೊಸಮನೆ ವ್ಯಾಪ್ತಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ, ಶಿವಾಜಿ ವೃತ್ತದಲ್ಲಿರುವ ಓಂ ಹಿಂದೂ ಕೋಟೆ, ಮಾಧವಚಾರ್ ವೃತ್ತದಲ್ಲಿ ಶ್ರೀ ವರಸಿದ್ದಿ ವಿನಾಯಕ ಭಕ್ತ ಮಂಡಳಿ, ಹಾಲಪ್ಪ ವೃತ್ತದಲ್ಲಿ ಗಣಪತಿ ದೇವಸ್ಥಾನ, ಜನ್ನಾಪುರ ವ್ಯಾಪ್ತಿಯಲ್ಲಿ ಶ್ರೀರಾಮರಾಜ್ಯ ನ್ಯೂಟೌನ್ ವಿಐಎಸ್‌ಎಲ್  ಆಸ್ಪತ್ರೆ ಬಳಿ ಶ್ರೀ ಕರುಮಾರಿಯಮ್ಮ ದೇವಸ್ಥಾನದ ಪಕ್ಕ ಶ್ರೀ ಸಿದ್ದಿ ವಿನಾಯಕ ಗೆಳೆಯರ ಬಳಗ ಸೇರಿದಂತೆ ವಿವಿಧ ಸಂಘಟನೆಗಳು ಸಂಜೆ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದವು.
     ತಾಲೂಕು ಕಛೇರಿ ರಸ್ತೆ ಕಂಚಿಬಾಗಿಲು ವೃತ್ತ ದುರ್ಗಾಂಬ ದೇವಸ್ಥಾನದ ಬಳಿ ಅಂಬೇಡ್ಕರ್ ಗೆಳೆಯರ ಬಳಗ, ಹೊಸಮನೆ ಮುಖ್ಯ ರಸ್ತೆ ಭೋವಿ ಕಾಲೋನಿ ಶ್ರೀ ವಿನಾಯಕ ಸೇವಾ ಸಮಿತಿ, ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾದಲ್ಲಿ  ಡಾ. ರಾಜ್‌ಕುಮಾರ್ ಅಭಿಮಾನಿಗಳು ಹಾಗು ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಖಾಸಗಿ ಬಸ್ ನಿಲ್ದಾಣದ ಬಳಿ ಕುವೆಂಪು ಪ್ರವಾಸಿ ವಾಹನ ಚಾಲಕರ ಹಾಗು ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಮಧ್ಯಾಹ್ನದ ವೇಳೆಗೆ ವಿನಾಯಕ ಪ್ರತಿಷ್ಠಾಪನೆ ನೆರವೇರಿಸಿದವು.


ಭದ್ರಾವತಿ ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾದಲ್ಲಿ ಡಾ. ರಾಜ್‌ಕುಮಾರ್ ಅಭಿಮಾನಿಗಳು ಹಾಗು ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಿರುವುದು. ವಾರ್ಡ್ ನಗರಸಭಾ ಸದಸ್ಯ ಜಾರ್ಜ್ ಹಾಗು ಸಂಘದ ಪ್ರಮುಖರು ಉಪಸ್ಥಿತರಿದ್ದರು.
    ಹಳೇನಗರದ ಕುಂಬಾರರ ಬೀದಿಯಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ವಿನಾಯಕ ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಕೊಂಡೊಯ್ಯಲು ಯುವಕರ ದಂಡು ಕಂಡು ಬಂದಿದ್ದು, ಇದೆ ರೀತಿ ಬಿ.ಎಚ್ ರಸ್ತೆ ಹಾಲಪ್ಪ ವೃತ್ತ ಬಳಿ ಮಾರುಕಟ್ಟೆಯಲ್ಲಿ ವಿನಾಯಕ ಮೂರ್ತಿಗಳ ಖರೀದಿಗೆ ಯುವಕರ ದಂಡು ಕಂಡು ಬಂದಿತು. ಕೆಲವು ಸಂಘಟನೆಗಳು ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದವು. ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದವರು ಹಾಗು ಸಣ್ಣ ಪುಟ್ಟ ಸಂಘಟನೆಗಳು ಬುಧವಾರ ಸಂಜೆಯೇ ಮೂರ್ತಿ ವಿಸರ್ಜನೆ ನಡೆಸಿದವು.
ಈ ಬಾರಿ ಬಹುತೇಕ ಕಡೆ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ವಿಶೇಷ ಎಂದರೆ ಈ ಬಾರಿ ಯಾವುದೇ ಪಕ್ಷದ, ಜನಪ್ರತಿನಿಧಿಗಳ ಫ್ಲೆಕ್ಸ್, ಬ್ಯಾನರ್‌ಗಳು ಕಂಡು ಬಂದಿಲ್ಲ. ಬದಲಿಗೆ ದೇಶ ಭಕ್ತರು, ಸ್ವಾತಂತ್ರ್ಯ ಹೋರಾಟಗಾರರು, ವೀರಾಸೇನಾನಿಗಳ ಭಾವಚಿತ್ರಗಳು ರಾರಾಜಿಸುತ್ತಿವೆ. ಅದರಲ್ಲೂ ವಿಶೇಷವಾಗಿ ಚಲನಚಿತ್ರ ನಟ, ಕರ್ನಾಟಕ ರತ್ನ ದಿವಂಗತ ಪುನೀತ್‌ರಾಜ್‌ಕುಮಾರ್ ಅವರ ಬೃಹತ್ ಫ್ಲೆಕ್ಸ್‌ಗಳು ಬಹುತೇಕ ಕಂಡು ಬರುತ್ತಿವೆ.    


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್  ಆಸ್ಪತ್ರೆ ಬಳಿ ಶ್ರೀ ಕರುಮಾರಿಯಮ್ಮ ದೇವಸ್ಥಾನದ ಪಕ್ಕ ಶ್ರೀ ಸಿದ್ದಿ ವಿನಾಯಕ ಗೆಳೆಯರ ಬಳಗದ ವತಿಯಿಂದ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಿರುವುದು.