Tuesday, February 7, 2023

ಚಲನಚಿತ್ರವಾಗುತ್ತಿದೆ ಡಾ. ದೊಡ್ಡರಂಗೇಗೌಡರ “ಪ್ರೀತಿ ಪ್ರಗಾಥ” ಕಾವ್ಯ

ಭದ್ರಾವತಿ ರಾಮಚಾರಿ ಚಿತ್ರ ಕಥೆ, ಸಂಭಾಷಣೆ : ಮೇ ತಿಂಗಳಿನಲ್ಲಿ ಚಿತ್ರೀಕರಣ

ಕನ್ನಡ ಸಾರಸ್ವತ ಲೋಕದ ಕವಿ ಡಾ. ದೊಡ್ಡರಂಗೇಗೌಡರ "ಪ್ರೀತಿ ಪ್ರಗಾಥ" ಕಾವ್ಯ ಚಲನಚಿತ್ರವಾಗುತ್ತಿದ್ದು, ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್  ಈ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
    ಭದ್ರಾವತಿ, ಫೆ. ೭: ಕನ್ನಡ ಸಾರಸ್ವತ ಲೋಕದ ಕವಿ ಡಾ. ದೊಡ್ಡರಂಗೇಗೌಡರ "ಪ್ರೀತಿ ಪ್ರಗಾಥ" ಕಾವ್ಯ ಚಲನಚಿತ್ರವಾಗುತ್ತಿದ್ದು, ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ
       ಸಹ ನಿರ್ದೇಶಕ ನವಿಲು ಗರಿ ನವೀನ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಹಿತಿ ಡಾ. ಭದ್ರಾವತಿ ರಾಮಾಚಾರಿ ಚಿತ್ರ ಕಥೆ, ಸಂಭಾಷಣೆ ನಿರ್ವಹಿಸಲಿದ್ದಾರೆ. ಈ ಚಿತ್ರಕ್ಕೆ ಇಂದೂ ವಿಶ್ವನಾಥ್ ಅವರ ಸಂಗೀತ ಸಂಯೋಜನೆ ಡಾ .ದೊಡ್ಡರಂಗೇಗೌಡರೇ ಗೀತೆಗಳನ್ನು ರಚಿಸಿದ್ದಾರೆ.
      ವಿಭಿನ್ನ ಪ್ರೇಮ ಕಥಾ ಹಂದರವುಳ್ಳ ಈ ಚಿತ್ರದ ನಾಯಕನ ಪಾತ್ರದಲ್ಲಿ ಅನಿಕ್ ಎಂಬ ಹೊಸ ಪ್ರತಿಭೆಯನ್ನು ಪರಿಚಯಿಸಲಾಗುತ್ತಿದ್ದು, ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್  ಈ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
       ಪ್ರದೀಪ್, ಹರ್ಷ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುವ ಸಿದ್ದತೆಯಲ್ಲಿದ್ದು, ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

Monday, February 6, 2023

ಸಿಂಗನಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಿರಿಯ ಸದಸ್ಯೆ ಪುಟ್ಟಮ್ಮ ಆಯ್ಕೆ

ಭದ್ರಾವತಿ ತಾಲೂಕಿನ ಸಿಂಗನಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಿರಿಯ ಸದಸ್ಯೆ ಪುಟ್ಟಮ್ಮ ಆಯ್ಕೆಯಾಗಿದ್ದಾರೆ.
   ಭದ್ರಾವತಿ, ಫೆ. ೬ : ತಾಲೂಕಿನ ಸಿಂಗನಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಿರಿಯ ಸದಸ್ಯೆ ಪುಟ್ಟಮ್ಮ ಆಯ್ಕೆಯಾಗಿದ್ದಾರೆ.
   ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ಪುಟ್ಟಮ್ಮ ೬ ಮತಗಳನ್ನು ಹಾಗು ಇವರ ಪ್ರತಿಸ್ಪರ್ಧಿ ಷಣ್ಮುಗಪ್ಪ ೫ ಮತಗಳನ್ನು ಪಡೆದುಕೊಂಡಿದ್ದು, ೧ ಮತದ ಅಂತರದಿಂದ ಪುಟ್ಟಮ್ಮ ಆಯ್ಕೆಯಾಗಿದ್ದಾರೆ. ಪುಟ್ಟಮ್ಮ ಸಹಕಾರ ಸಂಘಕ್ಕೆ ಸತತವಾಗಿ ೩ ಬಾರಿ ಆಯ್ಕೆಯಾಗಿದ್ದಾರೆ. ಇವರನ್ನು ಪ್ರಮುಖರಾದ ಟಿ.ಡಿ ಶಶಿಕುಮಾರ್, ತ್ಯಾಗರಾಜ್, ಸಿಂಗಮನೆ ಗ್ರಾಮ ಪಂಚಾಯಿತಿ ಹಾಗು ಗ್ರಾಮಸ್ಥರು ಅಭಿನಂದಿಸಿದ್ದಾರೆ.

೧೯ದಿನ ಪೂರೈಸಿದ ವಿಐಎಸ್‌ಎಲ್ ಕಾರ್ಮಿಕರ ಹೋರಾಟ : ಸೂತಕದ ಛಾಯೆ

ಓರ್ವ ಗುತ್ತಿಗೆ ಕಾರ್ಮಿಕ ನೇಣುಬಿಗಿದುಕೊಂಡು ಆತ್ಮಹತ್ಯೆ, ಬೃಹತ್ ಸಹಿ ಸಂಗ್ರಹದೊಂದಿಗೆ ಪ್ರಧಾನಿಗೆ ಮನವಿ ಪತ್ರ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಚೇತನ್‌ಕುಮಾರ್

    ಭದ್ರಾವತಿ, ಫೆ. ೬: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಸೋಮವಾರ ೧೯ನೇ ದಿನ ಪೂರೈಸಿದ್ದು, ಈ ನಡುವೆ ಕಾರ್ಮಿಕ ವಲಯದಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ.
    ಇದುವರೆಗೂ ೩ ಜನ ಗುತ್ತಿಗೆ ಕಾರ್ಮಿಕರು ಅಕಾಲಿಕವಾಗಿ ನಿಧನ ಹೊಂದಿದ್ದು, ಈ ಪೈಕಿ ಈ ಹಿಂದೆ ಇಬ್ಬರು ಕಾರ್ಮಿಕರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಒಬ್ಬರು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.
    ತಂಗಿಯ ಮದುವೆ ದಿನ ಗುತ್ತಿಗೆ ಕಾರ್ಮಿಕ ಆತ್ಮಹತ್ಯೆ :
    ವಿಐಎಸ್‌ಎಲ್ ಕಾರ್ಖಾನೆಯ ಆರ್‌ಟಿಎಸ್ ವಿಭಾಗದಲ್ಲಿ ಕಳೆದ ಸುಮಾರು ೧೦ ವರ್ಷಗಳಿಂದ ಗುತ್ತಿಗೆ ಕಾರ್ಮಿಕನಾಗಿ ದುಡಿಯುತ್ತಿರುವ ತಾಲೂಕಿನ ಕೊಮಾರನಹಳ್ಳಿ ನಿವಾಸಿ ಚೇತನ್‌ಕುಮಾರ್(೩೨) ಆತ್ಯಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಇದರಿಂದಾಗಿ ಕಾರ್ಮಿಕ ವಲಯದಲ್ಲಿ ಸೂತಕದ ಛಾಯೆ ಕಂಡು ಬಂದಿತು.
    ನಗರದ ಕೋಡಿಹಳ್ಳಿ ರಸ್ತೆಯಲ್ಲಿರುವ ದೈವಜ್ಞ ಕಲ್ಯಾಣ ಮಂಟಪದಲ್ಲಿ ತಂಗಿ ಮದುವೆ ಕಾರ್ಯ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕಲ್ಯಾಣ ಮಂಟಪದ ಹಿಂಭಾಗ ಚೇತನ್‌ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಈ ನಡುವೆ ಆತ್ಮಹತ್ಯೆ ಕುರಿತು ಎಲ್ಲೆಡೆ ಗಾಳಿಸುದ್ದಿ ವ್ಯಾಪಕವಾಗಿ ಹರಡುತ್ತಿದ್ದು, ಕಾರ್ಮಿಕ ವಲಯದಲ್ಲಿ ಮತ್ತುಷ್ಟು ಆತಂಕ ಹೆಚ್ಚಾಗಿದೆ.
    ಬೃಹತ್ ಸಹಿ ಅಭಿಯಾನ ಯಶಸ್ವಿ : ೮೦೦ ಮಂದಿ ಸಹಿ
    ನಗರದ ಪತ್ರಕರ್ತ ಅನಂತಕುಮಾರ್‌ರವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ಸೂಚಿಸಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಹಿ ಅಭಿಯಾನ ಯಶಸ್ವಿಯಾಗಿದ್ದು, ಸುಮಾರು ೮೦೦ ಮಂದಿ ಸಹಿ ಒಳಗೊಂಡ ಪತ್ರದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು.
    ಸೋಮವಾರ ಹೋರಾಟಕ್ಕೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್. ಪ್ರದೀಪ್ ಮನವಿ ಪತ್ರ ಸ್ವೀಕರಿಸಿ ವಿಶಿಷ್ಟವಾದ ಬೃಹತ್ ಸಹಿ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
    ಈ ಸಂದರ್ಭದಲ್ಲಿ ಪ್ರಮುಖರಾದ ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್, ಎಎಪಿ ಪಕ್ಷದ ಎಚ್. ರವಿಕುಮಾರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಡಿಎಸ್‌ಎಸ್ ಮುಖಂಡ ವಿ. ವಿನೋದ್ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಹಾಗು ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು.


ಭದ್ರಾವತಿಯಲ್ಲಿ ಪತ್ರಕರ್ತ ಅನಂತಕುಮಾರ್‌ರವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ಸೂಚಿಸಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಹಿ ಅಭಿಯಾನ ಯಶಸ್ವಿಯಾಗಿದ್ದು, ಸುಮಾರು ೮೦೦ ಮಂದಿ ಸಹಿ ಒಳಗೊಂಡ ಪತ್ರದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು.

    ಫೆ.೮ರಂದು ಹೋರಾಟಕ್ಕೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಬೆಂಬಲ:
    ವಿಐಎಸ್‌ಎಲ್ ಹಾಗು ಎಂಪಿಎಂ ಕಾರ್ಖಾನೆಗಳ ಉಳಿವಿಗಾಗಿ ಮತ್ತು ಕಾರ್ಮಿಕರಿಗೆ ಬೆಂಬಲ ಸೂಚಿಸಿ ಫೆ.೮ರಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಲಿದ್ದಾರೆ.
    ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಕಾರ್ಖಾನೆ ಉಳಿಸಿಕೊಡುವ ಭರವಸೆ ನೀಡಿದ್ದಾರೆ. ಇದೀಗ ಡಿ.ಕೆ ಶಿವಕುಮಾರ್ ಆಗಮಿಸುತ್ತಿದ್ದು, ಹೋರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಫೆ.೮ರಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಕಾರ್ಖಾನೆ ಸಮಸ್ಯೆ ಬಗೆಹರಿಸುವ ಸಂಬಂಧ ಸಭೆ ಏರ್ಪಡಿಸಲಾಗಿದೆ.


ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್

Sunday, February 5, 2023

ಗೌರಮ್ಮ ನಿಧನ

ಗೌರಮ್ಮ 
    ಭದ್ರಾವತಿ, ಫೆ. ೫: ನಗರದ ಜಿಂಕ್‌ಲೈನ್ ೨ನೇ ರಸ್ತೆ ನಿವಾಸಿ, ಪತ್ರಿಕಾವಿತರಕ ಶಿವಮೂರ್ತಿಯವರ ತಾಯಿ ಗೌರಮ್ಮ(೬೮) ಭಾನುವಾರ ನಿಧನ ಹೊಂದಿದರು.
    ಗೌರಮ್ಮ ಪುತ್ರ ಶಿವಮೂರ್ತಿ ಹಾಗು ಪುತ್ರಿ ಮತ್ತು ಸೊಸೆ, ಮೊಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ನಗರದ ಗಣ್ಯರು, ಪತ್ರಿಕಾವಿತರಕರು ಹಾಗು ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.

ಭದ್ರಾವತಿಯಲ್ಲಿ ಈ ಬಾರಿ ಬಿಜೆಪಿ ಗೆಲುವು ಖಚಿತ : ನಳೀನ್‌ಕುಮಾರ್ ಕಟೀಲು

ಭದ್ರಾವತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಘಟಕದ ಹಿಂಭಾಗ ನೂತನವಾಗಿ ನಿರ್ಮಿಸಲಾಗಿರುವ ಬಿಜೆಪಿ ಪಕ್ಷದ ಕಾರ್ಯಾಲಯ ಹಾಗು ಪೇಜ್ ಪ್ರಮುಖರ ಮತ್ತು ಹಿತೈಷಿಗಳ ಸಮಾವೇಶ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ಉದ್ಘಾಟಿಸಿದರು.
    ಭದ್ರಾವತಿ, ಫೆ. ೫ : ಈ ಬಾರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತವಾಗಿದ್ದು, ಈ ನಿಟ್ಟಿನಲ್ಲಿ ಪಕ್ಷ ಕಾರ್ಯಪ್ರವೃತ್ತವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ಹೇಳಿದರು.
    ಅವರು ಭಾನುವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ಘಟಕದ ಹಿಂಭಾಗ ನೂತನವಾಗಿ ನಿರ್ಮಿಸಲಾಗಿರುವ ಪಕ್ಷದ ಕಾರ್ಯಾಲಯ ಹಾಗು ಪೇಜ್ ಪ್ರಮುಖರ ಮತ್ತು ಹಿತೈಷಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
    ಹಿಂದುತ್ವದ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ, ಕೇಂದ್ರ ಸರ್ಕಾರದ ಜನಪರ ಯೋಜನೆಗಳು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿಯವರ ರಾಜ್ಯ ಸರ್ಕಾರದ ಯೋಜನೆಗಳು ಹಾಗು ಜಿಲ್ಲೆಯಲ್ಲಿ ಜಾತ್ಯಾತೀತ ಮನೋಭಾವದೊಂದಿಗೆ ಕ್ರಿಯಾಶೀಲರಾಗಿರುವ ಸಂಸದ ಬಿ.ವೈ ರಾಘವೇಂದ್ರರವರ ಅಭಿವೃದ್ಧಿ ಯೋಜನೆಗಳು ಈ ಬಾರಿ ಗೆಲುವಿಗೆ ಪೂರಕವಾಗಿ ಎಂದರು.
    ಈ ಬಾರಿ ಕ್ಷೇತ್ರದಲ್ಲಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸಲಾಗುತ್ತಿದ್ದು, ಕ್ಷೇತ್ರದಲ್ಲಿ ಚುನಾವಣೆಯನ್ನು ಸಮರ್ಥ ಎದುರಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪೂರಕ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಕ್ಷದ ಸೇವಾಕರ್ತರ ಕ್ರಿಯಾಶೀಲತೆ ಪರಿಣಾಮವಾಗಿ ಕೆಲವೇ ಕೆಲವು ದಿನಗಳಲ್ಲಿ ನೂತನ ಕಛೇರಿ ನಿರ್ಮಾಣಗೊಂಡಿದೆ ಎಂದರು.
    ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಸಂಸದ ಬಿ.ವೈ ರಾಘವೇಂದ್ರ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಪವಿತ್ರ ರಾಮಯ್ಯ, ಎಂ.ಬಿ ಭಾನುಪ್ರಕಾಶ್, ಎಸ್. ದತ್ತಾತ್ರಿ, ಎಸ್.ಎಸ್ ಜ್ಯೋತಿಪ್ರಕಾಶ್, ಎ.ಎನ್ ನಟರಾಜ್, ಶಿವರಾಜ್, ಬಿ.ಕೆ ಶ್ರೀನಾಥ್, ಎನ್.ಡಿ ಸತೀಶ್, ಎಂ.ಬಿ ಹರಿಕೃಷ್ಣ, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ವಿಐಎಸ್‌ಎಲ್ ಕಾರ್ಖಾನೆ ಸಮಸ್ಯೆ ಬಗೆಹರಿಸಲು ಫೆ.೮ರಂದು ಬೆಂಗಳೂರಿನಲ್ಲಿ ಸಭೆ : ಸಂಸದ ಬಿ.ವೈ ರಾಘವೇಂದ್ರ

ಕಾರ್ಖಾನೆ ಉಳಿವಿಗಾಗಿ ಸಹಿ ಅಭಿಯಾನ, ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ, ಬೆಂಬಲ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೧೮ನೇ ದಿನದ ಅನಿರ್ಧಿಷ್ಟಾವಧಿ ಹೋರಾಟ ಸ್ಥಳಕ್ಕೆ ಭಾನುವಾರ ಸಂಸದ ಬಿ.ವೈ ರಾಘವೇಂದ್ರ ಆಗಮಿಸಿ ಮಾತನಾಡಿದರು.
    ಭದ್ರಾವತಿ, ಫೆ. ೫ : ನಗರದ ವಿಐಎಸ್‌ಎಲ್ ಕಾರ್ಮಿಕರ ಸಮಸ್ಯೆ ಬಗೆಹರಿಸುವುದು ನನ್ನ ಮೊದಲ ಆದ್ಯತೆಯಾಗಿದ್ದು, ಈ ಹಿನ್ನಲೆಯಲ್ಲಿ ಒತ್ತಡಗಳ ನಡುವೆ ಮುಖ್ಯಮಂತ್ರಿಗಳ ಮನವೊಲಿಸಿ ಫೆ.೮ರಂದು ಸಭೆ ನಿಗದಿಪಡಿಸಲಾಗಿದೆ. ಈ ಸಭೆಯಲ್ಲಿ ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು, ನಿವೃತ್ತ ಕಾರ್ಮಿಕರ ಸಂಘಟನೆಯ ಪ್ರಮುಖರು ಪಾಲ್ಗೊಳ್ಳುವಂತೆ ಸಂಸದ ಬಿ.ವೈ ರಾಘವೇಂದ್ರ ಮನವಿ ಮಾಡಿದರು.
    ಅವರು ಭಾನುವಾರ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೧೮ನೇ ದಿನದ ಅನಿರ್ಧಿಷ್ಟಾವಧಿ ಹೋರಾಟ ಸ್ಥಳಕ್ಕೆ ಆಗಮಿಸಿ ಮಾತನಾಡಿದರು.
    ನಾನು ಒಬ್ಬ ಸಂಸದನಾಗಿದ್ದರೂ ಸಹ ಒಬ್ಬ ಕಾರ್ಮಿಕನಂತೆ ಕಾರ್ಖಾನೆ ಉಳಿವಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ದೆಹಲಿಮಟ್ಟದಲ್ಲಿ ನೂರಾರು ಪತ್ರ ವ್ಯವಹಾರಗಳು ನಡೆದಿವೆ. ಸಂಬಂಧಿಸಿದ ಸಚಿವರು, ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಎಲ್ಲವೂ ಪಾರದರ್ಶಕವಾಗಿದ್ದು, ಎಲ್ಲೂ ಸಹ ಮುಚ್ಚುಮರೆ ನಡೆದಿಲ್ಲ. ಈಗಲೂ ಸಹ ನಾನು ಗುತ್ತಿಗೆ ಕಾರ್ಮಿಕರ ಪರವಾಗಿದ್ದು, ಮೊದಲ ಆದ್ಯತೆ ನೀಡುತ್ತಿದ್ದೇನೆ. ರಾಜ್ಯ ಸರ್ಕಾರ ಇನ್ನೇನು ಬಜೆಟ್ ಮಂಡನೆಗೆ ಮುಂದಾಗುತ್ತಿದ್ದು, ಇಂತಹ ಒತ್ತಡ ಪರಿಸ್ಥಿತಿಯಲ್ಲೂ ಸಭೆ ನಿಗದಿಪಡಿಸುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದೇನೆ ಎಂದರು.
    ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣದಲ್ಲಿ ಫೆ.೮ರಂದು ಬೆಳಿಗ್ಗೆ ೯ ಗಂಟೆಗೆ ಬಿ.ಎಸ್ ಯಡಿಯೂರಪ್ಪ ಹಾಗು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಿಗದಿಪಡಿಸಲಾಗಿದೆ. ಈ ಸಭೆಯಲ್ಲಿ ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು, ನಿವೃತ್ತ ಕಾರ್ಮಿಕರ ಸಂಘಟನೆಯ ಪ್ರಮುಖರು ಪಾಲ್ಗೊಳ್ಳುವಂತೆ ಕೋರಿದರು.
    ಈ ಸಭೆಯಲ್ಲಿ ಪ್ರಮುಖವಾಗಿ ೩ ವಿಚಾರಗಳ ಕುರಿತು ಚರ್ಚಿಸಲಾಗುವುದು. ಮೊದಲನೇಯದಾಗಿ ಕಾರ್ಖಾನೆಯಿಂದ ಬಂಡವಾಳ ಹಿಂಪಡೆಯುವುದನ್ನು ಕೈಬಿಡಬೇಕು. ಎರಡನೇಯದು ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲು ಬಂಡವಾಳಗಾರರನ್ನು ಪುನಃ ಆಹ್ವಾನಿಸುವುದು. ಪ್ರಸ್ತುತ ಕುದುರೆ ಮುಖದ ಕೆಓಸಿಎಲ್ ಕಂಪನಿ ಬಂಡವಾಳ ಹೂಡಲು ಆಸಕ್ತಿ ತೋರಿಸುತ್ತಿದೆ ಎಂಬ ವಿಷಯ ತಿಳಿದು ಬಂದಿದೆ.  ಈ ಹಿನ್ನಲೆಯಲ್ಲಿ ಈ ಕಾರ್ಖಾನೆಗೆ ವಹಿಸಿಕೊಡಲು ಕೇಂದ್ರ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸುವುದು. ಮೂರನೇಯದಾಗಿ ಒಂದು ವೇಳೆ ಕಾರ್ಖಾನೆ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗದಿದ್ದಲ್ಲಿ ನಾವು ನೀಡಿರುವ ಕಾರ್ಖಾನೆ ಹಾಗು ಸ್ವತ್ತನ್ನು ರಾಜ್ಯ ಸರ್ಕಾರಕ್ಕೆ ಮರಳಿಸುವುದು. ಈ ವಿಚಾರಗಳ ಚರ್ಚೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.


 ಪತ್ರಕರ್ತ ಅನಂತಕುಮಾರ್ ತಮ್ಮ ಹುಟ್ಟುಹಬ್ಬದ ಅಂಗವಾಗಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೃಹತ್ ಸಹಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸಹಿ ಅಭಿಯಾನಕ್ಕೆ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ಚಾಲನೆ ನೀಡಿದರು. 

ಕಾರ್ಖಾನೆ ಉಳಿವಿಗಾಗಿ ಬೃಹತ್ ಸಹಿ ಅಭಿಯಾನ :
    ನಗರದ ಪತ್ರಕರ್ತ ಅನಂತಕುಮಾರ್ ತಮ್ಮ ಹುಟ್ಟುಹಬ್ಬದ ಅಂಗವಾಗಿ ಕಾರ್ಖಾನೆ ಉಳಿವಿಗಾಗಿ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೃಹತ್ ಸಹಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಸಹಿ ಅಭಿಯಾನಕ್ಕೆ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ಚಾಲನೆ ನೀಡಿ ಮಾತನಾಡಿ, ವಿಐಎಸ್‌ಎಲ್ ಆರಂಭ ಹಾಗು ಬೆಳವಣಿಗೆಗಳು ಮತ್ತು ಕಾರ್ಮಿಕ ಹೋರಾಟಗಳ ಬಗ್ಗೆ ಸ್ವವಿವರವಾದ ಮಾಹಿತಿ ನೀಡಿದರು. ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಹಾಗು ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. ಸಂಜೆ ವೇಳೆಗೆ ಸುಮಾರು ೪೦೦ಕ್ಕೂ ಮಂದಿ ಸಹಿ ಮಾಡುವ ಮೂಲಕ ಅಭಿಯಾನ ಯಶಸ್ವಿಗೆ ಸಹಕರಿಸಿದರು.


ಚರ್ಚ್ ಆಫ್ ಸೌತ್ ಇಂಡಿಯಾ ಸಂಘಟನೆ ನೇತೃತ್ವದಲ್ಲಿ ಭದ್ರಾವತಿ ನಗರದ ಸಿಎಸ್‌ಐ ವೇನ್ಸ್ ಸ್ಮಾರಕ ದೇವಾಲಯ, ಸಿಎಸ್‌ಐ ತೆಲುಗು ಬ್ಯೂಬಿಲಿ ದೇವಾಲಯ ಮತ್ತು ಸಿಎಸ್‌ಐ ಸಂತ ಪ್ರಾನ್ಸಿಸ್ ದೇವಾಲಯದ ಕ್ರೈಸ್ತ ಸಮುದಾಯದವರು ಧರ್ಮಗುರು ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕಾರ್ಖಾನೆ ಮುಚ್ಚುವ ಆದೇಶವನ್ನು ಖಂಡಿಸಿದರು.

    ಕ್ರೈಸ್ತ ಸಮುದಾಯದವರಿಂದ ವಿಐಎಸ್‌ಎಲ್ ಉಳಿವಿಗಾಗಿ ಪ್ರತಿಭಟನೆ :
ಚರ್ಚ್ ಆಫ್ ಸೌತ್ ಇಂಡಿಯಾ ಸಂಘಟನೆ ನೇತೃತ್ವದಲ್ಲಿ ನಗರದ ಸಿಎಸ್‌ಐ ವೇನ್ಸ್ ಸ್ಮಾರಕ ದೇವಾಲಯ, ಸಿಎಸ್‌ಐ ತೆಲುಗು ಬ್ಯೂಬಿಲಿ ದೇವಾಲಯ ಮತ್ತು ಸಿಎಸ್‌ಐ ಸಂತ ಪ್ರಾನ್ಸಿಸ್ ದೇವಾಲಯದ ಕ್ರೈಸ್ತ ಸಮುದಾಯದವರು ಧರ್ಮಗುರು ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕಾರ್ಖಾನೆ ಮುಚ್ಚುವ ಆದೇಶವನ್ನು ಖಂಡಿಸಿದರು.
    ಸಿಎಸ್‌ಐ ಕರ್ನಾಟಕ ಉತ್ತರ ಸಭಾ ಪ್ರಾಂತ್ಯಾದ ಧರ್ಮಾಧ್ಯಕ್ಷರಾದ ರೈಟ್, ರೆವರೆಂಡ್ ಡಾ. ಮಾರ್ಟಿನ್ ಸಿ. ಬೊರ್ಗಾಯಿ ಮತ್ತು ಕಾರ್ಯದರ್ಶಿ ವಿಜಯ್‌ಕುಮಾರ್ ವಸಂತ್ ದಂಡಿನ್‌ರವರ ಮಾರ್ಗದರ್ಶನದಲ್ಲಿ ೩ ಚರ್ಚ್‌ಗಳ ಸಭಾಪಾಲಕರಾದ ರೆವರೆಂಡ್ ಸ್ಟ್ಯಾನ್ಲಿ ಗಾಂಟ, ರೆವರೆಂಡ್  ಎಸ್ತಾರ್ ಅಬ್ರಾಹಂ, ರೆವರೆಂಡ್ ಅಬ್ರಾಹಂ ಸಂಕೇಶ್ವರ್ ಮತ್ತು ರೆವರೆಂಡ್ ಬಾಬಿರಾಜ್ ಹಾಗು ಪ್ರಮುಖರಾದ ಇಟ್ಟೆ ಸಂತೋಷ್‌ಕುಮಾರ್, ಮೋಸಸ್ ರೋಸಯ್ಯ, ಸ್ಪೀಫನ್, ವಿಜಯ್, ದಿವಾಕರ್, ಸೋನಿ ದೀಪು, ಪಿಲ್ಲಿ ಇಸ್ರಾಯೆಲ್, ಡ್ಯಾನಿಯಲ್, ಜಾನಿ, ಅನು ಜೀವನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Saturday, February 4, 2023

ಮಹಿಳೆಯರು-ಪುರುಷರು ಸಮಾನತೆ ಕಾಯ್ದುಕೊಂಡಾಗ ಯಶಸ್ಸು ಸಾಧ್ಯ : ಅಂಬಿಕ ಸುಧೀರ್

 


ಭದ್ರಾವತಿ ಸಿದ್ದರೂಢನಗರದ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಶ್ವತಿ ಮಹಿಳಾ ಸಮಾಜದ ವಾರ್ಷಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮ ಘಟಕ ವ್ಯವಸ್ಥಾಪಕಿ ಅಂಬಿಕ ಸುಧೀರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಭದ್ರಾವತಿ, ಫೆ. ೪: ಮಹಿಳೆಯರು ಮತ್ತು ಪುರುಷರು ಸಮಾನತೆ ಕಾಯ್ದುಕೊಂಡಾಗ ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮ ಘಟಕ ವ್ಯವಸ್ಥಾಪಕಿ ಅಂಬಿಕ ಸುಧೀರ್ ಹೇಳಿದರು. 
ಅವರು ಶನಿವಾರ ಸಿದ್ದರೂಢನಗರದ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಶ್ವತಿ ಮಹಿಳಾ ಸಮಾಜದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. 
ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ದೇವತೆ ಸ್ಥಾನವನ್ನು ನೀಡಲಾಗಿದೆ. ಯಾವುದೇ ಸಂಘಟನೆಯಾಗಲಿ, ವೃತ್ತಿ ಮಾಡುವ ಸ್ಥಳವಿರಲಿ, ಕುಟುಂಬವಿರಲಿ ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಸಮಾನತೆ ಕಾಯ್ದುಕೊಂಡು ಮುನ್ನಡೆಯಬೇಕು. ಆಗ ಮಾತ್ರ ನಾವುಗಳು ಯಶಸ್ಸು ಕಾಣಲು ಸಾಧ್ಯ. ಶಾಶ್ವತಿ ಮಹಿಳಾ ಸಮಾಜ ಇನ್ನೂ ಹೆಚ್ಚಿನ ಸೇವೆಯನ್ನು ನೀಡುವ ಮೂಲಕ ಶಾಶ್ವತವಾಗಿ ತನ್ನ ಅಸ್ತಿತ್ವ ಕಾಯ್ದುಕೊಳ್ಳುವಂತಾಗಲಿ ಎಂದರು. 
ಸಮಾಜದ ಗೌರವಾಧ್ಯಕ್ಷೆ ಯಶೋಧ ವೀರಭದ್ರಪ್ಪ ಮಾತನಾಡಿ, ಸಮಾಜದ ಮೇಲೆ ಹೆಚ್ಚಿನ ಅಭಿಮಾನವಿದೆ. ಇದು ನಗರದ ವಿವಿಧ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದು, ವಿವಿಧ ಕ್ಷೇತ್ರದಲ್ಲಿನ ಮಹಿಳೆಯರು ಸದಸ್ಯರಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಹಿತ್ಯ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರಿಯಾಶೀಲ ಚಟುವಟಿಕೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು. 
ಸಮಾಜದ ಅಧ್ಯಕ್ಷೆ ರೂಪರಾವ್ ಅಧ್ಯಕ್ಷತೆ ವಹಿಸಿದ್ದರು. ಕಲಾವಿದೆ ನಂದಿ ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಮತ ಗಿರೀಶ್ ವರದಿ ಮಂಡಿಸಿದರು. ಶಾರದ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿವರ್ಷದಂತೆ ಈ ಬಾರಿ ಸಹ ಲಾಟರಿ ಮೂಲಕ ವಿಜೇತರಾದ ವರ್ಷದ ಅದೃಷ್ಟ ಮಹಿಳೆಗೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.