![](https://blogger.googleusercontent.com/img/a/AVvXsEg6dfvaVfTMUkKY09_K5B5F8rjgjjXuHLyqpdUhARHa1upQJR1CZjS0UTOTgA2dmn0CZXQSgt8B1xVIKzL3p_95dEUXswrpYvalZPpfmBC4UWRMyg_HbBJDhMdCaFLPWOaXHBcz-rsrOv5e10aLgysKhQ_tRN2r2H0-Fawy2iaO0kPEPqTfQxTJeVlr-A=w400-h196-rw)
ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಹಳೇನಗರದ ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಖಾಜಿ ಮೊಹಲ್ಲಾ ವೃತ್ತದಲ್ಲಿ ಸಂಭ್ರಮದ ಸಿದ್ದತೆ ಕೈಗೊಂಡಿರುವುದು.
ಭದ್ರಾವತಿ, ಅ. ೮: ಈ ಬಾರಿ ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಆಚರಣೆಗೆ ಸರ್ಕಾರ ಯಾವುದೇ ನಿರ್ಬಂಧ ವಿಧಿಸದ ಹಿನ್ನಲೆಯಲ್ಲಿ ತಾಲೂಕಿನಾದ್ಯಂತ ಮುಸ್ಲಿಂ ಸಮುದಾಯದವರು ವಿಜೃಂಭಣೆಯಿಂದ ಆಚರಿಸಲು ಭರದ ಸಿದ್ದತೆ ಕೈಗೊಂಡಿದ್ದಾರೆ.
ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಕಳೆದ ವರ್ಷಗಳಿಂದ ಈದ್ ಮಿಲಾದ್ ಸಂಭ್ರಮದ ಆಚರಣೆಗೆ ಹಲವಾರು ನಿಬಂಧಗಳನ್ನು ವಿಧಿಸಲಾಗಿತ್ತು. ಆದರೆ ಈ ಬಾರಿ ಕೊರೋನಾ ಇಳಿಮುಖವಾಗಿರುವ ಹಿನ್ನಲೆಯಲ್ಲಿ ಯಾವುದೇ ನಿರ್ಬಂಧ ವಿಧಿಸಿಲ್ಲ. ಈ ಹಿನ್ನಲೆಯಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಕಳೆದ ೩-೪ ದಿನಗಳಿಂದ ಹಬ್ಬದ ಸಂಭ್ರಮದ ಆಚರಣೆಗೆ ಭರದ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.
ನಗರಸಭೆ ವ್ಯಾಪ್ತಿಯ ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಬೊಮ್ಮನಕಟ್ಟೆ, ಕೂಲಿಬ್ಲಾಕ್ ಶೆಡ್, ಹಳೇನಗರದ ಖಾಜಿ ಮೊಹಲ್ಲಾ, ತರೀಕೆರೆ ರಸ್ತೆಯ ಯಕಿನ್ಸಾ ಕಾಲೋನಿ, ನೆಹರು ನಗರ, ಅನ್ವರ್ ಕಾಲೋನಿ, ಸಾದತ್ ಕಾಲೋನಿ, ಅಮೀರ್‌ಜಾನ್ ಕಾಲೋನಿ, ಸೀಗೇಬಾಗಿ ಹಾಗು ಗ್ರಾಮಾಂತರ ವ್ಯಾಪ್ತಿಯ ಬಾಬಳ್ಳಿ, ಕಾಗೇಕೋಡಮಗ್ಗೆ, ದೊಣಬಘಟ್ಟ, ತಡಸ ಸೇರಿದಂತೆ ಇನ್ನಿತರೆಡೆ ಹಬ್ಬದ ಸಂಭ್ರಮಕ್ಕೆ ಭರದ ಸಿದ್ದತೆ ಕೈಗೊಳ್ಳಲಾಗಿದೆ.
ಪ್ರಮುಖ ರಸ್ತೆಗಳು, ವೃತ್ತಗಳು ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ಗಳಿಂದ ಕಂಗೊಳಿಸುತ್ತಿವೆ. ವಿಶೇಷ ಎಂದರೆ ಟಿಪ್ಪು ಸುಲ್ತಾನ್ ಭಾವಚಿತ್ರ ಎಲ್ಲೆಡೆ ರಾರಜಿಸುತ್ತಿವೆ. ಈ ನಡುವೆ ಪೊಲೀಸರು ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.
ಬೃಹತ್ ಮೆರವಣಿಗೆ :
ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಅ.೯ರ ಭಾನುವಾರ ಬೆಳಿಗ್ಗೆ ನಗರದ ಅನ್ವರ್ ಕಾಲೋನಿ ವೃತ್ತದಿಂದ ಬೃಹತ್ ಮೆರವಣಿಗೆ ನಡೆಸಲಿದ್ದು, ಮೆರವಣಿಗೆ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮೂಲಕ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದವರೆಗೂ ಸಾಗಿ ನಂತರ ಸೈಯದ್ ಸಾದತ್ ದರ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಂತ್ಯಗೊಳ್ಳಲಿದೆ.
ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಹಳೇನಗರದ ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಖಾಜಿ ಮೊಹಲ್ಲಾದ ರಸ್ತೆಯೊಂದು ಕಂಗೊಳಿಸುತ್ತಿರುವುದು.