![](https://blogger.googleusercontent.com/img/a/AVvXsEjc6993fnH0nTveHPDsoH7ofG9AGRUOa-brYPsc4v6QpHrZNkIZjwt0nbzYCm1HyvbhVUL-QrX3tNcA9qi0co7gG6s4z-WP5lXsKNHChAnSRE0D-6v1IAfOBJKon0QuRsgzn_JmehTgCp-UQkOr0n909sab62YPC_lSClf_M2-qn3M0_oI76URMGAVtUA=w400-h210-rw)
ಭದ್ರಾವತಿಯಲ್ಲಿ ಗುರುವಾರ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರ್.ಎಂ ವಿಶ್ವೇಶ್ವರಾಯ ಅವರ ೧೬೨ನೇ ಜನ್ಮ ದಿನಾಚರಣೆ ಹಾಗು ಸರ್ವ ಸದಸ್ಯರ ಸಭೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಸೆ. ೧೫: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನಿವೃತ್ತ ಕಾರ್ಮಿಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಲಾಗುತ್ತಿದ್ದು, ಖಾಲಿ ಉಳಿದಿರುವ ಸುಮಾರು ೫೦೦ ಕಾರ್ಖಾನೆಯ ವಸತಿ ಗೃಹಗಳನ್ನು ನಿವೃತ್ತ ಕಾರ್ಮಿಕರಿಗೆ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಭರವಸೆ ನೀಡಿದರು.
ಅವರು ಗುರುವಾರ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರ್.ಎಂ ವಿಶ್ವೇಶ್ವರಾಯ ಅವರ ೧೬೨ನೇ ಜನ್ಮ ದಿನಾಚರಣೆ ಹಾಗು ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಈಗಾಗಲೇ ನಿವೃತ್ತ ಕಾರ್ಮಿಕರ ಹಲವಾರು ಬೇಡಿಕೆಗಳನ್ನು ಬಗೆಹರಿಸಿಕೊಡಲಾಗಿದೆ. ಮೆಡಿಕ್ಲೈಮ್ ಸೌಲಭ್ಯದಿಂದ ವಂಚಿತರಾದವರಿಗೆ ಪುನಃ ಮೆಡಿಕ್ಲೈಮ್ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ. ಖಾಲಿ ಉಳಿದಿರುವ ಸುಮಾರು ೫೦೦ ಕಾರ್ಖಾನೆಯ ವಸತಿ ಗೃಹಗಳನ್ನು ಲೀಸ್ ಆಧಾರದಲ್ಲಿ ವಸತಿ ಗೃಹಗಳಿಂದ ವಂಚಿತರಾಗಿರುವ ನಿವೃತ್ತ ಕಾರ್ಮಿಕರಿಗೆ ನೀಡುವ ನಿಟ್ಟಿನಲ್ಲೂ ಸಹ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆ ನಿವೃತ್ತ ಕಾರ್ಮಿಕರು ಯಾವುದೇ ರೀತಿ ಆತಂಕಕ್ಕೆ ಒಳಗಾಗಬಾರದು ಎಂದರು.
ಭದ್ರಾವತಿಯಲ್ಲಿ ಗುರುವಾರ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರ್.ಎಂ ವಿಶ್ವೇಶ್ವರಾಯ ಅವರ ೧೬೨ನೇ ಜನ್ಮ ದಿನಾಚರಣೆ ಹಾಗು ಸರ್ವ ಸದಸ್ಯರ ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ೧ ಲಕ್ಷ ರು. ದೇಣಿಗೆ ನೀಡಿದರು.
ಸರ್.ಎಂ ವಿಶ್ವೇಶ್ವರಾಯ ಅವರು ಜಿಲ್ಲೆಗೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಶರಾವತಿ ವಿದ್ಯುತ್ ಯೋಜನೆ ಮೂಲಕ ರಾಜ್ಯದ ಶೇ.೫೦ರಷ್ಟು ಭಾಗಕ್ಕೆ ವಿದ್ಯುತ್ ಕಲ್ಪಿಸಿಕೊಡಲಾಗಿದೆ. ಭದ್ರಾವತಿ ತಾಲೂಕಿನಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಸ್ಥಾಪಿಸಿ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟ ಮಹಾನ್ ವ್ಯಕ್ತಿ, ಆಧುನಿಕ ಕಾಲದ ಶಿಲ್ಪಿ ಸರ್.ಎಂ ವಿಶ್ವೇಶ್ವರಾಯನವರಾಗಿದ್ದಾರೆ. ಇವರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಜನ್ಮದಿನ ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕ್ಷೇತ್ರದಲ್ಲಿ ಸರ್.ಎಂ ವಿಶ್ವೇಶ್ವರಾಯನವರ ಕೊಡುಗೆ ಅಪಾರವಾಗಿದೆ. ಅವರನ್ನು ಯಾರು ಸಹ ಎಂದಿಗೂ ಮರೆಯಲು ಸಾಧ್ಯವಿಲ್ಲ. ನಿವೃತ್ತ ಕಾರ್ಮಿಕರು ಎಂದಿಗೂ ಆತಂಕಪಡುವ ಅಗತ್ಯವಿಲ್ಲ. ಕಾರ್ಖಾನೆಯ ವಸತಿ ಗೃಹಗಳಿಂದ ಖಾಲಿ ಮಾಡಿಸಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.
ಭದ್ರಾವತಿಯಲ್ಲಿ ಗುರುವಾರ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರ್.ಎಂ ವಿಶ್ವೇಶ್ವರಾಯ ಅವರ ೧೬೨ನೇ ಜನ್ಮ ದಿನಾಚರಣೆ ಹಾಗು ಸರ್ವ ಸದಸ್ಯರ ಸಭೆಯಲ್ಲಿ ಹಿರಿಯ ನಿವೃತ್ತ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರಕ್ಕೆ ೧ ಲಕ್ಷ ರು. ದೇಣಿಗೆ ನೀಡಿದರು. ಹಿರಿಯ ನಿವೃತ್ತ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯತು. ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಪಾಂಶುಪಾಲರಾದ ಡಾ. ಹರಿಣಾಕ್ಷಿ ಉಪನ್ಯಾಸ ನಡೆಸಿಕೊಟ್ಟರು.
ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ, ಹಿರಿಯ ಕಾರ್ಮಿಕ ಮುಖಂಡ ಎಸ್.ಎನ್ ಬಾಲಕೃಷ್ಣ, ಪದಾಧಿಕಾರಿಗಳಾದ ಎಲ್. ಬಸವರಾಜಪ್ಪ, ಶಂಕರ್, ಹಾ. ರಾಮಪ್ಪ, ರವೀಂದ್ರರೆಡ್ಡಿ, ಹನುಮಂತರಾವ್, ಎಸ್.ಎಸ್ ಭೈರಪ್ಪ, ನರಸಿಂಹಚಾರ್, ಅಡವೀಶಯ್ಯ, ಲೆಕ್ಕ ಪರಿಶೋಧಕ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.